ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕುಸ್ತಿಪಟುಗಳಿಗೆ ಮಾಸಾಶನ ನೀಡಿ’

Last Updated 1 ಫೆಬ್ರುವರಿ 2018, 9:59 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ನಶಿಸುತ್ತಿರುವ ಕುಸ್ತಿ ಕಲೆಗೆ ಸರ್ಕಾರದಿಂದ ಸೂಕ್ತ ಉತ್ತೇಜನ ದೊರಕಬೇಕಿದ್ದು, ಕುಸ್ತಿಪಟುಗಳಿಗೆ ಮಾಸಾಶನ ನೀಡಬೇಕು ಎಂದು ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ಹೇಳಿದರು.

ಜಿಲ್ಲಾ ಪಂಚಾಯಿತಿ, ಜಿಲ್ಲಾ ಆಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಅಭಯ ಆಂಜನೇಯ ಕ್ರೀಡಾ ಮಂಡಳಿ ವತಿಯಿಂದ ನಗರದ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪುರುಷ ಮತ್ತು ಮಹಿಳೆಯರ ಫ್ರೀ ಸ್ಟೈಲ್ ಜಿಲ್ಲಾ ಮಟ್ಟದ ಮುಕ್ತ ಕುಸ್ತಿ ಪಂದ್ಯಾವಳಿಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿರುವ ಕುಸ್ತಿ ಪಟುಗಳಿದ್ದಾರೆ. ಇಲ್ಲಿನ ಗರಡಿ ಮನೆಗಳು ಯಾವುದೇ ವ್ಯಾವಹರಿಕ ಉದ್ದೇಶವಿಲ್ಲದೇ ಸೇವಾ ಕಾರ್ಯದಿಂದ ಕಾರ್ಯನಿರ್ವಹಿಸುತ್ತಿವೆ ಎಂದರು.

ನಮ್ಮ ಪಾರಂಪರಿಕ ಕುಸ್ತಿ ಕಲೆಯನ್ನು ಇಂದಿನ ಪೀಳಿಗೆ ಮುಂದುರೆಸಿಕೊಂಡು ಹೋಗುವ ಅಗತ್ಯವಿದ್ದು, ಯುವಕರು ದುಶ್ಚಟಗಳಿಗೆ ದಾಸರಾಗದೇ ವ್ಯಾಯಾಮ ಶಾಲೆ, ಗರಡಿ ಮನೆಗಳಿಗೆ ಹೋಗಿ ಎಂದರು.

ನಗರಸಭಾ ಸದಸ್ಯ ವಡ್ಡರಹಳ್ಳಿ ರವಿ ಮಾತನಾಡಿ, ಇಂದಿನ ಯುವಜನಾಂಗ ಪೌಷ್ಟಿಕಾಂಶಯುಕ್ತ ಆಹಾರಗಳನ್ನು ಸೇವಿಸುವಲ್ಲಿ ಹಾಗೂ ಉತ್ತಮ ದೇಹವನ್ನು ಹೊಂದುವ ಬಗ್ಗೆ ನಿರಾಸಕ್ತಿ ವಹಿಸುತ್ತಿದ್ದಾರೆ ಎಂದರು.

ಪೌಷ್ಟಿಕಾಂಶದ ಕೊರತೆಯ ಪರಿಣಾಮ ಹಲವಾರು ಕಾಯಿಲೆಗಳಿಗೆ ಸಿಲುಕುತ್ತಿದ್ದಾರೆ. ಈ ನಿಟ್ಟಿನಲ್ಲಿ ಇಂತಹ ಕುಸ್ತಿ ಪಂದ್ಯಾವಳಿಗಳ ಆಯೋಜನೆ ಅಗತ್ಯವಾಗಿದೆ ಎಂದರು.

ಶಾಸಕ ಟಿ.ವೆಂಕಟರಮಣಯ್ಯ ಪಂದ್ಯಾವಳಿಗಳನ್ನು ಚಾಲನೆ ನೀಡಿ ಮಾತನಾಡಿದರು. ಭಗತ್‌ಸಿಂಗ್ ಕ್ರೀಡಾಂಗಣದಲ್ಲಿನ ಜಿಮ್ ಸಲಕರಣೆಗಳನ್ನು ಸ್ಥಳಾಂತರಿಸಲು ಹಾಗೂ ವ್ಯಾಯಾಮ ಶಾಲೆಗಳ ಉನ್ನತೀಕರಣಕ್ಕೆ ನೆರವು ನೀಡುವುದಾಗಿ ಭರವಸೆ ನೀಡಿದರು.

ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ದೇವಿಕಾ, ಕಾಂಗ್ರೆಸ್‌ ಮುಖಂಡ ತಿ.ರಂಗರಾಜು, ತಾಲ್ಲೂಕು ಕನ್ನಡ ಪಕ್ಷದ ಅಧ್ಯಕ್ಷ ಸಂಜೀವ ನಾಯಕ್, ಪ್ರಧಾನ ಕಾರ್ಯದರ್ಶಿ ಡಿ.ಪಿ.ಆಂಜನೇಯ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ರಂಗಪ್ಪ, ತಾಲ್ಲೂಕು ದೈಹಿಕ ಶಿಕ್ಷಣ ಅಧಿಕಾರಿ ಬಿ.ಜಿ.ಅಮರನಾಥ್, ಅಭಯ ಆಂಜನೇಯ ಕ್ರೀಡಾ ಮಂಡಳಿ ಅಧ್ಯಕ್ಷ ಡಿ.ವೆಂಕಟೇಶ್,ಕಾರ್ಯದರ್ಶಿ ಪೈಲ್ವಾನ್ ಚೌಡಪ್ಪ, ನಂಜಪ್ಪ, ಆನಂದ್, ಹನುಮಂತಪ್ಪ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT