ಮಿಯಾಮಿ ಬೀಚ್‌ನಲ್ಲಿ ಹೈದರಾಬಾದ್‌ನ ವಿದ್ಯಾರ್ಥಿ ಸಾವು

7

ಮಿಯಾಮಿ ಬೀಚ್‌ನಲ್ಲಿ ಹೈದರಾಬಾದ್‌ನ ವಿದ್ಯಾರ್ಥಿ ಸಾವು

Published:
Updated:

ಹೈದರಾಬಾದ್‌: ಅಮೆರಿಕದ ಫ್ಲೋರಿಡಾದ ಅಟ್ಲಾಂಟಿಸ್‌ ವಿಶ್ವವಿದ್ಯಾಲಯದಿಂದ ಇತ್ತೀಚಿಗಷ್ಟೇ ಪದವಿ ಪಡೆದ ಭಾರತದ ವಿದ್ಯಾರ್ಥಿ ಮಿಯಾಮಿ ಕಡಲತೀರದಲ್ಲಿ (ಬೀಚ್‌ನಲ್ಲಿ) ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.

ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ಮಚಿಲಿಪಟ್ಟಣದ ಬೊಮ್ಮಲ ಚೈತನ್ಯ ಕುಮಾರ (25) ಮೃತಪಟ್ಟ ವಿದ್ಯಾರ್ಥಿ. ‘ವಿಹಾರಕ್ಕಾಗಿ ಕಡಲತೀರಕ್ಕೆ ಹೋಗಿದ್ದ ಚೈತನ್ಯ, ಬಹಳ ಹೊತ್ತಾದರೂ ಮರಳಿ ಬರಲಿಲ್ಲ. ನಂತರ ಮೃತಪಟ್ಟಿರುವುದು ಗೊತ್ತಾಯಿತು. ಈ ವಿಷಯವನ್ನು ಅವರ ಪಾಲಕರಿಗೆ ತಿಳಿಸಲಾಗಿದೆ’ ಎಂದು ಆತನ ಸ್ನೇಹಿತರು ಹೇಳಿದ್ದಾರೆ.

‘ಮಚಿಲಿಪಟ್ಟಣ ಸಮೀಪದ ಗುದ್ಲವಲ್ಲೆರು ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಬಿ.ಟೆಕ್‌ ಪದವಿ ಪಡೆದು, ನಂತರ ಅಟ್ಲಾಂಟಿಸ್‌ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯುನಿಕೇಷನ್‌ ವಿಭಾಗದಲ್ಲಿ ಎಂ.ಎಸ್‌. ಪದವಿಯನ್ನು ಚೈತನ್ಯ ಪಡೆದಿದ್ದ. ಉದ್ಯೋಗದ ಹುಡಕಾಟದಲ್ಲಿದ್ದ ಈತ, ಕೆಲಸ ಸಿಕ್ಕ ನಂತರ ಊರಿಗೆ ಬರುವುದಾಗಿ ಹೇಳಿದ್ದ’ ಎಂದು ಪೋಷಕರು ತಿಳಿಸಿದ್ದಾರೆ.

‘ಘಟನೆ ಬಗ್ಗೆ ಈವರೆಗೂ ಫ್ಲೋರಿಡಾ ಪೊಲೀಸರಿಂದ ಯಾವುದೇ ಮಾಹಿತಿ ಬಂದಿಲ್ಲ. ಚೈತನ್ಯ ಅವರ ಮೃತದೇಹವನ್ನು ಮನೆಗೆ ತರಲು ಎಲ್ಲ ಪ್ರಯತ್ನಗಳು ನಡೆದಿವೆ’ ಎಂದು ಕೃಷ್ಣಾ ಜಿಲ್ಲೆಯ ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry