ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿವಾಳರಿಗೆ ಘನತೆ ತಂದ ಮಾಚಿದೇವರ

Last Updated 1 ಫೆಬ್ರುವರಿ 2018, 10:25 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ‘ಎನ್ನ ಕಾಯವ ಶುದ್ಧ ಮಾಡಿದಾತ ಮಡಿವಾಳ, ಎನ್ನ ಮನವ ನಿರ್ಮಲ ಮಾಡಿದಾತ ಮಡಿವಾಳ, ಎನ್ನಂತರಂಗದ ಬೆಳಗಿದಾತ ಮಡಿವಾಳ, ಎನ್ನ ಬಹಿರಂಗವ ಬಿಡಿಸಿದಾತ ಮಡಿವಾಳ, ಕೂಡಲಸಂಗಮದೇವ ಎನ್ನ ನಿಮಗೆ ಯೋಗ್ಯನ ಮಾಡಿದಾತ ಮಡಿವಾಳನಯ್ಯ’

ಬಸವಣ್ಣನವರ ಈ ಮಾತುಗಳ ಅಂತರಾಳದ ಅರ್ಥದಂತೆ ಮಡಿವಾಳ ಸಂಘಟನೆಯವರು ಒಗ್ಗೂಡಿ ಮಡಿವಾಳ ಜನಾಂಗಕ್ಕೆ ಒಂದು ಗೌರವ ತಂದುಕೊಟ್ಟ, ಶರಣರ ಅಗ್ರಗಣ್ಯ ಬಳಗದಲ್ಲಿ ಒಬ್ಬರಾದ ಮಡಿವಾಳ ಮಾಚಿದೇವರ ಜಯಂತ್ಯುತ್ಸವ ಆಚರಣೆ ಮಾಡಲಾಗುತ್ತಿದೆ.

ಸರ್ಕಾರದಿಂದ ಪ್ರಥಮ ಜಯಂತ್ಯುತ್ಸವ ಆಚರಣೆ: ಮಡಿವಾಳ ಮಾಚಿದೇವರ ಪ್ರಥಮ ಜಯಂತ್ಯುತ್ಸವ ಸಮಾರಂಭವನ್ನು ಗುರುವಾರ (ಫೆ.1) ಆಯೋಜಿಸಲಾಗಿದೆ. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ದಂಡಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಶಾಸಕ ಎಂ.ರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಗುತ್ತಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ನಗರಸಭೆ ಹೆಚ್ಚುವರಿ ಅಧ್ಯಕ್ಷೆ ಪ್ರಭಾವತಿ ಸುರೇಶ್‌ ನೆರವೇರಿಸಲಿದ್ದು, ಮುಖ್ಯ ಭಾಷಣಕಾರರಾಗಿ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಎಂ.ದೇವರಾಜ್‌ ಮಾತನಾಡಲಿದ್ದಾರೆ. ರಾಜ್ಯ ಮಡಿವಾಳ ಸಂಘದ ಉಪಾಧ್ಯಕ್ಷ ಹಾಗೂ ಮಡಿವಾಳ ಯುವಕ ಸಂಘದ ತಾಲ್ಲೂಕು ಅಧ್ಯಕ್ಷ ಆರ್‌.ವಿ.ರಾಜಣ್ಣ ಮತ್ತು ಮಡಿವಾಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎನ್‌.ಎನ್‌.ಮುರಳೀಧರ ಭಾಗವಹಿಸಲಿದ್ದಾರೆ.

ಸಂಘ ಬೆಳೆದು ಬಂದ ಹಾದಿ: ಮಡಿವಾಳ ಸಮುದಾಯದ ಹಿರಿಯರಾದ ಓಬಣ್ಣ, ನರಸಪ್ಪ, ಚಿಕ್ಕನಂಜಪ್ಪ ಮುಂತಾದವರ ನೇತೃತ್ವದಲ್ಲಿ ಬಹಳ ಹಿಂದಿನಿಂದಲೂ ಮಡಿವಾಳ ಕ್ಷೇಮಾಭಿವೃದ್ಧಿ ಸಂಘವು ಸಮುದಾಯದ ಶ್ರೇಯೋಭಿವೃದ್ಧಿಯ ಉದ್ದೇಶದಿಂದ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ.

ಮಡಿವಾಳ ಸಮುದಾಯದ ಯುವಕರು ಒಗ್ಗೂಡಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಸಮುದಾಯವನ್ನು ಅಭಿವೃದ್ಧಿಪಡಿಸುವ ಆಶಯದೊಂದಿಗೆ 2009ರಲ್ಲಿ ಮಡಿವಾಳ ಯುವಕರ ಸಂಘ ಸ್ಥಾಪಿಸಿದರು. ಅಲ್ಲದೆ ಪ್ರತಿ ವರ್ಷ ಮಡಿವಾಳ ಮಾಚಿದೇವರ ಜಯಂತ್ಯುತ್ಸವವನ್ನು ಸಮುದಾಯದಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ಸಾಧಕರು ಹಾಗೂ ಹಿರಿಯರಿಗೆ ಸನ್ಮಾನ ಸಹ ಮಾಡಿಕೊಂಡು ಬರಲಾಗಿದೆ.

ನಮ್ಮ ಸಮುದಾಯದಲ್ಲಿ ಹಿಂದುಳಿದವರು, ಕಡುಬಡವರು ಇದ್ದಾರೆ. ಅವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ದೊರಕಿಸಿಕೊಡುವ ಕೆಲಸವನ್ನು ಮಾಡುತ್ತಿದ್ದೇವೆ. ಅಂತ್ಯಕ್ರಿಯೆಯಾಗಲೀ, ಮದುವೆ ಮುಂತಾದ ಶುಭ ಕಾರ್ಯವಾಗಲೀ ಅತಿ ಬಡವರಿಗೆ ಸಂಘದಿಂದ ಆರ್ಥಿಕ ನೆರವನ್ನು ಸಹ ನೀಡುತ್ತಾ ಬಂದಿದ್ದೇವೆ ಎಂದು ರಾಜ್ಯ ಮಡಿವಾಳ ಸಂಘದ ಉಪಾಧ್ಯಕ್ಷ ಹಾಗೂ ಮಡಿವಾಳ ಯುವಕ ಸಂಘದ ತಾಲ್ಲೂಕು ಅಧ್ಯಕ್ಷ ಆರ್‌.ವಿ.ರಾಜಣ್ಣ ತಿಳಿಸಿದರು

ನಮ್ಮ ಸಮುದಾಯದವರನ್ನು ಅಲ್ಲದೆ ಸಮಾಜದ ವಿವಿಧ ಸಾಧಕರನ್ನು ಗುರುತಿಸಿ ಗೌರವಿಸುವ ಮೂಲಕ ಎಲ್ಲರೊಳಗೊಂದಾಗುವುದನ್ನು ರೂಢಿಸಿಕೊಂಡಿದ್ದೇವೆ. ನಮ್ಮ ಸಮುದಾಯದವರ ಒಗ್ಗಟ್ಟಿಗೆ ಶ್ರಮಿಸಿದ್ದ ಹಿರಿಯರಾದ ದೇಶದಪೇಟೆ ಮುನಿಯಪ್ಪ ಅವರನ್ನು ಗೌರವಿಸಿದಾಗ ತಮ್ಮ ಆನಂದವನ್ನು ತಡೆದುಕೊಳ್ಳಲಾಗದೇ ಕಣ್ಣೀರುಗರೆದಿದ್ದರು. ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಸಮುದಾಯವನ್ನು ಬೆಳೆಸುವ ಉದ್ದೇಶ ನಮ್ಮದು ಎಂದು ತಿಳಿಸಿದರು.

‘ಪ್ರಜಾವಾಣಿ’ ಸಂಗ್ರಹಕಾರ

ಮಡಿವಾಳ ಯುವಕ ಸಂಘದ ತಾಲ್ಲೂಕು ಘಟಕದ ನಿರ್ದೇಶಕ ಕಾಚಹಳ್ಳಿ ಎಂ.ದೇವರಾಜ್ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು. ಅವರು ‘ಪ್ರಜಾವಾಣಿ’ ಪತ್ರಿಕೆಯ ಸಂಗ್ರಹಕಾರರು.

‘ಕರ್ನಾಟಕ ದರ್ಶನ’, ‘ವಿಜ್ಞಾನ ವಿಶೇಷ’, ‘ಪುರಾಣ ಪದ’, ‘ಕರುಣಾಳು ಬಾಬೆಳಕೆ’, ‘ರಾಮನ್’, ‘ಪುಟ್ಟಿ’, ‘ಉತ್ತರಮುಖಿ’, ‘ಸುಭಾಷಿತ’, ಮುಂತಾದ ‘ಪ್ರಜಾವಾಣಿ’ಯ ಅಂಕಣಗಳು, ಸಾಪ್ತಾಹಿಕ ಪುರವಣಿಯಲ್ಲಿನ ಮಕ್ಕಳ ಪುಟ, ಕರ್ನಾಟಕ ದರ್ಶನ, ಕ್ರೀಡೆ, ಶಿಕ್ಷಣ ಪುರವಣಿಯ ಲೇಖನಗಳನ್ನೆಲ್ಲ ಪುಸ್ತಕ ರೂಪ ಪಡೆದು ಪ್ರದರ್ಶನಗೊಳ್ಳುವಂತೆ ರೂಪಿಸಿದ್ದಾರೆ.

ಸುಮಾರು 80ಕ್ಕೂ ಹೆಚ್ಚು ಸಂಗ್ರಹಯೋಗ್ಯ ಅಂಕಣಗಳನ್ನೆಲ್ಲಾ ಕತ್ತರಿಸಿ ಬಿಳಿಯ ಹಾಳೆಗೆ ಅಂಟಿಸಿ ನಂತರ ಅದನ್ನು ಪುಸ್ತಕದಂತೆ ಮಾಡಿದ್ದಾರೆ. ಈ ಸಂಗ್ರಹವನ್ನು ತಾಲ್ಲೂಕು ಮಟ್ಟದ ಮೆಟ್ರಿಕ್‌ ಮೇಳ, ಕಲಿಕೋಪಕರಣಗಳ ಪ್ರದರ್ಶನ ಮತ್ತು ಸಾಹಿತ್ಯ ಸಮ್ಮೇಳನಗಳು ಸೇರಿದಂತೆ ಹಲವೆಡೆ ಪ್ರದರ್ಶನ ಕೂಡ ಮಾಡಿದ್ದಾರೆ. ಹೊರಗಿನ ಜಗತ್ತಿಗೆ ತಮ್ಮ ಶಾಲೆಯ ಮಕ್ಕಳು ತೆರೆದುಕೊಳ್ಳುವ ದಾರಿಯಂತೆ ಪತ್ರಿಕೆಯ ಲೇಖನಗಳನ್ನು ಅವರು ಬಳಸಿಕೊಂಡಿದ್ದಾರೆ.

ಕಥೆ, ಕಾವ್ಯ, ಅಂಚೆಚೀಟಿಗಳು, ಚಿತ್ರಸರಣಿ, ಪುಷ್ಪ, ಪಕ್ಷಿ, ಪ್ರಾಣಿ ಎಲ್ಲವನ್ನೂ ಬೇರ್ಪಡಿಸಿ ಹೆಸರುಗಳನ್ನು ಬರೆದು ಬೇಕಾದ ವಿಷಯ ತಕ್ಷಣ ಹುಡುಕಲು ಸಹಾಯಕವಾಗುವ ರೀತಿ ವರ್ಗೀಕರಿಸಿರುವುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT