ಮಂಗಳವಾರ, ಡಿಸೆಂಬರ್ 10, 2019
20 °C

ಕುಡಚಿಯಲ್ಲಿ ಟಿಕೆಟ್‌ಗೆ ತೀವ್ರ ಕಸರತ್ತು

ಎಂ. ಮಹೇಶ Updated:

ಅಕ್ಷರ ಗಾತ್ರ : | |

ಕುಡಚಿಯಲ್ಲಿ ಟಿಕೆಟ್‌ಗೆ ತೀವ್ರ ಕಸರತ್ತು

ಬೆಳಗಾವಿ: ಜಿಲ್ಲೆಯ ಮೀಸಲು ಕ್ಷೇತ್ರಗಳಲ್ಲಿ ಒಂದಾದ ಕುಡಚಿ ವಿಧಾನಸಭಾ ಕ್ಷೇತ್ರದಲ್ಲಿ ಬದಲಾದ ರಾಜಕೀಯ ಪರಿಸ್ಥಿತಿಗೆ ಅನುಗುಣವಾಗಿ ಕೆಲ ಮುಖಂಡರು ಪಕ್ಷಾಂತರ ಮಾಡಿದ್ದು, ಆ ಪಕ್ಷಗಳಿಂದ ಸ್ಪರ್ಧಿಸಲು ಬಯಸಿದ್ದಾರೆ. ಇದರಿಂದ ಟಿಕೆಟ್‌ಗಾಗಿ ಪ್ರಯತ್ನ ಜೋರಾಗಿಯೇ ನಡೆಯುತ್ತಿವೆ.

ಪ್ರಸ್ತುತ, ಕ್ಷೇತ್ರವನ್ನು ಪಿ. ರಾಜೀವ ಪ್ರತಿನಿಧಿಸುತ್ತಿದ್ದಾರೆ. 2008ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಸೋತಿದ್ದ ಅವರು, ಬಿ. ಶ್ರೀರಾಮುಲು ಸ್ಥಾಪಿಸಿದ್ದ ಬಿಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ 2013ರ ಚುನಾವಣೆಯಲ್ಲಿ ಕಣಕ್ಕಿಳಿದು ಗೆಲುವು ಸಾಧಿಸಿದ್ದರು. ಕೆಲ ತಿಂಗಳುಗಳ ಹಿಂದೆ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಕಮಲ ಪಕ್ಷದಿಂದ ಸ್ಪರ್ಧಿಸಲು ಬೇಕಾದ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಕುಡಚಿ ಠಾಣೆಯಲ್ಲಿ ಪಿಎಸ್‌ಐ ಆಗಿದ್ದ ಅವರು, ಸರ್ಕಾರಿ ನೌಕರಿಗೆ ರಾಜೀನಾಮೆ ನೀಡಿ ರಾಜಕೀಯ ಕ್ಷೇತ್ರ ಪ್ರವೇಶಿಸಿದರು. ಪ್ರಥಮ ಯತ್ನದಲ್ಲಿ ಸೋಲುಂಡಾಗ ಕಂಗೆಡದೆ ಕ್ಷೇತ್ರದಲ್ಲಿ ಸಂಚರಿಸಿ, ಜನರ ಪ್ರೀತಿ ಗಳಿಸಿ ಮುಂದಿನ ಪ್ರಯತ್ನದಲ್ಲಿ ವಿಧಾನಸೌಧ ಪ್ರವೇಶಿಸಿದ್ದಾರೆ. ವೈಯಕ್ತಿಕ ವರ್ಚಸ್ಸು ಬೆಳೆಸಿಕೊಂಡಿರುವ ಅವರಿಗೆ ಬಿಜೆಪಿ ಟಿಕೆಟ್‌ ಸಿಗುವ ಸಾಧ್ಯತೆ ದಟ್ಟವಾಗಿವೆ ಎನ್ನಲಾಗುತ್ತಿದೆ. ಮೂಲತಃ ಬಿಜೆಪಿಯವರಾದ ಮಾಜಿ ಶಾಸಕ ಬಿ.ಸಿ. ಸರಿಕರ ಕೂಡ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ.

ಸಾಮಾಜಿಕ ಮಾಧ್ಯಮ ಬಳಕೆ: ಈ ವಿಶ್ವಾಸದಿಂದಲೇ ಅವರು ‘ಪಿ.ರಾಜೀವ ನಿಮ್ಮೊಂದಿಗೆ’ ಎನ್ನುವ ಕಾರ್ಯಕ್ರಮ ರೂಪಿಸಿಕೊಂಡು ಹಳ್ಳಿ–ಹಳ್ಳಿಗಳಿಗೆ ಓಡಾಡಿ ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಹಳ್ಳಿಗಳಲ್ಲಿ ಬೈಕ್ ರ‍್ಯಾಲಿ ನಡೆಸುತ್ತಿದ್ದಾರೆ. ಯುವ ಮೋರ್ಚಾ ಘಟಕಗಳ ಸ್ಥಾಪನೆಗೆ ಆದ್ಯತೆ ನೀಡಿದ್ದಾರೆ. ಸಾಮಾಜಿಕ ಮಾಧ್ಯಮ ‘ಫೇಸ್‌ಬುಕ್‌’ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದಾರೆ. ಹಲವು ವಾಟ್ಸ್‌ಆ್ಯಪ್‌ ಗ್ರೂಪ್‌ಗಳನ್ನು ಮಾಡಿದ್ದಾರೆ. ಕಾರ್ಯಕ್ರಮ ಪಟ್ಟಿಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಡಲಾಗುತ್ತಿದೆ. ಇದರಿಂದ ಕ್ಷೇತ್ರದಲ್ಲಿ ಅಧಿಕೃತವಾಗಿ ಚುನಾವಣೆ ಘೋಷಣೆಗೂ ಮುನ್ನವೇ ‘ಚುನಾವಣೆಯ ವಾತಾವರಣ’ ಕಂಡುಬರುತ್ತಿದೆ.

ಟಿಕೆಟ್‌ ಖಚಿತ ಎನ್ನುವ ಭರವಸೆ ಮೇಲೆಯೇ ಬಿಜೆಪಿ ಸೇರಿರುವ ರಾಜೀವ ಅವರಿಂದ ಕ್ಷೇತ್ರದ ಬಿಜೆಪಿಯಲ್ಲಿ ಸಂಚಲನ ಮೂಡಿದೆ. ಬಿಜೆಪಿಯೊಂದಿಗೆ ಕಾಂಗ್ರೆಸ್‌, ಜೆಡಿಎಸ್‌ ಕೂಡ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮೀಸಲು ಕ್ಷೇತ್ರವನ್ನು ವಶಪಡಿಸಿಕೊಳ್ಳಬೇಕು ಎಂದು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ. ಈಚೆಗೆ ಹಾರೊಗೇರಿಯಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕ್ಷೇತ್ರದ ಶಾಸಕರನ್ನು ಸೋಲಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದರು.

ಜಾರಕಿಹೊಳಿ ಸಹೋದರರ ಪ್ರಭಾವ: ಮಾಜಿ ಶಾಸಕ ಶಾಮ್‌ ಘಾಟಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಾರೆ ಎನ್ನುವ ಚರ್ಚೆ ಇದೆ. ಪುತ್ರ ಅಮಿತ್‌ ಘಾಟಗೆ ಅವರಿಗಾದರೂ ಟಿಕೆಟ್‌ ನೀಡಬೇಕು ಎನ್ನುವುದು ಅವರ ಬೇಡಿಕೆ. ಇದರಿಂದ ಹೊಸ ಮುಖಗಳಿಗೆ ಅವಕಾಶ ಕೊಟ್ಟಂತಾಗುತ್ತದೆ ಎನ್ನುವುದು ಅವರ ಲೆಕ್ಕಾಚಾರ. ತಂದೆಯ ವರ್ಚಸ್ಸಿನ ಮೇಲೆ ರಾಜಕೀಯದಲ್ಲಿ ಬೆಳೆಯುತ್ತಿರುವ ಅಮಿತ್‌ ತಮ್ಮದೇ ಆದ ವರ್ಚಸ್ಸು ವೃದ್ಧಿಸಿಕೊಳ್ಳಲು ಜನರನ್ನು ಸಂಪರ್ಕದಲ್ಲಿದ್ದಾರೆ.

ಎರಡು ಚುನಾವಣೆಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲನುಭವಿಸಿದ್ದ ಮಹೇಂದ್ರ ತಮ್ಮಣ್ಣವರ, ಬದಲಾದ ರಾಜಕೀಯ ಬೆಳವಣಿಗೆಗಳಲ್ಲಿ ವರ್ಷದ ಹಿಂದೆ ಕಾಂಗ್ರೆಸ್‌ ಸೇರಿದ್ದು, ಆ ಪಕ್ಷದಿಂದ ಟಿಕೆಟ್‌ ಬಯಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹಾಗೂ ವಿಧಾನ ಪರಿಷತ್‌ ಸದಸ್ಯ ವಿವೇಕರಾವ ಪಾಟೀಲ ಬಣದಲ್ಲಿ ಗುರುತಿಸಿಕೊಂಡಿರುವ ಅವರು, ಕಾಂಗ್ರೆಸ್ ವರಿಷ್ಠರ ಆಶೀರ್ವಾದ ದೊರೆಯುವ ವಿಶ್ವಾಸದಲ್ಲಿದ್ದಾರೆ.‌

ಶಾಮ್‌ ಘಾಟಗೆ ಎಐಸಿಸಿ ಕಾರ್ಯದರ್ಶಿ ಆದ ಶಾಸಕ ಸತೀಶ ಜಾರಕಿಹೊಳಿ ಪಡೆಯಲ್ಲಿ ಗುರುತಿಸಿಕೊಂಡಿದ್ದಾರೆ. ಕಾಂಗ್ರೆಸ್‌ ಪರಿಶಿಷ್ಟ ಜಾತಿ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ತಳವಾರ ಕೂಡ ಆಕಾಂಕ್ಷಿ. ಇದರಿಂದ, ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಕಸರತ್ತು ಜೋರಾಗಿಯೇ ನಡೆಯುತ್ತಿದೆ. ಟಿಕೆಟ್‌ ಅಂತಿಮಗೊಳಿಸುವಲ್ಲಿ ಜಾರಕಿಹೊಳಿ ಸಹೋದರರ ಅಭಿಪ್ರಾಯ ಪರಿಗಣಿಸಲಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ. ಒಟ್ಟಿನಲ್ಲಿ, ಕಾಂಗ್ರೆಸ್‌ ಅಭ್ಯರ್ಥಿ ಯಾರಾಗಬಹುದು ಎನ್ನುವ ಚರ್ಚೆಗಳು ಕ್ಷೇತ್ರದಲ್ಲಿ ಬಿರುಸು ಪಡೆದಿವೆ.

ಜೆಡಿಎಸ್‌ನಿಂದ ಸುರೇಶ ಐಹೊಳೆ, ಶಾಂತಾರಾಂ ಸಣ್ಣಕ್ಕಿ ಟಿಕೆಟ್‌ ರೇಸ್‌ನಲ್ಲಿದ್ದಾರೆ. ಕ್ಷೇತ್ರದಲ್ಲಿ ದಲಿತರು ಹಾಗೂ ಮುಸ್ಲಿಂ ಮತದಾರರು ನಿರ್ಣಾಯಕರಾಗಿದ್ದಾರೆ. 2013ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಶಾಮ್ ಘಾಟಗೆ ಸೋತಿದ್ದರು.

ಮತದಾರರ ವಿವರ

ಪುರುಷರು– 89,544

ಮಹಿಳೆಯರು–83,789

ಇತರೆ– 20

ಒಟ್ಟು – 1,73,353

ಆಕಾಂಕ್ಷಿಗಳು

ಪಿ. ರಾಜೀವ, ಬಿ.ಸಿ. ಸರಿಕರ (ಬಿಜೆಪಿ)

ಶಾಮ ಘಾಟಗೆ, ಅಮಿತ ಘಾಟಗೆ, ಮಹೇಂದ್ರ ತಮ್ಮಣ್ಣವರ, ಸುರೇಶ ತಳವಾರ (ಕಾಂಗ್ರೆಸ್‌)

ಸುರೇಶ ಐಹೊಳೆ, ಶಾಂತಾರಾಂ ಸಣ್ಣಕ್ಕಿ, ರಾಜೇಂದ್ರ ಐಹೊಳೆ, ಸುಮನ್ ಸೋನಾವನೆ (ಜೆಡಿಎಸ್‌)

ಪ್ರತಿಕ್ರಿಯಿಸಿ (+)