ಬುಧವಾರ, ಡಿಸೆಂಬರ್ 11, 2019
24 °C

ಮಕ್ಕಳ ಸಾಹಿತ್ಯ ಅಕಾಡೆಮಿ ಸ್ಥಾಪನೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಕ್ಕಳ ಸಾಹಿತ್ಯ ಅಕಾಡೆಮಿ ಸ್ಥಾಪನೆಗೆ ಆಗ್ರಹ

ಕಾವೇರಿ ವೇದಿಕೆ (ಬಸವನಹಳ್ಳಿ ಕುಶಾಲನಗರ): ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಬೆಳೆಸಲು ಸರ್ಕಾರ ಮಕ್ಕಳ ಸಾಹಿತ್ಯ ಅಕಾಡೆಮಿ ಸ್ಥಾಪಿಸಬೇಕು ಎಂದು ಸಮ್ಮೇಳನಾಧ್ಯಕ್ಷೆ ಕುಮಾರಿ ವಿ.ಡಿ.ಸಿಂಚನಾ ಸಲಹೆ ನೀಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಬಸವನಹಳ್ಳಿ ಸರ್ಕಾರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬುಧವಾರ ನಡೆದ ಜಿಲ್ಲಾ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ ಮೂಡಿಸುವ ಹಾಗೂ ಕನ್ನಡಾಭಿಮಾನ ಬೆಳೆಸುವ ವಾತಾವರಣ ಸೃಷ್ಟಿಯಾಗಬೇಕು. ಶಾಲೆಗಳಲ್ಲಿ ಕನ್ನಡ ಮಾತನಾಡಬಾರದು ಎಂಬ ನಿರ್ಬಂಧ ಇರಬಾರದು. ಭಾಷೆ ಬೆಳೆಯಲು ಬಂಧ ಇರಬೇಕೇ ಹೊರತು ನಿರ್ಬಂಧ ಇರಬಾರದು. ಈ ಬಗ್ಗೆ ಶಿಕ್ಷಣ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಆಂಗ್ಲ ಭಾಷಾ ವ್ಯಾಮೋಹದಿಂದ ಮಕ್ಕಳನ್ನು ಒತ್ತಾಯ ಪೂರ್ವಕವಾಗಿ ಖಾಸಗಿ ಶಾಲೆಗಳಿಗೆ ಸೇರಿಸುವ ಮೂಲಕ ಅವರ ಭಾವನಾತ್ಮಕ ಮತ್ತು ಆಲೋಚನಾ ಸಾಮರ್ಥ್ಯವನ್ನು ಕೊಲ್ಲುವ ಯತ್ನ ನಡೆಯುತ್ತಿರುವುದು ಬೇಸರ ತರುತ್ತಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಮಕ್ಕಳಿಗೆ ಮಾತೃಭಾಷೆಯನ್ನು ಅಗತ್ಯ ಕಲಿಸಬೇಕು. ಇದರಿಂದ ಅನ್ಯ ಭಾಷೆಯನ್ನೂ ಬಹಳ ಸುಲಭವಾಗಿ ಅರ್ಥೈಸಿಕೊಳ್ಳಬಹುದು’ ಎಂದು ಅವರು ಅಭಿಪ್ರಾಯಪಟ್ಟರು.

‘ಶಾಲೆಗಳಲ್ಲಿ ಸಂಗೀತ, ನೃತ್ಯ, ಚಿತ್ರಕಲೆಗಳ ಪ್ರೋತ್ಸಾಹಕ್ಕೆ ಶಿಕ್ಷಕರನ್ನು ನೇಮಿಸುವಂತೆಯೇ, ಸಾಹಿತ್ಯದ ಬೆಳವಣಿಗೆಗಾಗಿ ಎಲ್ಲ ಶಾಲೆಗಳಲ್ಲೂ ಶಿಕ್ಷಕರನ್ನು ನೇಮಕ ಮಾಡಬೇಕು. ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಉತ್ತಮ ಗ್ರಂಥಾಲಯದ ವ್ಯವಸ್ಥೆ ಕಲ್ಪಿಸಬೇಕು.

ಸಮ್ಮೇಳನ ಉದ್ಘಾಟಿಸಿದ ಬಾಲ ಸಾಹಿತಿ ಅಂತಃಕರಣ ತೀರ್ಥಹಳ್ಳಿ ಮಾತನಾಡಿ, ‘ಮಕ್ಕಳು ಬರೆಯುವ ಮೊದಲು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಪಠ್ಯದ ಜತೆ ಕಥೆ, ಕದಂಬರಿ, ಸಾಹಿತಿಗಳ ಪುಸ್ತಕಗಳನ್ನು ಓದುವ ಮೂಲಕ ಸಾಹಿತ್ಯಾಸಕ್ತಿ ಬೆಳೆಸಿಕೊಳ್ಳಬೇಕು’ ಎಂದರು.

‘ಮಕ್ಕಳು ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಶೈಕ್ಷಣಿಕ ಪ್ರಗತಿಗೆ ಅಡ್ಡಿಯಾಗುತ್ತದೆ ಎಂಬ ತಪ್ಪು ಕಲ್ಪನೆ ಪೋಷಕರಲ್ಲಿದೆ. ಆದರೆ ನಾನು ಎಲ್.ಕೆ.ಜಿ ಓದುವಾಗಲೇ ಬರೆಯುವುದನ್ನು ಕಲಿತೆ, 4ನೇ ತರಗತಿಯಲ್ಲಿ ಪತ್ರಿಕೆಗೆ ಅಂಕಣಗಳನ್ನು ಬರೆಯಲು ಆರಂಭಿಸಿದೆ. ಈಗಾಗಲೇ ನಾನು 24 ಪುಸ್ತಕಗಳನ್ನು ಬರೆದಿದ್ದೇನೆ. ನನ್ನ ಎಲ್ಲ ಸಾಧನೆಗೆ ಪೋಷಕರೇ ಕಾರಣ’ ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ, ‘ಮಕ್ಕಳಲ್ಲಿ ಕನ್ನಡ ಭಾಷೆ ಹಾಗೂ ಸಾಹಿತ್ಯದ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಪ್ರಥಮ ಬಾರಿಗೆ ಮಕ್ಕಳ ಸಮ್ಮೇಳನ ಆಯೋಜಿಸಲಾಗಿದೆ’ ಎಂದರು.

ಜಿ.ಪಂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿ ಸುಬ್ರಮಣಿ ಮಾತನಾಡಿ, ‘ಕನ್ನಡ ಶಾಲೆಗಳಲ್ಲಿ ಓದಿದ ಉನ್ನತ ಸ್ಥಾನಮಾನ ಗಳಿಸಿದವರು ಹಲವರು ಇದ್ದಾರೆ. ಆದ್ದರಿಂದ ಪೋಷಕರು ಕನ್ನಡದ ಬಗ್ಗೆ ನಿರ್ಲಕ್ಷ್ಯ ತೋರಬಾರದು’ ಎಂದು ಸಲಹೆ ನೀಡಿದರು.

ಜಿ.ಪಂ ಸದಸ್ಯ ಪಿ.ಎಂ.ಲತೀಫ್‌, ತಾ.ಪಂ ಸದಸ್ಯ ಪುಷ್ಪಾ ಜನಾರ್ದನ್‌, ಗುಡ್ಡೆಹೊಸೂರು ಗ್ರಾ.ಪಂ ಅಧ್ಯಕ್ಷೆ ಕೆ.ಎಸ್.ಭಾರತಿ, ಮೊರಾರ್ಜಿ ಪ್ರಾಂಶುಪಾಲ ಚಂದ್ರಶೇಖರ್ ರೆಡ್ಡಿ, ಕಸಾಪ ತಾಲ್ಲೂಕು ಘಟಕ ಅಧ್ಯಕ್ಷರಾದ ಕುಡೆಕಲ್ ಸಂತೋಷ್, ವಿಜೇತ್, ಕೋಶಾಧಿಕಾರಿ ಎಸ್.ಎ.ಮುರಳೀಧರ್, ಹೋಬಳಿ ಅಧ್ಯಕ್ಷ ಎಂ.ಡಿ.ರಂಗಸ್ವಾಮಿ, ಸುನೀಲ್, ಪುಟ್ಟಸ್ವಾಮಿ, ಕೊಡಗು ಲೇಖಕಿಯರ ಬಳಗದ ಅಧ್ಯಕ್ಷೆ ಕಸ್ತೂರಿ ಗೋವಿಂದಮ್ಮಯ್ಯ, ಲೇಖಕರರ ಬಳಗದ ಅಧ್ಯಕ್ಷ ಕೇಶವ ಕಾಮತ್ ಇದ್ದರು. ಮೇಘನಾ ಮತ್ತು ತಂಡದವರು ನಾಡಗೀತೆ ಹಾಡಿದರು. ಬಸವನಹಳ್ಳಿ ಸರ್ಕಾರಿ ಶಾಲೆಯ ಅನುಷಾ ತಂಡದವರು ರೈತಗೀತೆ ಹಾಡಿದರು.

ಪ್ರತಿಭೆ ವಿಕಸನಕ್ಕೆ ಒತ್ತು ನೀಡಿ

ಕಾವೇರಿ ವೇದಿಕೆ, ಬಸವನಹಳ್ಳಿ (ಕುಶಾಲನಗರ): ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ವಿಕಸನಗೊಳಿಸಲು ಪೋಷಕರು ಒತ್ತು ನೀಡಬೇಕು ಎಂದು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಬಸವನಹಳ್ಳಿ ಸರ್ಕಾರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ಜಿಲ್ಲಾ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು. ಕನ್ನಡ ಭಾಷೆ, ಸಂಸ್ಕೃತಿ, ಆಚಾರ, ವಿಚಾರ ಬೆಳೆಸುವ ವ್ಯವಸ್ಥೆ ಮಾಡಬೇಕು ಎಂದರು.

ರಾಜ್ಯ ರೇಷ್ಮೆ ಮಂಡಳಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ‘ಹೆಚ್ಚಿನ ಮಕ್ಕಳು ಇಂತಹ ಸಮ್ಮೇಳನದಲ್ಲಿ ಪಾಳ್ಗೊಳ್ಳುವಂತೆ ಪೋಷಕರು ಪ್ರೋತ್ಸಾಹ ನೀಡಬೇಕು’ ಎಂದು ಸಲಹೆ ನೀಡಿದರು.

ಗಮನ ಸೆಳೆದ ಮೆರವಣಿಗೆ

ಬಸವನಹಳ್ಳಿ (ಕುಶಾಲನಗರ): ಕಸಾಪ ಏರ್ಪಡಿಸಿದ್ದ ಮೆರವಣಿಗೆ ಗಮನ ಸೆಳೆಯಿತು. ಗುಡ್ಡೆಹೊಸೂರು ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಿಂದ ಆರಂಭಗೊಂಡ ಮೆರವಣಿಗೆಯನ್ನು ಪ್ರಣವ್ ಎಸ್. ಕಶ್ಯಪ್ ಉದ್ಘಾಟಿಸಿದರು.

ವಿವಿಧ ಕಲಾತಂಡಗಳೊಂದಿಗೆ, ಶಾಲಾ ಮಕ್ಕಳ ಬ್ಯಾಂಡ್ ಸೆಟ್ ಗಳೊಂದಿಗೆ ಅಲಂಕೃತ ವಾಹನದಲ್ಲಿ ಸಮ್ಮೇಳನಾಧ್ಯಕ್ಷೆ ವಿ.ಡಿ.ಸಿಂಚನಾ ಅವರನ್ನು ಮೆರವಣಿಗೆ ಮೂಲಕ ಕಾರ್ಯಕ್ರಮ ವೇದಿಕೆಗೆ ಕರೆತರಲಾಯಿತು. ಪಿರಿಯಾಪಟ್ಟಣದ ವಾಲ್ಮೀಕಿ ಕಲಾತಂಡದ ಡೊಳ್ಳು ಕುಣಿತ, ಪೂರ್ಣಕುಂಭ ಕಳಶ ಹೊತ್ತ ಮಹಿಳೆಯರು ಮೆರವಣಿಗೆಗೆ ಮೆರುಗು ನೀಡಿದರು. ವಿವಿಧ ಶಾಲೆಗಳಿಂದ ಬಂದಿದ್ದ ಮಕ್ಕಳು ಸಮವಸ್ತ್ರದೊಂದಿಗೆ ಕನ್ನಡ ಬಾವುಟ ಹಿಡಿದು, ಶಾಲುಗಳನ್ನು ಕೊರಳಿಗೆ ಹಾಕಿಕೊಂಡು ಸಾಗಿದರು. ಗುಡ್ಡೆಹೊಸೂರು ಗ್ರಾಮದಿಂದ ಬಸವನಹಳ್ಳಿ ಗ್ರಾಮದವರೆಗೂ ರಸ್ತೆಯ ಎರಡೂ ಕಡೆಗಳಲ್ಲಿ ಕನ್ನಡ ಬಾವುಟಗಳು ರಾರಾಜಿಸಿದವು.

ಹಸಿರು ತೋರಣ ಕನ್ನಡಾಭಿಮಾನಿಗಳನ್ನು ಸ್ವಾಗತಿಸಿತು. ಗುಡ್ಡೆಹೊಸೂರು ಸರ್ಕಾರಿ ಶಾಲೆಯ ಮಕ್ಕಳು ಕಾವೇರಿ ಮಾತೆ, ಕನ್ನಡಾಂಬೆ, ಅಕ್ಕಮಹಾದೇವಿ, ಗಾಂಧೀಜಿ, ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಮೊದಲಾದವರ ವೇಷ ಧರಿಸಿ ಆಕರ್ಷಿಸಿದರು. ಮಕ್ಕಳು ಕನ್ನಡ ನಾಡು–ನುಡಿ ಕುರಿತು ಘೋಷಣೆಗಳನ್ನು ಕೂಗಿದರು.

ಜಿ.ಪಂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ಶಶಿ ಸುಬ್ರಮಣಿ, ತಾ.ಪಂ ಸದಸ್ಯೆ ಪುಷ್ಪಾ, ಗ್ರಾ.ಪಂ ಅಧ್ಯಕ್ಷೆ ಭಾರತಿ, ಕಸಾಪ ಅಧ್ಯಕ್ಷ ಲೋಕೇಶ್ ಸಾಗರ್, ಪದಾಧಿಕಾರಿಗಳಾದ ಎಂ.ಡಿ.ರಂಗಸ್ವಾಮಿ, ವಿಜೇತ್, ಎಸ್.ಎ.ಮುರಳೀಧರ್, ಕುಡೆಕಲ್ ಸಂತೋಷ್, ಮುಖ್ಯಶಿಕ್ಷಕ ಸಣ್ಣಪ್ಪ, ಸದಾಶಿವಯ್ಯ ಎಸ್.ಪಲ್ಲೇದ್ ಇದ್ದರು.

* * 

‘ಈಚಿನ ದಿನಗಳಲ್ಲಿ ಮೊಬೈಲ್, ಟ್ಯಾಬ್ ಬಳಕೆ ಅಧಿಕವಾಗಿದೆ. ಇದರಲ್ಲಿಯೂ ಮಕ್ಕಳಿಗೆ ಉತ್ತಮ ಪುಸ್ತಕಗಳ ಓದಿಗೆ ಅವಕಾಶವಿದೆ

ಅಂತಃಕರಣ, ಬಾಲಸಾಹಿತಿ

ಪ್ರತಿಕ್ರಿಯಿಸಿ (+)