ಎನ್‌ಐಎಗೆ ಒಪ್ಪಿಸಿ; ಆರ್.ಅಶೋಕ

7

ಎನ್‌ಐಎಗೆ ಒಪ್ಪಿಸಿ; ಆರ್.ಅಶೋಕ

Published:
Updated:

ಬೆಂಗಳೂರು: ‘ರಾಜ್ಯದಲ್ಲಿ ನಿರಂತರವಾಗಿ ಹಿಂದೂ ಕಾರ್ಯಕರ್ತರ ಹತ್ಯೆಗಳು ನಡೆಯುತ್ತಿವೆ. ಇಂಥ ಸಂದರ್ಭಗಳಲ್ಲಿ ಸರ್ಕಾರ ಪ್ರತಿ ಬಾರಿಯೂ ಪ್ರಕರಣ ತಿರುಚುವ ಕೆಲಸವನ್ನೇ ಮಾಡಿಕೊಂಡು ಬಂದಿದೆ. ತನಿಖೆಗೂ ಮುನ್ನವೇ, ಇದೇ ಕಾರಣಕ್ಕೆ ಹತ್ಯೆ ನಡೆದಿದೆ ಎಂದು ಪೊಲೀಸರು ಫಲಿತಾಂಶ ನೀಡುತ್ತಿದ್ದಾರೆ’ ಎಂದು ಬಿಜೆಪಿ ಶಾಸಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.

‘ಶಿವಾಜಿನಗರದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ನಡೆದಾಗಲೂ, ರಿಯಲ್ ಎಸ್ಟೇಟ್‌ ವ್ಯವಹಾರದ ವಿಚಾರಕ್ಕೆ ಹತ್ಯೆ ನಡೆದಿದೆ ಎಂದು ಆಗಿನ ಕಮಿಷನರ್ ಮೊದಲೇ ಹೇಳಿದ್ದರು. ಮೈಸೂರಿನಲ್ಲಿ ಬಿಜೆಪಿ ಕಾರ್ಯಕರ್ತ ರಾಜು ಹತ್ಯೆ ಸಂದರ್ಭದಲ್ಲೂ, ಕೌಟುಂಬಿಕ ಕಲಹದ ಕಾರಣ ನೀಡಿದ್ದರು.’

‘ಈ ಎಲ್ಲ ಕೊಲೆಗಳ ಹಿಂದೆ ಎಸ್‌ಡಿಪಿಐ ಹಾಗೂ ಪಿಎಫ್‌ಐ ಸಂಘಟನೆಗಳ ಕೈವಾಡವಿದೆ. ಬಿಜೆಪಿಯ 2ನೇ ಹಂತದ ನಾಯಕರನ್ನು ಮುಗಿಸಬೇಕು ಎಂಬುದು ಅವರ ಉದ್ದೇಶ. ಈಗ ಕೊಲೆಯಾಗಿರುವ ಸಂತೋಷ್ ಕೂಡ ದಲಿತ ಸಮುದಾಯ ಯುವ ನಾಯಕ.’

‘ಆರೋಪಿ ವಾಸೀಂ ಎಸ್‌ಡಿಪಿಐ ಕಾರ್ಯಕರ್ತ. ಗಾಂಜಾ ಮಾರುವ ಸ್ಥಳೀಯ ಹುಡುಗರಿಗೆ ಈತನೇ ನಾಯಕ. ಈ ಬಗ್ಗೆ ಸ್ಥಳೀಯರು ದೂರು ಕೊಟ್ಟರೂ ಪೊಲೀಸರು ಕ್ರಮ ಜರುಗಿಸಿಲ್ಲ. ರಾಜ್ಯದಲ್ಲಿ ಎರಡು ತಿಂಗಳಲ್ಲಿ ಬಿಜೆಪಿಯ ಮೂರು ಕಾರ್ಯಕರ್ತರ ಕೊಲೆಗಳು ನಡೆದಿವೆ. ಆದರೆ, ಮುಖ್ಯಮಂತ್ರಿ ಹಾಗೂ ಗೃಹಸಚಿವರು ಸುಳ್ಳು ಕಾರಣಗಳನ್ನು ನೀಡಿ ವದಂತಿ ಹಬ್ಬಿಸುತ್ತಿದ್ದಾರೆ. ಈ ಎಲ್ಲ ಪ್ರಕರಣಗಳನ್ನೂ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ಒಪ್ಪಿಸಬೇಕು.’

‘ರಾಜ್ಯದಲ್ಲಿ ಕೋಮುಗಲಭೆ ಸಂಬಂಧ ಅಲ್ಪಸಂಖ್ಯಾತರ ವಿರುದ್ಧ ದಾಖಲಾಗಿರುವ 1,200 ಪ್ರಕರಣಗಳನ್ನು ವಾಪಸ್ ಪಡೆಯಲಾಗಿದೆ. ಇದರಿಂದಾಗಿ ಸರ್ಕಾರ ನಮ್ಮ ಜತೆ ಇದೆ ಎಂಬ ಹುಂಬ ಧೈರ್ಯ ಅವರಿಗೆ ಬಂದಿದೆ. ಮರಣೋತ್ತರ ಪರೀಕ್ಷೆಗೆ ಮಾಡಿಸಲು ಅನುಮತಿ ಪತ್ರಕ್ಕೆ ಮೃತರ ರಕ್ತ ಸಂಬಂಧಿಯ ಸಹಿ ಹಾಕಿಸಬೇಕು ಎಂಬುದು ನಿಯಮ. ಆದರೆ, ಪೊಲೀಸರು ಮೃತರ ಸೋದರ ಮಾವನ ಸಹಿಯನ್ನು ಹಾಕಿಸಿಕೊಂಡು ಮರಣೋತ್ತರ ಪರೀಕ್ಷೆ ಮಾಡಿಸಿದ್ದಾರೆ’ ಎಂದು ದೂರಿದರು.

ಬಿಜಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ‘ಈ ಪ್ರಕರಣ ಖಂಡಿಸಿ ಶುಕ್ರವಾರ ರಾಜ್ಯದಾದ್ಯಂತ ಹೋರಾಟ ನಡೆಸುತ್ತಿದ್ದೇವೆ. ರಾಜ್ಯದಲ್ಲಿ ಎಸ್‌ಡಿಪಿಐ ಹಾಗೂ ಕೆಎಫ್‌ಡಿ ಸಂಘಟನೆಗಳನ್ನು ನಿಷೇಧಿಸುವವರೆಗೂ ಹೋರಾಟ ನಿಲ್ಲಿಸುವುದಿಲ್ಲ’ ಎಂದು ಎಚ್ಚರಿಸಿದರು.

‘ರಾಜ್ಯದಲ್ಲಿ ಮುಸ್ಲಿಂ ವ್ಯಕ್ತಿಯ ಹತ್ಯೆಯಾದರೆ ಸರ್ಕಾರ ₹ 25 ಲಕ್ಷದಿಂದ ₹ 50 ಲಕ್ಷದವರೆಗೆ ಪರಿಹಾರ ನೀಡುತ್ತದೆ. ಅಂತೆಯೇ ಸಂತೋಷ್‌ ಕುಟುಂಬಕ್ಕೂ ₹ 50 ಲಕ್ಷ ಪರಿಹಾರ ನೀಡಬೇಕು. ಜತೆಗೆ ಅವರ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಬೇಕು’ ಎಂದು ಆಗ್ರಹಿಸಿದರು.

ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ಗುರುವಾರ ಸಂಜೆ ಸಂತೋಷ್ ಮನೆಗೆ ತೆರಳಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry