ಬುಧವಾರ, ಡಿಸೆಂಬರ್ 11, 2019
26 °C

ಭಯದ ಜತೆಗೆ ಭಾವುಕತೆ

Published:
Updated:
ಭಯದ ಜತೆಗೆ ಭಾವುಕತೆ

‘ಒಂದೂವರೆ ವರ್ಷದ ನಂತರ ನಾಯಕಿಯಾಗಿ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದೇನೆ. ಈ ಚಿತ್ರ ನೋಡಿದಾಗ ಇಷ್ಟು ಕಾಲ ಕಾದಿದ್ದು ಹುಸಿಹೋಗಲಿಲ್ಲ ಅನಿಸಿತು. ಪ್ರತಿ ಸಿನಿಮಾದಲ್ಲಿಯೂ ಭಿನ್ನ ಪಾತ್ರಗಳಲ್ಲಿ ಅಭಿನಯಿಸಬೇಕು ಎನ್ನುವುದು ನನ್ನ ಆಸೆ. ಈ ಚಿತ್ರವೂ ನನ್ನ ಆ ಇಂಗಿತದ ಮುಂದುವರಿದ ಭಾಗವೇ ಆಗಿದೆ’ ಎಂದು ‘ಮಂಜರಿ’ ಚಿತ್ರದ ಬಗ್ಗೆ ಹೇಳಿದರು ನಟಿ ರೂಪಿಕಾ.

ವಿಶ್ರುತ್ ಅವರು ನಿರ್ದೇಶಿಸುತ್ತಿರುವ ಮಂಜರಿ ಸಿನಿಮಾ ಇದೇ ವಾರ (ಫೆ. 2) ತೆರೆಗೆ ಬರುತ್ತಿದೆ. ‘ಇದು ಹಾರರ್ ಸಿನಿಮಾವೇ ಆದರೂ ತುಂಬ ಭಿನ್ನ ರೀತಿಯ ನಿರೂಪಣೆ ಇದೆ. ಭಾವುಕತೆ, ಹಾಸ್ಯ ಎಲ್ಲವೂ ಇದೆ’ ಎಂದು ನಿರ್ದೇಶಕರು ವಿವರಿಸುತ್ತಾರೆ.

ಈ ಚಿತ್ರದಲ್ಲಿ ರೂಪಿಕಾ, ಕಾವ್ಯಾ ಎಂಬ ಹುಡುಗಿಯ ಪಾತ್ರದಲ್ಲಿ ನಟಿಸಿದ್ದಾರೆ. ‘ಯಾವುದೇ ಡ್ಯೂಪ್‌  ಇಲ್ಲದೆ ಅತ್ಯಂತ ಅಪಾಯಕಾರಿ ಸ್ಟಂಟ್‌ಗಳನ್ನೆಲ್ಲ ಈ ಚಿತ್ರದಲ್ಲಿ ಮಾಡಿದ್ದೇನೆ’ ಎಂದು ಖುಷಿಯಿಂದಲೇ ಅವರು ಹೇಳಿಕೊಂಡರು. ಅವರ ಕಣ್ಣುಗಳನ್ನು ಈ ಚಿತ್ರದಲ್ಲಿ ತುಂಬ ಚೆನ್ನಾಗಿ ಬಳಸಿಕೊಂಡಿದ್ದಾರಂತೆ. ಅವುಗಳನ್ನೇ ಕೇಂದ್ರವಾಗಿಟ್ಟುಕೊಂಡು ಸಂಗೀತ ಸಂಯೋಜಕ ಮ್ಯಾಥ್ಯೂ ‘ನೀಲಿ ನೀಲಿ ಕಣ್ಣಲಿ’ ಎಂಬ ಹಾಡನ್ನೂ ಸಂಯೋಜನೆ ಮಾಡಿದ್ದಾರೆ.

ನಟ ವಿಜಯ್‌ ಚೆಂಡೂರ ಅವರ ಪಾಲಿಗೂ ಈ ಚಿತ್ರ ವಿಶೇಷ ಅನಿಸಿದೆ. ಅವರು ಮಂಜರಿಯಲ್ಲಿ ಹುಚ್ಚ ಎಂಬ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ‘ಕಥೆಗೆ ಮಹತ್ವದ ತಿರುವು ಕೊಡುವ ಪಾತ್ರ ನನ್ನದು. ವಿಭಿನ್ನ ರೀತಿಯ ಭಾಷೆಯ ಬಳಕೆಯೂ ಇದೆ’ ಎಂದು ಅವರು ಹೇಳಿಕೊಂಡರು. ನಾಯಕ ಪ್ರಭು ಫಾರಿನ್ ರಿಟರ್ನ್ಡ್‌ ಹುಡುಗನ ಪಾತ್ರದಲ್ಲಿ ನಟಿಸಿದ್ದಾರೆ. ಅವರು ಎಲ್ಲರಿಗೂ ಧನ್ಯವಾದ ಹೇಳಲಿಕ್ಕಾಗಿಯೇ ಮಾತು ಮೀಸಲಿಟ್ಟರು.

ನಿರ್ದೇಶಕರ ಸ್ನೇಹಿತರಾದ ಶಂಕರ್‌ ಮತ್ತು ಕಿರಣ್‌ ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ‘ಇದೊಂದು ವಿಭಿನ್ನ ಚಿತ್ರ. ಸಾಮಾನ್ಯವಾಗಿ ಎಲ್ಲ ಹಾರರ್ ಸಿನಿಮಾಗಳನ್ನು ರಾತ್ರಿ ಚಿತ್ರೀಕರಿಸಲಾಗುತ್ತದೆ. ಆದರೆ, ನಾವು ಹಗಲಿನಲ್ಲಿಯೇ ಚಿತ್ರೀಕರಿಸಿದ್ದೇವೆ’ ಎಂದು ಚಿತ್ರದಲ್ಲಿನ ಭಿನ್ನ ಅಂಶಗಳ ಬಗ್ಗೆ ಹೇಳಿಕೊಂಡರು ಶಂಕರ್‌. ‘ಹಳ್ಳಿತನ ಮತ್ತು ನಗರ ಗುಣ ಎರಡನ್ನೂ ಸೇರಿಸಿ ಮಾಡಿದ ಸಿನಿಮಾ ಇದು’ ಎನ್ನುವುದು ವಿಶ್ರುತ್‌ ವ್ಯಾಖ್ಯಾನ

ಪ್ರತಿಕ್ರಿಯಿಸಿ (+)