ಸೋಮವಾರ, ಡಿಸೆಂಬರ್ 9, 2019
24 °C
ಕೇಂದ್ರ ಬಜೆಟ್ ಕುರಿತು ಮುಖ್ಯಮಂತ್ರಿ

ಕನ್ನಡಿಯೊಳಗಿನ ಗಂಟು: ಸಿ.ಎಂ ವ್ಯಂಗ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡಿಯೊಳಗಿನ ಗಂಟು: ಸಿ.ಎಂ ವ್ಯಂಗ್ಯ

ಬೆಂಗಳೂರು: ‘ಜನಪರ ಕಾಳಜಿ, ಅಭಿವೃದ್ಧಿಯ ದೂರದೃಷ್ಟಿಯೇ ಇಲ್ಲದ ಕೇಂದ್ರ ಬಜೆಟ್‌ ಜನರ ಪಾಲಿಗೆ ಕನ್ನಡಿಯೊಳಗಿನ ಗಂಟು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

2019ರ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇವಲ ಭರವಸೆಗಳನ್ನು ಘೋಷಣೆ ಮಾಡಿರುವ ಕೇಂದ್ರ ಸಚಿವ ಅರುಣ್ ಜೇಟ್ಲಿ ಕಣ್ಕಟ್ಟು ಮಾಡಿದ್ದಾರೆ. ಯಾವುದೇ ಅನುದಾನವನ್ನೂ ಒದಗಿಸಿಲ್ಲ. ಅವರ ಕಾಳಜಿ ಏನಿದ್ದರೂ ಕಾರ್ಪೊರೇಟ್ ಸಂಸ್ಥೆಗಳು ಹಾಗೂ ಬಂಡವಾಳಶಾಹಿಗಳಿಗೆ ಲಾಭ ಮಾಡಿಕೊಡುವುದಷ್ಟೇ ಆಗಿದೆ ಎಂದು ಹೇಳಿದರು.

ರೈತರ ಸಾಲ ಮನ್ನಾ ಮಾಡಬೇಕು ಎಂಬ ಬೇಡಿಕೆಗೆ ಸ್ಪಂದಿಸಿಲ್ಲ. ಸ್ವಾಮಿನಾಥನ್ ವರದಿ ಅನುಷ್ಠಾನ ಮಾಡುವುದಾಗಿ 2014ರ ಲೋಕಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಬಿಜೆಪಿ ಘೋಷಿಸಿತ್ತು. ಸರ್ಕಾರದ ಕೊನೆಯ ವರ್ಷದ ಬಜೆಟ್‌ನಲ್ಲಿ ವರದಿ ಅನುಷ್ಠಾನ ಮಾಡುವುದಾಗಿ ಘೋಷಿಸಿರುವುದು ರೈತರ ಬಗೆಗಿನ ಅವರ ಕಾಳಜಿ ತೋರಿಸುತ್ತದೆ. ಕೃಷಿ ಉತ್ಪಾದಕತೆಯ ವೆಚ್ಚಕ್ಕೆ ಅನುಗುಣವಾಗಿ ಒಂದೂವರೆ ಪಟ್ಟು ಬೆಂಬಲ ಬೆಲೆ ನೀಡುವುದಾಗಿ ಹೇಳಿದ್ದರು. ಈವರೆಗೂ ಜಾರಿಮಾಡಿಲ್ಲ ಎಂದು ಹರಿಹಾಯ್ದರು.

ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ನಾಲ್ಕು ವರ್ಷಗಳಲ್ಲಿ ಎಂಟು ಕೋಟಿ ಉದ್ಯೋಗ ಹೋಗಲಿ, ಒಂದು ಲಕ್ಷ ಉದ್ಯೋಗವೂ ಸೃಷ್ಟಿಯಾಗಿಲ್ಲ. ಕಳೆದ ಬಜೆಟ್‌ನಲ್ಲಿ ಒಂದು ಕುಟುಂಬಕ್ಕೆ ₹1 ಲಕ್ಷ ಸೌಲಭ್ಯ ಕಲ್ಪಿಸುವ ರಾಷ್ಟ್ರೀಯ ಆರೋಗ್ಯ ರಕ್ಷಣಾ ವಿಮೆ ಘೋಷಣೆ ಮಾಡಿದ್ದರು. ಈವರೆಗೂ ಆದೇಶ ಹೊರಬಿದ್ದಿಲ್ಲ. ಈಗ ₹5 ಲಕ್ಷ ವಿಮಾ ಸೌಲಭ್ಯ ನೀಡುವುದಾಗಿ ಘೋಷಿಸಿದ್ದಾರೆ. ಅನುಷ್ಠಾನಕ್ಕೆ ಬೇಕಾದ ಸಂಪನ್ಮೂಲ ಒದಗಿಸಿಲ್ಲ ಎಂದು ಟೀಕಿಸಿದರು.

ಶೇ 1ರಿಂದ ಶೇ 2ರವರೆಗೆ ಇದ್ದ ಆರೋಗ್ಯ ಮತ್ತು ಶಿಕ್ಷಣ ಸೆಸ್‌ ಅನ್ನು ಶೇ 4ಕ್ಕೆ ಹೆಚ್ಚಿಸಲಾಗಿದೆ. ವಿತ್ತೀಯ ಕೊರತೆ ಯಥಾಸ್ಥಿತಿಯಲ್ಲಿ ಮುಂದುವರಿದಿದೆ ಎಂದರು.

ಪೆಟ್ರೋಲ್ ಬೆಲೆ ₹23ಕ್ಕೆ ಇಳಿಸಲಿ: 110 ಡಾಲರ್ ಇದ್ದ ಒಂದು ಬ್ಯಾರಲ್‌ ಕಚ್ಚಾ ತೈಲದ ಬೆಲೆ  ಈಗ 43 ಡಾಲರ್‌ಗೆ ಇಳಿದಿದೆ. ಆ ಲೆಕ್ಕಾಚಾರದಂತೆ ಪೆಟ್ರೋಲ್ ದರವನ್ನು ₹23 ಕ್ಕೆ ಇಳಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

‘ಪೆಟ್ರೋಲ್, ಡೀಸೆಲ್ ದರದ ಮೇಲಿನ ತೆರಿಗೆ ಇಳಿಸುತ್ತೀರಾ’ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ, ‘ಕಚ್ಚಾ ತೈಲದ ದರ ಇಳಿದಿದ್ದರಿಂದಾಗಿ ಕೇಂದ್ರ ಸರ್ಕಾರಕ್ಕೆ ಸಾಕಷ್ಟು ಹಣ ಉಳಿತಾಯವಾಗುತ್ತಿದೆ. ಅದನ್ನು ಗ್ರಾಹಕರಿಗೆ ವರ್ಗಾಯಿಸಿಲ್ಲ. ಆ ಕೆಲಸವನ್ನು ಮೊದಲು ಕೇಂದ್ರ ಸರ್ಕಾರ ಮಾಡಲಿ’ ಎಂದು ಒತ್ತಾಯಿಸಿದರು.

ಪ್ರತಿಕ್ರಿಯಿಸಿ (+)