ಸೋಮವಾರ, ಡಿಸೆಂಬರ್ 9, 2019
25 °C

ಕರಾವಳಿಯ ಹುಡುಗರ ‘ಲುಂಗಿ’!

Published:
Updated:
ಕರಾವಳಿಯ ಹುಡುಗರ ‘ಲುಂಗಿ’!

ಕರಾವಳಿ ಕಡೆಯ ಒಂದಿಷ್ಟು ಹುಡುಗರು ಸೇರಿಕೊಂಡು ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾಕ್ಕೆ ಅವರು ‘ಲುಂಗಿ’ ಎಂಬ ಹೆಸರು ಇಟ್ಟಿದ್ದಾರೆ. ಇದು ಪ್ರೀತಿ, ಸಂಸ್ಕೃತಿಯನ್ನು ಸಾರುವಂಥದ್ದು ಎನ್ನುತ್ತಾರೆ ನಿರ್ದೇಶಕ ಅಕ್ಷಿತ್‍ ಶೆಟ್ಟಿ.

ಸಿನಿಮಾ ಬಗ್ಗೆ ಮಾಹಿತಿ ನೀಡಲು ಅವರು ತಮ್ಮ ಚಿತ್ರತಂಡದ ಜೊತೆಗೂಡಿ ಸುದ್ದಿಗೋಷ್ಠಿ ಕರೆದಿದ್ದರು. ಚಿತ್ರತಂಡದ ಸದಸ್ಯರು ಪಂಚೆ ಉಟ್ಟು ಬಂದಿದ್ದು ವಿಶೇಷವಾಗಿತ್ತು. ‘ಚಿತ್ರದ ಕಥಾನಾಯಕ ಎಂಜಿನಿಯರಿಂಗ್ ಪದವಿ ಪಡೆದಿರುತ್ತಾನೆ.

ಆದರೆ, ಅಪ್ಪ ಕೊಡಿಸಿದ ಕೆಲಸಕ್ಕೆ ಹೋಗಲು ಆತನಿಗೆ ಮನಸ್ಸಾಗುವುದಿಲ್ಲ. ಸ್ವಂತ ಉದ್ಯೋಗ ಮಾಡಬೇಕು ಎನ್ನುವ ಇಚ್ಛೆಯಿಂದಾಗಿ ಲುಂಗಿ ವ್ಯವಹಾರ ಆರಂಭಿಸಿ, ಯಶಸ್ಸು ಸಾಧಿಸುತ್ತಾನೆ. ಯುವಕರು ಸ್ವಂತ ಉದ್ಯೋಗ ಆರಿಸಿಕೊಂಡರೆ ಒಳ್ಳೆಯದಾಗುತ್ತದೆ ಎಂಬ ಸಂದೇಶ ಸಿನಿಮಾದಲ್ಲಿದೆ’ ಎಂದು ಚಿತ್ರತಂಡ ಹೇಳಿದೆ. ಚಿತ್ರೀಕರಣವು ಮಂಗಳೂರು ಸುತ್ತಮುತ್ತ ನಡೆಯಲಿದೆಯಂತೆ.

ಮುಕೇಶ್‍ ಹೆಗ್ಡೆ ಇದರ ನಿರ್ಮಾಪಕರು. ಪ್ರಣವ್‍ ಹೆಗ್ಡೆ ಚಿತ್ರದ ನಾಯಕ. ‘ಒಂದು ಮೊಟ್ಟೆಯ ಕಥೆ’ಯ ನಿರ್ದೇಶಕ ರಾಜ್‌ ಬಿ. ಶೆಟ್ಟಿ ಅವರ ಬಳಿ ಪ್ರಣವ್ ಅವರು ಅಭಿನಯದ ಅ,ಆ,ಇ,ಈ... ಕಲಿತಿದ್ದಾರೆ. ಅಹಲ್ಯಾ ಸುರೇಶ್ ಮತ್ತು ರಾಧಿಕಾ ರಾವ್ ಈ ಚಿತ್ರದ ನಾಯಕಿಯರು. ಪ್ರಸಾದ್ ಕೆ. ಶೆಟ್ಟಿ ಅವರು ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ⇒v

ಪ್ರತಿಕ್ರಿಯಿಸಿ (+)