ಶುಕ್ರವಾರ, ಡಿಸೆಂಬರ್ 13, 2019
27 °C

ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ

ಮಡಿಕೇರಿ: ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ನಗರ ಕಾಂಗ್ರೆಸ್ ಸಮಿತಿ ವತಿಯಿಂದ ಇಲ್ಲಿನ ಜನರಲ್‌ ತಿಮ್ಮಯ್ಯ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.

ನಗರದ ಎವಿ ಶಾಲೆ ಬಳಿಯಿಂದ ಜನರಲ್ ತಿಮ್ಮಯ್ಯ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಕೇಂದ್ರದ ದ್ವಂದ್ವ ಆರ್ಥಿಕ ನೀತಿಯಿಂದ ತೈಲೋತ್ಪನ್ನ ಹಾಗೂ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ ಎಂದು ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಲಾಯಿತು.

ನಗರ ಸಮಿತಿ ಕಾರ್ಯದರ್ಶಿ ವೆಂಕಪ್ಪಗೌಡ ಮಾತನಾಡಿ, ಮೋದಿ ಅವರು ಅಚ್ಛೇ ದಿನ್‌ ಬರಲಿದೆ ಎಂದು ಆಶಾಗೋಪುರ ನಿರ್ಮಿಸಿದ್ದರು. ಯಾವುದನ್ನೂ ಕಾರ್ಯರೂಪಕ್ಕೆ ತರಲಿಲ್ಲ. ದೇಶದಾದ್ಯಂತ ದುಬಾರಿಯಾಗಿವೆ. ಹೆಚ್ಚಿನ ದರ ವಿಧಿಸಿ ಆಹಾರ ಖರೀದಿಸಬೇಕಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪೆಟ್ರೋಲ್, ಡಿಸೇಲ್ ಬೆಲೆಯನ್ನು ಕಡಿಮೆ ಮಾಡುತ್ತೇವೆ ಎಂದ ಮೋದಿ ಸರ್ಕಾರ, ಪೆಟ್ರೋಲ್‌ ಬೆಲೆ ಪ್ರತಿ ಲೀಟರ್‌ಗೆ ₨ 76 ಆಗಿದೆ. ಕಳೆದ ಒಂದು ವರ್ಷದಲ್ಲಿ ಏಳು ರೂಪಾಯಿಯಷ್ಟು ಏರಿಕೆಯಾಗಿದೆ ಎಂದು ದೂರಿದರು.

ಡಿಸೇಲ್‌ ಬೆಲೆ ಏರಿಕೆಯಿಂದ ಬಸ್, ಲಾರಿ, ಆಟೋ ಚಾಲಕರಿಗೆ ನಷ್ಟವಾಗುತ್ತಿದೆ. ₨ 450 ಇದ್ದ ಅಡುಗೆ ಅನಿಲ ₨ 850ಕ್ಕೆ ತಲುಪಿದೆ. ಇದಕ್ಕಿಂತ ಇಂದಿನ ಯುಪಿಎ ಸರ್ಕಾರವೇ ವಾಸಿ ಎಂಬ ಹಂತಕ್ಕೆ ಜನರು ಬಂದಿದ್ದು, ಮುಂದಿನ ಚುನಾವಣೆಯಲ್ಲಿ ಜನರೇ ತಕ್ಕಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

ಜನ್‌ದನ್‌ ಖಾತೆಯಲ್ಲಿ ಹಣ ಇಲ್ಲ: ಬಡವರ ಪ್ರತಿಯೊಬ್ಬರ ಖಾತೆಗೂ ₨ 15 ಲಕ್ಷ ನೀಡುವ ಭರವಸೆ ಕೆಂದ್ರ ಸರ್ಕಾರವು ಮೂರು ವರ್ಷ ಕಳೆದದರೂ ಖಾತೆಗೆ ನಯಾ ಪೈಸೆಯೂ ಬಂದಿಲ್ಲ. ಮತ ಹಾಕಿದವರಿಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ನಾಮಹಾಕಿದೆ ಎಂದು ಆಪಾದಿಸಿದರು.

ನಗರ ಘಟಕದ ಅಧ್ಯಕ್ಷ ಕೆ.ಯು. ಅಬ್ದುಲ್ ಮಾತನಾಡಿ, ಕಾಂಗ್ರೆಸ್ ಆಡಳಿತಾವಧಿಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್ ಕಚ್ಚಾ ತೈಲದ ಬೆಲೆಯು ₹ 130 ಡಾಲರ್‌ಗೂ ಹೆಚ್ಚಿತ್ತು. ಆ ವೇಳೆಯಲ್ಲೂ ಕಾಂಗ್ರೆಸ್‌ ಸರ್ಕಾರವು ತೈಲ ಮತ್ತು ಸಿಲಿಂಡರ್‌ನ ಬೆಲೆ ಹೆಚ್ಚಿಗೆ ಮಾಡಿರಲಿಲ್ಲ. ಆದರೆ, ಮೋದಿ ಸರ್ಕಾರ ಸಂದರ್ಭ ಬೆಲೆಯು 80 ಡಾಲರ್‌ಗಿಂತ ಕಡಿಮೆಯಿದ್ದರೂ ಹೆಚ್ಚು ಬೆಲೆಗೆ ಭಾರತದಲ್ಲಿ ಪೆಟ್ರೋಲ್, ಡಿಸೇಲ್ ಹಾಗೂ ಗ್ಯಾಸ್‌ನ್ನು ಮಾರುವ ಮೂಲಕ ನಾನು ಉದ್ಯಮಿಗಳ ಪರ, ಬಡವರ ಪರ ಇಲ್ಲವೆಂದು ಸಾಬೀತುಪಡಿಸಿದ್ದಾರೆ ಎಂದು ದೂರಿದರು.

ಕಾಂಗ್ರೆಸ್ ಪ್ರಮುಖ ತೆನ್ನಿರಾ ಮೈನಾ, ‘ರಾಜ್ಯ ಸರ್ಕಾರ ಕೂಲಿ ಮಾಡಿ ದುಡಿದ ಬಡವರಿಗೆ ₹ 5 ದರದಲ್ಲಿ ತಿಂಡಿ, ₹ 10ರಲ್ಲಿ ಮಧ್ಯಾಹ್ನದ ಊಟ ನೀಡುತ್ತಿದೆ. ಆದರೆ, ಕೇಂದ್ರ ಸರ್ಕಾರ ಬಡವರ್ಗದ ತಿನ್ನುವ ಆಹಾರ ಸಾಮಗ್ರಿಗಳಿಗೆ ಶೇ 18ರಷ್ಟು ತೆರಿಗೆ ವಿಧಿಸಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಚುಮ್ಮಿ ದೇವಯ್ಯ, ಸದಸ್ಯ ಪ್ರಕಾಶ್ ಆಚಾರ್ಯ, ಮಡಿಕೇರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಪ್ರು ರವೀಂದ್ರ, ಕಾಂಗ್ರೆಸ್‌ ಪ್ರಮುಖರಾದ ಕೆ.ಎಂ. ಲೋಕೇಶ್ ಜಾನ್ಸನ್‌ ಪಿಂಟೋ ಹಾಜರಿದ್ದರು.

ಪಕೋಡ ಮಾರಾಟ ನಡೆಸಿ ಭಿನ್ನ ಪ್ರತಿಭಟನೆ

ಮಡಿಕೇರಿ: ಪಕೋಡ ಮಾರಿ ಸಂಜೆ ವೇಳೆಗೆ ಒಬ್ಬ ₹ 200 ಸಂಪಾದನೆ ಮಾಡುತ್ತಾನೆ. ಅದು ಉದ್ಯೋಗ ಅಲ್ಲವೇ? ಅದು ಸಂಪಾದನೆಯಲ್ಲವೇ ಎಂದು ಪ್ರಶ್ನಿಸಿದ್ದ ಪ್ರಧಾನಿ ಮೋದಿ ಅವರ ಈ ಹೇಳಿಕೆಗೆ ಕಾಂಗ್ರೆಸ್‌ ಕಾರ್ಯಕರ್ತರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

ಉದ್ಯೋಗ ಸೃಷ್ಟಿಸಿ ಎಂದರೆ, ಪಕೋಡ ಮಾರಾಟದ ಉದಾಹರಣೆ ನೀಡಿದ್ದ ಪ್ರಧಾನಿ ಹೇಳಿಕೆಯನ್ನು ಖಂಡಿಸಿ, ಜನರಲ್‌ ತಿಮ್ಮಯ್ಯ ವೃತ್ತದ ಬಳಿಯೇ ವಕೀಲ ಪವನ್‌ ಪಕೋಡ ತಯಾರಿಸಿದರು.

ಪ್ರತಿಕ್ರಿಯಿಸಿ (+)