ಭಾನುವಾರ, ಡಿಸೆಂಬರ್ 8, 2019
25 °C

ಲಕ್ಷ್ಮಿಗೆ ಟಿಕೆಟ್‌ ‘ಬಹುತೇಕ’ ಖಚಿತ

ಶ್ರೀಕಾಂತ ಕಲ್ಲಮ್ಮನವರ Updated:

ಅಕ್ಷರ ಗಾತ್ರ : | |

ಲಕ್ಷ್ಮಿಗೆ ಟಿಕೆಟ್‌ ‘ಬಹುತೇಕ’ ಖಚಿತ

ಬೆಳಗಾವಿ: ಹಾಲಿ ಶಾಸಕರಿಗಿಂತ ಪರಾಜಿತಗೊಂಡ ಅಭ್ಯರ್ಥಿಯಿಂದ ಬೆಳಗಾವಿ ದಕ್ಷಿಣ ಕ್ಷೇತ್ರ ಹೆಚ್ಚು ಚರ್ಚೆಯಲ್ಲಿದೆ. ಶಾಸಕ, ಬಿಜೆಪಿಯ ಸಂಜಯ ಪಾಟೀಲ ವಿರುದ್ಧ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಲಕ್ಷ್ಮಿ ಹೆಬ್ಬಾಳಕರ ಸೋತಿದ್ದರು. ಈ ಫಲಿತಾಂಶ ತಮ್ಮ ಮೇಲೆ ಎಳ್ಳಷ್ಟೂ ಪರಿಣಾಮ ಬೀರಿಲ್ಲ ಎನ್ನುವಂತೆ ಲಕ್ಷ್ಮಿ ಕ್ಷೇತ್ರದ ತುಂಬ ಓಡಾಡಿಕೊಂಡಿದ್ದಾರೆ. ಪುನಃ ಕಣಕ್ಕಿಳಿಯಲು ಮುಂದಾಗಿದ್ದಾರೆ.

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆಯೂ ಆಗಿರುವ ಲಕ್ಷ್ಮಿ ಲಿಂಗಾಯತ ಸಮುದಾಯಕ್ಕೆ ಸೇರಿದವರು. ರಾಜ್ಯಮಟ್ಟದ ನಾಯಕರನ್ನು ಹಠ ಹಿಡಿದು ಕ್ಷೇತ್ರಕ್ಕೆ ಕರೆಯಿಸಿ ಕಾರ್ಯಕ್ರಮಗಳನ್ನು ಮಾಡಿಸಿದ್ದಾರೆ. ನಿರಂತರ ಪ್ರಚಾರದಲ್ಲಿ ಇರುವಂತೆ ನೋಡಿಕೊಂಡಿದ್ದಾರೆ. ಇವರ ಚಟುವಟಿಕೆಗಳಿಗೆ ತಲೆದೂಗಿರುವ ಪಕ್ಷದ ವರಿಷ್ಠರು ಟಿಕೆಟ್ ಭರವಸೆ ನೀಡಿದ್ದಾರೆ. ಸುಳೇಬಾವಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್‌ ಸಮ್ಮುಖದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಟಿಕೆಟ್‌ ನೀಡುವುದಾಗಿ ಘೋಷಿಸಿದ್ದಾರೆ.

ಲಕ್ಷ್ಮಿ ಅವರಿಗೆ ಟಿಕೆಟ್‌ ನೀಡುವುದಾಗಿ ರಾಜ್ಯದ ಹೈಕಮಾಂಡ್‌ ಬಹುತೇಕ ನಿರ್ಧಾರ ಕೈಗೊಂಡ ನಂತರ ಇತ್ತೀಚೆಗೆ ಕೆಲವು ಮುಖಂಡರು ಟಿಕೆಟ್‌ಗೆ ಬೇಡಿಕೆ ಮಂಡಿಸಿದ್ದು ಕುತೂಹಲ ಮೂಡಿಸಿದೆ. ಟಿಕೆಟ್‌ ನೀಡಿಕೆ ವಿಚಾರದಲ್ಲಿ ಗೊಂದಲ ಮೂಡಿಸುವುದು ಆ ಮೂಲಕ ಲಕ್ಷ್ಮಿ ಅವರ ಬೆಂಬಲಿಗರಲ್ಲಿ ಅಸಮಾಧಾನ ಸೃಷ್ಟಿಸುವುದು ಅವರ ವಿರೋಧಿ ಪಾಳೆಯವರ ಕೈವಾಡವಿದೆ ಎನ್ನುವ ಮಾತುಗಳು ಕೇಳಿಬಂದಿವೆ. ಟಿಕೆಟ್‌ ಬಹುತೇಕ ಖಚಿತವಾಗಿದ್ದರೂ ಬಂಡಾ

ಯದ ಬಿಸಿ ಆತಂಕ ಮೂಡಿಸಿದೆ.

ತಮ್ಮ ಬೇಡಿಕೆಗೆ ವರಿಷ್ಠರು ಸೂಕ್ತವಾಗಿ ಸ್ಪಂದಿಸಲಿಲ್ಲವೆಂದು ಅಸಮಾಧಾನಗೊಂಡ ಎಪಿಎಂಸಿ ಮಾಜಿ ಅಧ್ಯಕ್ಷ, ಲಿಂಗಾಯತ ಸಮುದಾಯದ ಶಿವನಗೌಡ ಪಾಟೀಲ ಪಕ್ಷ ತೊರೆದು, ಜೆಡಿಎಸ್‌ ಸೇರಿದ್ದಾರೆ. ಅವರು ಟಿಕೆಟ್‌ ಖಾತ್ರಿ ಪಡಿಸಿಕೊಂಡೇ ಜೆಡಿಎಸ್‌ಗೆ ಸೇರ್ಪಡೆಯಾಗಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮರಾಠಾ ಪ್ರಾಬಲ್ಯ: ಕ್ಷೇತ್ರದಲ್ಲಿ ಮರಾಠಾ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರ ಮೇಲೆ ಗಮನ ಕೇಂದ್ರೀಕರಿಸಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಖಚಿತ. ಕಳೆದ ಚುನಾವಣೆಯಲ್ಲಿ ಪ್ರಬಲ ಸ್ಪರ್ಧೆ ನೀಡಿದ್ದ ಮಾಜಿ ಶಾಸಕ, ಮರಾಠಾ ಸಮುದಾಯದ ಮನೋಹರ ಕಿಣೇಕರ ಈ ಸಲವೂ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ.

ಕಳೆದ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಂಇಎಸ್‌ನ ಇನ್ನೊಂದು ಗುಂಪಿನ ಮರಾಠಾ ಸಮುದಾಯದ ಶಿವಾಜಿ ಸುಂಠಕರ ಈಗ ಬಿಜೆಪಿ ಸೇರಿದ್ದಾರೆ. ಹೀಗಾಗಿ, ಈ ಗುಂಪಿನ ಮುಖಂಡರು ಮತ್ತೊಬ್ಬ ಅಭ್ಯರ್ಥಿಯ ಹುಡುಕಾಟದಲ್ಲಿದ್ದಾರೆ.

ಸಂಜಯ ನಿರಾಳ: ಶಾಸಕ ಸಂಜಯ ಪಾಟೀಲ ಜೈನ ಸಮುದಾಯಕ್ಕೆ ಸೇರಿದವರು. ಇದಕ್ಕೂ ಮುಂಚೆ 2008ರಲ್ಲಿಯೂ ಇದೇ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಕ್ಷೇತ್ರ ವಿಂಗಡಣೆಯಾಗುವ ಮುಂಚೆ 2004 ರಲ್ಲಿ ಉಚಗಾಂವ ಕ್ಷೇತ್ರದಿಂದ ಮೊದಲ ಬಾರಿ ಸ್ಪರ್ಧಿಸಿ, ಸೋತಿದ್ದರು. ‍ಹಾಲಿ ಶಾಸಕರಾಗಿರುವ ಕಾರಣ ಸಂಜಯ ಪಾಟೀಲ ಅವರಿಗೆ ಟಿಕೆಟ್‌ ಸಿಗುವ ಸಾಧ್ಯತೆ ಇದೆ. ಇದೇ ಕಾರಣಕ್ಕಾಗಿ ಬೇರಾರೂ ಟಿಕೆಟ್‌ ಬಯಸಿ ಮುಂದೆ ಬಂದಿಲ್ಲವೆಂದು ಪಕ್ಷದ ಮೂಲಗಳು ಹೇಳಿವೆ.

ಪ್ರತಿಕ್ರಿಯಿಸಿ (+)