ಸಂವಿಧಾನ: ಅಸಹನೆ ಏಕೆ?

7

ಸಂವಿಧಾನ: ಅಸಹನೆ ಏಕೆ?

Published:
Updated:

ಸಂವಿಧಾನ ಕುರಿತಾದ ಹಲವು ಹೇಳಿಕೆಗಳು ಇತ್ತೀಚೆಗೆ ದೇಶದಲ್ಲಿ ತಲ್ಲಣ ಉಂಟುಮಾಡಿದವು. ‘ನಾವು ಬಂದಿರುವುದೇ ಸಂವಿಧಾನ ಬದಲಾಯಿಸಲಿಕ್ಕೆ’ ಎನ್ನುವುದರಿಂದ ಹಿಡಿದು ‘ಅಂಬೇಡ್ಕರ್‌ ಅವರೊಬ್ಬರೇ ಸಂವಿಧಾನ ರಚಿಸಲಿಲ್ಲ’ ಎನ್ನುವವರೆಗೆ ಇದು ವಿಸ್ತಾರ ಪಡೆದುಕೊಂಡಿತು. ಮೀಸಲಾತಿಯ ಚರ್ಚೆ ದೇಶದೆಲ್ಲೆಡೆ ಹಬ್ಬಿರುವಾಗ ‘ಸಂವಿಧಾನ ಬದಲಾಯಿಸುತ್ತೇವೆ’ ಎನ್ನುವ ಮಾತು ಅದಕ್ಕೆ ತುಪ್ಪ ಸುರಿದಂತೆ ಹೊರಬಂದಿತು. ಇದು ಹಲವರ ನಡುವೆ ಅಂತರ ಮತ್ತು ಭಿನ್ನಾಭಿಪ್ರಾಯವನ್ನೂ ಸೃಷ್ಟಿಸಿತು. ಮತ್ತೊಂದು ಕಡೆ ರಾಜಕೀಯ ದಾಳವಾಗಿಯೂ ಪರಿಣಮಿಸಿ ವಾದ–ವಿವಾದಗಳ ಹುತ್ತಗಳು ಇದರ ಸುತ್ತ ಬೆಳೆದುಕೊಂಡವು.

ಇದೆಲ್ಲದರ ನಡುವೆ ಸಂವಿಧಾನವನ್ನು ಈ ದೇಶದ ಕೆಲವರು ಒಪ್ಪಲಿಕ್ಕೆ ಇರುವ ಅಡೆತಡೆಗಳು ಯಾವುವು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇಲ್ಲಿನ ಜಾತಿ ಮತ್ತು ಜಾತಿಗ್ರಸ್ತ ಮನಸ್ಸುಗಳು ಸಂವಿಧಾನವಿರೋಧಿ ನೆಲೆಯಲ್ಲಿ ನಿಂತಿವೆ. ಸಮಸಮಾಜ ತತ್ವದ ಬುನಾದಿ ಮೇಲೆ ನಿಂತಿರುವ ಈ ಸಂವಿಧಾನ ಇವರಿಗೆ ಬೇಕಿಲ್ಲ. ಅಸಮಾನತೆಯ ನೆರಳಲ್ಲಿ ಮೇಲು– ಕೀಳು ಭಾವನೆ ತುಂಬಿದ ಜಾತಿ ಕೂಪದ ಭಾರತವೇ ಇವರಿಗೆ ಅಪ್ಯಾಯಮಾನ. ಏಕೆಂದರೆ ನಿರಂತರವಾಗಿ ಇವರು ಆ ಮೂಲಕ ಆಳುವ ವರ್ಗವಾಗಿರಲು ಸಾಧ್ಯ. ಇವರ ಕನಸನ್ನು ಸಮಾನತೆಯ ತತ್ವ ನುಚ್ಚು ನೂರು ಮಾಡಿಬಿಡುತ್ತದೆ. ಅದಕ್ಕೇ ಅವರಿಗೆ ಈಗಿನ ಸಂವಿಧಾನ ಕಂಡರೆ ನಿರ್ಲಕ್ಷ್ಯ.

ಡಾ. ಬಿ.ಆರ್. ಅಂಬೇಡ್ಕರ್ ಅವರು 1949ರ ನವೆಂಬರ್‌ 25ರಂದು ಸಂವಿಧಾನ ಸಭೆಯಲ್ಲಿ ಸುದೀರ್ಘ ಭಾಷಣ ಮಾಡಿದರು. ಅದರಲ್ಲಿ ಅವರು ಎತ್ತಿದ ಆತಂಕದ ಮಾತುಗಳು ಇನ್ನೂ ಜೀವಂತವಾಗಿರುವುದು ಅಪಾಯಕಾರಿ ಬೆಳವಣಿಗೆಯಂತೆ ಕಾಣುತ್ತಿದೆ. ‘ರಾಜಕೀಯ ಕ್ಷೇತ್ರದಲ್ಲಿ ಭಕ್ತಿ ಅಥವಾ ವ್ಯಕ್ತಿಪೂಜೆಯು ಖಂಡಿತವಾಗಿಯೂ ಅವನತಿಗೆ ಮತ್ತು ನಿರಂಕುಶಪ್ರಭುತ್ವದ ಉದಯಕ್ಕೆ ಕಾರಣವಾಗುತ್ತದೆ’ ಎಂದಿದ್ದರು. ಈ ಮಾತು ಇವತ್ತಿಗೆ ಎಷ್ಟು ಪ್ರಸ್ತುತವಾಗಿದೆ ಎಂಬುದನ್ನು ಪ್ರಚಲಿತ ಘಟನೆಗಳಿಂದಲೇ ತಿಳಿದುಕೊಳ್ಳಬಹುದಾಗಿದೆ.

ಸುದೀರ್ಘ ಚರ್ಚೆ, ವಾಗ್ವಾದ, ಸಂವಾದಗಳ ಮೂಲಕವೇ ನಮ್ಮ ಸಂವಿಧಾನ ರೂಪುಗೊಂಡಿದೆ. ಆದರೆ ಅಸಮಾಧಾನದ ಮನಸ್ಸುಗಳು ಮಾತ್ರ ಅಂದಿನಿಂದಲೂ ಕೊಂಕು ನುಡಿಯುತ್ತಲೇ ಬರುತ್ತಿವೆ. ಮೂಲಭೂತ ಹಕ್ಕುಗಳನ್ನು, ಸಂಸದೀಯ ವ್ಯವಹಾರಗಳಿಗೆ ಸಂಬಂಧಿಸಿದ ನಿಯಮಗಳನ್ನು, ಕೆಲವು ರಾಜ್ಯನೀತಿ ತತ್ವಗಳನ್ನು ಬೇರೊಂದು ದೇಶದಿಂದ ಎಗರಿಸಲಾಗಿದೆ ಎನ್ನುವಂತೆ ಈಗಲೂ ಬರೆಯುತ್ತಿದ್ದಾರೆ ಮತ್ತು ಮಾತನಾಡುತ್ತಿದ್ದಾರೆ.

ಈಗ ಸಂವಿಧಾನಕ್ಕೆ 68 ವರ್ಷ. ಇಷ್ಟು ವರ್ಷಗಳಲ್ಲಿ ಸಂವಿಧಾನ ಇದ್ದಂತೆಯೇ ಇಲ್ಲಿಯವರೆಗೆ ಜಾರಿಗೊಂಡಿದೆಯೇ ಎಂಬುದನ್ನು ಮೊದಲು ನಾವು ಕೇಳಿಕೊಳ್ಳಬೇಕಿದೆ. ಆದರೆ ಕೆಲವರ ಮನಸ್ಥಿತಿ ಇಂತಹ ಪ್ರಶ್ನೆಗಳಿಗೆ ಮುಖಾಮುಖಿಯಾಗುತ್ತಿಲ್ಲ. ಪರಂಪರೆಯ ಬೆಳಕಿನಲ್ಲಿ ಸಂವಿಧಾನ ರೂಪುಗೊಳ್ಳಲಿಲ್ಲ ಎನ್ನುವ ಅಸಹನೆ ಮಾತ್ರ ಇವರಲ್ಲಿ ತುಳುಕುತ್ತಿದೆ. ಇದರ ವಿನಾ ತಾರತಮ್ಯವೇ ಮೂಲನೆಲೆಯಾಗಿ ನಿಂತಿರುವ ಈ ದೇಶದಲ್ಲಿ ಸಂವಿಧಾನದ 15ನೇ ಅನುಚ್ಛೇದ ಹೇಳುವ ‘ಧರ್ಮ, ಜಾತಿ, ಲಿಂಗ ಅಥವಾ ಜನ್ಮಸ್ಥಳದ ಆಧಾರದ ಮೇಲೆ ತಾರತಮ್ಯ ಮಾಡುವ ಹಾಗಿಲ್ಲ’ ಮತ್ತು 17ರ ಪ್ರಕಾರ ‘ಅಸ್ಪೃಶ್ಯತೆಯನ್ನು ನಿಷೇಧ ಮಾಡಲಾಗಿದೆ’. ಇಂತಹ ಮಹತ್ವದ ಎರಡು ಸಂಗತಿಗಳಾದರೂ ಕಡ್ಡಾಯವಾಗಿ ಜಾರಿಯಾಗಬೇಕು ಎಂಬುದರ ಕಡೆ ಇವರು ಒತ್ತು ನೀಡಬಹುದಿತ್ತು. ಏಕೆಂದರೆ ಇಲ್ಲಿನ ಜಾತಿಯೇ ಇಂದು ದೇಶದ್ರೋಹದ ಸಂಗತಿಯಾಗಿ ಪರಿಣಮಿಸಿದೆ. ಇದು ತೊಲಗಬೇಕು ಎನ್ನುವ ಕೂಗು ಇವರಲ್ಲಿಲ್ಲ. ಆದರೂ ಇವರಿಗೆ ಸಂವಿಧಾನ ಬದಲಾಗಬೇಕು!

ಅಂಬೇಡ್ಕರ್ ಈ ದೇಶದ ನಾಡಿಮಿಡಿತವನ್ನು ಹಿಡಿದು ಅಂದೇ ನುಡಿದಿದ್ದರು. ‘1950ರ ಜನವರಿ 26ರಂದು ನಾವು ವೈರುಧ್ಯಗಳಿಂದ ಕೂಡಿದ ಬದುಕಿಗೆ ಪ್ರವೇಶಿಸುತ್ತಿದ್ದೇವೆ. ರಾಜಕೀಯದಲ್ಲಿ ನಾವು ಸಮಾನತೆಯನ್ನು ಪಡೆದಿರುತ್ತೇವೆ. ಆದರೆ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಅಸಮಾನತೆ ಮುಂದುವರೆದಿರುತ್ತದೆ. ರಾಜಕೀಯದಲ್ಲಿ ಒಬ್ಬರಿಗೆ ಒಂದು ವೋಟು ಮತ್ತು ಒಂದು ವೋಟಿಗೆ ಒಂದು ಮೌಲ್ಯವನ್ನು ಪರಿಗಣಿಸಿರುತ್ತೇವೆ. ಆದರೆ ನಮ್ಮ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಒಬ್ಬ ಮನುಷ್ಯನಿಗೆ ಒಂದು ಮೌಲ್ಯವೆಂಬ ತತ್ವವನ್ನು ನಿರಾಕರಿಸುತ್ತಿರುತ್ತೇವೆ. ಈ ವೈರುಧ್ಯಗಳಿಂದ ಕೂಡಿದ ಸಾಮಾಜಿಕ ಬದುಕನ್ನು ಎಷ್ಟು ಕಾಲ ಮುಂದುವರಿಸಲು ಸಾಧ್ಯ? ಎಷ್ಟು ಕಾಲ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಸಮಾನತೆಯನ್ನು ನಿರಾಕರಿಸಲು ಸಾಧ್ಯ? ಇನ್ನೂ ಇದೇ ಬಗೆಯ ನಿರಾಕರಣೆಯನ್ನು ಮುಂದುವರೆಸುತ್ತಾ ಹೋದರೆ ನಮ್ಮ ರಾಜಕೀಯ ಪ್ರಜಾಸತ್ತೆಗೆ ಆಪತ್ತು ಬರುತ್ತದೆ. ನಾವು ಆದಷ್ಟು ಬೇಗ ಈ ವೈರುಧ್ಯಗಳನ್ನು ನಿರ್ಮೂಲನೆ ಮಾಡಬೇಕು. ಇಲ್ಲದಿದ್ದರೆ ಅಸಮಾನತೆಯಿಂದ ನೊಂದ ಜನ ನಾವು ಕಷ್ಟಪಟ್ಟು ಕಟ್ಟಿರುವ ರಾಜಕೀಯ ಪ್ರಜಾಸತ್ತೆಯ ರಚನೆಯನ್ನೇ ಸ್ಫೋಟ ಮಾಡುತ್ತಾರೆ’ ಎಂದು ಎಚ್ಚರಿಸಿದ್ದರು. ಇಂದು ಬಿಕ್ಕಟ್ಟಿಗೆ ಒಳಗಾಗಿರುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ಮಾತುಗಳು ಪದೇ ಪದೇ ನೆನಪಿಗೆ ಬರುತ್ತಿವೆ.

ಇಲ್ಲಿ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ನಿರಂತರವಾಗಿ ತಾಂಡವವಾಡುತ್ತಿವೆ. ಇವುಗಳನ್ನು ನಾಶಮಾಡದ ಹೊರತು ಈ ದೇಶದ ಪ್ರಜಾಪ್ರಭುತ್ವಕ್ಕೆ ಅರ್ಥವೇ ಇಲ್ಲ. ಹೀಗಿರುವಾಗ ಇಂತಹ ಅಸಮಾನತೆಗಳ ವಿರುದ್ಧ ಧ್ವನಿ ಎತ್ತಬೇಕಿರುವ ಮನಸ್ಸುಗಳು ಸಂವಿಧಾನ ಬದಲಾವಣೆಯ ಕಡೆ ನೆಟ್ಟಿವೆ. ಸಂವಿಧಾನ ಆಮೂಲಾಗ್ರವಾಗಿ ಜಾರಿಯಾಗಿ ಅದು ತನ್ನ ಅಸ್ತಿತ್ವವನ್ನು ಕಾಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಲಾಗದಿದ್ದರೆ ಜನಪರವಾದ ತಿದ್ದುಪಡಿಯನ್ನು ತರುವುದು ಅನಿವಾರ್ಯ. ಆದರೆ ಸಂವಿಧಾನದ ಆಶಯವೇ ಅಕ್ಷರಶಃ ಜಾರಿಯಾಗಿಲ್ಲ. ಹೀಗಿರುವಾಗ ಜನಪರವಾದ ಸಂವಿಧಾನವನ್ನೇ ಬದಲಾಯಿಸುವ ಮಾತು ಎಷ್ಟು ಮಟ್ಟಿನ ಗೌರವದ್ದು?

ಈ ದೇಶದಲ್ಲಿ ಎಲ್ಲರಿಗೂ ಶ್ರೇಷ್ಠ ಗ್ರಂಥವೊಂದು ಇರುವುದಾದರೆ ಅದು ಸಂವಿಧಾನ ಮಾತ್ರ ಆಗಿರಬೇಕು. ಏಕೆಂದರೆ ಜಾತಿ, ಮತ, ಪಂಗಡಗಳ ನಡುವೆ ನರಳುತ್ತಿರುವ ಈ ದೇಶದಲ್ಲಿ ‘ನಾವು ಭಾರತೀಯರು’ ಎಂಬ ಭಾವನೆಗೆ ಸದಾ ಧಕ್ಕೆ ಒದಗುತ್ತಲೇ ಬಂದಿದೆ. ಏಕತೆಯ ಶಕ್ತಿಗೆ ಭಂಗ ಉಂಟಾಗುತ್ತಲೇ ಇದೆ.ಇದರಿಂದ ದೇಶವು ಮಾನವ ಅಭಿವೃದ್ಧಿಯಲ್ಲಿ ಹಿಂದೆ ಹೋಗುತ್ತಿದೆ. ಇದನ್ನೆಲ್ಲ ಮನಗಂಡೇ ಅಂಬೇಡ್ಕರ್ ಅವರು ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದ ನೆಲೆಯಲ್ಲಿ ಸಂವಿಧಾನವನ್ನು ಕಟ್ಟಿಕೊಟ್ಟರು.

ದೇಶದಲ್ಲಿ ದಲಿತರ ಕೊಲೆಗಳು, ಮಹಿಳೆಯರ ಮೇಲಿನ ಅತ್ಯಾಚಾರಗಳು, ಎಗ್ಗಿಲ್ಲದೆ ನಡೆಯುತ್ತಿರುವ ಭ್ರಷ್ಟಾಚಾರ,ರಾಜಕೀಯ ಪಿತೂರಿಯಂಥ ಅಂಶಗಳು ಸಂವಿಧಾನದ ಮೂಲಭೂತ ಆಶಯಕ್ಕೆ ಕೊಡಲಿ ಕಾವಾಗಿ ಪರಿಣಮಿಸಿವೆ. ಈ ಕಳೆಯನ್ನು ನಾಶ ಮಾಡಿದರೆ ಮಾತ್ರ ಪ್ರಜಾಪ್ರಭುತ್ವ ಉಳಿಯಲು ಸಾಧ್ಯ; ಸಂವಿಧಾನ ಆಶಿಸುವ ಮಾನವನ ಘನತೆಯನ್ನು ಕಾಪಾಡಲು ಸಾಧ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry