‘ಜಾತಿ ಭೇದ ಎಣಿಸದ ವೀರಶೈವ ಧರ್ಮ’

7

‘ಜಾತಿ ಭೇದ ಎಣಿಸದ ವೀರಶೈವ ಧರ್ಮ’

Published:
Updated:

ಮುಂಡರಗಿ: ‘ವೀರಶೈವ ಧರ್ಮದಲ್ಲಿ ಜಾತಿ ಸೂತಕವಿಲ್ಲ, ದೋಷ, ಡಂಭಾಚಾರಗಳಿಲ್ಲ. ವೀರಶೈವ ಧರ್ಮವು ಅನಾದಿ ಕಾಲದಿಂದಲೂ ಜಗತ್ತಿನಲ್ಲಿ ಹೆಣ್ಣು ಗಂಡುಗಳಲ್ಲಿ ಭೇದ ಎಣಿಸದೆ ಇಬ್ಬರನ್ನೂ ಸಮಾನವಾಗಿ ಕಂಡಿದೆ’ ಎಂದು ಉಜ್ಜಯಿನಿ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಅನ್ನದಾನೀಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ಬುಧವಾರ ರಾತ್ರಿ ಮಠದಲ್ಲಿ ಏರ್ಪಡಿಸಿದ್ದ ಭಕ್ತಜನ ಹಿತಗೋಷ್ಠಿ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

‘ವೀರಶೈವ ಹಾಗೂ ಲಿಂಗಾಯತವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಕೆಲವು ಸ್ವಾರ್ಥಿಗಳು ಎರಡರಲ್ಲಿಯೂ ತಾರತಮ್ಯ ಎಸಗುತ್ತಿದ್ದಾರೆ. ವೀರಶೈವ ಹಾಗೂ ಲಿಂಗಾಯತಗಳು ಹಿಂದಿನಿಂದಲೂ ಒಂದೇ ಆಚರಣೆ ಮತ್ತು ಪರಂಪರೆಯನ್ನು ಅಳವಡಿಸಿಕೊಂಡಿದ್ದು, ಅವುಗಳಲ್ಲಿ ಯಾವುದೇ ಭಿನ್ನತೆ ಇಲ್ಲ’ ಎಂದು ತಿಳಿಸಿದರು.

ಡಾ.ಅನ್ನದಾನೀಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, ‘ಉಜ್ಜಯಿನಿ ಪೀಠದ ಸ್ವಾಮೀಜಿ ಅವರು ಮಠದಲ್ಲಿ ಏರ್ಪಡಿಸಿರುವ ಜಂಗಮೋತ್ಸವದಲ್ಲಿ ಪಾಲ್ಗೊಂಡಿದ್ದು ಚಾರಿತ್ರಿಕ ಘಟನೆಯಾಗಿದೆ. ಗುರು, ಲಿಂಗ, ಜಂಗಮವು ಒಂದೇ ಆಗಿದ್ದು, ಮಠದ ಭಕ್ತರು ಹಾಗೂ ಅಭಿಮಾನಿಗಳು ಪಂಚಪೀಠದ ಶ್ರೀಗಳ ಜಂಗಮೋತ್ಸವ ಮಾಡಿದ್ದಾರೆ’ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ‘ಚಿತ್ರದೊಳಡಗಿದ ಚಿತ್ರಕ’ ದರ್ಶನ ಗ್ರಂಥವನ್ನು ಉಜ್ಜಯಿನಿ ಪೀಠದ ಸ್ವಾಮೀಜಿ ಬಿಡುಗಡೆ ಮಾಡಿದರು.

ವೈದ್ಯ ಶ್ರೇಷ್ಠ ಬಾಬುರಾವ್ ಕುಲಕರ್ಣಿ ಅವರನ್ನು ಗೌರವಿಸಲಾಯಿತು. ಲಕ್ಕುಂಡಿಯ ರಾಜರಾಜೇಶ್ವರಿ ಜಾನಪದ ಕಲಾತಂಡದವರು ಜಾನಪದ ನೃತ್ಯ ಮಾಡಿದರು. ಕ.ರಾ.ಬೆಲ್ಲದ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸದಾಶಿವ ಪಾಟೀಲ ಗವಾಯಿ, ವೀರೇಶ ಹಿಟ್ನಾಳ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಅದಕ್ಕೂ ಪೂರ್ವದಲ್ಲಿ ಉಜ್ಜಯಿನಿ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಅವರ ಅಡ್ಡಪಲ್ಲಕ್ಕಿ ಉತ್ಸವ ಜರುಗಿತು.

ಬಳಗಾನೂರ ಶಿವಶಾಂತವೀರ ಶರಣರು, ಅನ್ನದಾನೀಶ್ವರ ಮಠದ ಉತ್ತರಾಧಿಕಾರಿ ಮಲ್ಲಿಕಾರ್ಜುನ ಸ್ವಾಮೀಜಿ, ಶಿವಯೋಗೀಶ್ವರ ಸ್ವಾಮೀಜಿ, ಡಾ.ಎಸ್.ಎಂ.ಹಿರೇಮಠ, ಜಾತ್ರಾ ಕಮಿಟಿ ಅಧ್ಯಕ್ಷ ಮಂಜುನಾಥ ಇಟಗಿ, ಎ.ಕೆ.ಬೆಲ್ಲದ, ಆರ್‌.ಬಿ.ಡಂಬಳಮಠ, ಪ್ರಾಚಾರ್ಯರಾದ ಡಾ.ಬಿ.ಜೆ.ಜವಳಿ, ಸಿ.ಎಸ್‌.ಅರಸನಾಳ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry