ಬುಧವಾರ, ಡಿಸೆಂಬರ್ 11, 2019
15 °C

‘ಪಂಚ ಮುಗ್ಧರಿಗೆ’ ಪಂಚ ಪ್ರಶ್ನೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಪಂಚ ಮುಗ್ಧರಿಗೆ’ ಪಂಚ ಪ್ರಶ್ನೆಗಳು

ಬೆಂಗಳೂರು: ಜೆ.ಸಿ.ನಗರದ ಬಿಜೆಪಿ ಕಾರ್ಯಕರ್ತ ಸಂತೋಷ್‌ ಹತ್ಯೆ ಕುರಿತು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ರಾಜ್ಯ ಸರ್ಕಾರಕ್ಕೆ ಟ್ವಿಟರ್‌ನಲ್ಲಿ ಐದು ಪ್ರಶ್ನೆಗಳನ್ನು ಕೇಳಿದ್ದಾರೆ. ‌

ಪಂಚ ಮುಗ್ಧರಿಗೆ ಪಂಚ ಪ್ರಶ್ನೆಗಳು ಎಂದಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ರಾಮಲಿಂಗಾರೆಡ್ಡಿ, ಬೆಂಗಳೂರು ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಟ್ಯಾಗ್ ಮಾಡಿದ್ದಾರೆ.

ಪ್ರಶ್ನೆಗಳು:

ಪ್ರಶ್ನೆ 1:‘ಪಂಚ ಮುಗ್ಧರೇ ದಲಿತ ಯುವಕ ಸಂತೋಷನ ಕೊಲೆ ನಿಮ್ಮ ಮುಗ್ಧ ಸುತ್ತೋಲೆಯ ಪರಿಣಾಮ ಎಂದು ಒಪ್ಪಿಕೊಳ್ಳುತೀರಾ’

ಪ್ರಶ್ನೆ 2: ‘ನಿಮ್ಮ ಮುಗ್ಧ ಸುತ್ತೋಲೆ ಹೊರಡಿಸುವ ಮುನ್ನ ಸಮಾಜ ದ್ರೋಹಿ ಶಕ್ತಿಗಳಿಗೆ ನೀವು ರಕ್ಷಾ ಕವಚ ಹಾಕುತ್ತಿದೀರೆಂಬ ಕನಿಷ್ಠ ಜ್ಞಾನವು ನಿಮಗೆ ಇರಲಿಲ್ಲವಾ‘

ಪ್ರಶ್ನೆ 3: ‘ದಲಿತ ಯುವಕ ಸಂತೋಷನ ಹೆತ್ತವರಿಗೆ ಏನೆಂದು ಹೇಳುತ್ತೀರಿ ಅವರನ್ನು ಮುಗ್ಧರು ಕೊಂದದೆಂದು ಹೇಳುತ್ತೀರಾ’

ಪ್ರಶ್ನೆ 4: ‘23 ಹಿಂದೂ ಕಾರ್ಯಕರ್ತರ ಕೊಲೆಯಾಗಿದೆ. ಕಾನೂನು ವ್ಯವಸ್ಥೆ ಮರೀಚಿಕೆಯಾಗಿದೆ. ನೀವು ಇದೆಲ್ಲವನ್ನು ನೋಡಿಯೂ ನೋಡದಂತೆ ಮುಗ್ಧರಾಗಿ ಉಳಿದಿರುವುದರ ಹಿಂದಿನ ಜಾಣ ಮುಗ್ಧತೆ ಏನು’

ಪ್ರಶ್ನೆ 5: ‘ನಿಮ್ಮ ಮುಗ್ಧ ತುಷ್ಟೀಕರಣಕ್ಕೆ ಕೊನೆ ಯಾವಾಗ. ನಿಮ್ಮಗಳ ಆಡಳಿತದಲ್ಲಿ ಹಿಂದೂ ಬಾಂಧವರ ರಕ್ತ ಬಸಿಯುವ ದಾಹಕ್ಕೆ ಕೊನೆ ಯಾವಾಗ ಒಂದಂತೂ ನೆನಪಿಟ್ಟುಕ್ಕೊಳ್ಳಿ ನೀವೀಗ ಉತ್ತರ ಕೊಡದಿದ್ದರೆ. ಚುನಾವಣೆಯಲ್ಲಿ ರಾಜ್ಯದ ಜನತೆ ಕೊಟ್ಟೇ ಕೊಡುತ್ತಾರೆ’

ರಾಮಲಿಂಗಾರೆಡ್ಡಿ ತಿರುಗೇಟು:

ಸದಾನಂದಗೌಡ ಟ್ವಿಟರ್‌ನಲ್ಲಿ ಕೇಳಿರುವ ಪ್ರಶ್ನೆಗಳಿಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ಉತ್ತರ ನೀಡಿರುವ ಗೃಹ ಸಚಿವ ರಾಮಲಿಂಗಾರೆಡ್ಡಿ, ‘ಚುನಾವಣಾಗಾಗಿ ರಾಜಕೀಯ ಹೇಳಿಕೆ ನೀಡುವುದನ್ನು ಸದಾನಂದಗೌಡ ಖಯಾಲಿ ಮಾಡಿಕೊಂಡಿದ್ದಾರೆ’ ಎಂದು ಟೀಕಿಸಿದ್ದಾರೆ.

‘ವಿಜಯಪುರದಲ್ಲಿ ದಲಿತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದು ನಿಮ್ಮ ಪಕ್ಷದ ಕಾರ್ಯಕರ್ತನಲ್ಲವೇ, ಮೂಡಿಗೆರೆಯ ಧನ್ಯಶ್ರೀ ಸಾವಿಗೆ ಕಾರಣವಾಗಿದ್ದು ನಿಮ್ಮ ಪಕ್ಷದ ಮುಖಂಡನಲ್ಲವೇ’ ಎಂದು ಪ್ರಶ್ನಿಸಿದ್ದಾರೆ.

‘ಉಡುಪಿಯ ಪ್ರವೀಣ ಪೂಜಾರಿಯ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದು ನಿಮ್ಮ ಪಕ್ಷದ ನಿಷ್ಟಾವಂತ ಕಾರ್ಯಕರ್ತರಲ್ಲವೇ, ಬಂಟ್ವಾಳದ ಹರೀಶ ಪೂಜಾರಿ ಕೊಲೆ ಪ್ರಕರಣದಲ್ಲಿ ನಿಮ್ಮ ಸಂಘಪರಿವಾರದ ನಾಯಕ ಬಂಧನಕ್ಕೆ ಒಳಗಾಗಲಿಲ್ಲವೇ, ಮಂಗಳೂರಿಗೆ ಬೆಂಕಿ ಹಚ್ಚುವುದಾಗಿ ಹೇಳಿಕೆ ನೀಡಿ ಕಾರ್ತಿಕ್ ರಾಜ್ ಕೊಲೆ ಪ್ರಕರಣದ ತನಿಖೆಯನ್ನು ದಾರಿ ತಪ್ಪಿಸಲು ಪ್ರಯತ್ನಿಸಿದ್ದು ನಿಮ್ಮ ಪಕ್ಷದ ಸಂಸದರಲ್ಲವೇ, ವಿನಾಯಕ ಬಾಳಿಗಾ ಸೇರಿದಂತೆ ಕೊಲೆಯಾದ ಇವರೆಲ್ಲರು ಹಿಂದುಗಳಲ್ಲವೇ, ಇವರೆಲ್ಲರ ತಂದೆ ತಾಯಿಯ ಶಾಪ ನಿಮ್ಮ ಪಕ್ಷಕ್ಕೆ ತಟ್ಟುವುದಿಲ್ಲವೇ’ ಎಂದೂ ಅವರು  ಕೇಳಿದ್ದಾರೆ.

‘ಬಿಜೆಪಿ ಕಾರ್ಯಕರ್ತರಿಂದ ಕೊಲೆಯಾದ ದಲಿತ, ಹಿಂದುಗಳ ಮನೆಗೆ ಬೇಟಿ ನೀಡಿ ಸಾಂತ್ವಾನ ಹೇಳುವ ದೊಡ್ಡ ಮನಸ್ಸು ನಿಮಗಿಲ್ಲವೇ’ ಎಂದೂ ಪ್ರಶ್ನಿಸಿದ್ದಾರೆ.

‘ಕೊಲೆಯನ್ನು ಅಪರಾಧವಾಗಿಯೇ ನೋಡಿ‌,  ಹಾಗೆ ನೋಡಿದ ಕಾರಣಕ್ಕಾಗಿ ಬಹುತೇಕ ಎಲ್ಲಾ ಕೊಲೆ ಪ್ರಕರಣದ ಅಪರಾಧಿಗಳನ್ನು ಸರ್ಕಾರ ಜೈಲಿಗಟ್ಟಿದೆ. ರಾಜ್ಯಕ್ಕೆ ಬೆಂಕಿ ಹಚ್ಚುವಂತಹ ನಾಯಕರು ಬೇಕೋ ಅಥವಾ ಬೆಂಕಿ ಆರಿಸುವ ನಾಯಕರು ಬೇಕೋ ಎಂಬುದನ್ನು ಜನ ನಿರ್ಧರಿಸಿದ್ದಾರೆ. ಕರ್ನಾಟಕದಲ್ಲಿ ಅಧಿಕಾರಕ್ಕೇರುವ ಹಗಲುಗನಸು ಕಾಣಬೇಡಿ. ಮತ್ತೊಮ್ಮೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರಲಿದೆ. ಯಾವುದೇ ಕೊಲೆ ಪ್ರಕರಣವಿರಲಿ ಅಪರಾಧಿಗಳಿಗೆ ಶಿಕ್ಷೆ ನೀಡಲು ನಮ್ಮ ಪೋಲಿಸರು ಮತ್ತು ನಮ್ಮ ಸರ್ಕಾರ ಸಶಕ್ತವಾಗಿದೆ’ ಎಂದು ಕಟುವಾಗಿ ಉತ್ತರಿಸಿದ್ದಾರೆ.

ಇನ್ನಷ್ಟು ಓದು: ಬಿಜೆಪಿ ಕಾರ್ಯಕರ್ತನ ಹತ್ಯೆ

ಪ್ರತಿಕ್ರಿಯಿಸಿ (+)