ಭಾನುವಾರ, ಡಿಸೆಂಬರ್ 8, 2019
24 °C

‘ರಾಜಾ ಸಿಂಹ’ನ ಗರ್ಜನೆ

Published:
Updated:
‘ರಾಜಾ ಸಿಂಹ’ನ ಗರ್ಜನೆ

ಮೂರು ವರ್ಷದ ಕನಸು ಈಡೇರಿದ ಖುಷಿ ನಟ ಅನಿರುದ್ಧ್‌ ಅವರ ಕಂಗಳಲ್ಲಿ ಇತ್ತು. ಜತೆಗೆ, ಚಡಪಡಿಕೆಯೂ ಎದ್ದುಕಾಣುತ್ತಿತ್ತು. ಅವರು ನಟಿಸಿದ ‘ರಾಜಾ ಸಿಂಹ’ ಚಿತ್ರ ಈ ವಾರ ಬಿಡುಗಡೆಯಾಗುತ್ತಿರುವುದೇ ಇದಕ್ಕೆ ಕಾರಣ ಎಂದು ಅವರ ಮುಖಭಾವವೇ ಹೇಳುತ್ತಿತ್ತು.

ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು. ಈ ವಾರ ಸಾಕಷ್ಟು ಸಿನಿಮಾಗಳು ತೆರೆಕಾಣುತ್ತಿವೆ. ಇನ್ನಷ್ಟು ದಿನ ಕಾಯಬಹುದಿತ್ತಲ್ಲ? ಎಂಬ ‍ಪ್ರಶ್ನೆ ಅನಿರುದ್ಧ್‌ಗೆ ಎದುರಾಯಿತು. ಮೈಕ್‌ ಕೈಗೆತ್ತಿಕೊಂಡ ಅವರು, ‘ಇಷ್ಟು ದಿನ ಕಾದಿದ್ದೇವೆ. ಶೀಘ್ರವೇ ಎಸ್‌.ಎಸ್‌.ಎಲ್‌.ಸಿ ಮತ್ತು ಪಿ.ಯು.ಸಿ. ಪರೀಕ್ಷೆ ಕೂಡ ಆರಂಭವಾಗಲಿವೆ. ಜತೆಗೆ, ಐಪಿಎಲ್ ಕ್ರಿಕೆಟ್‌ ಕೂಡ ಶುರುವಾಗಲಿದೆ. ಹಾಗಾಗಿ, ಈಗಲೇ ಜನರ ಮುಂದೆ ಬರಲು ನಿರ್ಧರಿಸಿದ್ದೇವೆ’ ಎಂದು ಕಾರಣ ಬಿಡಿಸಿಟ್ಟರು.

‘ವಿಷ್ಣುವರ್ಧನ್‌ ಅವರನ್ನು ಗ್ರಾಫಿಕ್ಸ್‌ ಮೂಲಕ ತೋರಿಸಲು ಮುಂದಾಗಿದ್ದೇವೆ. ‘ಸಿಂಹಾದ್ರಿಯ ಸಿಂಹ’ದ ನರಸಿಂಹೇಗೌಡನ ಪಾತ್ರದಲ್ಲಿಯೇ ಅವರು ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಅರ್ಧಭಾಗ ಅವರು ಆವರಿಸಿಕೊಳ್ಳಲಿದ್ದಾರೆ. ಅವರ ಪಾತ್ರವನ್ನು ಹೇಗೆ ಬಳಸಿಕೊಂಡಿದ್ದೇವೆ ಎಂಬುದನ್ನೇ ಚಿತ್ರ ನೋಡಿಯೇ ತಿಳಿದುಕೊಳ್ಳಬೇಕು’ ಎಂದರು.

ನಿರ್ದೇಶಕ ರವಿ ರಾಮ್, ‘ಅನಿರುದ್ಧ್‌ ಅವರಿಗೆ ಈ ಚಿತ್ರ ಆ್ಯಕ್ಷನ್ ಇಮೇಜ್‌ ತಂದುಕೊಡಲಿದೆ. ಅವರನ್ನು ವಿಭಿನ್ನ ಗೆಟಪ್‌ನಲ್ಲಿ ತೋರಿದ್ದೇವೆ. ಇದೊಂದು ಮಾದರಿ ಸಿನಿಮಾ. ಚಿತ್ರದಲ್ಲಿ ವಿಷ್ಣುವರ್ಧನ್‌ ಅವರ ನರಸಿಂಹೇಗೌಡನ ಪಾತ್ರದ ಪ್ರತಿಮೆ ಬಳಸಿದ್ದೇವೆ. ಚಿತ್ರದ ಬಿಡುಗಡೆ ದಿನದಂದು ಆನಂದರಾವ್‌ ವೃತ್ತದಿಂದ ಅಪರ್ಣ ಚಿತ್ರಮಂದಿರದವರೆಗೆ ಮೆರವಣಿಗೆ ಮಾಡಲು ನಿರ್ಧರಿಸಲಾಗಿದೆ’ ಎಂದು ವಿವರಿಸಿದರು.

ಸಂಜನಾ ಮತ್ತು ನಿಖಿತಾ ಈ ಚಿತ್ರದ ನಾಯಕಿಯರು. ಸಂಜನಾ ಅವರಿಗೆ ಒಂದೂವರೆ ವರ್ಷದ ಹಿಂದೆ ಚಿತ್ರದಲ್ಲಿ ನಟಿಸಲು ನಿರ್ದೇಶಕರು ಕರೆ ಮಾಡಿದ್ದರಂತೆ. ಆದರೆ, ಸಣ್ಣಪಾತ್ರವೆಂದು ಅವರು ತಿರಸ್ಕರಿಸಿದ್ದರಂತೆ. ಕೊನೆಗೆ, ‘ಅನಿರುದ್ಧ್‌ ಅವರು ದೂರವಾಣಿ ಕರೆ ಮಾಡಿದಾಗ ಒಪ್ಪಿಕೊಂಡೆ’ ಎಂದರು ಸಂಜನಾ.

‘ಚಿತ್ರದಲ್ಲಿ ನನ್ನ ಪಾತ್ರಕ್ಕೆ ಉತ್ತಮ ಪೋಷಣೆ ಇದೆ. ನಾಯಕನ ಕೆಲಸಕ್ಕೆ ಪೂರಕವಾದ ಪಾತ್ರ. ನನ್ನ ಮೊದಲನೇ ಸಿನಿಮಾ ‘ಗಂಡ ಹೆಂಡತಿ’ಯ ಆಡಿಯೊ ಬಿಡುಗಡೆಗೆ ವಿಷ್ಣುವರ್ಧನ್‌ ಅವರು ಬಂದಿದ್ದರು. ಅವರ ನೆನಪಿನ ಚಿತ್ರದಲ್ಲಿ ನಟಿಸುತ್ತಿರುವುದು ಖುಷಿ ಕೊಟ್ಟಿದೆ’ ಎಂದು ನಕ್ಕರು ಸಂಜನಾ. ಈ ಚಿತ್ರಕ್ಕೆ ಸಿ.ಡಿ. ಬಸಪ್ಪ ಬಂಡವಾಳ ಹೂಡಿದ್ದಾರೆ. ಸಂಗೀತ ಸಂಯೋಜನೆ ಜೆಸ್ಸಿ ಗಿಫ್ಟ್‌ ಅವರದ್ದು.

ಪ್ರತಿಕ್ರಿಯಿಸಿ (+)