ಬುಧವಾರ, ಡಿಸೆಂಬರ್ 11, 2019
15 °C

ವಿದ್ಯುತ್ ಕಳವು: 32 ಮಂದಿ ವಿರುದ್ಧ ಪ್ರಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿದ್ಯುತ್ ಕಳವು: 32 ಮಂದಿ ವಿರುದ್ಧ ಪ್ರಕರಣ

ಹೊಸಕೋಟೆ: ವಿದ್ಯುತ್ ಕಳವು ಮಾಡುತ್ತಿದ್ದ 150 ಮಂದಿಯನ್ನು ಪತ್ತೆ ಮಾಡಿರುವ ಬೆಸ್ಕಾಂ ಜಾಗೃತ ದಳದ ಸಿಬ್ಬಂದಿ, 32 ಮಂದಿ ವಿರುದ್ಧ ಪ್ರಕರಣ ದಾಖಲಿಸಿ, ₹ 8 ಲಕ್ಷ ದಂಡ ವಿಧಿಸಿದ್ದಾರೆ.

ಪಟ್ಟಣದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಜಾಗೃತ ದಳದ ಎಸ್‌ಪಿ ನಾರಾಯಣ್, ‘ಬೂದಿಗೆರೆ, ತಾಲ್ಲೂಕಿನ ನಂದಗುಡಿ, ಹಿಂಡಿಗನಾಳ, ಚಿಕ್ಕೊಂಡಹಳ್ಳಿ, ಓಬಳಹಳ್ಳಿ, ಚಿಕ್ಕಹುಲ್ಲೂರು, ದೊಡ್ಡಹುಲ್ಲೂರು, ಚೊಕ್ಕಹಳ್ಳಿ, ಯಶವಂತಪುರ, ಹೊಸಹಳ್ಳಿ, ಗಂಗಸಂದ್ರದಲ್ಲಿ ಕಾರ್ಯಾಚರಣೆ ನಡೆಸಿದ್ದೇವೆ. ಮೊದಲ ಬಾರಿಗೆ ವಿದ್ಯುತ್ ಕಳವು ಮಾಡಿ ಸಿಕ್ಕಿಬಿದ್ದವರಿಗೆ ಎಚ್ಚರಿಕೆ ನೀಡಿದ್ದೇವೆ’ ಎಂದರು.

‘ಎಚ್ಚರಿಕೆ ನೀಡಿದ್ದರೂ ವಿದ್ಯುತ್ ಕಳವು ಮಾಡುತ್ತಿದ್ದವರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. ಈ ಪೈಕಿ ಶ್ರೀಮಂತರು ಹಾಗೂ ಸಣ್ಣ ಕೈಗಾರಿಕೆ ಉದ್ಯಮಿಗಳು ಇದ್ದಾರೆ’ ಎಂದು ಮಾಹಿತಿ ನೀಡಿದರು.

‘ರೈತರ ಪಂಪ್‌ಸೆಟ್‌ಗಳಿಗೆ ಹೊರತುಪಡಿಸಿ ಉಳಿದೆಲ್ಲ ಕಾರ್ಯಗಳಿಗೆ ನಿರಂತರ ಜ್ಯೋತಿ ಯೋಜನೆಯಡಿ ವಿದ್ಯುತ್ ಪೂರೈಸಲಾಗುತ್ತದೆ. ಈ ವಿದ್ಯುತ್‌ ಕದಿಯುತ್ತಿದ್ದ ಕೆಲ ರೈತರಿಗೆ ಎಚ್ಚರಿಕೆ ನೀಡಿದ್ದೇವೆ’ ಎಂದು ಹೇಳಿದರು.

‘ಮೂರು ತಿಂಗಳಿನಿಂದ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಅಕ್ರಮವಾಗಿ ವಿದ್ಯುತ್ ಬಳಸುತ್ತಿದ್ದವರ ವಿರುದ್ಧ ಪ್ರಕರಣ ದಾಖಲಿಸಿ, ₹6.64 ಕೋಟಿ ದಂಡ ವಿಧಿಸಿದ್ದೇವೆ. ಈ ಪೈಕಿ ₹4.50 ಕೋಟಿ ವಸೂಲಿ ಮಾಡಿದ್ದೇವೆ. ಕರ್ತವ್ಯ ಲೋಪ ಆರೋಪದಡಿ ಮೂವರು ಲೈನ್‌ಮನ್‌ಗಳನ್ನು ಅಮಾನತು ಮಾಡಲಾಗಿದೆ’ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)