ಬುಧವಾರ, ಡಿಸೆಂಬರ್ 11, 2019
24 °C

ಜಾತಿ ಮಧ್ಯೆ ಜಗಳ ಹಚ್ಚುವ ಸಿಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾತಿ ಮಧ್ಯೆ ಜಗಳ ಹಚ್ಚುವ ಸಿಎಂ

ಕೊಪ್ಪಳ: ವಿಶ್ವಮಟ್ಟದಲ್ಲಿ ಭಾರತದ ಗೌರವ ಹೆಚ್ಚುತ್ತಿದೆ. ಆದರೆ, ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿಗಳ ಮಧ್ಯೆ ಜಗಳ ಹಚ್ಚುತ್ತಿದ್ದಾರೆ ಎಂದು ಸಂಸದ ಪ್ರಹ್ಲಾದ ಜೋಷಿ ಹೇಳಿದರು.

ನಗರದಲ್ಲಿ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕೋಮುಗಲಭೆಗಳಲ್ಲಿ ಅಲ್ಪಸಂಖ್ಯಾತರ ಮೇಲಿನ ಪ್ರಕರಣ ಹಿಂದಕ್ಕೆ ಪಡೆಯಲು ಹೋದರು. ಈಗ ಹೇಳಿ ಬೆಂಕಿ ಹಚ್ಚಿದ್ದು ನಾವೋ ನೀವೋ ಎಂದು ಪ್ರಶ್ನಿಸಿದರು.

ಬೆಳೆ ವಿಮೆಯ ಪರಿಹಾರ ಕೋರಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದರೆ ನಮ್ಮ ವಿರುದ್ಧ ಪೊಲೀಸರ ಮೂಲಕ ಲಾಠಿ ಪ್ರಹಾರ ಮಾಡಿಸುತ್ತೀರಿ. ನಮ್ಮ ಮುಖಂಡರ ಮನೆಯೊಳಗೆ ನುಗ್ಗಿ ಅವರನ್ನು ಬಂಧಿಸುತ್ತಿದ್ದೀರಿ. ಕೊಪ್ಪಳ ಜಿಲ್ಲೆಯಲ್ಲೂ ಸಾವಿರಾರು ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ದೂರು ದಾಖಲಿಸಲಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಬರುವ ದಿನವೇ ರಾಜ್ಯ ಬಂದ್‌ ಕರೆ ಕೊಡುತ್ತಿದ್ದಾರೆ. ವಾಟಾಳ್‌ ನಾಗರಾಜ್‌ ಅವರಿಗೆ ಬುದ್ಧಿ ಇದೆಯೇ ಎಂದು ಪ್ರಶ್ನಿಸಿದರು.

ಯುಪಿಎ ಅವಧಿಯಲ್ಲಿ ರಾಜ್ಯಕ್ಕೆ ಕೊಟ್ಟ ಅನುದಾನದ ಮೂರು ಪಟ್ಟಿನಷ್ಟು ಅನುದಾನವನ್ನು ಈಗಿನ ಕೇಂದ್ರ ಸರ್ಕಾರ ನೀಡಿದೆ. ರಸ್ತೆ ಅಭಿವೃದ್ಧಿಗೆ ₹7,727 ಕೋಟಿ ಅನುದಾನ ನೀಡಲಾಗಿದೆ. ಆದರೆ, ರಾಜ್ಯ ಸರ್ಕಾರಕ್ಕೆ ಟೆಂಡರ್‌ ಕರೆಯುವ ಯೋಗ್ಯತೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ರಸ್ತೆ ಅಭಿವೃದ್ಧಿಗೆ ನೀಡಿದ್ದು ರಾಜ್ಯದಿಂದ ಸಂಗ್ರಹವಾದ ಸೆಸ್‌ ಹಣದಿಂದ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಅವರು ಹೇಳುತ್ತಿದ್ದಾರೆ. ಹಾಗಿದ್ದರೆ ಯುಪಿಎ ಅವಧಿಯಲ್ಲಿ ಸೆಸ್‌ ಸಂಗ್ರಹ ಆಗಿರಲಿಲ್ಲವೇ? ಆಗ ಏಕೆ ಅನುದಾನ ಕೊಟ್ಟಿರಲಿಲ್ಲ ಎಂದು ಪ್ರಶ್ನಿಸಿದರು.

ಆಡಳಿತ ವಿಚಾರದಲ್ಲಿ ಮೋದಿ ಸರ್ಕಾರ ಜಗತ್ತಿನಲ್ಲಿ 3ನೇ ಸ್ಥಾನದಲ್ಲಿದೆ. ಜನರ ವಿಶ್ವಾಸ ಗಳಿಸಿ ರಾಷ್ಟ್ರದ ಗೌರವವನ್ನು ಎತ್ತರಕ್ಕೇರಿಸಿದೆ ಈ ವಿಚಾರವನ್ನು ಗಮನದಲ್ಲಿಡಬೇಕು ಎಂದು ಹೇಳಿದರು.

ಬಿಜೆಪಿ ಮುಖಂಡರಾದ ಸಿ.ವಿ.ಚಂದ್ರಶೇಖರ, ಮಾಜಿ ಸಂಸದ ಶಿವರಾಮಗೌಡ, ಪಕ್ಷದ ಜಿಲ್ಲಾಧ್ಯಕ್ಷ ವಿರೂಪಾಕ್ಷ ಸಿಂಗನಾಳ, ಚಂದ್ರಶೇಖರ ಪಾಟೀಲ ಹಲಗೇರಿ, ಶಿವಕುಮಾರ ಹಕ್ಕಾಪಿಕ್ಕಿ, ಬಸವರಾಜ ದಡೇಸೂಗೂರು, ಹಾಲಪ್ಪಾಚಾರ್‌, ಮಾಜಿ ಶಾಸಕ ಕೆ.ಶರಣಪ್ಪ, ಅಪ್ಪಣ್ಣ ಪದಕಿ, ಹೇಮಲತಾ ನಾಯಕ ಇದ್ದರು.

* * 

ಪ್ರಧಾನಿ ಬರುವ ದಿನ ಬಂದ್‌ ಮಾಡಲು ಮುಂದಾದರೆ ರಾಜ್ಯದ ಜನತೆ ಸುಮ್ಮನಿರುವುದಿಲ್ಲ. ತಕ್ಕ ಪಾಠ ಕಲಿಸುತ್ತಾರೆ.

ಪ್ರಹ್ಲಾದ ಜೋಷಿ ಸಂಸದ

ಪ್ರತಿಕ್ರಿಯಿಸಿ (+)