7

ರೈತರ ಸಾಲಮನ್ನಾ ಮಾಡಲು ಆಗ್ರಹ

Published:
Updated:

ವಿಜಯಪುರ: ಸಹಕಾರ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು, ಡಾ.ಸ್ವಾಮಿನಾಥನ್ ವರದಿಯನ್ನು ಯಥಾವತ್ತಾಗಿ ಜಾರಿ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಹೋಬಳಿ ಘಟಕದ ಅಧ್ಯಕ್ಷ ಮಂಡಿಬೆಲೆ ನಾರಾಯಣಸ್ವಾಮಿ ಒತ್ತಾಯಿಸಿದರು.

ಶಿವಗಣೇಶ ಸರ್ಕಲ್‌ನಿಂದ ಬುಧವಾರ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನ, ಬಸವನಗುಡಿಯಲ್ಲಿ ನಡೆಯಲಿರುವ ರೈತರ ಸಮಾವೇಶಕ್ಕೆ ಹೊರಡುವ ಮುನ್ನ ಅವರು ಮಾತನಾಡಿದರು.

ಸ್ವಾತಂತ್ರ್ಯ ಪಡೆದು ಏಳು ದಶಕಗಳು ಕಳೆದರೂ ಕೃಷಿಕರ ಸ್ಥಿತಿ ದಿನದಿಂದ ದಿನಕ್ಕೆ ಚಿಂತಾಜನಕವಾಗಿದೆ. ಈ ಸಂಕಷ್ಟಗಳನ್ನು ಅರಿತು ಬಗೆಹರಿಸುವಲ್ಲಿ ಎಲ್ಲ ರಾಜಕೀಯ ಪಕ್ಷಗಳು ಪ್ರಾಮಾಣಿಕ ಪ್ರಯತ್ನ ಮಾಡದಿರುವುದು ದುರಂತ. ಒಂದು ಕಡೆ ಪ್ರಕೃತಿ ವಿಕೋಪ, ಬರಗಾಲ, ಬೆಳೆದಂತ ಬೆಳೆಗಳಿಗೆ ವೈಜ್ಞಾನಿಕ ಬೆಲೆಗಳು ಸಿಗದೆ ಕಂಗಾಲಾಗುತ್ತಿರುವ ಈ ದಿನಗಳಲ್ಲಿ ಬದುಕುವುದೇ ದುಸ್ತರವಾಗಿದೆ. ಇಂತಹ ಸಂಧರ್ಭಗಳಲ್ಲಿ ರೈತರ ಪಾಲಿಗೆ ನೆರವಾಗಬೇಕಾಗಿದ್ದ ಸರ್ಕಾರಗಳು ಸ್ಪಂದನೆ ನೀಡದಿರುವುದು ಶೋಚನೀಯ ಸಂಗತಿ ಎಂದರು.

ಉಪಾಧ್ಯಕ್ಷ ಮಂಜುನಾಥ್, ದೇಶದ ಜನ ನೆಮ್ಮದಿಯಿಂದ ಹಾಗೂ ಸುರಕ್ಷಿತವಾಗಿ ಬದುಕುವಂತಾಗಲು ರೈತರ ಮತ್ತು ಸೈನಿಕರ ಸಮಸ್ಯೆಗಳನ್ನು ಬಗೆಹರಿಸಬೇಕು. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಸಾಲಗಳನ್ನು ಮನ್ನಾ ಮಾಡಬೇಕು. ಬಹುಪಾಲು ಜನ ಕೃಷಿ, ತೋಟಗಾರಿಕೆ ಅವಲಂಬಿಸಿದ್ದಾರೆ. ಇವರ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ ಎಂದರು.

ಇದಕ್ಕೆ ಪರಿಹಾರ ಕಂಡುಕೊಳ್ಳಲು ಅಗತ್ಯ ಬಿದ್ದರೆ ಹೋರಾಟ ನಡೆಸಲು ರೈತರೆಲ್ಲ ಒಂದಾಗಬೇಕಿದೆ. ರೈತ ಲಾಭ ಬರಲಿಲ್ಲ ಎಂದು ಯಾವತ್ತೂ ಆಹಾರ ಬೆಳೆಯುವುದನ್ನು ನಿಲ್ಲಿಸಿಲ್ಲ. ರೈತ ಆಹಾರ ಬೆಳೆಯುವುದನ್ನು ನಿಲ್ಲಿಸಿದ್ದರೆ ಏನಾಗಬಹುದು ಎಂಬುದನ್ನು ಯೋಚಿಸಿ ಎಂದರು.

150 ಕ್ಕೂ ಹೆಚ್ಚು ಮಂದಿ ರೈತರು ರೈತ ಸಮಾವೇಶಕ್ಕೆ ತೆರಳಿದರು. ರೈತ ಮುಖಂಡರಾದ ಮುನಿಕೃಷ್ಣಪ್ಪ, ಪಿ.ರಂಗನಾಥಪುರ ನಟರಾಜ್, ಗೋವಿಂದರಾಜು, ವಸಂತ್, ಹನುಮೇಗೌಡ, ಕೃಷ್ಣಪ್ಪ, ಮುನಿರಾಜಪ್ಪ, ಸಿ.ಎಂ.ನಾರಾಯಣಸ್ವಾಮಿ, ಕೇಶವ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry