ಭಾನುವಾರ, ಡಿಸೆಂಬರ್ 8, 2019
24 °C
ಮತ್ತಿಬ್ಬರ ಸೆರೆ; ಪ್ರಕರಣ ಸಿಸಿಬಿಗೆ

ಚಿನ್ನಪ್ಪ ಗಾರ್ಡನ್‌ನಲ್ಲಿ ಅಘೋಷಿತ ಬಂದ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿನ್ನಪ್ಪ ಗಾರ್ಡನ್‌ನಲ್ಲಿ ಅಘೋಷಿತ ಬಂದ್‌

ಬೆಂಗಳೂರು: ಬಿಜೆಪಿ ಕಾರ್ಯಕರ್ತ ಕೆ.ಸಂತೋಷ್ (28) ಹತ್ಯೆಯಿಂದಾಗಿ ಜೆ.ಸಿ.ನಗರದ ಚಿನ್ನಪ್ಪ ಗಾರ್ಡನ್‌ನಲ್ಲಿ ಗುರುವಾರ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು.

ಬೆಳಿಗ್ಗೆಯೇ ಮೃತರ ಮನೆ ಬಳಿ ಜಮಾಯಿಸಿದ್ದ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಕಾರ್ಯಕರ್ತರು, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಧರಣಿ ಪ್ರಾರಂಭಿಸಿದ್ದರು. ಅಂಗಡಿಗಳೂ ಬಂದ್ ಆಗಿದ್ದವು. ಮುಂಜಾಗ್ರತಾ ಕ್ರಮವಾಗಿ 350 ಪೊಲೀಸರ ಸರ್ಪಗಾವಲು ಹಾಕಲಾಗಿತ್ತು. ಗುಪ್ತಚರ ಇಲಾಖೆ ಅಧಿಕಾರಿಗಳು ಸಹ ಸ್ಥಳಕ್ಕೆ ಬಂದು, ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ನಿಗಾ ವಹಿಸುತ್ತಿದ್ದರು.

ಬೆಳಿಗ್ಗೆ 11 ಗಂಟೆ ಸುಮಾರಿಗೆ ಶವವನ್ನು ಆಂಬುಲೆನ್ಸ್‌ನಲ್ಲಿ ಮನೆ ಹತ್ತಿರ ತರಲಾಯಿತು. ‘ಎಲ್ಲ ಹಂತಕರನ್ನೂ ಬಂಧಿಸುವವರೆಗೂ ದೇಹವನ್ನು ಮುಟ್ಟುವುದಿಲ್ಲ’ ಎಂದು ಕುಟುಂಬ ಸದಸ್ಯರು ಪಟ್ಟು ಹಿಡಿದರು. ನಾಲ್ಕೂ ಆರೋಪಿಗಳು ತಮ್ಮ ವಶದಲ್ಲೇ ಇರುವುದಾಗಿ ಪೊಲೀಸರು ಹೇಳಿದ ಬಳಿಕ ಶವ ಪಡೆದುಕೊಂಡರು.

ಮತ್ತಿಬ್ಬರ ಸೆರೆ: ಚಿನ್ನಪ್ಪಗಾರ್ಡನ್‌ 2ನೇ ಅಡ್ಡರಸ್ತೆ ನಿವಾಸಿಯಾದ ಸಂತೋಷ್, ರಾಮಸ್ವಾಮಿಪಾಳ್ಯ ವಾರ್ಡ್‌ನಲ್ಲಿ ಬಿಜೆಪಿ ಯುವ ಮೋರ್ಚಾದಲ್ಲಿ ಗುರುತಿಸಿಕೊಂಡಿದ್ದರು. ಬುಧವಾರ ರಾತ್ರಿ 7 ಗಂಟೆ ಸುಮಾರಿಗೆ ಅವರು ಸ್ನೇಹಿತರೊಂದಿಗೆ ಮನೆ ಸಮೀಪದ ‘ಬೇಕ್ ಪಾಯಿಂಟ್’ ಬೇಕರಿ ಬಳಿ ನಿಂತಿದ್ದರು. ಈ ವೇಳೆ ಅಲ್ಲಿಗೆ ಬಂದ ಆರೋಪಿಗಳ ಜತೆ ಜಗಳ ಶುರುವಾಗಿತ್ತು. ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಆರೋಪಿ ವಾಸೀಂ ಸ್ಕ್ರೂಡ್ರೈವರ್‌ನಿಂದ ತೊಡೆಗೆ ಇರಿದಿದ್ದ.

ಕುಸಿದು ಬಿದ್ದ ಅವರನ್ನು ಸ್ನೇಹಿತರು ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ 8.15ಕ್ಕೆ ಮೃತಪಟ್ಟಿದ್ದರು. ಸ್ನೇಹಿತರಿಂದ ಹಂತಕರ ಮಾಹಿತಿ ಪಡೆದ ಪೊಲೀಸರು, ವಾಸೀಂನನ್ನು ಕಂಟೋನ್ಮೆಂಟ್ ರೈಲು ನಿಲ್ದಾಣದ ಬಳಿ ಹಾಗೂ ಫಿಲಿಪ್ಸ್‌ನನ್ನು ಶಿವಾಜಿನಗರದಲ್ಲಿ ರಾತ್ರಿಯೇ ವಶಕ್ಕೆ ಪಡೆದಿದ್ದರು. ತಲೆಮರೆಸಿಕೊಂಡಿದ್ದ ಉಮರ್ ಹಾಗೂ ಇರ್ಫಾನ್, ಗುರುವಾರ ಬೆಳಿಗ್ಗೆ ಅರಮನೆ ಮೈದಾನದ ಬಳಿ ಸೆರೆ ಸಿಕ್ಕಿದ್ದಾರೆ.

ಸಾಯುವಂತೆ ಚುಚ್ಚಿಲ್ಲ ಸಾರ್‌: ‌ ಪೊಲೀಸರು ತನ್ನನ್ನು ವಶಕ್ಕೆ ಪಡೆದ ಆರಂಭದಲ್ಲಿ ವಾಸೀಂಗೆ ಸಂತೋಷ್ ಮೃತಪಟ್ಟಿರುವ ವಿಚಾರ ಗೊತ್ತಿರಲಿಲ್ಲ.

‘ರಾತ್ರಿ 9 ಗಂಟೆಗೆ ಠಾಣೆಗೆ ಕರೆತಂದು ವಿಚಾರಣೆ ಪ್ರಾರಂಭಿಸಿದೆವು. ಏಕೆ ಕೊಂದೆ ಎಂದು ಕೇಳಿದ್ದಕ್ಕೆ, ‘ಸರ್, ಅವನು ಸತ್ತು ಹೋಗಿದ್ದಾನಾ? ನಿಜವಾಗಿಯೂ ಅಷ್ಟೊಂದು ಗಂಭೀರವಾಗಿ ಹಲ್ಲೆ ಮಾಡಿಲ್ಲ. ನನ್ನನ್ನು ಕಂಡರೆ ಭಯವಿರಲಿ ಎಂದು ತೊಡೆಗೆ ಸ್ಕ್ರೂಡ್ರೈವರ್‌ನಿಂದ ಚುಚ್ಚಿದ್ದೆ ಅಷ್ಟೇ’ ಎಂದು ಹೇಳಿದ್ದಾನೆ. ಆರೋಪಿಗಳನ್ನು ಸಿಸಿಬಿ ವಶಕ್ಕೆ ಒಪ್ಪಿಸಿದ್ದೇವೆ’ ಎಂದು ಜೆ.ಸಿ.ನಗರ ಪೊಲೀಸರು ತಿಳಿಸಿದರು.

ಪ್ರಕರಣ ಸಿಸಿಬಿಗೆ ವರ್ಗ: ‘ವಾಸೀಂ ತಂದೆ ಖಾದರ್ ಕಾಂಗ್ರೆಸ್‌ನ ಜೆ.ಸಿ.ನಗರ ಬ್ಲಾಕ್‌ ಅಧ್ಯಕ್ಷ. ಸ್ಥಳೀಯ ಪೊಲೀಸರ ಜತೆ ಅವರು ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಹೀಗಾಗಿ, ಜೆ.ಸಿ.ನಗರ ಪೊಲೀಸರು ಈ ಪ್ರಕರಣದ ತನಿಖೆ ನಡೆಸಬಾರದು’ ಎಂದು ಬಿಜೆಪಿ ಕಾರ್ಯಕರ್ತರು ಹಾಗೂ ಮೃತರ ಕುಟುಂಬ ಸದಸ್ಯರು ಬೇಡಿಕೆ ಇಟ್ಟರು.

ಅದಕ್ಕೆ ಮಣಿದ ಕಮಿಷನರ್, ‘ಈ ಕೂಡಲೇ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸುತ್ತಿದ್ದೇನೆ. ಮೃತರ ಕುಟುಂಬಕ್ಕೆ ಪರಿಹಾರ ಹಾಗೂ ಪತ್ನಿಗೆ ಸರ್ಕಾರಿ ನೌಕರಿ ನೀಡಬೇಕೆಂಬ ಬೇಡಿಕೆಗಳನ್ನು ಮುಖ್ಯಮಂತ್ರಿ ಗಮನಕ್ಕೆ ತರುತ್ತೇನೆ’ ಎಂದು ಭರವಸೆ ನೀಡಿದರು. ಆ ನಂತರ ಮೃತದೇಹ ಪಡೆದು ಕಲ್ಪಳ್ಳಿ ಸ್ಮಶಾನದಲ್ಲಿ ಅಂತ್ಯಕ್ರಿಯೆ ಮಾಡಿದರು.

‘ಹತ್ಯೆಗೆ ಮೂರು ಕಾರಣ’

‘ಗಾಂಜಾ ಮಾರಾಟಕ್ಕೆ ಸಂತೋಷ್ ಅಡ್ಡಿಪಡಿಸಿದ್ದರು. ಸ್ಥಳೀಯ ಕ್ರೀಡಾಪಟುಗಳನ್ನು ಸೇರಿಸಿಕೊಂಡು ತಮ್ಮ ಕಬಡ್ಡಿ ತಂಡವನ್ನು ಬಲಿಷ್ಠಗೊಳಿಸಿದ್ದರು ಹಾಗೂ ಪಕ್ಷದ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದರು. ಇವೇ ಮೂರು ಕಾರಣಗಳಿಂದ ಹತ್ಯೆಯಾಗಿದ್ದಾರೆ’ ಎಂದು ಬಿಜೆಪಿ ಮುಖಂಡ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹೇಳಿದರು.

ಮೊಮ್ಮಗ ಹುಟ್ಟಿದ; ಮಗ ಹೋದ

‘ಹಿರಿಯ ಮಗಳಿಗೆ ಮಂಗಳವಾರ ಹೆರಿಗೆ ಆಗಿದ್ದರಿಂದ ನಾನು ಆಸ್ಪತ್ರೆಗೆ ಹೋಗಿದ್ದೆ. ಅದೇ ದಿನ ಸಂತೋಷ್‌ನ ಹುಟ್ಟುಹಬ್ಬವಿತ್ತು. ಬೆಳಿಗ್ಗೆ ದೇವಸ್ಥಾನಕ್ಕೆ ಹೋಗಿ ಬಂದು ಇಡೀ ದಿನ ಮನೆಯಲ್ಲೇ ಇದ್ದ ಆತ, ಸಂಜೆ ಬೇಕರಿ ಹತ್ತಿರ ತೆರಳಿದ್ದ. ಆಗ ವಾಸೀಂ ಜತೆ ಗಲಾಟೆಯಾಗಿದೆ’ ಎಂದು ಮೃತರ ತಾಯಿ ಕಲಾ ಹೇಳಿದರು.

‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘7.15ರ ಸುಮಾರಿಗೆ ಕರೆ ಮಾಡಿ ವಿಷಯ ತಿಳಿಸಿದ ಮಗನ ಸ್ನೇಹಿತರು, ಸಂತೋಷ್‌ನನ್ನು ಸಮೀಪದ ಡಿವೈನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ಹೇಳಿದರು. ಅಲ್ಲಿಗೆ ಹೋಗುವಷ್ಟರಲ್ಲಿ ಇನ್ನೊಂದು ಆಸ್ಪತ್ರೆಗೆ ಕರೆದೊಯ್ದಿದ್ದರು. ಸ್ವಲ್ಪ ಸಮಯದ ನಂತರ ಕರೆ ಮಾಡಿದ ಅದೇ ಸ್ನೇಹಿತ, ‘ಅಮ್ಮ ಸಂತೋಷ್ ಸತ್ತು ಹೋದ’ ಎಂದ. ಮೊಮ್ಮಗ ಹುಟ್ಟಿದ ಸಂತಸದಲ್ಲೇ ಇಡೀ ದಿನ ಕಳೆದಿದ್ದ ನನಗೆ, ಮಗನ ಸಾವಿನ ನೋವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ.’

‘ಸಂತೋಷ್ ಹಾಗೂ ವಾಸೀಂ ಮಧ್ಯೆ ಹಲವು ತಿಂಗಳುಗಳಿಂದ ವೈಷಮ್ಯವಿತ್ತು. ಸಣ್ಣಪುಟ್ಟ ವಿಚಾರಕ್ಕೆ ಮೂರು ತಿಂಗಳ ಹಿಂದೆಯೂ ಕಿತ್ತಾಡಿಕೊಂಡಿದ್ದರು. ಜ.29ರ ಸಂಜೆ ಬೇಕರಿ ಹತ್ತಿರ ಗಾಂಜಾ ಸೇದುತ್ತಿದ್ದ ವಾಸೀಂಗೆ ಸಂತೋಷ್‌ ಬೈದಿದ್ದ.’

‘ಆ ದಿನ ರಾತ್ರಿಯೇ ಸ್ನೇಹಿತರೊಂದಿಗೆ ನಮ್ಮ ಮನೆಗೆ ನುಗ್ಗಿದ್ದ ವಾಸೀಂ, ‘ನಿಮ್ಮ ಮಗನನ್ನು ಜೀವಂತವಾಗಿ ಬಿಡುವುದಿಲ್ಲ’ ಎಂದು ಬೆದರಿಸಿ ಹೋಗಿದ್ದ. ಆ ಸಂದರ್ಭದಲ್ಲಿ ಮಗ ಮಲಗಿದ್ದ ಕಾರಣ ಆ ವಿಚಾರ ಆತನಿಗೆ ಗೊತ್ತಿರಲಿಲ್ಲ. ವಾಸೀಂ ಮನೆಗೆ ಬಂದು ಎಚ್ಚರಿಕೆ ನೀಡಿದ್ದನ್ನು ಹೇಳಿದರೆ ವೈಷಮ್ಯ ಇನ್ನಷ್ಟು ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ನಾನೂ ಹೇಳಿರಲಿಲ್ಲ.’

‘ಮಗ ತನ್ನ ಹೊರಗಿನ ವ್ಯವಹಾರಗಳನ್ನು ಮನೆಯಲ್ಲಿ ಹೇಳಿಕೊಳ್ಳುತ್ತಿರಲಿಲ್ಲ. ಯಾವ ಪಕ್ಷಕ್ಕೆ ಅಥವಾ ಸಂಘಟನೆಗೆ ಕೆಲಸ ಮಾಡುತ್ತಿದ್ದ ಎಂಬುದೂ ನಮಗೆ ಗೊತ್ತಿರಲಿಲ್ಲ. ಸರಕು ಸಾಗಣೆ ಆಟೊ ಓಡಿಸಿಕೊಂಡಿದ್ದ ಆತ, ಫೈನಾನ್ಸ್ ವ್ಯವಹಾರವನ್ನೂ ಮಾಡಿಕೊಂಡಿದ್ದ.’

‘ಹತ್ತು ತಿಂಗಳ ಹಿಂದಷ್ಟೇ ಹಾಸನದ ಚೈತ್ರಾ ಜತೆ ಮದುವೆ ಮಾಡಿದ್ದೆವು. ಸೊಸೆ ಈಗ ಐದು ತಿಂಗಳ ಗರ್ಭಿಣಿ. ಇಂಥ ಪರಿಸ್ಥಿತಿಯಲ್ಲಿ ಸಂತೋಷ್‌ನನ್ನು ಕಳೆದುಕೊಂಡಿದ್ದೇವೆ. ಪತಿ ಇಲ್ಲದೆ ಆಕೆ ಹೇಗೆ ಬದುಕಬೇಕು’ ಎಂದು ದುಃಖತಪ್ತರಾದರು.

ಆರೋಪಿಗಳ ಪೂರ್ವಾಪರ

ವಾಸೀಂ: ಕಾಂಗ್ರೆಸ್‌ನ ಜೆ.ಸಿ.ನಗರ ಬ್ಲಾಕ್ ಅಧ್ಯಕ್ಷ ಖಾದರ್ ಅವರ ಮಗ. ಚಿನ್ನಪ್ಪ ಗಾರ್ಡನ್‌ನಲ್ಲಿ ಬೇಕರಿ ಇಟ್ಟುಕೊಂಡಿದ್ದಾನೆ.

ಫಿಲಿಪ್ಸ್: ಚಿನ್ನಪ್ಪ ಗಾರ್ಡನ್ ನಿವಾಸಿಯಾದ ಈತ, ಜಿಮ್ ತರಬೇತುದಾರ. ಕೊಲೆಯಾದ ಸಂತೋಷ್‌ನ ಬಾಲ್ಯ ಸ್ನೇಹಿತ.

ಉಮರ್: ಮುನಿರೆಡ್ಡಿಪಾಳ್ಯ ನಿವಾಸಿ. ಕಾರುಗಳಿಗೆ ಗ್ಲಾಸ್ ಹಾಕುವ ಕೆಲಸ ಮಾಡುತ್ತಾನೆ.

ಇರ್ಫಾನ್: ಮೊದಲು ಮುನಿರೆಡ್ಡಿಪಾಳ್ಯದಲ್ಲಿ ನೆಲೆಸಿದ್ದ ಈತ, ಇತ್ತೀಚೆಗೆ ವಾಸ್ತವ್ಯವನ್ನು ಚಿನ್ನಪ್ಪ ಲೇಔಟ್‌ನ 3ನೇ ಅಡ್ಡರಸ್ತೆಗೆ ಬದಲಾಯಿಸಿದ್ದ. ವೃತ್ತಿಯಲ್ಲಿ ಟೈಲರ್.

‘ಗಾಂಜಾ ಮಾರಾಟ ತಡೆಯಿರಿ’

‘ಚಿನ್ನಪ್ಪ ಗಾರ್ಡನ್ ಹಾಗೂ ಮುನಿರೆಡ್ಡಿಪಾಳ್ಯದಲ್ಲಿ ಹಲವು ದಿನಗಳಿಂದ ಗಾಂಜಾ ಮಾರಾಟ  ನಡೆಯುತ್ತಲೇ ಇದೆ. ಈ ಸಂಬಂಧ ವಿಡಿಯೊ ಸಮೇತ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪೊಲೀಸರಿಗೆ ಕೊಟ್ಟಿದ್ದೇವೆ. ಆದರೆ, ಯಾವುದೇ ಕ್ರಮವಾಗಿಲ್ಲ. ಅವರ ನಿರ್ಲಕ್ಷ್ಯದಿಂದಲೇ ಇಂದು ಸಂತೋಷ್‌ನ ಕೊಲೆಯಾಗಿದೆ. ಇನ್ನಾದರೂ ಪೊಲೀಸರು ಎಚ್ಚೆತ್ತುಕೊಳ್ಳಬೇಕು’ ಎಂದು ಸ್ಥಳೀಯರು ಮನವಿ ಮಾಡಿದರು.

‘ಸಾವಿನ ಮನೆಯಲ್ಲಿ ರಾಜಕೀಯ’

‘ಚಿನ್ನಪ್ಪ ಗಾರ್ಡನ್‌ನಲ್ಲಿ ಧರ್ಮದ ವಿಚಾರವಾಗಿ ಎಂದೂ ಗಲಾಟೆ ನಡೆದಿಲ್ಲ. ಸಂತೋಷ್ ಹತ್ಯೆಯಲ್ಲಿ ಬಿಜೆಪಿ ನಾಯಕರು ರಾಜಕೀಯ ಮಾಡುತ್ತಿದ್ದಾರೆ. ಬಿಬಿಎಂಪಿ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡಿದ್ದ ಸಂತೋಷ್, ಸತ್ತ ನಂತರ ಹೇಗೆ ಬಿಜೆಪಿ ಕಾರ್ಯಕರ್ತನಾಗುತ್ತಾನೆ. ಈಗ ಪ್ರತಿಭಟನೆ ಮಾಡುತ್ತಿರುವವರಲ್ಲಿ ಸ್ಥಳೀಯರು ಯಾರೂ ಇಲ್ಲ’ ಎಂದು ರಾಮಸ್ವಾಮಿ ವಾರ್ಡ್‌ ಕಾರ್ಪೊರೇಟರ್ (ಕಾಂಗ್ರೆಸ್) ನೇತ್ರಾವತಿ ಅವರ ಪತಿ ಕೃಷ್ಣೇಗೌಡ ಹೇಳಿದರು.

ಪ್ರತಿಕ್ರಿಯಿಸಿ (+)