ಶಾಸಕ ಕಾಶಪ್ಪನವರ ಸಾಧನೆ ಶೂನ್ಯ

7

ಶಾಸಕ ಕಾಶಪ್ಪನವರ ಸಾಧನೆ ಶೂನ್ಯ

Published:
Updated:

ಇಳಕಲ್: ‘ಹಿಂದೆ ಬಿಜೆಪಿ ಸರ್ಕಾರ ಮಂಜೂರು ಮಾಡಿದ್ದ ಅನೇಕ ಯೋಜನೆಗಳನ್ನು ಶಾಸಕ ಕಾಶಪ್ಪನವರಿಗೆ ಇನ್ನೂ ಪೂರ್ಣ ಗೊಳಿಸಲು ಸಾಧ್ಯವಾಗಿಲ್ಲ. ಅವರು ಕ್ಷೇತ್ರಕ್ಕೆ ಹೊಸದಾಗಿ ಯಾವುದೇ ಯೋಜನೆ ತಂದಿಲ್ಲ’ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಆರೋಪಿಸಿದರು.

ನಗರದ ಅನುಭವ ಮಂಟಪದಲ್ಲಿ ಹುನಗುಂದ ಮತಕ್ಷೇತ್ರದ ಪ್ರಣಾಳಿಕೆ ಸಿದ್ಧಪಡಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ನಾನು ಶಾಸಕನಾಗಿದ್ದ 9 ವರ್ಷದ ಅವಧಿಯಲ್ಲಿ ಮತಕ್ಷೇತ್ರಕ್ಕೆ ಮಂಜೂರಾದ ಕಾಮಗಾರಿ ಹಾಗೂ ಯೋಜನೆಗಳಿಗೂ ಇದು ‘ಅದು ನಮ್ಮ ತಂದೆಯವರ ಕನಸು, ಇದು ನನ್ನ ಕನಸು’ ಎಂದು ಸುಳ್ಳು ಹೇಳುತ್ತಾ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

ಈಚೆಗೆ ಹುನಗುಂದದಲ್ಲಿ ಕೆಬಿಜೆಎನ್‌ಎಲ್‌ ರೈತರಿಗಾಗಿ ಆಯೋಜಿಸಿದ ತರಬೇತಿ ಕಾರ್ಯಕ್ರಮಕ್ಕೆ ರಾಜ್ಯದ ಅನೇಕ ಸಚಿವರು ಬಂದಿದ್ದರು. ಈ ಸಂದರ್ಭದಲ್ಲಿ ರೈತರು ತಾವು ಬೆಳೆದ ಕಡಲೆಗೆ ಬೆಂಬಲ ಬೆಲೆ ಕೊಡಬೇಕು ಎಂದು ಕೇಳಲು ಹೋದರೆ ಅವರನ್ನು ಅಮೀನಗಡ ಪೊಲೀಸ್ ಠಾಣೆಯಲ್ಲಿ ಕೂಡಿ ಹಾಕಲಾಯಿತು. ಈ ರೀತಿ ಮಾಡಲು ಶಾಸಕ ವಿಜಯಾನಂದ ಕಾಶಪ್ಪನವರಿಗೆ ಮಾತ್ರ ಸಾಧ್ಯ. ಇದರಿಂದ ಅವರ ರೈತಪರ ಕಾಳಜಿ ಎಂತಹದ್ದು ಎಂಬುದು ಗೊತ್ತಾಗುತ್ತದೆ’ ಎಂದು ವ್ಯಂಗ್ಯವಾಗಿದರು.

‘ಶಾಸಕರಿಂದ ಆಗಿರುವ ಆಡಳಿತ ದುರುಪಯೋಗ, ಮರಳು ಲೂಟಿ, ಕಳಪೆ ಕಾಮಗಾರಿ ಹಾಗೂ ಪೊಲೀಸ್‌ರ ಮೂಲಕ ನಡೆಸಿದ ದೌರ್ಜನ್ಯಗಳಿಗೆ ಜನರು ಉತ್ತರಿಸುವ ಸಂದರ್ಭ ಬಂದಿದೆ. ಯಾವುದೇ ಆಮಿಷಕ್ಕೆ ಬಲಿಯಾಗದೇ ಸ್ಥಗಿತಗೊಂಡಿರುವ ಅಭಿವೃದ್ಧಿ ಕಾರ್ಯಗಳಿಗೆ ಮತ್ತೆ ಚಾಲನೆ ನೀಡಲು ಈ ಬಾರಿ ಬಿಜೆಪಿ ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ಬಿಜೆಪಿ ಜಿಲ್ಲಾ ಘಟಕದ ಪ್ರದಾನ ಕಾರ್ಯದರ್ಶಿ ಮಹಾಂತೇಶ ಮಮದಾಪೂರ ಮಾತನಾಡಿ, ‘ಈ ಬಾರಿ ಬಿಜೆಪಿ ಪ್ರಣಾಳಿಕೆ ರೂಪಿಸಲು ಹೊಸ ವ್ಯವಸ್ಥೆ ಮಾಡಿದ್ದು, ಜನರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ರೈತರು, ಉದ್ಯಮೆದಾರರು, ಕೂಲಿ ಕಾರ್ಮಿಕರು, ಚಿಂತಕರು, ವೈದ್ಯರು, ಸಮಾಜ ಸೇವಕರು, ಮಹಿಳೆಯರು, ನೇಕಾರರು, ಕಲಾವಿದರು, ವ್ಯಾಪಾರಿಗಳು, ವೃತ್ತಿಪರರು ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಜನರ ಸಲಹೆ, ಮಾರ್ಗದರ್ಶನ ಪಡೆದು ಪ್ರಣಾಳಿಕೆ ರೂಪಿಸುತ್ತೇವೆ ಹಾಗೂ ಪಕ್ಷ ಅಧಿಕಾರಕ್ಕೆ ಬಂದಾಗ ಕಾರ್ಯಗತಗೊಳಿಸುತ್ತೇವೆ’ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನೂರಾರು ಜನರು ಲಿಖಿತ ಸಲಹೆಗಳನ್ನು ಮಾಜಿ ಶಾಸಕ ದೊಡ್ಡನಗೌಡ ಪಾಟೀಲರಿಗೆ ಸಲ್ಲಿಸಿದರು. ಸಭೆಯಲ್ಲಿ ಹಿರಿಯ ಮುಖಂಡ ಜಿ.ಪಿ. ಪಾಟೀಲ, ಜಿಲ್ಲಾ ಪಂಚಾಯ್ತಿ ಸದಸ್ಯ ಸದಸ್ಯರಾದ ಶಶಿಕಾಂತ ಪಾಟೀಲ, ವಿರೇಶ ಉಂಡೋಡಿ, ಹೃದ್ರೋಗ ತಜ್ಞ ಡಾ.ಮಹಾಂತೇಶ ಕಡಪಟ್ಟಿ, ಕೆ.ಎಸ್‌. ಕಂದಿಕೊಂಡ, ಮುಕ್ಕಣ್ಣ ಮುಕ್ಕಣ್ಣವರ, ಹುನಗುಂದ ತಾಲ್ಲೂಕು ಬಿಜೆಪಿ ಅಧ್ಯಕ್ಷ ಮಲ್ಲಯ್ಯ ಮುಗನೂರಮಠ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry