ಬುಧವಾರ, ಡಿಸೆಂಬರ್ 11, 2019
22 °C
ಅಂತರರಾಷ್ಟ್ರೀಯ ಮಟ್ಟದ ಜಲ ಉತ್ಸವದಲ್ಲಿ ನೀರು ಶೇಖರಣೆ ಬಗ್ಗೆ ಮಾಹಿತಿ

ನೂತನ ತಂತ್ರಜ್ಞಾನ ಅನಾವರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೂತನ ತಂತ್ರಜ್ಞಾನ ಅನಾವರಣ

ಬೆಂಗಳೂರು: ನೀರಿನ ಶೇಖರಣೆ ಮತ್ತು ಸಂಸ್ಕರಣೆ ಹಾಗೂ ಅಂತರ್ಜಲ ಮಟ್ಟ ಹೆಚ್ಚಿಸುವ ವಿಧಾನಗಳ ಉಪಯುಕ್ತ ಮಾಹಿತಿ ನೀಡುವ ಅಂತರರಾಷ್ಟ್ರೀಯ ಮಟ್ಟದ ಜಲ ಉತ್ಸವ ನಗರದಲ್ಲಿ ಗುರುವಾರ ಆರಂಭವಾಯಿತು.

ತುಮಕೂರು ರಸ್ತೆಯಲ್ಲಿರುವ ಡಾ.ಪ್ರಭಾಕರ ಕೋರೆ ಕನ್‌ವೆನ್ಷನ್‌ ಸೆಂಟರ್‌ನಲ್ಲಿ ಇದೇ 3ರವರೆಗೆ (ಶನಿವಾರ) ಪ್ರದರ್ಶನ ನಡೆಯಲಿದೆ. ಗೃಹ ಸಚಿವ ರಾಮಲಿಂಗಾರೆಡ್ಡಿ ಪ್ರದರ್ಶನಕ್ಕೆ ಚಾಲನೆ ನೀಡಿದರು.

ವಿವಿಧ ರಾಜ್ಯಗಳಿಂದ 220 ಕಂಪನಿಗಳು ಪ್ರದರ್ಶನದಲ್ಲಿ ಭಾಗವಹಿಸಲು ನೋಂದಣಿ ಮಾಡಿಸಿದ್ದವು. ಮೊದಲ ದಿನ 170 ಕಂಪನಿಗಳು ಪಾಲ್ಗೊಂಡಿದ್ದವು. ಜರ್ಮನಿ, ಜಪಾನ್‌, ಥಾಯ್ಲೆಂಡ್‌ನ ಕಂಪನಿಗಳು ನೀರು ಶುದ್ಧೀಕರಣ ಯಂತ್ರೋಪಕರಣಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದವು.

ಕೊಳಚೆ ನೀರು ಶುದ್ಧೀಕರಿಸಿ ಮರುಬಳಕೆ ಮಾಡುವ, ನೀರಿನಲ್ಲಿರುವ ಬ್ಯಾಕ್ಟೀರಿಯಾ ನಿವಾರಿಸುವ, ಗಡುಸು ನೀರು ಮೃದುಗೊಳಿಸುವ, ಒಂದು ಸೆಕೆಂಡ್‌ನಲ್ಲಿ 40 ಬಾಟಲಿಗಳಿಗೆ ನೀರು ತುಂಬಿ ಪ್ಯಾಕ್‌ ಮಾಡುವ.....ಹೀಗೆ ಹಲವು ಬಗೆಯ ತಂತ್ರಜ್ಞಾನ, ಯಂತ್ರೋಪಕರಣಗಳು ಪ್ರದರ್ಶನದಲ್ಲಿದ್ದವು.

ಸದರ್ನ್‌ ಎಲೆಕ್ಟ್ರಾನಿಕ್ಸ್‌ ಕಂಪನಿಯು ಪ್ರದರ್ಶನಕ್ಕೆ ಇಟ್ಟಿದ್ದ ‘ಓಜೋನೆಷನ್ ಸಿಸ್ಟಮ್‌’ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಿದ ಕಂಪನಿಯ ಮಾರುಕಟ್ಟೆ ವಿಭಾಗದ ಸಂಚಾಲಕ ಶ್ರೀನಿವಾಸ ರಾವ್‌, ‘ಇದರಲ್ಲಿ ಕೊಳಚೆ ನೀರಿನ ಬಣ್ಣ ಮತ್ತು ವಾಸನೆಯನ್ನು ಸಂಪೂರ್ಣ ನಿವಾರಿಸಬಹುದು. ಈ ವಿಧಾನದಲ್ಲಿ ಶುದ್ಧೀಕರಿಸಿದ ಕೊಳಚೆ ನೀರನ್ನು ಕುಡಿಯಲು ಮತ್ತು ಅಡುಗೆಗೆ ಹೊರತುಪಡಿಸಿ ಉಳಿದೆಲ್ಲದಕ್ಕೂ ಮರುಬಳಕೆ ಮಾಡಬಹುದು’ ಎಂದರು.

‘ಸದರ್ನ್‌ ಎಲೆಕ್ಟ್ರಾನಿಕ್ಸ್‌ ಕಂಪನಿಯ ಆವರಣದಲ್ಲಿ ‘ಓಜೋನೆಷನ್ ಸಿಸ್ಟಮ್‌’ ಎಸ್‌ಟಿಪಿ ಘಟಕ ಅಳವಡಿಸಲಾಗಿದೆ. ಗಂಟೆಗೆ 2,000 ಲೀಟರ್‌ ಕೊಳಚೆ ನೀರು ಸಂಸ್ಕರಿಸಿ, ಮರುಬಳಕೆ ಮಾಡುತ್ತಿದ್ದೇವೆ’ ಎಂದು ಕಂಪನಿ ಪ್ರತಿನಿಧಿ ಜಾಯ್ಸ್‌ವೇ ತಿಳಿಸಿದರು.

‘ಶುದ್ಧ ಕುಡಿಯುವ ನೀರಿಗೆ ಎಲ್ಲೆಡೆ ಸಮಸ್ಯೆ ಇದೆ. ಕೆಲವು ಕಡೆಗಳಲ್ಲಿ ನೀರು ಲಭ್ಯವಿದ್ದರೂ ನೇರವಾಗಿ ಕುಡಿಯುವಷ್ಟು ಶುದ್ಧವಾಗಿಲ್ಲ. ಗಡಸು ನೀರು ಮತ್ತು ಬ್ಯಾಕ್ಟೀರಿಯಾದಿಂದ ಕೂಡಿದ ನೀರನ್ನು ಕುಡಿಯಲು ಯೋಗ್ಯವಾಗಿಸಲು ಆ್ಯಂಟಿ ಬ್ಯಾಕ್ಟೀರಿಯಲ್‌ ಯೂನಿಟ್‌ (ಸ್ವಾಸ್ಥ್ಯ) ಮತ್ತು ವಾಟರ್‌ ಸಾಫ್ಟ್‌ ಯೂನಿಟ್‌ ಫಿಲ್ಟರ್‌ಗಳನ್ನು ರೂಪಿಸಿದ್ದೇವೆ’ ಎಂದು ಮೈಸೂರಿನ ಕ್ರಿಸ್ಟಲ್‌ ಸ್ಪ್ರಿಂಗ್‌ ವಾಟರ್‌ ಟೆಕ್ನಾಲಜಿ ಕಂಪನಿಯ ಶೈಲೇಶ್‌ ತಿಳಿಸಿದರು.

ಚೆನ್ನೈನ ‘ಕ್ರಿಸ್ಟಲ್‌ ಅಕ್ವಾ ಸಿಸ್ಟಮ್‌’ ಕಂಪನಿಯ ಬಾಟ್ಲಿಂಗ್‌ ಮೆಷಿನ್‌ ಬಗ್ಗೆ ವಿವರಿಸಿದ ಯು.ಎ.ಶಕ್ತಿವೇಲು, ‘ಈ ಸ್ವಯಂಚಾಲಿತ ಯಂತ್ರವು 300 ಎಂ.ಎಲ್, ಅರ್ಧ ಲೀಟರ್‌, 1 ಲೀಟರ್‌ ಹಾಗೂ 2 ಲೀಟರ್‌ ಸಾಮರ್ಥ್ಯದ ಬಾಟಲಿಗಳಿಗೆ ಶುದ್ಧೀಕರಿಸಿದ ನೀರನ್ನು ತುಂಬಿ ಪ್ಯಾಕ್‌ ಮಾಡುತ್ತದೆ. ಒಂದು ಸೆಕೆಂಡ್‌ನಲ್ಲಿ ಅರ್ಧ ಲೀಟರ್‌ ಸಾಮರ್ಥ್ಯದ 40 ಬಾಟಲಿಗಳಿಗೆ ನೀರು ತುಂಬುತ್ತದೆ’ ಎಂದರು.

***

ನೀರಿನ ಶುದ್ಧೀಕರಣಕ್ಕೆ ಆವಿಷ್ಕರಿಸಿರುವ ತಂತ್ರಜ್ಞಾನ ಮತ್ತು ಯಂತ್ರೋಪಕರಣಗಳನ್ನು ಕಡಿಮೆ ದರದಲ್ಲಿ ಸಾಮಾನ್ಯ ಜನರಿಗೆ ದೊರಕಿಸಬೇಕಿದೆ.

–ರಾಮಲಿಂಗಾರೆಡ್ಡಿ, ಗೃಹ ಸಚಿವ

ಪ್ರತಿಕ್ರಿಯಿಸಿ (+)