ಶೌಚಾಲಯಗಳ ನೈರ್ಮಲ್ಯ ಕಾಪಾಡಿ

7

ಶೌಚಾಲಯಗಳ ನೈರ್ಮಲ್ಯ ಕಾಪಾಡಿ

Published:
Updated:

ಶ್ರವಣಬೆಳಗೊಳ: ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವದ ಹಿನ್ನಲೆಯಲ್ಲಿ ವಿವಿಧ ಉಪನಗರಗಳಲ್ಲಿ ನಿರ್ಮಿಸಿರುವ ಶೌಚಾಲಯಗಳನ್ನು ನೈರ್ಮಲ್ಯಯುತವಾಗಿ ಪರಿವರ್ತಿಸಬೇಕು ಎಂದು ರಾಜ್ಯ ಸಫಾಯಿ ಕರ್ಮಚಾರಿ ಆಯೋಗ ಅಧ್ಯಕ್ಷ ಎಂ.ಆರ್.ವೆಂಕಟೇಶ್ ಹೇಳಿದರು.

ಪಟ್ಟಣದ ಹೊರವಲಯದಲ್ಲಿ ನಿರ್ಮಿಸಿರುವ ಉಪನಗರಗಳಿಗೆ ಭೇಟಿ ನೀಡಿ ಶೌಚಾಲಯಗಳು ಹಾಗೂ ನೈರ್ಮಲ್ಯ ವ್ಯವಸ್ಥೆ ಬಗ್ಗೆ ಪರಿಶೀಲಿಸಿ ನಂತರ ಮಠದ ಕಾನಜಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ತ್ಯಾಗಿನಗರದಲ್ಲಿ ಅನುಸರಿಸ ಲಾಗುತ್ತಿರುವ ಶೌಚಾಲಯ ವ್ಯವಸ್ಥೆ ಅನೈರ್ಮಲ್ಯದಿಂದ ಕೂಡಿದೆ. ಶುಚಿತ್ವಕ್ಕೆ ಒತ್ತು ನೀಡಬೇಕು. ಇದರಲ್ಲಿ ರಾಜಿ ಇಲ್ಲ. ಸ್ವಚ್ಛತಾ ಕಾರ್ಮಿಕರಿಗೆ ಕನಿಷ್ಠ ವೇತನ ₹ 14,500 ನೀಡಬೇಕು. ಗುತ್ತಿಗೆದಾರರು ಇದನ್ನು ಪಾಲಿಸುವಂತೆ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಮತ್ತು ಮಹಾಮಸ್ತಕಾಭಿಷೇಕ ವಿಶೇಷ ಕರ್ತವ್ಯ ಅಧಿಕಾರಿಗಳು ನಿಗಾವಹಿಸಬೇಕು ಎಂದು ಸೂಚನೆ ನೀಡಿದರು.

ಸ್ವಚ್ಛತೆ ಕೆಲಸಗಾರರಿಗೆ ತಕ್ಷಣವೇ ಸುರಕ್ಷತಾ ಸಾಧನಗಳನ್ನು ನೀಡಿ ಕಡ್ಡಾಯವಾಗಿ ಅವುಗಳನ್ನು ಬಳಸುವಂತೆ ನೋಡಿಕೊಳ್ಳಬೇಕು. ಧಾರ್ಮಿಕ ಆಚರಣೆಗಳು, ಪದ್ಧತಿಗಳು ಏನೇ ಇದ್ದರೂ ಶೌಚಾಲಯ ವ್ಯವಸ್ಥೆಯ ಅನೈರ್ಮಲ್ಯತೆ ಮತ್ತು ಅವುಗಳನ್ನು ಅಸುರಕ್ಷಿತವಾಗಿ ಸ್ವಚ್ಛ ಮಾಡುವುದು ಸರಿಯಲ್ಲ ಎಂದರು.

ಉಪನಗರಗಳ ಸ್ವಚ್ಛತೆಗಾಗಿಯೇ ಗುತ್ತಿಗೆದಾರರು ಉತ್ತರ ಭಾರತದಿಂದ 300 ಕಾರ್ಮಿಕರನ್ನು ಕರೆ ತಂದಿದ್ದಾರೆ. ಅವರಿಗೆ ತಿಂಗಳಿಗೆ ₹ 8,100 ವೇತನ ನೀಡಲಾಗುತ್ತಿದೆ. ರಾಜ್ಯ ಸರ್ಕಾರ ನಿಗದಿಪಡಿಸಿರುವ ಕನಿಷ್ಠ ವೇತನ ನೀಡುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ವೆಂಕಟೇಶ್‌ ಹೇಳಿದರು.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಾತನಾಡಿ, ಜಿಲ್ಲಾಡಳಿತ ಅನೈರ್ಮಲ್ಯತೆಗೆ ಪ್ರೋತ್ಸಾಹ ನೀಡುವುದಿಲ್ಲ. ಈ ಬಗ್ಗೆ ಮಠದವರಿಗೆ ವೈಜ್ಞಾನಿಕ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಸೂಚಿಸಲಾಗಿದೆ ಎಂದರು.

ಆಯೋಗದ ಸದಸ್ಯ ಗೋಕುಲನಾರಾಯಣ ಸ್ವಾಮಿ, ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರ್‍ವಾಡ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಜಾನಕಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀಧರ್, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry