ಪ್ರಾಮಾಣಿಕ ದುಡಿಮೆ ಜನಮನ ತಲುಪಲಿ

7

ಪ್ರಾಮಾಣಿಕ ದುಡಿಮೆ ಜನಮನ ತಲುಪಲಿ

Published:
Updated:

ಕೋಲಾರ: ‘ವಚನಕಾರರ ಹಾದಿಯಲ್ಲಿ ಪ್ರತಿಯೊಬ್ಬರೂ ಪ್ರಾಮಾಣಿಕ ದುಡಿಮೆ ಮತ್ತು ಸೇವೆ ಮೂಲಕ ಜನಮನ ತಲುಪಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಸಲಹೆ ನೀಡಿದರು.

ಜಿಲ್ಲಾಡಳಿತವು ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಉದ್ಘಾಟಿಸಿ ಮಾತನಾಡಿ. ಶಿವಭಕ್ತರಾಗಿದ್ದ ಶಿವಯೋಗಿ ಸಿದ್ಧರಾಮೇಶ್ವರು ಶ್ರಮಕ್ಕೆ ಮಿಗಿಲಾದ ದೇವರು ಯಾರೂ ಇಲ್ಲ. ಕಾಯಕದಲ್ಲಿ ಕೈಲಾಸ ಕಾಣಬೇಕೆಂದು ಎಂದು ತಿಳಿಸಿದ್ದಾಗಿ ವಿವರಿಸಿದರು.

ಅವರ ಕುರಿತಾಗಿ ಸಿದ್ಧರಾಮೇಶ್ವರ ಪುರಾಣ ಪುಸ್ತಕವಿದ್ದು, ಪ್ರತಿಯೊಬ್ಬರು ಅಧ್ಯಯನ ಮಾಡಬೇಕು. ರಾಜ್ಯದ ಇತಿಹಾಸದಲ್ಲಿ 12ನೇ ಶತಮಾನವು ಪ್ರಮುಖ ಕಾಲಘಟ್ಟವಾಗಿದೆ. ಅನೇಕ ವಚನಕಾರರು ವಚನಗಳ ಮೂಲಕ ಸಮಾಜಕ್ಕೆ ಸಂದೇಶ ಸಾರಿ, ಕ್ರಾಂತಿಕಾರಕ ಬದಲಾವಣೆ ತಂದಿದ್ದಾರೆ. ವಚನಗಳು ಸಾರ್ವಕಾಲಿಕ ಎಂದು ಅಭಿಪ್ರಾಯಪಟ್ಟರು.

ಸುಧಾರಣೆಗೆ ಶ್ರಮಿಸಿದರು: ‘ವಚನಕಾರರು ವಚನಗಳ ಮೂಲಕ ಸಮಾಜವನ್ನು ತಿದ್ದಿದ್ದಲ್ಲದೆ, ಕೆರೆ ಕುಂಟೆ, ಬಾವಿ ನಿರ್ಮಿಸಿ ಸಾಮಾಜಿಕ ಸುಧಾರಣೆಗೆ ಶ್ರಮಿಸಿದರು. ಪರಿಸರ ಪ್ರೇಮಿಯಾಗಿದ್ದ ಅವರು ತಾವು ಬದುಕುವ ಜತೆಗೆ ಇತರರನ್ನು ಬದುಕಿಸಲು ಪಣ ತೊಟ್ಟಿದ್ದರು’ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಲಕ್ಷ್ಮಿನಾರಾಯಣ ಹೇಳಿದರು.

ವಚನಕಾರರು ನೀರಾವರಿ ಸಚಿವರಂತೆ ಹರಿಯುವ ನೀರು ಎಲ್ಲಿಗೆ ಸೇರಬೇಕು ಮತ್ತು ನೀರನ್ನು ಹೇಗೆ ಬಳಸಿಕೊಳ್ಳಬೇಕೆಂದು ಸಲಹೆ ನೀಡಿ, ಕಾಯಕ ಯೋಗಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಬಹುತೇಕ ವಚನಕಾರರು ಶೋಷಿತ ಸಮುದಾಯದಿಂದ ಬಂದಿದ್ದು, ಆ ಸಮುದಾಯವು ಸಮಾಜಕ್ಕೆ ನೀಡಿರುವ ಕೊಡುಗೆ ಸ್ಮರಣೀಯ ಎಂದು ಸ್ಮರಿಸಿದರು.

‘ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಜನಿಸಿದ ಸಿದ್ಧರಾಮೇಶ್ವರರು ಜಾತಿ ನಿರ್ಮೂಲನೆ, ಬಾಲ್ಯವಿವಾಹ ತಡೆಗೆ ಶ್ರಮಿಸಿದರು. ಅಲ್ಲದೇ, ಕೆರೆ, ಬಾವಿಗಳನ್ನು ಕಟ್ಟಿಸಿ ನೀರಿನ ಸಮಸ್ಯೆ ಬಗೆಹರಿಸಿದ್ದರು. ಅವರು 68 ಸಾವಿರ ವಚನಗಳನ್ನು ರಚಿಸಿದ್ದು, ಅವುಗಳಲ್ಲಿ 1,152 ಮಾತ್ರವೇ ದೊರೆತಿವೆ’ ಎಂದು ಉಪನ್ಯಾಸಕ ಶಂಕರ್ ವಿವರಿಸಿದರು.

ಪಲ್ಲಕ್ಕಿ ಮೆರವಣಿಗೆ: ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರಮುಖ ರಸ್ತೆಗಳಲ್ಲಿ ಸಿದ್ಧರಾಮೇಶ್ವರರ ಭಾವಚಿತ್ರ ಹಾಗೂ ಪಲ್ಲಕ್ಕಿಗಳ ಮೆರವಣಿಗೆ ನಡೆಸಲಾಯಿತು. ಕಲಾ ತಂಡಗಳು ಮೆರವಣಿಗೆಗೆ ವಿಶೇಷ ಮೆರುಗು ನೀಡಿದವು.

ಜಿಲ್ಲಾ ಬೋವಿ ಸಂಘದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಯಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ಸಮುದಾಯದ ಮುಖಂಡರಾದ ಪಾಪಣ್ಣ, ಅಪ್ಪಯ್ಯ, ಶಂಕರ್, ದೇವರಾಜ್, ಲೋಕೇಶ್ ಪಾಲ್ಗೊಂಡಿದ್ದರು.

ಜನಪ್ರತಿನಿಧಿಗಳ ಗೈರು: ನೋವಿನ ಸಂಗತಿ

‘ಜಯಂತಿಯಲ್ಲಿ ಅಧಿಕಾರಿಗಳು ಮಾತ್ರ ಭಾಗವಹಿಸಿದ್ದಾರೆ. ಆಮಂತ್ರಣ ಪತ್ರಿಕೆಯಲ್ಲಿ ಹೆಸರಿಸಲಾಗಿರುವ ಯಾವುದೇ ಜನಪ್ರತಿನಿಧಿ ಕಾರ್ಯಕ್ರಮಕ್ಕೆ ಬಾರದಿರುವುದು ನೋವಿನ ಸಂಗತಿ ಬೋವಿ ಸಮಾಜದ ಮುಖಂಡ ಸಿ.ವಿ.ಗೋಪಾಲ್ ಅಸಮಾಧಾನ ವ್ಯಕ್ತಪಡಿಸಿದರು.

ಸಣ್ಣಪುಟ್ಟ ಕಾರ್ಯಕ್ರಮಗಳಿಗೆ ಹೋಗುವ ಜನಪ್ರತಿನಿಧಿಗಳಿಗೆ ಬೋವಿ ಸಮುದಾಯದ ಕಾರ್ಯಕ್ರಮ ಬೇಡವಾಗಿದೆ. ಬೋವಿ ಸಮುದಾಯವು ನಾಡು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸಮುದಾಯದ ಮುಖಂಡರು ರಾಜಕೀಯ ಬದಿಗಿಟ್ಟು ಒಗ್ಗಟ್ಟಾಗಬೇಕು. ಮಕ್ಕಳಿಗೆ ಸಮಾನ ಶಿಕ್ಷಣ ಕಲ್ಪಿಸಬೇಕು ಎಂದು ಕಿವಿಮಾತು ಹೇಳಿದರು.

* * 

ವಚನಕಾರರು ದುಡಿಮೆಯಲ್ಲೇ ದೇವರನ್ನು ಕಂಡವರಾಗಿದ್ದು, ದೇವರ ಆರಾಧನೆಯನ್ನು ವಿರೋಧಿಸಿದ್ದರು. ಸಮಾಜವು ಅವರ ಹಾದಿಯಲ್ಲೇ ಸಾಗಬೇಕು. ಎಲ್ಲರೂ ಸಮಾಜ ಸೇವೆ ಮೂಲಕ ದೇವರ ಕಾಣುವ ಸಂಕಲ್ಪ ಮಾಡಬೇಕು

ಕೆ.ವಿದ್ಯಾಕುಮಾರಿ ಹೆಚ್ಚುವರಿ ಜಿಲ್ಲಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry