ಭಯದ ನೆರಳಲ್ಲಿ ಅಧಿಕಾರಿ ವರ್ಗ

7

ಭಯದ ನೆರಳಲ್ಲಿ ಅಧಿಕಾರಿ ವರ್ಗ

Published:
Updated:
ಭಯದ ನೆರಳಲ್ಲಿ ಅಧಿಕಾರಿ ವರ್ಗ

ಬಾಗಲಕೋಟೆ: ‘ಐಎಎಸ್ ಅಧಿಕಾರಿ ಡಿ.ಕೆ.ರವಿ ಸಾವಿನ ನಂತರ ರಾಜ್ಯದ ಅಧಿಕಾರಿಗಳ ಮನದಲ್ಲಿ ಭಯ (ಫೋಬಿಯಾ) ಹಾಸು ಹೊಕ್ಕಾಗಿದೆ. ಬೆದರಿಕೆಯ ಕಾರಣ, ಅಧಿಕಾರಿಗಳು ಅನಿವಾರ್ಯವಾಗಿ ರಾಜಕಾರಣಿಗಳಿಗೆ ಹಣ ಸಂಗ್ರಹಿಸಿಕೊಡುವ ಕೆಲಸ ಮಾಡುತ್ತಿದ್ದಾರೆ’ ಎಂದು ಭಾರತೀಯ ಜನಶಕ್ತಿ ಕಾಂಗ್ರೆಸ್‌ನ ಸ್ಥಾಪಕಿ ಅನುಪಮಾ ಶೆಣೈ ಆರೋಪಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಖಾಕಿಗಳ ಕೆಲಸದಲ್ಲಿ ಖಾದಿಯ ಹಸ್ತಕ್ಷೇಪ ಹೆಚ್ಚಳವಾಗಿದೆ. ಇಲಾಖೆಯಲ್ಲಿ ಬರೀ ರಾಜಕೀಯವೇ ಹಾಸುಹೊಕ್ಕಾಗಿದೆ. ನನಗೂ ಬೆದರಿಕೆ ಎದುರಾಗಿತ್ತು. ಆಗ ಎದೆಗುಂದಿದ್ದರೆ ಕಲ್ಲಪ್ಪ ಹಂಡಿಭಾಗ, ಎಂ.ಕೆ. ಗಣಪತಿ ರೀತಿ ನಾನೂ ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು. ಆದರೆ ನನ್ನಲ್ಲಿನ ಛಲ, ಧೈರ್ಯದ ಕಾರಣ ಬದುಕಿ ಉಳಿದಿದ್ದೇನೆ’ ಎಂದು ಹೇಳಿದರು.

‘ಭಾರತೀಯ ಪೊಲೀಸ್‌ ಸೇವೆ, ಕರ್ನಾಟಕ ರಾಜ್ಯ ಪೊಲೀಸ್‌ ಸೇವೆಗೆ ಸೇರುವಾಗ ದೇಶದ ಸಂವಿಧಾನಕ್ಕೆ ನಿಷ್ಠರಾಗಿರುವುದಾಗಿ ಪ್ರಮಾಣ ಮಾಡುತ್ತಾರೆ. ಅದನ್ನು ಬದಲಾಯಿಸಲಿ. ಅಧಿಕಾರದಲ್ಲಿರುವ ಪಕ್ಷ, ರಾಜಕಾರಣಿಗಳಿಗೆ ನಿಷ್ಠರಾಗಿರುವುದಾಗಿ ಪ್ರಮಾಣ ವಚನ ಸ್ವೀಕರಿಸಲಿ’ ಎಂದು ವ್ಯಂಗ್ಯವಾಡಿದ ಶೆಣೈ, ಈ ವ್ಯವಸ್ಥೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಭಾರತೀಯ ಜನಶಕ್ತಿ ಕಾಂಗ್ರೆಸ್‌ ಸ್ಥಾಪಿಸಿ ರಾಜಕೀಯ ಪ್ರವೇಶ ಮಾಡಿದ್ದಾಗಿ ಹೇಳಿದರು.

₹ 2 ಲಕ್ಷ ದೇಣಿಗೆ: ‘ಭಾರತೀಯ ಜನಶಕ್ತಿ ಕಾಂಗ್ರೆಸ್‌ನಿಂದ ಅಭ್ಯರ್ಥಿಯಾಗುವವರು ಸಮಾನ ಮನಸ್ಕರಿಂದ ₹2 ಲಕ್ಷ ಸಂಗ್ರಹಿಸಿ ಪಕ್ಷಕ್ಕೆ ದೇಣಿಗೆಯಾಗಿ ಕೊಡಬೇಕು. ಶಾಸಕರಾದ ನಂತರ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದ ಅನುದಾನ ಬಿಡುಗಡೆ ತಡವಾದರೆ, ದೇಣಿಗೆ ಎತ್ತಿಯಾದರೂ ಜನರ ಬೇಡಿಕೆ ಈಡೇರಿಸಲು ಅಭ್ಯರ್ಥಿಗೆ ಸಾಧ್ಯವಾಗಲಿದೆಯೇ ಎಂಬುದನ್ನು ಈ ಮೂಲಕ ಪರೀಕ್ಷಿಸಲಾಗುವುದು’ ಎಂದರು. ರಾಜ್ಯದ 224 ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ವಿವಿಧ ಕ್ಷೇತ್ರದ ಪರಿಣತರನ್ನು ಪರಿಗಣಿಸಲಾಗುವುದು ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry