ಶುಕ್ರವಾರ, ಡಿಸೆಂಬರ್ 6, 2019
24 °C

ಚಂದ್ರಗುಪ್ತ ಬಸದಿಯ ಜಾಲಂಧ್ರಗಳು

ಬಿ.ಪಿ. ಜಯಕುಮಾರ್‌ Updated:

ಅಕ್ಷರ ಗಾತ್ರ : | |

ಚಂದ್ರಗುಪ್ತ ಬಸದಿಯ ಜಾಲಂಧ್ರಗಳು

ಶ್ರವಣಬೆಳಗೊಳ: ಶ್ರೀ ಕ್ಷೇತ್ರ 2300 ವರ್ಷಗಳ ಇತಿಹಾಸ ಹೊಂದಿದೆ. ಕ್ರಿ.ಪೂ. 3ನೇ ಶತಮಾನದಲ್ಲಿ ಭದ್ರಬಾಹು ಮುನಿ ಉತ್ತರದ ಮಗಧ ದಿಂದ ಸಾಮ್ರಾಟ್ ಚಂದ್ರಗುಪ್ತ ಮೌರ್ಯ ಹಾಗೂ 12 ಸಾವಿರ ಮುನಿಗಳೊಂದಿಗೆ ಬಂದಾಗಿನಿಂದ ಇತಿಹಾಸ ಪ್ರಾರಂಭವಾಗುತ್ತದೆ ಎಂಬು ಶಾಸನಗಳು, ಜೈನ ಪುರಾಣಗಳಲ್ಲಿ ಉಲ್ಲೇಖವಾಗಿದೆ.

ಚಂದ್ರಗಿರಿಯಲ್ಲಿನ ಚಂದ್ರಗುಪ್ತ ಬಸದಿಯು ಮೂರು ಗರ್ಭಗುಡಿ ಹೊಂದಿದೆ. ಈ ಬಸದಿಯ ಶಿಖರಗಳು ಪ್ರಾಚೀನ ಶೈಲಿಯಲ್ಲಿದ್ದು, ದಕ್ಷಿಣದ ಕಡೆ ಮುಖ ಮಾಡಿದೆ. ಒಳ ಭಾಗದಲ್ಲಿ 23ನೇ ತೀರ್ಥಂಕರ ಪಾರ್ಶ್ವನಾಥ ಸ್ವಾಮಿ, ಧರಣೇಂದ್ರ, ಪದ್ಮಾವತಿ, ಗೋಮೇದ ಯಕ್ಷ ಮತ್ತು ಕೂಷ್ಮಾಂಡಿನಿ ದೇವಿ ಮೂರ್ತಿಗಳಿವೆ.

ಮುಂಭಾಗದ ಕಲ್ಲಿನ ಜಾಲಂಧ್ರಗಳು ಇತಿಹಾಸಕಾರರನ್ನು ಆಕರ್ಷಿಸುತ್ತಿವೆ. ಇವುಗಳನ್ನು ಪೂರ್ವ ಮತ್ತು ಪಶ್ಚಿಮ ಭಾಗವಾಗಿ ವಿಂಗಡಿಸಲಾಗಿದ್ದು, ಪೂರ್ವ ಭಾಗದ ಜಾಲಂಧ್ರ ಭದ್ರಬಾಹು ಮುನಿಯ ಬಾಲ್ಯ ಜೀವನಕ್ಕೆ ಸಂಬಂಧಿಸಿದ ಘಟನೆಗಳು ಹಾಗೂ ಪಶ್ಚಿಮ ಭಾಗದ ಜಾಲಂಧ್ರ ಭದ್ರಬಾಹು ಮುನಿ ಮತ್ತು ಚಂದ್ರಗುಪ್ತ ಮೌರ್ಯ ದಕ್ಷಿಣ ಭಾರತಕ್ಕೆ ಹೊರಟ ಸಂಗತಿ ಒಳಗೊಂಡಿದೆ.

ಪೂರ್ವದ ಜಾಲಂಧ್ರದಲ್ಲಿ ಭದ್ರಬಾಹು ಮುನಿಗಳ ಬಾಲ್ಯದ ಕಥೆ ಇದೆ. ಬಾಲಕ ಮನೆ ಮುಂದೆ ಆಟವಾಡುವುದನ್ನು ತಂದೆ ರಾಜಪುರೋಹಿತ ಸೋಮಶರ್ಮ ಹಾಗೂ ತಾಯಿ ಸೋಮಶ್ರೀ ನೋಡುತ್ತಿರುವುದು, ಅವರ ಗುರು ಗೋವರ್ಧನಾಚಾರ್ಯರು ಆಗಮಿಸುತ್ತಿರುವ ದೃಶ್ಯ, ಭದ್ರಬಾಹುವನ್ನು ಧರ್ಮದ ರಕ್ಷಣೆಗಾಗಿ ಶಿಕ್ಷಣ ನೀಡಲು ತಮಗೆ ಒಪ್ಪಿಸಬೇಕು ಎಂದು ಕೇಳಿ ಮನೆಯಲ್ಲಿ ಆಹಾರ ಸ್ವೀಕರಿಸುತ್ತಿರುವುದು ಹಾಗೂ ಶಿಕ್ಷಣ ನೀಡುವುದನ್ನು ನೋಡಬಹುದು.

‘ಕಲ್ಲುಗಳನ್ನು ಒಂದರ ಮೇಲೊಂದು ಜೋಡಿಸಿ ಆಟವಾಡುತ್ತಿರುವ ದೃಶ್ಯವು ಭದ್ರಬಾಹು ಮುಂದೆ 12 ಅಂಗಗಳಲ್ಲಿ ಮತ್ತು 14 ಪೂರ್ವ ತಿಳಿಯುತ್ತಾನೆ ಎಂದು ಗುರು ಗೋವರ್ಧನಾಚಾರ್ಯರು ಅರಿತು, ಭದ್ರಬಾಹುವಿಗೆ ಮುನಿ ದೀಕ್ಷೆ ಕೊಡುತ್ತಾರೆ. ರಾಜ ಸಭೆಯಲ್ಲಿ ಸಂಗೀತ ನೃತ್ಯದ ದೃಶ್ಯವನ್ನು

ಶಿಲ್ಪಿಯು ಚಿತ್ರಿಸಿದ್ದಾನೆ’ ಎಂದು ಎಸ್‌ಡಿಜೆಎಂಐ ಆಡಳಿತ ಮಂಡಳಿಯ ವ್ಯವಸ್ಥಾಪಕ ರಾಜೇಶ್‌ ಜೈನ್‌ ಶಾಸ್ತ್ರೀ ಹೇಳಿದರು.

ಪಶ್ಚಿಮ ಭಾಗದ ಜಾಲಂಧ್ರದ ಶಿಲ್ಪಕಲೆಯಲ್ಲಿ ಎಡಭಾಗದ ಮೂಲೆಯಿಂದ ಭದ್ರಬಾಹು ಮುನಿಯ ದಕ್ಷಿಣ ಭಾರತದ ಕಡೆಯ ವಿಹಾರ ಪ್ರಾರಂಭವಾಗಿ ಬಲಭಾಗಕ್ಕೆ ಸಾಗಿ ಮುಕ್ತಾಯವಾಗಿದೆ. ಅದರಲ್ಲಿ ಸಾಮ್ರಾಟ್‌ ಚಂದ್ರಗುಪ್ತನ ಗುಪ್ತಚರರು ನಿತ್ಯ ಕಾರ್ಯಕ್ಕೆ ಹೊರಟಿರುವುದು, ಚಂದ್ರಗುಪ್ತ ಪತ್ನಿಯೊಂದಿಗೆ ಆಪ್ತ ಕಾರ್ಯದರ್ಶಿ ಜತೆ ಚರ್ಚೆಯಲ್ಲಿ ತೊಡಗಿ ರುವುದು, ರಾಜಧೂತರು ಸಾಮ್ರಾಟನ ಭೇಟಿ ಪಡೆಯಲು ದ್ವಾರಪಾಲಕರ ಅನುಮತಿ ಪಡೆಯುತ್ತಿರುವುದು, ಉಜ್ಜಯಿನಿ ನಗರದ ಜನಜೀವನ, ಭದ್ರ ಬಾಹುಮುನಿ ಸ್ವಾಗತಿಸಲು ಚಂದ್ರಗುಪ್ತ ಹೊರಟ ದೃಶ್ಯ, ಭದ್ರಬಾಹುಮುನಿ ಆಶೀರ್ವಚನ ನೀಡುತ್ತಿರುವುದು, ಚಂದ್ರಗುಪ್ತ ಮೌರ್ಯ ಆಹಾರ ದಾನ ಮಾಡುತ್ತಿರುವುದು,  ಮುನಿಗಳ ಸಾನಿಧ್ಯದಲ್ಲಿ ಮುನಿ ದೀಕ್ಷೆ ಪಡೆಯುವುದು, ಬರಗಾಲದ ಮುನ್ಸೂಚನೆ ಅರಿತು ದಕ್ಷಿಣದ ಕಡೆಗೆ ವಿಹಾರ ಹೊರಡುವುದು ಮುಂತಾದ ಘಟನೆಗಳನ್ನು ಸುಂದರವಾಗಿ ಕೆತ್ತಲಾಗಿದೆ.

ಪೂರ್ವ ಭಾಗದ ಜಾಲಂಧ್ರದ ಮಧ್ಯ ಭಾಗದಲ್ಲಿ ದಾಸೋಜ ಎಂಬ ಶಾಸನ ಲಿಪಿ ಇದ್ದು, ಇದರ ಆಧಾರದ ಮೇಲೆ ಈ ಜಾಲಂಧ್ರದ ರಚನಾ ಕಾಲವು ಕ್ರಿ.ಶ. 12 ಮತ್ತು 13ನೇ ಶತಮಾನದ ಮಧ್ಯದಲ್ಲಿ ಆಗಿದೆ ಎಂದು ಇತಿಹಾಸಕಾರರು ಹೇಳುತ್ತಾರೆ.

ಪೂರ್ವ ಮತ್ತು ಪಶ್ಚಿಮ ಭಾಗದ ಜಾಲಂಧ್ರಗಳಲ್ಲಿ ಒಟ್ಟು 45, - 45 ಆಯತಾಕಾರದ ಚಿತ್ರಗಳನ್ನು 10 ಸಾಲಿನಲ್ಲಿ ಜೋಡಿಸಿದ್ದು, ಒಟ್ಟು 90 ಚಿತ್ರಗಳು ಇವೆ. ಈ ಜಾಲಂಧ್ರಗಳು ಉನ್ನತ ಮಟ್ಟದ ಶಿಲ್ಪಕಲೆಯ ಕೃತಿಗಳಾಗಿದ್ದು, ಮೂರ್ತಿಯ ಚಿತ್ರಗಳು ಬಹಳ ಸಣ್ಣದಿದ್ದರೂ ಪ್ರಮಾಣ ಬದ್ಧವಾಗಿ ಸುಂದರವಾಗಿವೆ.

 

ಪ್ರತಿಕ್ರಿಯಿಸಿ (+)