7

ಚಿವುಟಿ ಸಂತೈಸಿದ ಶಿವಣ್ಣನವರ!

Published:
Updated:
ಚಿವುಟಿ ಸಂತೈಸಿದ ಶಿವಣ್ಣನವರ!

ಹಾವೇರಿ: ವಿಮಾ ಮೊತ್ತದ ಹಣ ರೈತರ ಖಾತೆಗೆ ಜಮಾ ಮಾಡುವಲ್ಲಿನ ವಿಳಂಬ ಕುರಿತು ವಾಗ್ದಾಳಿ ನಡೆಸಿದ ಶಾಸಕ ಬಸವರಾಜ ಶಿವಣ್ಣನವರ, ಬಳಿಕ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿಗೆ ಶಹಬ್ಬಾಸ್ ಗಿರಿ ನೀಡಿ, ಮಾಜಿ ಸಚಿವರಾದ ಸಿ.ಎಂ. ಉದಾಸಿ ಮತ್ತು ಬಸವರಾಜ ಬೊಮ್ಮಾಯಿ ಅವರನ್ನು ಟೀಕಿಸಿದ ಸ್ವಾರಸ್ಯಕರ ಘಟನೆಗೆ ಇಲ್ಲಿನ ಪ್ರವಾಸಿಮಂದಿರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿ ಸಾಕ್ಷಿಯಾಯಿತು.

ಪತ್ರಿಕಾಗೋಷ್ಠಿಗೆ ಸ್ವಲ್ಪ ವಿಳಂಬವಾಗಿ ಬಂದ ಶಾಸಕ ಬಸವರಾಜ ಶಿವಣ್ಣನವರ, ‘ರೈತರ ಖಾತೆಗೆ ವಿಮಾ ಮೊತ್ತ ಜಮಾ ಮಾಡದ ಕಾರಣ ನಾವು ಕ್ಷೇತ್ರದಲ್ಲಿ ಓಡಾಡಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆ ಉಂಟಾಗಿದೆ. ಅಧಿಕಾರಿಗಳ ಸಭೆ ನಡೆಸಿ ಕ್ರಮ ಕೈಗೊಳ್ಳಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಅವರಿಗೆ ಸೂಚಿಸಿದರು. ಆಗ ಅಲ್ಲಿದ್ದ ಸಚಿವರು, ಮಾಜಿ ಶಾಸಕರಾದ ಬಿ.ಸಿ. ಪಾಟೀಲ್, ಅಜ್ಜಂಪೀರ್ ಖಾದ್ರಿ, ಜಿ.ಪಂ. ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ ಮತ್ತಿತರರು ತಬ್ಬಿಬ್ಬಾದರು.

ಬಳಿಕ ಮಾತನಾಡಿದ ಶಿವಣ್ಣನವರ, ‘ಈ ಬಗ್ಗೆ ಸರ್ಕಾರದ ಹಂತದಲ್ಲಿ ಮಾತುಕತೆ ನಡೆಸಿ, ವಿಶೇಷ ಅಧಿಕಾರಿಯನ್ನು ನೇಮಿಸಲಾಗಿತ್ತು. ಆದರೆ, ರೈತರು ಮತ್ತು ಅಧಿಕಾರಿಗಳ ಮಧ್ಯೆ ಗೊಂದಲ ಉಂಟಾಗಿದೆ. ಹಲವು ಬಾರಿ ಪ್ರಯತ್ನಿಸಲಾಗಿದೆ’ ಎಂದರು.

‘ಈ ಹಿಂದೆ ಬಿಜೆಪಿ ಸರ್ಕಾರವು ರೈತರ ಮೇಲೆ ಗೋಲಿಬಾರ್ ನಡೆಸಿತು. ಅಲ್ಲದೇ, ಇಬ್ಬರು (ಸಿ.ಎಂ. ಉದಾಸಿ ಮತ್ತು ಬಸವರಾಜ ಬೊಮ್ಮಾಯಿ) ಸಚಿವರಾಗಿದ್ದರೂ ಜಿಲ್ಲೆಯ ಸಮಗ್ರ ಅಭಿವೃದ್ಧಿ ಆಗಲಿಲ್ಲ. ಒಬ್ಬರು ಹಾನಗಲ್‌ಗೆ ಮತ್ತೊಬ್ಬರು ಶಿಗ್ಗಾವಿಗೆ ಅನುದಾನ ಒಯ್ದರು. ಅಲ್ಲಿಯೂ ಅಭಿವೃದ್ಧಿ ಮಾಡಲಿಲ್ಲ. ರುದ್ರಪ್ಪ ಲಮಾಣಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಎಲ್ಲೆಡೆ ಸಮಾನ ಆದ್ಯತೆ ನೀಡಿದ್ದಾರೆ’ ಎಂದು ಶಹಬ್ಬಾಸ್‌ಗಿರಿ ನೀಡಿದರು.

ಅದಕ್ಕೆ ಧ್ವನಿಗೂಡಿಸಿದ ಅಜ್ಜಂಪೀರ್ ಖಾದ್ರಿ, ‘ಶಿಗ್ಗಾವಿ –ಸವಣೂರು ಕ್ಷೇತ್ರದಲ್ಲಿ ಈಚಿನ ವರ್ಷದಲ್ಲಿ ರುದ್ರಪ್ಪ ಲಮಾಣಿ ಪ್ರಯತ್ನದಿಂದಾಗಿ ಯೋಜನೆಗಳು ಅನುಷ್ಠಾನಗೊಂಡಿವೆ. ಸ್ಥಳೀಯವಾಗಿ ಬಿಜೆಪಿ ಶಾಸಕರಿದ್ದರೂ, ಜಿಲ್ಲೆಯ ಎಲ್ಲ ಜನತೆಯನ್ನು ಸಮಾನವಾಗಿ ಕಂಡ ಸಚಿವರು’ ಎಂದು ಶ್ಲಾಘಿಸಿದರು. ಆ ಬಳಿಕ, ಪಕ್ಷದ ಮುಖಂಡರೆಲ್ಲ ಸೇರಿಕೊಂಡು ಸಭೆ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry