ಗುರುವಾರ , ಡಿಸೆಂಬರ್ 12, 2019
25 °C
ನಗರದ ಅತಿಥಿ

ತುಕ್ಕು ಹಿಡಿದ ನಲ್ಲಿ ಮತ್ತು ನಿತ್ಯಾ ಕಾಳಜಿ

Published:
Updated:
ತುಕ್ಕು ಹಿಡಿದ ನಲ್ಲಿ ಮತ್ತು ನಿತ್ಯಾ ಕಾಳಜಿ

* ಸುಮಾರು 2 ದಶಕಗಳಿಂದ ಲಂಡನ್‌ನ ಪ್ರತಿಷ್ಠಿತ ಕಾಲೇಜಿನಲ್ಲಿ ಶಿಕ್ಷಕಿಯಾಗಿದ್ದೀರಿ. ಹೇಗಿದೆ ಅನುಭವ?

ಅದ್ಭುತ ಅನುಭವ. ಅಲ್ಲಿ ಸಣ್ಣ ವಯಸ್ಸಿನಲ್ಲೇ ಮಕ್ಕಳು ದೃಶ್ಯಕಲಾ ಮಾಧ್ಯಮದ ಕಲಿಕೆಯಲ್ಲಿ ತೊಡಗಿಕೊಳ್ಳುತ್ತಾರೆ. ವಿದ್ಯಾರ್ಥಿಗಳ ಸಂಖ್ಯೆ ಇಲ್ಲಿನಂತೆ ಬೆರಳೆಣಿಕೆಯಲ್ಲಿರುವುದಿಲ್ಲ. ಕಲಿಸುತ್ತಾ ನಾನೂ ಕಲಿಯುತ್ತಿರುತ್ತೇನೆ.

* ವಿದೇಶದಲ್ಲಿ ದೃಶ್ಯಕಲೆಯ ಉನ್ನತ ಶಿಕ್ಷಣ ಪಡೆಯುವುದು ಜನಸಾಮಾನ್ಯರಿಗೆ ಸಾಧ್ಯವೇ?

ಖಂಡಿತಾ ಇಲ್ಲ. ಎಷ್ಟೋ ಪ್ರತಿಭಾವಂತರು ತಮ್ಮ ಊರಿನಿಂದಾಚೆ ಹೋಗಿ ಓದಲೂ ಪರದಾಡುತ್ತಿದ್ದಾರೆ. ಹಣಕಾಸಿನ ಸಮಸ್ಯೆ ಇದಕ್ಕೆ ಕಾರಣ. ಬಹುಶಃ ನಾನು ಸ್ವಲ್ಪ ಹಿಂಜರಿದಿದ್ದರೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲು ಸಾಧ್ಯವೇ ಇರಲಿಲ್ಲ.

* ನಿಮಗೇನು ಸಮಸ್ಯೆಯಾಗಿತ್ತು?

ನಾನು ದೃಶ್ಯಕಲಾ ಮಾಧ್ಯಮವನ್ನು ಆರಿಸಿಕೊಂಡದ್ದು ನನ್ನ ಹೆತ್ತವರಿಗೆ ಬಿಲ್‌ಕುಲ್‌ ಇಷ್ಟವಿರಲಿಲ್ಲ. ಆದರೆ ನನ್ನ ಗುರಿ ಸ್ಪಷ್ಟವಾಗಿತ್ತು. ಅಪ್ಪ ಅಮ್ಮನ ಜತೆ ಜಗಳವಾಯ್ತು. ಮನೆ ಬಿಟ್ಟು ಬಂದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಲಂಡನ್‌ಗೆ ಹೋಗಲು ನಿರ್ಧರಿಸಿದೆ. ಕೈಯಲ್ಲಿ ದುಡ್ಡು ಇರಲಿಲ್ಲ. ಆಗ ಚುನಾವಣೆ ನಡೆದಿತ್ತು. ಪ್ರಚಾರ ಮಾಡಿದ್ರೆ ದುಡ್ಡು ಕೊಡ್ತಾರೆ ಅಂತ ಯಾರೋ ಹೇಳಿದ್ರು. ಜೀವರಾಜ ಆಳ್ವ ಅವರ ಜೊತೆ ಪ್ರಚಾರದಲ್ಲಿ ಪಾಲ್ಗೊಂಡು ಟಿಕೆಟ್‌ಗೆ ಬೇಕಾದಷ್ಟು ಹೊಂದಿಸಿಕೊಂಡೆ. ಬದುಕಿನ ದೊಡ್ಡ ಸವಾಲನ್ನು ಒಂಟಿಯಾಗಿ ಎದುರಿಸಿ ಗೆದ್ದೆ.

* ಈಗ ಅಂತರರಾಷ್ಟ್ರೀಯ ಮಟ್ಟದ ಕಲಾ ಶಿಕ್ಷಕರ ಶಿಬಿರಕ್ಕಾಗಿ ಬೆಂಗಳೂರಿಗೆ ಬಂದಿದ್ದೀರಿ. ಹೇಗನ್ನಿಸುತ್ತದೆ?

ಚಿತ್ರಕಲಾ ಪರಿಷತ್ತಿನಲ್ಲಿ ತರಬೇತುದಾರಳಾಗಿ ಪಾಲ್ಗೊಂಡಿರುವುದು ಸಂತೋಷ ನೀಡುತ್ತಿದೆ. ಈ ಹಿಂದೆಯೂ ಇಲ್ಲಿಗೆ ಅತಿಥಿ ಉಪನ್ಯಾಸಕಿಯಾಗಿ ಬಂದಿದ್ದೆ. ಬೆಂಗಳೂರಿಗೆ ಬರುವುದು ಯಾವಾಗಲೂ ಖುಷಿಯೇ. ಆದರೆ ಇಲ್ಲಿ ಬಂದಾಗಲೆಲ್ಲಾ ಬೆಂಗಳೂರಿನಲ್ಲಿ ಕಾಣುವ ಮೂಲಸೌಕರ್ಯಗಳ ಕೊರತೆ ನನ್ನನ್ನು ಬಹಳ ಕಾಡುತ್ತದೆ. ಬಹುಶಃ ಬಡವರಿಗೆ ಮಾತ್ರ ಈ ಸಮಸ್ಯೆಗಳು ಎದುರಾಗುತ್ತವೆ.

* ಬ್ರಿಟನ್‌ನಲ್ಲಿ ಇಂತಹ ವರ್ಗಬೇಧ ಇಲ್ಲವೇ?

ಇಲ್ಲ ಎಂದಲ್ಲ. ಆದರೆ ಶುದ್ಧ ಕುಡಿಯುವ ನೀರು ಅಲ್ಲಿ ಎಲ್ಲರ ಹಕ್ಕು. ಅದಕ್ಕೆ ಯಾರಿಗೂ ತತ್ವಾರ ಆಗುವುದಿಲ್ಲ. ಆದರೆ ಇಲ್ಲಿ ತುಕ್ಕು ಹಿಡಿದ ನಲ್ಲಿಗಳು, ಅಶುದ್ಧ ನೀರು, ಕಳಪೆ ಮೂಲಸೌಕರ್ಯದಂತಹ ಸಮಸ್ಯೆ ಆರ್ಥಿಕವಾಗಿ ಹಿಂದುಳಿದವರಲ್ಲಿ ಮಾತ್ರ ಕಾಣಬಹುದೇನೋ. ಇದು ಸ್ಥಳೀಯಾಡಳಿತ ಮತ್ತು ಸರ್ಕಾರಗಳ ಸಮಸ್ಯೆ. ಎಲ್ಲರಿಗೂ ಸಮಾನವಾದ ಬದುಕುವ ಹಕ್ಕು ಕಲ್ಪಿಸುವುದು ಸರ್ಕಾರಗಳ ಹೊಣೆಗಾರಿಕೆ ಅಲ್ವೇ?

* ಕಲಾ ಮಾಧ್ಯಮಗಳ ಮೂಲಕ ಸಾಮಾಜಿಕ ಸುಧಾರಣೆ ಸಾಧ್ಯವೇ?

ನನ್ನ ಕಲಾಕೃತಿಗಳ ಮೂಲಕ ಒಂದೇ ಸಲಕ್ಕೆ ಕೋಟಿಗಟ್ಟಲೆ ಜನರನ್ನು ತಲುಪಲು ಸಾಧ್ಯವಾಗದೇ ಇರಬಹುದು. ನಾನು ಮಾಡಿದ ಕಲಾಕೃತಿ ಮತ್ತು ಅದರ ಆಶಯಗಳ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾದಾಗ ಲಕ್ಷಾಂತರ ಜನರು ಓದುತ್ತಾರೆ. ದೃಶ್ಯ ಮಾಧ್ಯಮದ ಮೂಲಕ ಮತ್ತೊಂದಷ್ಟು ಲಕ್ಷ ಜನರು ನೋಡುತ್ತಾರೆ. ಸಾಮಾಜಿಕ ಕಾಳಜಿ ಅಥವಾ ಹೊಣೆಗಾರಿಕೆ ಎಂಬುದು ಜನರಿಂದ ಜನರಿಗೆ ದಾಟುತ್ತಾ ಹೋದಂತೆ ಬದಲಾವಣೆ ತನ್ನಿಂತಾನೇ ಆಗುತ್ತದೆ.

* ಆ ದೇಶದಲ್ಲಿ ಬಡವರ ಬಗ್ಗೆ ಶ್ರೀಮಂತರ ಕಾಳಜಿ ಹೇಗಿದೆ?

ತಮಗೆ ಬೇಕಾದಷ್ಟನ್ನು ಉಳಿಸಿಕೊಂಡು ಮಿಕ್ಕಿದ್ದನ್ನು ಅವಕಾಶ ವಂಚಿತರಿಗಾಗಿ ಹಂಚಲು ಅಲ್ಲಿನ ಜನ ಹಿಂಜರಿಯುವುದಿಲ್ಲ. ಸಮಾನ ಬದುಕುವ ಹಕ್ಕುಗಳ ಪಾಲನೆ ತಮ್ಮ ಕರ್ತವ್ಯ ಎಂದು ಪ್ರತಿಯೊಬ್ಬರೂ ಭಾವಿಸುತ್ತಾರೆ. ನಾನೂ ಸೇರಿದಂತೆ ನಮ್ಮ ಕಾಲೇಜಿನ ಶಿಕ್ಷಕರಷ್ಟೇ ಅಲ್ಲ, ವಿದ್ಯಾರ್ಥಿಗಳೂ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ನಮಗೆ ನಾವು ಮಿತಿ ಹಾಕಿಕೊಂಡರೆ ನಮ್ಮೊಳಗಿನ ಮನುಷ್ಯತ್ವ ತೆರೆದುಕೊಳ್ಳುತ್ತದೆ. ಅಲ್ಲಿ ಆಗುತ್ತಿರೋದೂ ಅದೇ.

* ತುಕ್ಕು ಹಿಡಿದ ನಲ್ಲಿಯ ಮೂಲಕ ಏನು ಹೇಳಹೊರಟಿದ್ದೀರಿ?

ತುಕ್ಕು ಹಿಡಿದ ನಲ್ಲಿ, ಭಾರತ ಮತ್ತು ವಿಶೇಷವಾಗಿ ಬೆಂಗಳೂರಿನಲ್ಲಿ ನಾನು ಕಂಡ ನೀರಿನ ಸಮಸ್ಯೆಯ ದ್ಯೋತಕ. ಕಳೆದ ಸಲ ಬಂದಾಗ, ಅಶುದ್ಧ ನೀರು ಕುಡಿದು ಯಾರೋ ಅಸ್ವಸ್ಥರಾದ ಸುದ್ದಿ ತಿಳಿಯಿತು. ಶುದ್ಧವಾದ ಕುಡಿಯುವ ನೀರಿಗೂ ತತ್ವಾರ ಎಂದರೆ ಏನರ್ಥ? ನಮಗೆ ಲಂಡನ್‌ನಲ್ಲಿ 24 ಗಂಟೆ ಶುದ್ಧ ನೀರಿನ ಪೂರೈಕೆ ಇರುತ್ತದೆ. ಶೌಚಾಲಯದ ನೀರು ಕೂಡಾ ಕುಡಿಯಲು ಯೋಗ್ಯವಾಗಿರುತ್ತದೆ. ಆದರೆ ಭಾರತದಲ್ಲಿನ ನೀರಿನ ಸಮಸ್ಯೆಯನ್ನು ತಿಳಿದಾಗ ಸಂಕಟವಾಗುತ್ತದೆ. ಅದಕ್ಕೆ ತುಕ್ಕು ಹಿಡಿದ ನಲ್ಲಿ, ಬತ್ತಿದ ನಲ್ಲಿಗಳನ್ನು ಬೇರೆ ಬೇರೆ ಪ್ರಕಾರಗಳಲ್ಲಿ ಚಿತ್ರಿಸಿದ್ದೇನೆ. ನಲ್ಲಿಯಲ್ಲೇ ಸಾಮಾಜಿಕ ಬದುಕಿನ ಚಿತ್ರಣವನ್ನೂ ಬಿಂಬಿಸಿದ್ದೇನೆ.

ಪ್ರತಿಕ್ರಿಯಿಸಿ (+)