ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೇವ್ರಂಥಾ’ ಹುಡುಗಿ!

Last Updated 1 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

‘ದೇವ್ರಂಥ ಮನುಷ್ಯ’ ಸಿನಿಮಾ ಶುಕ್ರವಾರ ತೆರೆಗೆ ಬರುತ್ತಿದೆ. ಬಿಗ್‌ ಬಾಸ್‌ ಕಾರ್ಯಕ್ರಮದ ಮೂಲಕ ಕನ್ನಡಿಗರಿಗೆ ಪರಿಚಿತರಾದ ಪ್ರಥಮ್ ಅಭಿನಯದ ಚಿತ್ರ ಇದು. ಈ ಸಿನಿಮಾದಲ್ಲಿ ಇಬ್ಬರು ನಾಯಕಿಯರು ಇದ್ದಾರೆ – ಶ್ರುತಿ ಮತ್ತು ವೈಷ್ಣವಿ.

ವೈಷ್ಣವಿ ಅವರಿಗೆ ಈಗ 19 ವರ್ಷ ವಯಸ್ಸು. ಇದರಲ್ಲೇನಿದೆ ವಿಶೇಷ ಎಂದು ಕೇಳಬಹುದು. ವೈಷ್ಣವಿ ಅವರಲ್ಲಿ ಒಂದು ವೈಶಿಷ್ಟ್ಯ ಇದೆ. ಇಷ್ಟು ಚಿಕ್ಕ ವಯಸ್ಸಿನಲ್ಲೇ ಇವರು ಏಳು ಸಿನಿಮಾಗಳಿಗೆ ಸಹಿ ಮಾಡಿದ್ದಾರೆ. ಬಿಡುಗಡೆ ಆಗುತ್ತಿರುವ ಅವರ ಮೊದಲ ಸಿನಿಮಾ ‘ದೇವ್ರಂಥ ಮನುಷ್ಯ’. ಮೊದಲ ಸಿನಿಮಾ ಬಿಡುಗಡೆ ಆಗುತ್ತಿರುವ ಖುಷಿಯಲ್ಲಿರುವ ವೈಷ್ಣವಿ ‘ಚಂದನವನ’ದ ಜೊತೆ ಮಾತಿಗೆ ಸಿಕ್ಕಿದ್ದರು. ಅವರೊಂದಿಗಿನ ಮಾತುಕತೆಯ ಆಯ್ದ ಭಾಗ ಇಲ್ಲಿದೆ:

* ‘ದೇವ್ರಂಥ ಮನುಷ್ಯ’ ತೆರೆಗೆ ಬರುತ್ತಿರುವ ಮೊದಲ ಸಿನಿಮಾ. ನೀವು ಮೊದಲು ಸಹಿ ಮಾಡಿದ್ದೂ ಇದಕ್ಕೇನಾ?
ಎರಡು ವರ್ಷಗಳ ಹಿಂದೆ ನಾನು ಒಟ್ಟಿಗೆ ನಾಲ್ಕು ಸಿನಿಮಾಗಳಿಗೆ ಸಹಿ ಮಾಡಿದೆ. ಒಂದೇ ಸಿನಿಮಾದಲ್ಲಿ ನಟಿಸಿ ಈ ಕ್ಷೇತ್ರದಲ್ಲಿ ಜನಪ್ರಿಯತೆ ಪಡೆದುಕೊಳ್ಳುವವರ ಸಂಖ್ಯೆ ಕಡಿಮೆ. ಇದಕ್ಕೆ ಕೆಲವು ಅಪವಾದಗಳು ಇವೆ. ಆದರೆ, ನನ್ನ ಪ್ರಕಾರ ವೀಕ್ಷಕರು ನಮ್ಮನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಅಂದರೆ ಒಂದಾದ ನಂತರ ಒಂದರಂತೆ ಸಿನಿಮಾಗಳು ತೆರೆಗೆ ಬರಬೇಕು.

ನಾನು ಮೊದಲು ಸಹಿ ಮಾಡಿದ ಸಿನಿಮಾ ‘ಪಾದರಸ’. ಅದರಲ್ಲಿ ಸಂಚಾರಿ ವಿಜಯ್ ಜೊತೆ ಅಭಿನಯಿಸುತ್ತಿದ್ದೇನೆ. ಅದಾದ ನಂತರ ‘ನಾಗವಲ್ಲಿ v/s ಆಪ್ತಮಿತ್ರರು’ ಸಿನಿಮಾಕ್ಕೆ ಸಹಿ ಮಾಡಿದೆ. ಅದು ಕೂಡ ಈ ತಿಂಗಳಲ್ಲೇ ತೆರೆಗೆ ಬರಲಿದೆ. ಅದಾದ ನಂತರ ‘ಸುರ್‌ಸುರ್‌ ಬತ್ತಿ’ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡೆ. ‘ಶ್ರೀಮಂತ’ ಚಿತ್ರದಲ್ಲೂ ಅಭಿನಯಿಸುತ್ತಿದ್ದೇನೆ – ಅದು ರೈತರ ಬಗೆಗಿನ ಸಿನಿಮಾ. ಸಂಗೀತ ಪ್ರಧಾನ ಸಿನಿಮಾ ‘ಶ್ರೀಮಂತ’. ಅದಾದ ನಂತರ ಸಹಿ ಮಾಡಿದ್ದು ‘ದೇವ್ರಂಥ ಮನುಷ್ಯ’ ಸಿನಿಮಾಕ್ಕೆ.

* ಮನೆಯಲ್ಲಿ ಯಾರಿಗಾದರೂ ಸಿನಿಮಾ ಅಥವಾ ಅಭಿನಯದ ಹಿನ್ನೆಲೆ ಇದೆಯೇ?
ನಮ್ಮ ಮನೆಯಲ್ಲಿ ಯಾರೂ ಸಿನಿಮಾ ಹಿನ್ನೆಲೆ ಹೊಂದಿದವರಲ್ಲ. ಈಗ ನಾನು ಬಿ.ಕಾಂ ಮೊದಲ ವರ್ಷದಲ್ಲಿ ಇದ್ದೇನೆ. ಈಗ ನನಗೆ 19 ವರ್ಷ ವಯಸ್ಸು, ಅಷ್ಟೇ! ನನ್ನ ತಂದೆ ವಾಯುಪಡೆಯಲ್ಲಿ ಕೆಲಸ ಮಾಡುತ್ತಿದ್ದರು. ಸಿನಿಮಾ ರಂಗದ ಯಾರ ಜೊತೆಯೂ ಸಂಪರ್ಕ ಇರಲಿಲ್ಲ. ಆದರೆ ನಾನು ಎಂಟು ವರ್ಷ ವಯಸ್ಸಿನವಳಾಗಿದ್ದಾಗಿಂದಲೂ ಸಿನಿಮಾ ಮಾಡಬೇಕು ಎಂಬ ಕನಸು ಕಂಡಿದ್ದೇನೆ.

* ಸಿನಿಮಾ ರಂಗ ನಿಮ್ಮನ್ನು ಗುರುತಿಸಿದ್ದು ಹೇಗೆ?
2015ರಲ್ಲಿ ನಾನು ‘ಪ್ರಿನ್ಸಸ್‌ ಸೌತ್‌ ಇಂಡಿಯಾ’ ಫ್ಯಾಷನ್ ಕಾರ್ಯಕ್ರಮದಲ್ಲಿ ಪ್ರಶಸ್ತಿ ಗೆದ್ದಿದ್ದೆ. ಆ ಕಾರಣದಿಂದಾಗಿ ಸಿನಿಮಾ ರಂಗ ನನ್ನನ್ನು ಗುರುತಿಸಿತು.

* ಯಾವ ಪಾತ್ರ ಇಷ್ಟ, ಯಾವುದು ಕಷ್ಟ?
ಅಭಿಜಾತ ಕಲಾವಿದರಿಗೆ ಒಂದೊಂದು ಪಾತ್ರ ಕಷ್ಟವಾಗತ್ತೆ, ಕೆಲವು ಪಾತ್ರಗಳು ಸುಲಭವಾಗುತ್ತವೆ. ಆದರೆ, ಕಲಾವಿದನಿಗೆ ತನ್ನ ನಟನೆಯನ್ನು ಸುಧಾರಿಸಿಕೊಳ್ಳಲು ಯಾವತ್ತೂ ಅವಕಾಶ ಇರುತ್ತದೆ. ಅದು ಕೊನೆಯಿಲ್ಲದ ಪಯಣ. ಐತಿಹಾಸಿಕ ಕಥಾವಸ್ತು ಇರುವ ಪಾತ್ರಗಳಲ್ಲಿ ಅಭಿನಯಿಸುವುದು ನನಗೆ ಬಹಳ ಇಷ್ಟ. ಕಾಲೇಜು ಹುಡುಗಿಯ ಪಾತ್ರ ಮಾಡುವುದು ಕಷ್ಟ ಇರಬಹುದು. ಆದರೆ ಐತಿಹಾಸಿಕ ಕಥಾವಸ್ತು ಇರುವ ಸಿನಿಮಾದ ಪಾತ್ರಗಳನ್ನು ಮಾಡಿದಷ್ಟು ಅದು ಸವಾಲಿನದ್ದಲ್ಲ. ನಾನು ಅಂಗವಿಕಲೆಯ ಪಾತ್ರ ಮಾಡಬೇಕು ಎಂದಾದರೆ, ಸೌಂದರ್ಯಕ್ಕಿಂತ ಹೆಚ್ಚಾಗಿ ಅಭಿನಯದ ಮೂಲಕವೇ ವೀಕ್ಷಕರನ್ನು ಗೆಲ್ಲಬೇಕಾಗುತ್ತದೆ. ‘ಒಳ್ಳೆಯ ಹೀರೊಯಿನ್‌’ ಅನ್ನಿಸಿಕೊಳ್ಳುವುದಕ್ಕಿಂತಲೂ ‘ಎಷ್ಟು ಒಳ್ಳೆಯ ಕಲಾವಿದೆ’ ಎಂದು ವೀಕ್ಷಕರಿಂದ ಕರೆಸಿಕೊಳ್ಳಬೇಕು ಎಂಬ ಆಸೆ ಇದೆ.

* ಈವರೆಗೆ ಸಿಕ್ಕಿರುವಂತಹ ಪಾತ್ರಗಳು ಹೇಗಿವೆ?
ನಾನು ಬಯಸಿದಂತಹ ಪಾತ್ರಗಳನ್ನೇ ಈವರೆಗೆ ‍ಪ‍ಡೆದುಕೊಂಡಿದ್ದೇನೆ. ‘ನಾಗವಲ್ಲಿ’ ಸಿನಿಮಾದಲ್ಲಿ ಒಂದು ಚಿಕ್ಕದಾದ, ಐತಿಹಾಸಿಕ ಪಾತ್ರವೊಂದು ನನಗೆ ಸಿಕ್ಕಿದೆ. ನಾನು ಒಂದು ಗ್ಲಾಮರ್ ಪಾತ್ರವನ್ನೂ ನಿಭಾಯಿಸಿದ್ದೇನೆ. ಕಲಾವಿದೆಯಾಗಿ ನಾನು ‘ಆ ಪಾತ್ರ ಮಾಡಲಾರೆ. ಈ ಪಾತ್ರ ಮಾತ್ರ ಮಾಡುವೆ’ ಎಂಬ ಮಿತಿ ಹಾಕಿಕೊಂಡಿಲ್ಲ. ಗ್ಲಾಮರ್‌ ‍ಪಾತ್ರಗಳನ್ನೂ ನಿಭಾಯಿಸುತ್ತೇನೆ– ಸಿನಿಮಾದ ಕಥೆ ಚೆನ್ನಾಗಿರಬೇಕು.

* ಯಾವ ಬಗೆಯ ಸಿನಿಮಾಗಳು ಇಷ್ಟ?
ನನ್ನ ತಲೆಯಲ್ಲಿ ಒಂದು ಹುಳ ಬಿಡುವಂತಹ ಸಿನಿಮಾ ನನಗೆ ಇಷ್ಟ! ಅದು ಯಾವುದೇ ಪ್ರಕಾರದ ಸಿನಿಮಾ ಆಗಿರಬಹುದು. ಎಲ್ಲ ಪ್ರಕಾರಗಳ ಸಿನಿಮಾದಲ್ಲೂ ನಾನು ಅಭಿನಯಿಸಬೇಕು.

* ಇಷ್ಟದ ನಿರ್ದೇಶಕರು ಯಾರು?
‘ರಾಜು ಕನ್ನಡ ಮೀಡಿಯಂ’ ನಿರ್ದೇಶಕ ನರೇಶ್ ಕುಮಾರ್, ‘ಚಮಕ್‌’, ‘ಆಪರೇಷನ್‌ ಅಲಮೇಲಮ್ಮ’ ಸಿನಿಮಾಗಳ ನಿರ್ದೇಶಕ ಸಿಂಪಲ್ ಸುನಿ ಅವರಂತಹ ನಿರ್ದೇಶಕರು ನನಗೆ ಇಷ್ಟ. ಏಕೆಂದರೆ ಕನ್ನಡ ಸಿನಿಮಾ ರಂಗಕ್ಕೆ ಒಂದು ತಿರುವು ಕೊಟ್ಟಿದ್ದಾರೆ ಅವರು. ಹಾಗೆಯೇ, ಮಣಿರತ್ನಂ, ರಾಜಮೌಳಿ, ಸಂಜಯ್ ಲೀಲಾ ಬನ್ಸಾಲಿ ಕೂಡ ಇಷ್ಟ. ಸುನಿ ಮತ್ತು ನರೇಶ್ ಅವರ ಜೊತೆ ಕೆಲಸ ಮಾಡಬೇಕು ಎಂಬ ಆಸೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT