ಶುಕ್ರವಾರ, ಡಿಸೆಂಬರ್ 6, 2019
25 °C

‘ಪ್ರತಿ ವರ್ಷ ಹೊಸ ಸವಾಲು’

Published:
Updated:
‘ಪ್ರತಿ ವರ್ಷ ಹೊಸ ಸವಾಲು’

ಬೆಂಗಳೂರು: ‘ಡಕಾರ್ ರ‍್ಯಾಲಿ ಅತ್ಯಂತ ಕಠಿಣ ಹಾದಿಯ ಪಯಣ. ಮೂರು ದೇಶಗಳ ವ್ಯಾಪ್ತಿಯಲ್ಲಿ ಹವಾಮಾನ ಮತ್ತು ಭೌಗೋಳಿಕ ವೈಪರಿತ್ಯಗಳನ್ನು ಅನುಭವಿಸುತ್ತಲೇ ಬೈಕ್ ಚಾಲನೆ ಮಾಡಿದ್ದು ರೋಮಾಂಚಕಾರಿ ಅನುಭವ. ಇದೆಲ್ಲದರ ಜೊತೆಗೆ ನನ್ನ ಕೈಕಾಲುಗಳನ್ನು ಸುರಕ್ಷಿತವಾಗಿ ಇಟ್ಟುಕೊಂಡು ಬಂದಿದ್ದು ಕೂಡ ದೊಡ್ಡ ಸಾಧನೆ’

ವಿಶ್ವದ ಅತ್ಯಂತ ಕಠಿಣ ಸ್ಪೋರ್ಟ್ಸ್‌ ರ‍್ಯಾಲಿಯಲ್ಲಿ 35 ನೇ ಸ್ಥಾನ ಪಡೆದು ಮರಳಿರುವ ದ್ವಿಚಕ್ರ ವಾಹನ ರೇಸ್ ಪಟು ಸಿ.ಎಸ್. ಸಂತೋಷ್ ಅವರ ಮಾತುಗಳಿವು.

14 ದಿನ ಪೆರು, ಅರ್ಜೆಂಟೀನಾ ಮತ್ತು ಬೊಲಿವಿಯಾ ದೇಶಗಳ ಒಂಬತ್ತು ಸಾವಿರ ಕಿಲೋಮೀಟರ್ಸ್ ದೂರದ ಆಫ್‌ರೋಡ್  ರ‍್ಯಾಲಿಯ ಗುರಿ ಮುಟ್ಟಿ ಮರಳಿದ್ದಾರೆ.  ನಾಲ್ಕು ವರ್ಷಗಳಿಂದ ಡಕಾರ್ ರ‍್ಯಾಲಿಯಲ್ಲಿ ಸ್ಪರ್ಧಿಸಿದ್ದಾರೆ. ರ‍್ಯಾಲಿಯ ಅನುಭವವನ್ನು ಗುರುವಾರ ‘ಪ್ರಜಾವಾಣಿ’ ಸಂದರ್ಶನದಲ್ಲಿ ಹಂಚಿಕೊಂಡರು.

* ಈ ವರ್ಷದ ರ‍್ಯಾಲಿಗೂ ಇದಕ್ಕೂ ಮುಂಚೆ ಸ್ಪರ್ಧಿಸಿದ್ದ ರ‍್ಯಾಲಿಗಳಿಗೂ ಇರುವ ವ್ಯತ್ಯಾಸವೇನು?

ಪ್ರತಿ ವರ್ಷವು ಹೊಸ ಸವಾಲು ಗಳನ್ನು ಒಡ್ಡುವ ಸ್ಪರ್ಧೆ ಇದು. ಈ ಬಾರಿ ಯದ್ದು ಅತ್ಯಂಕ ಕಠಿಣವಾಗಿತ್ತು. ನಾವು ಸಾಗುತ್ತಿದ್ದ ಹಾದಿಯಲ್ಲಿ ಬಹಳಷ್ಟು ಭಾಗ ಮರುಭೂಮಿ ಇತ್ತು. ಇನ್ನು ಕೆಲವು ಕಡೆ ಬೆಟ್ಟದ ಕಣಿವೆಗಳಲ್ಲಿ ಹಾದು ಹೋಗಬೇಕಿತ್ತು. ಇಂತಹ ಆಫ್‌ರೋಡ್‌ ಸ್ಪರ್ಧೆಗಳಿಗೆ ನಾವು ಬಳಸುವ ಬೈಕ್‌ ಗಳಲ್ಲಿ ಸುಮಾರು 30 ಲೀಟರ್ ಇಂಧನ ತುಂಬಿಕೊಂಡು ಸಾಗುವುದು ಅಪಾಯಕಾರಿ. ಆದರೂ ಯಾವುದೇ ತೊಂದರೆಯಾಗದಂತೆ  ಪ್ರತಿದಿನವೂ 250 ಕಿ.ಮೀ ಅಂತರ ಕ್ರಮಿಸುತ್ತಿದ್ದೆ.

* ಸ್ಪರ್ಧೆಗೆ ಹೋಗುವ ಮುನ್ನದ ಸಿದ್ಧತೆ ಹೇಗೆ ಮಾಡಿದ್ದಿರಿ?

ಸ್ಪರ್ಧೆಗಳ ದಿನಗಳಂದು ಬೆಳಗಿನ ಜಾವದಿಂದ ಸಂಜೆಯವರೆಗೂ ಬೈಕ್ ಓಡಿಸಬೇಕಾಗುತ್ತದೆ. ಸ್ಪರ್ಧೆಗೂ ಮುನ್ನ ಎಂಟು ತಿಂಗಳು ಸತತ ಅಭ್ಯಾಸ ಮಾಡುತ್ತೇನೆ.  ಅದಕ್ಕಾಗಿ ದೇಹದಲ್ಲಿ ದ್ರವಾಂಶ ಮತ್ತು ಶಕ್ತಿ ಉಳಿಸಿಕೊಳ್ಳಲು ಪೌಷ್ಟಿಕ ಆಹಾರ ಮತ್ತು ಪೇಯಗಳ ಸೇವನೆ ಅವಶ್ಯಕ. ಪ್ರತಿದಿನವೂ ದೈಹಿಕ ಕ್ಷಮತೆ ವೃದ್ಧಿಸಿಕೊಳ್ಳಲು ಆದ್ಯತೆ ನೀಡು ತ್ತೇವೆ. ಅದಕ್ಕಾಗಿ ಈಜು, ಸೈಕ್ಲಿಂಗ್, ಓಟದ ಅಭ್ಯಾಸ ಕಡ್ಡಾಯ.

* ನೆರವು ತಂಡದ ಕುರಿತು ಹೇಳಿ?

ಹೀರೊ ಮೋಟರ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದೇನೆ. ಈ ಸಲ ಹೊಚ್ಚ ಹೊಸ ಹೀರೊ 450 ಆರ್‌.ಆರ್ ಬೈಕ್‌ ನಲ್ಲಿ ಸ್ಪರ್ಧಿಸಿದೆ. ಫಿಸಿಯೊ, ಆಹಾರ ತಜ್ಞರು, ಟ್ರೇನರ್ ಮತ್ತಿತರರ ಸುಸಜ್ಜಿತ ಸಿಬ್ಬಂದಿಯು ನೆರವು ನೀಡಿತು.

* ಮುಂದಿನ ಗುರಿ ಏನು?

ಮುಂದಿನ ವರ್ಷದ ಡಕಾರ್ ರ‍್ಯಾಲಿಗೆ ಇದೇ ತಿಂಗಳು ಅಭ್ಯಾಸ ಆರಂಭಿಸುತ್ತಿದ್ದೇನೆ. ಅಗ್ರ 10ರಲ್ಲಿ ಸ್ಥಾನ ಪಡೆಯುವುದು ನನ್ನ ಗುರಿ. ಕೋಲಾರದಲ್ಲಿ ‘ಬಿಗ್ ರಾಕ್ ಮೋಟಾರ್ ಪಾರ್ಕ್’  ಆರಂಭಿಸಿದ್ದೇನೆ. ಅಲ್ಲಿರುವ ಟ್ರ್ಯಾಕ್‌ನಲ್ಲಿ ಅಭ್ಯಾಸ ಮಾಡು ತ್ತೇನೆ. ಈ ಕ್ರೀಡೆಯಲ್ಲಿ ಆಸಕ್ತಿ ತೋರುವ ಯುವಕರಿಗೆ ತರಬೇತಿ ನೀಡುತ್ತಿದ್ದೇನೆ.

ಪ್ರತಿಕ್ರಿಯಿಸಿ (+)