ಸರ್ಕಾರವೇ ಬಾಕಿದಾರ

7

ಸರ್ಕಾರವೇ ಬಾಕಿದಾರ

Published:
Updated:

ಸರ್ಕಾರಿ ನೌಕರರ ವೇತನ ಹೆಚ್ಚಿಸಿ, 2018ರ ಏಪ್ರಿಲ್ 1 ರಿಂದಲೇ ಅನುಷ್ಠಾನಗೊಳಿಸಬೇಕು ಎಂದು ಆರನೇ ವೇತನ ಆಯೋಗದ ವರದಿ ಶಿಫಾರಸು ಮಾಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ, ‘ಮುಂದಿನ ವಾರ ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದಿದ್ದಾರೆ. ಈ ತೀರ್ಮಾನ ನೌಕರರ ಅಪೇಕ್ಷೆಗೆ ತಕ್ಕಂತೆ ಇರುತ್ತದೆ.

ರಾಜ್ಯ ರೈತ ಸಂಘವು ಬುಧವಾರ (ಜ.31) ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಭೆ ಸೇರಿ, ‘ನಮ್ಮ ಅಹವಾಲನ್ನು ಯಾವ ಸರ್ಕಾರವೂ ಕೇಳುತ್ತಿಲ್ಲ, ಕೇಂದ್ರಕ್ಕೆ ಉದ್ಯಮಿಗಳ ಚಿಂತೆ; ರಾಜ್ಯಕ್ಕೆ ಹೊಸ್ತಿಲಿಗೆ ಬಂದಿರುವ ಚುನಾವಣೆಯ ಚಿಂತೆ. ರೈತ ಬೆಳೆದುದಕ್ಕೆ ನ್ಯಾಯಯುತ ಬೆಲೆ ಕೊಡಿ ಎಂದರೆ, ಸರ್ಕಾರಗಳು ಕಿವುಡಾಗಿವೆ. ದೊಡ್ಡ ದೊಡ್ಡ ಕಂಪನಿಗಳ ಸಾಲ ಮನ್ನಾ ಮಾಡುವ ಕೇಂದ್ರ ಸರ್ಕಾರವು ರೈತರ ಬಗ್ಗೆ ಕಿಂಚಿತ್ತೂ ಚಿಂತೆ ಮಾಡುತ್ತಿಲ್ಲ. ಕೃಷಿ ಉತ್ಪನ್ನಗಳ ಬೆಲೆ ಇಳಿಯುತ್ತಲೇ ಹೋಗುತ್ತದೆ. ಸಾಲ ಮಾಡಿದ ರೈತ ಕಡೆಗೆ ಆತ್ಮಹತ್ಯೆಯ ದಾರಿ ಹಿಡಿಯುತ್ತಾನೆ’ ಎಂದು ಅಳಲು ತೋಡಿಕೊಂಡಿದ್ದಾರೆ.

ಒಂದು ಕ್ವಿಂಟಲ್ ರಾಗಿಗೆ ಈಗ ಬೆಂಬಲ ಬೆಲೆ ₹ 2,300 ಇದೆ. ಆದರೆ 1 ಕ್ವಿಂಟಲ್ ರಾಗಿ ಬೆಳೆಯಲು ರೈತನಿಗೆ ₹ 3,349 ಖರ್ಚಾಗುತ್ತದೆ. ಇದರಲ್ಲಿ ₹ 2,300 ಕಳೆದರೆ ರೈತನಿಗೆ ಸರ್ಕಾರ ಇನ್ನೂ ₹ 1,049 ಕೊಡಬೇಕಾಗುತ್ತದೆ. ಇದು ಎಲ್ಲಾ ಬೆಳೆಗಳಿಗೂ ಅನ್ವಯವಾಗುತ್ತದೆ. ಆದ್ದರಿಂದ ವಾಸ್ತವದಲ್ಲಿ ರೈತ ಸಾಲಗಾರನಲ್ಲ; ಸರ್ಕಾರವೇ ಸಾಲಗಾರ. ರೈತರ ಸ್ಥಿತಿ ಹೀಗಿರುವಾಗ, ಅಣ್ಣಾ ಹಜಾರೆಯವರು ಸಲಹೆ ಮಾಡಿರುವಂತೆ ಈ ಸರ್ಕಾರಗಳು 60 ತುಂಬಿದ ರೈತನಿಗೆ ತಿಂಗಳಿಗೆ ₹ 5,000 ಪಿಂಚಣಿ ನೀಡುವುದುಂಟೇ?

ಪ್ರೊ. ಶಿವರಾಮಯ್ಯ, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry