ಶುಕ್ರವಾರ, ಡಿಸೆಂಬರ್ 6, 2019
26 °C

ಕೋಟೆನಾಡಿನಲ್ಲಿ ಕೊನೆಗೂ ಕಂಡ ’ಕೆಂಬಣ್ಣದ ಚಂದಿರ’ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಟೆನಾಡಿನಲ್ಲಿ ಕೊನೆಗೂ ಕಂಡ ’ಕೆಂಬಣ್ಣದ ಚಂದಿರ’ !

ಚಿತ್ರದುರ್ಗ: ‘ಏ ಅಲ್ನೋಡಿ.. ತೆಂಗಿನ ಗರಿಯ ಮೇಲ್ಭಾಗದಲ್ಲಿ ನೇರವಾಗಿ ನೋಡಿ.. ಕೆಂಪು ಬಣ್ಣದ ಚಂದಿರ ಮಸುಕಾಗಿ ಕಾಣಿಸುತ್ತಿದ್ದಾನೆ.. ಕಾಣಿಸ್ತಿದೆಯಾ...’

ಹವ್ಯಾಸಿ ಖಗೋಳ ವೀಕ್ಷಕ ಎಚ್.ಎಸ್.ಟಿ.ಸ್ವಾಮಿ, ಮೈಕ್‌ನಲ್ಲಿ ಹೀಗೆ ವೀಕ್ಷಕ ವಿವರಣೆ ನೀಡುತ್ತಿದ್ದಂತೆ ಮಹಡಿಯ ಅಂಗಳದಲ್ಲಿ ನಿಂತಿದ್ದವರ ದೃಷ್ಟಿ ಬಾನಂಗಳದಲ್ಲಿ ಕೆಂಬಣ್ಣದೊಂದಿಗೆ ಇಣುಕುತ್ತಿದ್ದ ಚಂದಿರನತ್ತ ನೆಟ್ಟಿತು!

‘ಓ... ಕಾಣ್ತು ಕಾಣ್ತು’ ಎಂದು ಹಿರಿಯರು– ಮಕ್ಕಳಾದಿಯಾಗಿ ಎಲ್ಲರೂ ಉದ್ಗರಿಸುತ್ತಿದ್ದಾಗ, ಸ್ವಾಮಿ ದೂರದರ್ಶಕದಿಂದ ಹಸಿರು ಬಣ್ಣದ ಕಡ್ಡಿಯಂತಹ ಬೆಳಕನ್ನು ಬಾನಂಗಳಕ್ಕೆ ಹರಿಸಿ, ಚಂದ್ರನಿರುವ ಜಾಗವನ್ನು ಗುರುತಿಸಿದರು. ಆದರೆ, ಚಂದ್ರ ಹೇಳಿಕೊಳ್ಳುವಷ್ಟು ರಂಗು ರಂಗಾಗಿ ಕಾಣಿಸಲಿಲ್ಲ. ‘ಇನ್ನೂ ಸಮಯವಿದೆ, ತಡೆಯಿರಿ. ಕೆಂಪನೆಯ ಚಂದ್ರ ಬರ್ತಾನೆ’ ಎಂದು ಹೇಳುತ್ತಲೇ ವೀಕ್ಷಕ ವಿವರಣೆಯನ್ನು ಸ್ವಾಮಿ ಮುಂದುವರಿಸಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಜಿಲ್ಲಾ ಸಮಿತಿ ಬುಧವಾರ ವಿದ್ಯಾವಿಕಾಸ ಶಾಲೆಯಲ್ಲಿ ಅಪರೂಪದ ’ಬ್ಲೂಮೂನ್ ಮತ್ತು ಚಂದ್ರಗ್ರಹಣ ವೀಕ್ಷಣೆಗೆ ಸಾರ್ವಜನಿಕರಿಗಾಗಿ ವ್ಯವಸ್ಥೆ ಮಾಡಿತ್ತು. ಸಂಜೆ 5.30ರಿಂದಲೇ ಶಾಲೆಯ ಆವರಣದಲ್ಲಿ ಮಕ್ಕಳು, ಹಿರಿಯರು ಬರಲಾರಂಭಿಸಿದರು. 6.30ರ ಹೊತ್ತಿಗೆ ಸಂಖ್ಯೆ ಹೆಚ್ಚಾಯಿತು. ಚಂದ್ರ ಕಾಣುವ ಹೊತ್ತಿಗೆ ಸಂಖ್ಯೆ ಮುನ್ನೂರರಿಂದ ನಾಲ್ಕುನೂರರು ದಾಟಿತು. ಸೇರಿದ್ದವರಿಗೆಲ್ಲ ಚಂದ್ರಗ್ರಹಣ ವೀಕ್ಷಿಸುವ ಕುತೂಹಲ. ಮಹಡಿ ಮೇಲೆ ನಿಂತಿದ್ದವರಲ್ಲಿ ಬಾನಂಗಳದಲ್ಲಿ ಚಂದಿರನನ್ನು ಹುಡುಕುತ್ತಿದ್ದವರೇ ಹೆಚ್ಚು. ಮಕ್ಕಳಿಗಂತೂ, ಬೇಗ ಚಂದಿರನನ್ನು ನೋಡಬೇಕು, ನೋಡಿ ದ್ದನ್ನು ನಾಳೆ ಶಾಲೆಯಲ್ಲಿ ಸ್ನೇಹಿತ ರೊಂದಿಗೆ ಹಂಚಿಕೊಳ್ಳಬೇಕು ಎಂಬ ತವಕ.

ಮಕ್ಕಳ ಜತೆ ಮಕ್ಕಳಾಗಲು ಪೋಷಕರು ಬಂದಿದ್ದರು. ಅನೇಕ ಶಾಲೆಗಳ ಶಿಕ್ಷಕರು ಬಂದಿದ್ದರು. ಕೆಆರ್ ವಿಪಿ ಉಪಾಧ್ಯಕ್ಷ ಚಳ್ಳಕೆರೆ ಎರ‍್ರಿಸ್ವಾಮಿ, ಪರಿಸರ ಕಾರ್ಯಕರ್ತ ಎಚ್. ಕೆ.ಎಸ್. ಸ್ವಾಮಿ ಈ ಸಂದರ್ಭದಲ್ಲಿ ಹಾಜರಿದ್ದರು.

‘ವಾಸವಿ’ಯಲ್ಲೂ ಸಂಭ್ರಮ: ನಗರದ ಮತ್ತೊಂದು ಕಡೆ ಅಂದರೆ ವಾಸವಿ ಶಾಲೆಯಲ್ಲಿ ಬ್ರೇಕ್ ಥ್ರೂ ಸೈನ್ಸ್ ಸೊಸೈಟಿ ಮತ್ತು ವಾಸವಿ ವಿದ್ಯಾಸಂಸ್ಥೆ ಸಹಯೋಗದಲ್ಲಿ ’ಚಂದ್ರಗ್ರಹಣ’ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.

ಸಂಜೆ 5.45ರಿಂದಲೇ ಚಂದ್ರಗ್ರಹಣ ಸಂಭವಿಸುವ ಕುರಿತು ಮಾಹಿತಿ ನೀಡಲು ಸೊಸೈಟಿಯ ನಿರ್ದೇಶಕ ವಿವೇಕ್ ಮತ್ತು ಐಐಎಸ್‌ಸಿ ಸಂಸ್ಥೆಯ ಸುಬ್ರಹ್ಮಣ್ಯ ಅವರು ವಿಜ್ಞಾನ ಮಾದರಿಯನ್ನು ತಯಾರಿಸಿಟ್ಟಿದ್ದರು. ಸುಬ್ರಹ್ಮಣ್ಯ ಮಾದರಿಯನ್ನು ವಿವರಿಸುತ್ತಾ, ಚಂದ್ರಗ್ರಹಣ ಹೇಗೆ ಸಂಭವಿಸುತ್ತದೆ. ಪ್ರತಿ ಹುಣ್ಣಿಮೆಯಲ್ಲೂ ಈ ಗ್ರಹಣ ಏಕೆ ಆಗುವುದಿಲ್ಲ? ಸೂರ್ಯ, ಚಂದ್ರ ನಡುವೆ ಭೂಮಿ ನೇರ ರೇಖೆಯಲ್ಲಿದ್ದರೂ ಏಕೆ ಗ್ರಹಣ ಸಂಭವಿಸುವುದಿಲ್ಲ? ಚಂದ್ರ ತನ್ನ ಕಕ್ಷೆಯಲ್ಲಿ ಎಷ್ಟು ಡಿಗ್ರಿ ಬಾಗಿದ್ದರೆ, ಗ್ರಹಣ ಸಂಭವಿಸುತ್ತದೆ ಎಂದು ವಿವರಿಸಿದರು.

ಸುಮಾರು ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಹಿರಿಯರು, ಅರ್ಚಕರು ಕೂಡ, ವಿಜ್ಞಾನ ಮಾದರಿಯ ವಿವರಣೆಯನ್ನು ತದೇಕಚಿತ್ತದಿಂದ ನೋಡುತ್ತಾ ಕೇಳಿಸಿಕೊಳ್ಳುತ್ತಿದ್ದರು. 6.30ಕ್ಕೆ ಪ್ರಯೋಗ ಮುಗಿಯುತ್ತಿದ್ದಂತೆ ವಾಸವಿ ಶಾಲೆಯ ಮಹಡಿಯಲ್ಲಿ ಚಂದ್ರಗ್ರಹಣ ವೀಕ್ಷಣೆಗೆ ಮಕ್ಕಳು ತೆರಳಿದರು.

ಸೊಸೈಟಿಯ ನಿರ್ದೇಶಕ ವಿವೇಕ್ ಮಾತನಾಡಿ, ‘ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದಕ್ಕಾಗಿಯೇ ಈ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಿದ್ದೇವೆ. ಎರಡು ಟೆಲಿಸ್ಕೋಪ್ ಮತ್ತು ಒಂದು ಬೈನಾಕ್ಯುಲರ್ ವ್ಯವಸ್ಥೆ ಮಾಡಿದ್ದೇವೆ. ಮಕ್ಕಳಿಗೆ ಚಂದ್ರಗ್ರಹಣ ತೋರಿಸುವ ಜತೆಗೆ, ಚಂದ್ರ ಕೆಂಪು, ನೀಲಿ ಬಣ್ಣಕ್ಕೆ ಏಕೆ ತಿರುಗುತ್ತಾನೆ ಎಂಬ ಮಾಹಿತಿ ನೀಡುತ್ತಿದ್ದೇವೆ’ ಎಂದರು. ವಾಸವಿ ವಿದ್ಯಾಸಂಸ್ಥೆಯ ರಾಮಲಿಂಗಾಶೆಟ್ಟಿ ಅವರೂ ಇದ್ದರು.

7.30ರ ಹೊತ್ತಿಗೆ ಕಂಡ ‘ಗ್ರಹಣ’

ರಾತ್ರಿ 7 ಗಂಟೆಯ ಹೊತ್ತಿಗೆ ಬೆಳಕು ಮಸುಕಾಗುತ್ತಲೇ, ಚಂದ್ರ ಕೆಂಪಾಗುವುದು ಕಾಣುತ್ತಿತ್ತು. ಕೆಂಪನೆಯ ಚಂದಿರ ಫೋಟೋಗ್ರಾಫರ್‌ಗಳ ಕ್ಯಾಮೆರಾಗಳಿಗೆ ಸೆರೆ ಸಿಕ್ಕ. ಆ ಕೆಂಬಣ್ಣದ ಚಂದಮಾಮನನ್ನು ಕಣ್ತುಂಬಿಕೊಳ್ಳುವ ಹೊತ್ತಿಗೆ ಚಂದ್ರನ ಸುತ್ತ ಕತ್ತಲಾವರಿಸಿಕೊಂಡಿತು.

7.30ರ ಹೊತ್ತಿಗೆ ಕತ್ತಲು ಸರಿಯುತ್ತಾ, ಚಂದ್ರ ಕಪ್ಪಾದ. ಸುತ್ತಲೂ ಬೆಳ್ಳಿಯ ಗೆರೆಯೊಂದು ಮೂಡಿತು. ನಭೋಮಂಡಲದಲ್ಲಿ ನಡೆದ ಈ ನೆರಳು – ಬೆಳಕಿನಾಟ ಮಕ್ಕಳಿಗೆ ಗ್ರಹಣದ ಪಾಠವನ್ನೇ ಹೇಳಿಕೊಟ್ಟಿತು.

ಪ್ರತಿಕ್ರಿಯಿಸಿ (+)