ಬುಧವಾರ, ಡಿಸೆಂಬರ್ 11, 2019
15 °C
2022ರವೇಳೆಗೆ ರೈತರ ಆದಾಯ ದುಪ್ಪಟ್ಟು: ಜೇಟ್ಲಿ

‘ಕನಿಷ್ಠ ಬೆಂಬಲ ಬೆಲೆ’ ಒಂದೂವರೆ ಪಟ್ಟು ಹೆಚ್ಚು

ಪಿಟಿಐ Updated:

ಅಕ್ಷರ ಗಾತ್ರ : | |

‘ಕನಿಷ್ಠ ಬೆಂಬಲ ಬೆಲೆ’ ಒಂದೂವರೆ ಪಟ್ಟು ಹೆಚ್ಚು

ನವದೆಹಲಿ:  ಮುಂಗಾರು ಬೆಳೆಗಳಿಗೆ ಅದರ ಉತ್ಪಾದನಾ ವೆಚ್ಚಕ್ಕಿಂತ ಒಂದೂವರೆ ಪಟ್ಟು ಹೆಚ್ಚಿನ ‘ಕನಿಷ್ಠ ಬೆಂಬಲ ಬೆಲೆ’ಯನ್ನು ರೈತರಿಗೆ ನೀಡುವುದಾಗಿ ಸಚಿವ ಅರುಣ್‌ ಜೇಟ್ಲಿ ಹೇಳಿದರು.

ಈ ಹಿಂದೆ ಹಿಂಗಾರು ಬೆಳೆಗಳಿಗೆ ಮಾತ್ರ ನೀಡಲಾಗುತ್ತಿದ್ದ ಈ ಬೆಲೆಯನ್ನು ಈಗ ಭತ್ತ, ಮೆಕ್ಕೆಜೋಳ, ಸೋಯಾಬೀನ್‌ನಂಥ ಬೆಳೆಗಳಿಗೂ ವಿಸ್ತರಿಸಲಾಗಿದೆ ಎಂದರು.

‘ ನಮ್ಮ ದೇಶದ ಕೃಷಿ ಉತ್ಪನ್ನಗಳು ದಾಖಲೆಯ ಪ್ರಮಾಣಕ್ಕೆ ಏರಿದೆ. 2016–17ನೇ ಸಾಲಿನಲ್ಲಿ 2.75 ಕೋಟಿ ಟನ್‌ ಆಹಾರ ಉತ್ಪನ್ನ ಹಾಗೂ ಸುಮಾರು 3ಕೋಟಿ ಟನ್‌ ಹಣ್ಣು ಮತ್ತು ತರಕಾರಿಗಳನ್ನು ಬೆಳೆದಿದ್ದೇವೆ. ಇಷ್ಟು ದಾಖಲೆ ಪ್ರಮಾಣದ ಬೆಳೆ ಬೆಳೆಯುತ್ತಿರುವ ನಮ್ಮ ರೈತರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಲು ಸರ್ಕಾರ ಸಿದ್ಧವಾಗಿದೆ’ ಎಂದ ಜೇಟ್ಲಿ, ‌‌ ಕೃಷಿಯನ್ನು ಕೂಡ ಉದ್ಯಮ ಎಂದು ಸರ್ಕಾರ ಪರಿಗಣಿಸಿದೆ‘ ಎಂದರು. ’2022ರಂದು ಭಾರತ 75ನೇ ಸ್ವಾತಂತ್ರ್ಯೋತ್ಸವ ಆಚರಿಸುವ ಹೊತ್ತಿಗೆ ದೇಶದ ಎಲ್ಲಾ ರೈತರ ಆದಾಯ ದುಪ್ಪಟ್ಟು ಆಗಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಆಶಯವಾಗಿದ್ದು, ಇದರಿಂದಾಗಿ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ವಿವರಿಸಿದರು.

ಕೃಷಿ ಚಟುವಟಿಕೆಗಳಿಗೆ ಸಾಲ ನೀಡುವ ಒಟ್ಟಾರೆ ಅನುದಾನವನ್ನು 11 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಿಸಿರುವ ಸರ್ಕಾರ, ಟೊಮೆಟೊ, ಈರುಳ್ಳಿ ಮತ್ತು ಆಲೂಗಡ್ಡೆ ದರಗಳಲ್ಲಿ ಆಗುವ ಬೆಲೆ ಏರಿಳಿತದ ಮೇಲೆ ನಿಗಾ ವಹಿಸಲು ₹500 ಕೋಟಿ ಅನುದಾನದಲ್ಲಿ ‘ಆಪರೇಷನ್ ಗ್ರೀನ್’ ಯೋಜನೆ ಆರಂಭಿಸಲಿದೆ. ಇದರ ಜೊತೆಗೆ ವೈದ್ಯಕೀಯ ಮತ್ತು ಸುಗಂಧದ್ರವ್ಯ ಬೆಳೆಗಳನ್ನು ಬೆಳೆಯಲು ₹200ಕೋಟಿ ಮೀಸಲು ಇಟ್ಟಿದೆ.

‘ಮಾರುಕಟ್ಟೆಯಲ್ಲಿ ಬೆಳೆಗಳು ಬೆಲೆ ಕುಸಿತ ಕಂಡಾಗಲೂ ರೈತರಿಗೆ ಒಳ್ಳೆಯ ದರ ಸಿಗುವಂತೆ ಮಾಡಲು ಹಾಗೂ ಮಾರುಕಟ್ಟೆಯಲ್ಲಿ ಅತ್ಯಧಿಕ ಲಾಭವನ್ನು ಅವರು ಗಳಿಸುವ ಸಲುವಾಗಿ ಕೇಂದ್ರ ಮತ್ತು ಆಯಾ ರಾಜ್ಯ ಸರ್ಕಾರಗಳ ಸಲಹೆಯೊಂದಿಗೆ ನೀತಿ ಆಯೋಗವು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಿದೆ’ ಎಂದು ವಿವರಿಸಿದರು.

ಇ-ರಾಷ್ಟ್ರೀಯ ಕೃಷಿ ಮಾರುಕಟ್ಟೆ(ಇ-ನಾಮ್)ಗೆ ಸದ್ಯ 470 ಎಪಿಎಂಸಿಗೆ ಸಂಪರ್ಕ ಕಲ್ಪಿಸಲಾಗಿದ್ದು, ಬರುವ ಮಾರ್ಚ್‌ ಅಂತ್ಯದ ಒಳಗೆ ಇನ್ನೂ 470 ಎಪಿಎಂಸಿಗೆ ಇದರ ವಿಸ್ತರಣೆ ಮಾಡಲಾಗುವುದು.   ಒಂದು ಸಾವಿರ ಹೆಕ್ಟೇರ್‌ಗಿಂತ ಹೆಚ್ಚಿನ ಪ್ರದೇಶದಲ್ಲಿ ಸಾವಯವ ಬೆಳೆಗಳನ್ನು ಬೆಳೆಯುವ ಕೃಷಿ ಉತ್ಪನ್ನ ಸಂಘಟನೆ, ಮಹಿಳಾ ಸಂಘಗಳಿಗೆ ಉತ್ತೇಜನ ನೀಡಲಾಗುವುದು’ ಎಂದರು.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು