ಶುಕ್ರವಾರ, ಡಿಸೆಂಬರ್ 6, 2019
25 °C
ಭಾರತ–ದಕ್ಷಿಣ ಆಫ್ರಿಕಾ ಏಕದಿನ ಕ್ರಿಕೆಟ್‌ ಸರಣಿ

ಮೊದಲ ಏಕದಿನ ಪಂದ್ಯ: ಆಫ್ರಿಕಾ ನಾಯಕ ಫ್ಲೆಸಿ ಶತಕದಾಟ, ಕೊಹ್ಲಿ ಪಡೆಗೆ 270ರನ್‌ ಗುರಿ

Published:
Updated:
ಮೊದಲ ಏಕದಿನ ಪಂದ್ಯ: ಆಫ್ರಿಕಾ ನಾಯಕ ಫ್ಲೆಸಿ ಶತಕದಾಟ, ಕೊಹ್ಲಿ ಪಡೆಗೆ 270ರನ್‌ ಗುರಿ

ಡರ್ಬನ್‌: ಇಲ್ಲಿನ ಕಿಂಗ್ಸ್‌ ಮೇಡ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಭಾರತ ತಂಡಕ್ಕೆ 270 ರನ್‌ಗಳ ಗೆಲುವಿನ ಗುರಿ ನೀಡಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಫಾಫ್‌ ಡು ಫ್ಲೆಸಿ ಪಡೆ ಭಾರತ ಬೌಲರ್‌ಗಳ ಸಂಘಟಿತ ದಾಳಿ ಎದುರು ಸವಾಲಿನ ಮೊತ್ತ ಕಲೆ ಹಾಕಿತು. ತಂಡದ ಮೊತ್ತ 30 ಆಗಿದ್ದಾಗ ಅನುಭವಿ ಆಟಗಾರ ಹಾಶೀಂ ಆಮ್ಲಾ(16) ‍ಪೆವಿಲಿಯನ್ ಸೇರಿಕೊಂಡರು. ಈ ವೇಳೆ ಕ್ರೀಸ್‌ಗಿಳಿದ ನಾಯಕ ಫ್ಲೆಸಿ ಜವಾಬ್ದಾರಿಯುತ ಪ್ರದರ್ಶನ ನೀಡಿದರು.

ಎರಡನೇ ವಿಕೆಟ್‌ಗೆ ಕ್ವಿಂಟಾನ್‌ ಡಿ ಕಾಕ್‌ ಜತೆ 53 ರನ್‌ ಸೇರಿಸಿದ ಫ್ಲೆಸಿ ಶತಕದಾಟವಾಡಿದರು.

34 ರನ್‌ ಗಳಿಸಿ ತಾಳ್ಮೆಯಿಂದ ಆಡುತ್ತಿದ್ದ ಡಿ ಕಾಕ್‌ ಅವರನ್ನು ಯಜುವೇಂದ್ರ ಚಹಾಲ್‌ ಎಲ್‌ಬಿ ಬಲೆಗೆ ಕೆಡವಿದರು. ಬಳಿಕ ಬಂದ ಏಡನ್ ಮರ್ಕರಮ್‌(9), ಜೆ.ಪಿ.ಡುಮಿನಿ(16) ಹಾಗೂ ಡೇವಿಡ್‌ ಮಿಲ್ಲರ್‌(7) ಹೆಚ್ಚು ಹೊತ್ತು ನಿಲ್ಲಲಿಲ್ಲ.

ಬಳಿಕ ಬಂದ ಆಲ್‌ರೌಂಡರ್‌ ಕ್ರಿಸ್ ಮಾರಿಸ್‌ ನಾಯಕನ ಜತೆ ಸೇರಿ 37ರನ್‌ಗಳ ಉಪಯುಕ್ತ ಕಾಣಿಕೆ ನೀಡಿದರು. ಕೊನೆಯ ಓವರ್‌ ವರೆಗೂ ಬ್ಯಾಟ್‌ ಬೀಸಿದ ಫ್ಲೆಸಿ 112 ಎಸೆತಗಳಲ್ಲಿ 120ರನ್‌ ಗಳಿಸಿ ಮಿಂಚಿದರು.

ಅಂತಿಮವಾಗಿ ಆಫ್ರಿಕಾ ತಂಡ ನಿಗದಿತ 50 ಓವರ್‌ಗಳಲ್ಲಿ 8ವಿಕೆಟ್‌ ಕಳೆದುಕೊಂಡು 269 ರನ್‌ ಕಲೆ ಹಾಕಿತು.

ಉತ್ತಮವಾಗಿ ಬೌಲಿಂಗ್‌ ಮಾಡಿದ ಚೈನಾಮನ್‌ ಖ್ಯಾತಿಯ ಕುಲದೀಪ್‌ ಯಾದವ್‌ ಹಾಗೂ ಯಜುವೇಂದ್ರ ಚಹಾಲ್‌ ಕ್ರಮವಾಗಿ 3 ಮತ್ತು 2 ವಿಕೆಟ್‌ ಪಡೆದರು. ಉಳಿದಂತೆ ವೇಗಿ ಜಸ್‌ಪ್ರೀತ್‌ ಬೂಮ್ರಾ ಮತ್ತು ಭುವನೇಶ್ವರ್‌ ಕುಮಾರ್‌ ತಲಾ 1 ವಿಕೆಟ್‌ ಉರುಳಿಸಿದರು.

ಪ್ರತಿಕ್ರಿಯಿಸಿ (+)