ಶುಕ್ರವಾರ, ಡಿಸೆಂಬರ್ 6, 2019
26 °C

ಕ್ವಾರ್ಟರ್‌ಫೈನಲ್‌ಗೆ ಸಿಂಧು, ಕಶ್ಯಪ್‌

Published:
Updated:
ಕ್ವಾರ್ಟರ್‌ಫೈನಲ್‌ಗೆ ಸಿಂಧು, ಕಶ್ಯಪ್‌

ನವದೆಹಲಿ : ಭಾರತದ ಪಿ.ವಿ ಸಿಂಧು, ಪರುಪಳ್ಳಿ ಕಶ್ಯಪ್‌ ಹಾಗೂ ಸಮೀರ್ ವರ್ಮಾ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಗುರುವಾರ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ್ದಾರೆ.

ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರೀ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸಿಂಧು 21–10, 21–14ರಲ್ಲಿ ನೇರ ಗೇಮ್‌ಗಳಿಂದ ಬಲ್ಗೇರಿಯಾದ ಜೆಟ್‌ಚೆರಿ ಲಿಂಡಾ ಅವರನ್ನು ಮಣಿಸಿದರು.

ಬಿಡಬ್ಲ್ಯುಎಫ್‌ ರ‍್ಯಾಂಕಿಂಗ್‌ನಲ್ಲಿ 40ನೇ ಸ್ಥಾನದಲ್ಲಿರುವ ಲಿಂಡಾ ಮೊದಲ ಗೇಮ್‌ನಲ್ಲಿ ಸಿಂಧುಗೆ ಪೈಪೋಟಿ ನೀಡಲು ಸಾಧ್ಯವಾಗದೆ ತೀವ್ರ ಹಿನ್ನಡೆ ಅನುಭವಿಸಿದರು. ಆದರೆ ಎರಡನೇ ಗೇಮ್‌ನಲ್ಲಿ ಚೇತರಿಸಿಕೊಂಡು ಪೈಪೋಟಿ ನಡೆಸಿದರು. ಆದರೆ ಸಿಂಧು ತಮ್ಮ ಎಂದಿನ ಆಟದ ಮೂಲಕ ಗಮನಸೆಳೆದರು.

ಕಶ್ಯಪ್‌, ಸಮೀರ್‌ಗೆ ಜಯ: ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕಶ್ಯಪ್‌ 21–19, 19–21, 21–12ರಲ್ಲಿ ಶ್ರೇಯಾಂಶ್ ಜೈಸ್ವಾಲ್‌ಗೆ ಸೋಲುಣಿಸಿದರು. ಗಾಯದಿಂದ ಚೇತರಿಸಿಕೊಂಡು ಕಣಕ್ಕಿಳಿದಿರುವ ಸಮೀರ್‌ 21–18, 19–21, 21–17ರಲ್ಲಿ ಇಂಡೊನೇಷ್ಯಾದ ಟಾಮಿ ಸುಗರ್ತೊ ಎದುರು ಜಯಭೇರಿ ದಾಖಲಿಸಿದರು.

ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಭಾರತದ ಸಾತ್ವಿಕ್ ಸಾಯಿರಾಜ್ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ 21–16, 15–21, 23–21ರಲ್ಲಿ ಮೂರನೇ ಶ್ರೇಯಾಂಕದ ಮಲೇಷ್ಯಾದ ಜೋಡಿ ತನ್‌ ಕಿಯಾನ್‌ ಮೆಂಗ್ ಮತ್ತು ಲೈ ಪೆಯಿ ಜಿಂಗ್ ಅವರನ್ನು ಮಣಿಸಿತು.

ಪ್ರಣವ್ ಜೆರಿ ಚೋಪ್ರಾ ಹಾಗೂ ಎನ್‌.ಸಿಕ್ಕಿ ರೆಡ್ಡಿ ಜೋಡಿ 21–10, 21–19ರಲ್ಲಿ ಮಲೇಷ್ಯಾದ ಯೋಗೇಂದ್ರನ್‌ ಕೃಷ್ಣನ್ ಮತ್ತು ಭಾರತದ ಪ್ರಜಕ್ತಾ ಸಾವಂತ್‌ ಜೋಡಿಯನ್ನು ಮಣಿಸಿ ಕ್ವಾರ್ಟರ್‌ಗೆ ಲಗ್ಗೆಯಿಟ್ಟಿತು.

ಮನು ಅತ್ರಿ ಮತ್ತು ಬಿ.ಸುಮೀತ್ ರೆಡ್ಡಿ ಜೋಡಿ 21–11, 21–15ರಲ್ಲಿ ತುಷಾರ್ ಶರ್ಮಾ ಹಾಗೂ ಚಂದ್ರಭೂಷಣ್ ವಿರುದ್ಧ ಗೆದ್ದಿತು.

ಪ್ರತಿಕ್ರಿಯಿಸಿ (+)