7

ಬಸ್‌ನಿಲ್ದಾಣದಲ್ಲಿ ಖಾಸಗಿ ವಾಹನಗಳ ದರ್ಬಾರ್‌

Published:
Updated:
ಬಸ್‌ನಿಲ್ದಾಣದಲ್ಲಿ ಖಾಸಗಿ ವಾಹನಗಳ ದರ್ಬಾರ್‌

ಸಕಲೇಶಪುರ: ಇಲ್ಲಿನ ಹಳೆ ಬಸ್‌ ನಿಲ್ದಾಣದಲ್ಲಿ ಖಾಸಗಿ ವಾಹನಗಳ ಉಪಟಳ ಹೆಚ್ಚಾಗಿದೆ. ಪ್ರಯಾಣಿಕರು ತಂಗಲು ಹಾಗೂ ಸರ್ಕಾರಿ ಬಸ್‌ಗಳ ನಿಲುಗಡೆಗೆ ಮೀಸಲಾದ ಸ್ಥಳವನ್ನು ಖಾಸಗಿ ವ್ಯಕ್ತಿಗಳು ಬೇಕಾಬಿಟ್ಟಿಯಾಗಿ ಬಳಸಿಕೊಳ್ಳುತ್ತಿದ್ದಾರೆ.

ಈ ಅತಿಕ್ರಮಣದಿಂದ ಒಂದೆಡೆ ಪ್ರಯಾಣಿಕರಿಗೆ ತೊಂದರೆಯಾಗುತ್ತಿದ್ದರೆ; ಇನ್ನೊಂದೆಡೆ ಬಸ್‌ ಚಾಲಕರಿಗೂ ಕಿರಿಕಿರಿ ತಪ್ಪಿಲ್ಲ. ನಿತ್ಯ ಈ ಮಾರ್ಗದಲ್ಲಿ ಬರುವ ಎಲ್ಲ ಬಸ್‌ಗಳನ್ನು ಬೆಂಗಳೂರು– ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ನಿಲ್ಲಿಸುವುದು ಅನಿವಾರ್ಯವಾಗಿದೆ. ಇದರಿಂದ ಸಂಚಾರ ಅಸ್ತವ್ಯಸ್ತಗೊಳ್ಳುತ್ತಿದೆ. ಪ್ರಯಾಣಿಕರ ಸುರಕ್ಷತೆಗೂ ಸವಾಲಾಗಿ ಪರಿಣಮಿಸಿದೆ.

ಹೊಸ ಬಸ್‌ ನಿಲ್ದಾಣ ಪಟ್ಟಣದ ಹೃದಯ ಭಾಗದಿಂದ ಸುಮಾರು ಒಂದೂವರೆ ಕಿ.ಮೀ. ದೂರದಲ್ಲಿದೆ. ಗ್ರಾಮೀಣ ಜನ ಪಟ್ಟಣಕ್ಕೆ ಬಂದು ಹೋಗಲು ಸಮಸ್ಯೆ ಉಂಟಾದ ಕಾರಣ; ಹಳೆ ತಾಲ್ಲೂಕು ಕಚೇರಿ ಮುಂಭಾಗ ಇದ್ದ ಗಣಪತಿ ದೇವಸ್ಥಾನವನ್ನು ತೆರವುಗೊಳಿಸಿ ಬಸ್‌ಗಳಿಗೆ ಅನುಕೂಲ ಮಾಡಲಾಗಿದೆ. ಪುರಸಭೆಯಿಂದ ಸುಮಾರು ₨ 3 ಲಕ್ಷ ಖರ್ಚು ಮಾಡಿ ಕಾಂಕ್ರೀಟ್‌ ಕಾಮಗಾರಿ ಮಾಡಲಾಗಿದೆ. ಪ್ರಯಾಣಿಕರು ವಿಶ್ರಾಂತಿ ಪಡೆಯಲು ಶಾಸಕರ ಅನುದಾನದಲ್ಲಿ ಮಿನಿನಿಲ್ದಾಣ ಸಹ ನಿರ್ಮಾಣ ಮಾಡಲಾಗಿದೆ. ಆದರೆ, ಖಾಸಗಿ ವಾಹನಗಳ ಚಾಲಕರು ಇದೆಲ್ಲವನ್ನೂ ಉಲ್ಟಾ ಮಾಡಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಾರ್ವಜನಿಕರು ಪರದಾಡುವಂತಾಗಿದೆ.

ನಿಲ್ದಾಣದ ಒಳಗೇ ಖಾಸಗಿ ವಾಹನಗಳನ್ನು ಸಾಲಾಗಿ ನಿಲ್ಲಿಸುವುದು ಇಲ್ಲಿ ಮಾಮೂಲಿ. ಇದರಿಂದ ಬಸ್‌ ಒಳಗೆ ಬರಲು ಜಾಗವೇ ಇಲ್ಲ. ಹತ್ತಿರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಯಾವಾಗಲೂ ವಾಹನ ದಟ್ಟಣೆ ಇರುತ್ತದೆ. ಇದರಿಂದ ಎಷ್ಟೋ ಸಾಲು ಟ್ರಾಫಿಕ್‌ ಜಾಮ್‌ ಆದ ಉದಾಹರಣೆಗಳೂ ಇವೆ.

ಜಿಲ್ಲಾಧಿಕಾರಿ ಆದೇಶ ಉಲ್ಲಂಘನೆ: ಸರ್ಕಾರಿ ಬಸ್‌ ನಿಲ್ದಾಣದ 250 ಮೀಟರ್‌ ವ್ಯಾಪ್ತಿಯಲ್ಲಿ ಖಾಸಗಿ ವಾಹನ ನಿಲುಗಡೆ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ದೇಶದ ಪ್ರತಿಯನ್ನು ಫಲಕ ಮಾಡಿ ನಿಲ್ದಾಣದಲ್ಲಿ ನೇತುಹಾಕಲಾಗಿದೆ. ಅಚ್ಚರಿಯೆಂದರೆ ಇದೇ ಫಲಕದ ಮುಂದೆ ಖಾಸಗಿ ವಾಹನಗಳು ಠಿಕಾಣೆ ಹೂಡುತ್ತವೆ. ಆದರೂ ಇಲ್ಲಿ ಕರ್ತವ್ಯನಿರತ ಪೊಲೀಸರಾಗಲಿ, ನಿಲ್ದಾಣದ ಅಧಿಕಾರಿಗಳಾಗಲಿ ಚೆಕಾರ ಎತ್ತುವುದಿಲ್ಲ ಎನ್ನುತ್ತಾರೆ ಜಿಲ್ಲಾ ಪ್ಲಾಂಟರ್‌್ಸ ಸಂಘದ ಸಂಘಟನಾ ಕಾರ್ಯದರ್ಶಿ ಕ್ಯಾನಹಳ್ಳಿ ಸುಬ್ರಹ್ಮಣ್ಯ.

ಈ ನಿಲ್ದಾಣ ಪ್ರಾರಂಭವಾದಾಗ ಒಂದು ತಿಂಗಳು ಒಬ್ಬ ಪೊಲೀಸ್‌ ಕಾನ್‌ಸ್ಟೆಬಲ್‌, ಕೆಎಸ್‌ಆರ್‌ಟಿಸಿ ಡಿಪೋದಿಂದ ಒಬ್ಬ ಟಿ.ಸಿ ನಿಯೋಜಿಸಲಾಗಿತ್ತು. ಸದ್ಯ ಇಲ್ಲಿ ಯಾರೂ ಇಲ್ಲ. ಹೀಗಾಗಿ, ಜಿಲ್ಲಾಧಿಕಾರಿಗಳ ಆದೇಶದ ಸ್ಪಷ್ಟ ಉಲ್ಲಂಘನೆ ನಿರಂತರವಾಗಿ ನಡೆದಿದೆ.

* *

ಬಸ್‌ ನಿಲ್ದಾಣದಲ್ಲಿ ಖಾಸಗಿ ವಾಹನ ನಿಲ್ಲಿಸದಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಇದನ್ನು ಉಲ್ಲಂಘನೆ ಮಾಡಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು

ವೆಂಕಟೇಶ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry