ಬುಧವಾರ, ಡಿಸೆಂಬರ್ 11, 2019
16 °C

ಹುಸಿ ಭರವಸೆಯ ಮಣಿಮಾಲೆ

ಎಂ.ಎಸ್.ಶ್ರೀರಾಮ್ Updated:

ಅಕ್ಷರ ಗಾತ್ರ : | |

ಹುಸಿ ಭರವಸೆಯ ಮಣಿಮಾಲೆ

ಈ ಬಾರಿಯ ಆಯವ್ಯಯ ಪತ್ರ ಮಂಡನೆ ಅನೇಕ ರೀತಿಗಳಿಂದ ಭಿನ್ನವಾಗಿದೆ. ಕಳೆದ ಕೆಲ ವರ್ಷಗಳಿಂದ ಮಂಡನೆಯ ದಿನಾಂಕವನ್ನು ಫೆಬ್ರುವರಿ ಅಂತ್ಯದಿಂದ ಆರಂಭಕ್ಕೆ ತಂದಿದ್ದಾರೆ. ರೈಲ್ವೆಯ ಆಯವ್ಯಯವನ್ನು ಮುಖ್ಯ ಆಯವ್ಯಯದೊಂದಿಗೆ ವಿಲೀನಗೊಳಿಸಿದ್ದಾರೆ ಹಾಗೂ ಈ ಬಾರಿ ಜಿಎಸ್‌ಟಿ ಜಾರಿಗೊಳಿಸಿರುವುದರಿಂದ ಪರೋಕ್ಷ ತೆರಿಗೆಯ ಬಗ್ಗೆ ಬರೆಯಲು ಹೆಚ್ಚು ಇಲ್ಲ.

ಅರ್ಥಾತ್– ಜಿ.ಎಸ್.ಟಿಯ ಮಟ್ಟಿಗೆ ಆಯ ಹೇಗೆ ಬರುತ್ತದೆ ಎನ್ನುವುದರ ಬಗ್ಗೆ ಇದ್ದ ಗೋಪ್ಯತೆ ಹಾಗೂ ವಿತ್ತ ಮಂತ್ರಿಗಳ ಏಕಾಧಿಪತ್ಯ ಇಲ್ಲವಾಗಿ, ರಾಜ್ಯಗಳನ್ನೊಳಗೊಂಡ ಮಂಡಳಿಯು ಇದನ್ನು ತೀರ್ಮಾನಿಸುತ್ತಿದೆ. ಹೀಗಾಗಿ ಈ ಮಂಡನೆಯಲ್ಲಿನ ಆಸಕ್ತಿಯಿರುವುದು ನೇರ ತೆರಿಗೆಯಲ್ಲಿ ಆಗಿರಬಹುxದಾದ ಬದಲಾವಣೆಗಳು ಹಾಗೂ ಸರ್ಕಾರ ತನ್ನ ಆಯವನ್ನು ಯಾವ ರೀತಿಯಿಂದ ಜನಕಲ್ಯಾಣಕ್ಕೆ ಬಳಸುತ್ತದೆ ಎನ್ನುವ ಕುತೂಹಲವಷ್ಟೇ.

ಈ ಸರ್ಕಾರಕ್ಕೆ ‘ಜುಮ್ಲಾ ಸರ್ಕಾರ’ ಎನ್ನುವ ಹೆಸರು ಬರುವುದಕ್ಕೆ ಕಾರಣಗಳಿಲ್ಲದಿಲ್ಲ. ಎಂದಿನಂತೆ ಈ ಸರ್ಕಾರದ ಘೋಷಣೆಗಳು ಚೆನ್ನಾಗಿಯೇ ಇರುತ್ತವೆ. ಆದರೆ ಅದರ ಸತ್ಯಾಸತ್ಯತೆ ತಿಳಿಯುವುದು ತುಸು ತಡವಾಗಿ. ‘ಜೋರ್ ಕಾ ಝಟ್ಕಾ ಧೀರೇಸೆ ಲಗೆ’ ಅನ್ನುವ ಹಾಗೆ. ಅಷ್ಟೇ ಅಲ್ಲ, ಇಷ್ಟಬಂದಂತೆ ಮೈಲಿಗಲ್ಲುಗಳನ್ನು ಬದಲಾಯಿಸುವುದನ್ನೂ ಈ ಸರ್ಕಾರ ತನ್ನ ವೈಶಿಷ್ಟ್ಯವನ್ನಾಗಿಸಿಕೊಂಡಿದೆ. ಆದರೆ ಉದ್ದೇಶಗಳನ್ನು ಮುಂದಿಡುವುದರಲ್ಲಿ ಸರ್ಕಾರದ ತಪ್ಪು ಕಂಡುಹಿಡಿಯುವುದು ಮಾತ್ರ ಅಸಾಧ್ಯ. ಮೋದಿಯವರ ವಿಶಿಷ್ಟ ಮಾತಿನ ಮೋಡಿಯನ್ನು ಹಣಕಾಸು ಸಚಿವರೂ ತಮ್ಮದಾಗಿಸಿಕೊಂಡಿದ್ದಾರೆ.

ಸಾಮಾಜಿಕ ರಂಗಕ್ಕೆ ಸಂದಂತೆ ಈ ಬಾರಿಯ ಕೆಲವು ಘೋಷಣೆಗಳನ್ನು ಪರಿಶೀಲಿಸೋಣ. ಇದರಲ್ಲಿ ಮುಖ್ಯವಾದುದು ಆರೋಗ್ಯ ವಿಮೆಗೆ ಸಂಬಂಧಿಸಿದ್ದು. ಈ ವಿಷಯದಲ್ಲಿ ಹಣಕಾಸು ಸಚಿವರು ‘ಆಸ್ಪತ್ರೆಗೆ ಸೇರಿದ ಬಡವರ ಶುಶ್ರೂಷೆಗೆ 5 ಲಕ್ಷ ರೂಪಾಯಿಗಳಷ್ಟನ್ನು ವಿಮಾ ಯೋಜನೆಯಡಿಯಲ್ಲಿ ಮುಫತ್ತಾಗಿ ನೀಡಲಾಗುವುದು’ ಎಂದು ಹೇಳಿದ್ದಾರೆ. ಇದಕ್ಕೆ ಸಾಕಷ್ಟು ಆರ್ಥಿಕ ಸಂಪನ್ಮೂಲವನ್ನು ಕಾಪಿಡುವುದಾಗಿ ಹೇಳಿದ್ದಾರಾದರೂ ಆ ಮೊತ್ತ ಎಷ್ಟು ಎನ್ನುವುದನ್ನು ಗುಪ್ತವಾಗಿ ಇರಿಸಿದ್ದಾರೆ.

ಇಂಥ ಮಹತ್ವದ ಯೋಜನೆಗೆ ಎಷ್ಟು ಖರ್ಚಾಗಬಹುದು, ಅದಕ್ಕೆ ತಕ್ಕ ಸಂಪನ್ಮೂಲಗಳಿವೆಯೇ ಎನ್ನುವುದು ನಮಗೆ ತಿಳಿಯದ ವಿಷಯ. ಸರ್ಕಾರದ ಲೆಕ್ಕಪತ್ರವನ್ನು ಪರಿಶೀಲಿಸಿದರೆ, ಕಳೆದ ವರ್ಷದ ಮೊತ್ತಕ್ಕಿಂತ ಸುಮಾರು ₹ 2,000 ಕೋಟಿಗಳಷ್ಟು ಹೆಚ್ಚು ಮೊತ್ತವನ್ನು ಒಟ್ಟಾರೆ ಆರೋಗ್ಯ ಕ್ಷೇತ್ರಕ್ಕೆ ಮೀಸಲಿಟ್ಟಿರುವುದು ಕಾಣಿಸುತ್ತದೆ. ಇದು ಸಾಕೇ? ಇದರಲ್ಲಿ ವಿಮೆಗೆ ಎಷ್ಟು? 24 ಹೊಸ ವೈದ್ಯಕೀಯ ಕಾಲೇಜುಗಳಿಗೆ, ಜಿಲ್ಲಾ ಆಸ್ಪತ್ರೆಗಳ ಕಾಯಕಲ್ಪ ಮಾಡುವ ಘೋಷಣೆಗೆ ಮೀಸಲಿಟ್ಟಿರುವುದೆಷ್ಟು? ಎಲ್ಲವೂ ಒಗಟೇ.

ಹಾಗೆಯೇ, ₹ 1,200 ಕೋಟಿ ಖರ್ಚಿನಲ್ಲಿ 1.5 ಲಕ್ಷ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಹಣಕಾಸು ಸಚಿವರು ಹೇಳಿದ್ದಾರೆ. ಈ ಕೇಂದ್ರಗಳು ಸಂಪೂರ್ಣ ಆರೋಗ್ಯ ಸೇವೆಗಳನ್ನು ಒದಗಿಸುವುದಲ್ಲದೇ ಅತ್ಯವಶ್ಯಕವಾದ ಔಷಧಿಗಳು ಮತ್ತು ತಪಾಸಣಾ ಸೇವೆಗಳನ್ನು ಉಚಿತವಾಗಿ ಒದಗಿಸುತ್ತವೆ. ಗರ್ಭಿಣಿಯರು, ಬಾಣಂತಿಯರು ಮತ್ತು ನವಜಾತ ಶಿಶುಗಳಿಗೆ ವಿಶೇಷ ಸೇವೆಯನ್ನು ಒದಗಿಸುತ್ತವೆಂದು ಘೋಷಿಸಿದ್ದಾರೆ. ಲೆಕ್ಕ ಮಾಡಿ ನೋಡಿದರೆ ಒಂದು ಕೇಂದ್ರಕ್ಕೆ ಮಂತ್ರಿಗಳು ನೀಡುತ್ತಿರುವ ಮೊತ್ತ ಕೇವಲ ₹ 80,000 ಮಾತ್ರ. ಇಷ್ಟರಲ್ಲಿ ಎಷ್ಟು ಸೇವೆಗಳನ್ನು ಒದಗಿಸಬಹುದು ಎನ್ನುವುದನ್ನು ಊಹಿಸಿಕೊಳ್ಳಿ. ಈ ಮೊತ್ತದಲ್ಲಿ ಜುಮ್ಲಾ ಏನು? ಮಿಕ್ಕ ಹಣವನ್ನು ಉದ್ಯಮಿಗಳು ಉದಾರವಾಗಿ ತಮ್ಮ ಸಾಮಾಜಿಕ ಬದ್ಧತೆಯ ಜವಾಬ್ದಾರಿಯ ರಖಮಿನಿಂದ ದಾನವಾಗಿ ನೀಡಬೇಕೆಂದು ವಿತ್ತ ಮಂತ್ರಿಗಳು ಹೇಳಿದ್ದಾರೆ.

ಕೃಷಿಗೆ ಸಂಬಂಧಿಸಿದಂತೆ ಎರಡೂವರೆ ಮುಖ್ಯ ಘೋಷಣೆಗಳನ್ನು ಅವರು ಮಾಡಿದ್ದಾರೆ. ಮೊದಲನೆಯದು, ಸರ್ಕಾರ ಕೊಡುವ ಕನಿಷ್ಠ ಸಹಾಯ ದರವನ್ನು ರೈತರ ಖರ್ಚಿನ ಮೇಲೆ ಶೇಕಡ 50ರಷ್ಟು ಹೆಚ್ಚಿಸಿರುವ ಘೋಷಣೆ. ಆದರೆ ಒಟ್ಟಾರೆ ಕೃಷಿ ಕ್ಷೇತ್ರಕ್ಕೆ (ಹೈನುಗಾರಿಕೆ, ಮೀನುಗಾರಿಕೆ ಇತ್ಯಾದಿ ಬಿಟ್ಟು) ಮೀಸಲಿಟ್ಟಿರುವುದು ₹ 5,000 ಕೋಟಿಗಳಷ್ಟು ಹೆಚ್ಚಿನ ಮೊತ್ತ ಮಾತ್ರ. ಹೀಗಾಗಿ ಶೇಕಡ 50ರ ಲಾಭ ಬರುವಂತೆ ಮಾಡುವಾಗ ರೈತರ ಖರ್ಚನ್ನು ಯಾವ ರೀತಿ ಲೆಕ್ಕ ಕಟ್ಟುತ್ತಾರೆ ಎನ್ನುವುದರ ಬಗ್ಗೆ ಈಗಾಗಲೇ ಅಶೋಕ್ ಗುಲಾಟಿಯಂತಹ ತಜ್ಞರು ಪ್ರಶ್ನಿಸಿದ್ದಾರೆ. ರೈತರತ್ತ ಈ ಸರ್ಕಾರ ನಿಜಕ್ಕೂ ಬದ್ಧವಾಗಿದೆಯೇ ಅಥವಾ ಇದೂ ಚುನಾವಾಣಾ ಕಾಲದ ಬಾಯಿಮಾತೇ ಎನ್ನುವುದನ್ನು ನೋಡಬೇಕಿದೆ.

ಕೃಷಿಯ ಬಗ್ಗೆ ಹೇಳಿರುವ ಮತ್ತೊಂದು ಮಾತು ಕೃಷಿ ಸಾಲದ ಮೊತ್ತದ ಗುರಿಯನ್ನು ₹ 11 ಲಕ್ಷ ಕೋಟಿಗೆ ಏರಿಸುವ ಇರಾದೆಯ ಬಗ್ಗೆ. ಇದರಲ್ಲಿ ಸರ್ಕಾರದ ಖರ್ಚೇನೂ ಇಲ್ಲ. ಇದನ್ನು ಸಾಧಿಸಬೇಕಾದದ್ದು ಬ್ಯಾಂಕುಗಳು, ಹೀಗಾಗಿ ಇದು ಸರ್ಕಾರದ ಕಾರ್ಯಕ್ರಮವೆಂದು ನಾವು ಪರಿಗಣಿಸಬಾರದು.

ಮತ್ತೆ ಒಂದು ಅರ್ಧ ಘೋಷಣೆ ತುಸು ಮುಖ್ಯವಾದದ್ದು. ಸಹಕಾರಿ ತತ್ವದ ಮೇಲೆ ನಡೆಯುವ ಉತ್ಪಾದನಾ ಕ್ಷೇತ್ರದ ಕಂಪನಿಗಳನ್ನು ಹೊಸದಾಗಿ ಸ್ಥಾಪಿಸಲು ದೊಡ್ಡ ಯೋಜನೆಯನ್ನು ಘೋಷಿಸಿದ್ದಾರೆ. ಶ್ವೇತ ಕ್ರಾಂತಿಯ ಹಾಗೆ, ತೋಟಗಾರಿಕಾ ಕ್ಷೇತ್ರದಲ್ಲಿ ‘ಹರಿತ ಕ್ರಾಂತಿ’ಯನ್ನು ತರಬೇಕೆನ್ನುವುದು ಈ ಘೋಷಣೆಯ ಉದ್ದೇಶ. ಇದಕ್ಕೆ ಮೀಸಲಿಟ್ಟಿರುವ ಮೊತ್ತ ಕೇವಲ ₹ 500 ಕೋಟಿ. ಇದರಿಂದ ಎಷ್ಟು ಸಾಧನೆಯಾಗುತ್ತದೆ ಎನ್ನುವುದೇ ಒಂದು ಪ್ರಶ್ನೆ. ಹಾಗೆಯೇ ನೂರು ಕೋಟಿಗಳವರೆಗೆ ವ್ಯಾಪಾರ ಮಾಡುವ ಉತ್ಪಾದನಾ ಕ್ಷೇತ್ರದ ಕಂಪನಿಗಳಿಗೆ ಆದಾಯ ಕರದ ರಿಯಾಯಿತಿ ಘೋಷಿಸಿದ್ದಾರೆ.

ಇದು ನಿಜಕ್ಕೂ ಸ್ವಾಗತಾರ್ಹವಾದ ಮುಖ್ಯ ಘೋಷಣೆಯೇ. ಆದರೆ ಈ ರಿಯಾಯಿತಿ ಪಡೆಯುವ ಕಂಪನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲ. ಈ ಘೋಷಣೆ ಹಿರಿದಾಗಿ ಕಾಣಿಸಿದರೂ ಸರ್ಕಾರದ ಬೊಕ್ಕಸಕ್ಕೆ ಮಹತ್ವದ ನಷ್ಟವೇನೂ ಇದರಿಂದ ಆಗುವುದಿಲ್ಲ. ಒಟ್ಟಾರೆ, ಕಳೆದ ಆಯವ್ಯಯ ಪತ್ರದಲ್ಲಿ ಘೋಷಿಸಿದ್ದ ಖೋತಾದ ಮಟ್ಟವನ್ನು ತಡೆಯಲಾಗದ ಸರ್ಕಾರ ದೊಡ್ಡ ಬಹುವರ್ಷೀಯ ಘೋಷಣೆಗಳನ್ನು ಮಾಡಿ, ಪ್ರಸ್ತುತ ಆಯವ್ಯಯ ಪತ್ರದಲ್ಲಿ ತುಸುವೇ ಹಣವನ್ನು ಮೀಸಲಿಡುವ ಕಣ್ಕಟ್ಟು ಮಾಡುವ ಕೆಲಸವನ್ನು ಮುಂದುವರಿಸುತ್ತಿದೆ. ಸುಳ್ಳಿನ ಸರಪಣಿಯನ್ನು ಅದ್ಭುತವಾಗಿ ಪೋಣಿಸುವ ಸರ್ಕಾರದ ಮತ್ತೊಂದು ಮಾಲೆ ನಮ್ಮ ಕತ್ತಿನ ಸುತ್ತಲೂ ಬಿಗಿಯಾಗುತ್ತಾ ಬರುತ್ತಿದೆ.

[related]

ಪ್ರತಿಕ್ರಿಯಿಸಿ (+)