ಮಂಗಳವಾರ, ಡಿಸೆಂಬರ್ 10, 2019
26 °C
ಫೆಬ್ರುವರಿ 4ರಂದು ನಡೆಯುವ ಪರಿವರ್ತನಾ ರ‍್ಯಾಲಿಯ ಸಮಾರೋಪ ಸಮಾರಂಭ

ಕಾರ್ಯಕ್ರಮಕ್ಕೆ ಕಳೆಗಟ್ಟಿದ ಅರಮನೆ ಮೈದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರ್ಯಕ್ರಮಕ್ಕೆ ಕಳೆಗಟ್ಟಿದ ಅರಮನೆ ಮೈದಾನ

ಬೆಂಗಳೂರು: ಬಿಜೆಪಿಯ ಪರಿವರ್ತನಾ ರ‍್ಯಾಲಿ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲು ಇದೇ 4ರಂದು ನಗರಕ್ಕೆ ಬರಲಿರುವ ಮೋದಿ ಕಾರ್ಯಕ್ರಮಕ್ಕೆ ಅರಮನೆ ಮೈದಾನ ಭರಪೂರ ಸಜ್ಜಾಗಿದೆ. ಕಾರ್ಯಕ್ರಮದ ವರದಿಯನ್ನು ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಪ್ರಸರಿಸಲು 150ಕ್ಕೂ ಹೆಚ್ಚು ಜನರ ತಂಡ ಅಹೋರಾತ್ರಿ ಶ್ರಮಿಸುತ್ತಿದೆ.

‘ವೃತ್ತಿನಿರತ ಎಂಜಿನಿಯರ್‌ಗಳ ಸೇವೆಯನ್ನು ಇದಕ್ಕಾಗಿ ಬಳಸಿಕೊಳ್ಳುತ್ತಿದ್ದು ಕಾರ್ಯಕ್ರಮದ ಇಂಚಿಂಚೂ ವರದಿ ಆ ಕ್ಷಣದಲ್ಲೇ ಆನ್‌ಲೈನ್‌ನಲ್ಲಿ ನೀಡಲು ಶ್ರಮಿಸಲಾಗುತ್ತಿದೆ’ ಎಂದು ಇದಕ್ಕಾಗಿ ಶ್ರಮಿಸುತ್ತಿರುವ ‘ಡಿಜಿಟಲ್‌ ಕಮ್ಯುನಿಕೇಷನ್ ಟೀಂ’ ಮುಖ್ಯಸ್ಥರೂ ಆದ ಹೈಕೋರ್ಟ್‌ ವಕೀಲ ತೇಜಸ್ವಿ ಸೂರ್ಯ ತಿಳಿಸಿದರು.

‘ಪ್ರಜಾವಾಣಿ’ಗೆ ಈ ಕುರಿತು ವಿವರಿಸಿದ ಅವರು, ’ಈಗಾಗಲೇ ನಾವು ಆರಂಭಿಸಿರುವ ವೆಬ್‌ಸೈಟ್‌ಗೆ 15 ಸಾವಿರ ಸದಸ್ಯರು ನೋಂದಣಿ ಮಾಡಿಸಿಕೊಂಡಿದ್ದಾರೆ. ರಾಜ್ಯದಾದ್ಯಂತ ಪ್ರಮುಖವಾಗಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿ ಇರುವವರನ್ನು ಗುರುತಿಸಿದ್ದೇವೆ. ಅವರಲ್ಲಿ ಕಾರ್ಯಕ್ರಮದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಡೆಸುತ್ತಿದ್ದೇವೆ’ ಎಂದರು.

‘ಟ್ವಿಟರ್‌, ಫೇಸ್‌ಬುಕ್‌ಗಳಲ್ಲಿ ಸಕ್ರಿಯವಾಗಿರುವವರು ಹಾಗೂ ಸಾಮಾಜಿಕ ಜಾಲತಾಣದ ಪ್ರಭಾವ ಹೊಂದಿದವರನ್ನು ಗುರುತಿಸಿ ಅವರನ್ನು ತಲುಪುವುದೇ ನಮ್ಮ ಗುರಿ’ ಎಂದರು.

ಕೊನೆ ಹಂತ: ವಿಶಾಲ ಮೈದಾನದಲ್ಲಿ ಕಾರ್ಯಕ್ರಮ ವೀಕ್ಷಕರಿಗೆ ಎರಡೂವರೆ ಲಕ್ಷ ಕುರ್ಚಿಗಳನ್ನು ಹಾಕಲಾಗುತ್ತಿದೆ. ನಾಲ್ಕು ಲಕ್ಷ ಜನರನ್ನು ಸೇರಿಸುವ ಇರಾದೆ ಕಾರ್ಯಕ್ರಮ ಆಯೋಜಕರದ್ದು.

‘ಇದಕ್ಕಾಗಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಸಹ ಕಾರ್ಯದರ್ಶಿ ಸಂತೋಷ್ ಮಾರ್ಗದರ್ಶನ, ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಿರ್ದೇಶನದಲ್ಲಿ ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ.ಸದಾನಂದಗೌಡ, ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್, ಸಹ ಉಸ್ತುವಾರಿ ಪೀಯೂಷ್‍ ಗೋಯಲ್, ರಾಜ್ಯ ಉಸ್ತುವಾರಿ ಮುರಳೀಧರ ರಾವ್ ಸೇರಿದಂತೆ ಪ್ರಮುಖ ನಾಯಕರು ಕಾರ್ಯಕ್ರಮದ ಯಶಸ್ವಿನ ಹೊಣೆ ಹೊತ್ತಿದ್ದಾರೆ’ ಎಂದು ಮಾಧ್ಯಮ ಸಂಚಾಲಕ ಎಸ್.ಶಾಂತಾರಾಂ ತಿಳಿಸಿದರು.

ಪ್ರತ್ಯೇಕ ತಂಡಗಳು: ಮೈದಾನದಲ್ಲಿ ವೇದಿಕೆ ನಿರ್ವಹಣೆ, ಕುರ್ಚಿ ಹಾಕಿಸುವುದು, ಊಟ–ತಿಂಡಿಯ ವ್ಯವಸ್ಥೆ, ವಾಹನಗಳ ಪಾರ್ಕಿಂಗ್ ಸೇರಿದಂತೆ ವಿವಿಧ ಜವಾಬ್ದಾರಿಗಳ ಉಸ್ತುವಾರಿಯನ್ನು ಪ್ರತ್ಯೇಕ ತಂಡಗಳು ನಿರ್ವಹಿಸುತ್ತಿವೆ. ವೇದಿಕೆ ಉಸ್ತುವಾರಿಯನ್ನು ಹಿರಿಯ ನಾಯಕ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ವಹಿಸಿಕೊಂಡಿದ್ದಾರೆ.

ಟೋಲ್‌ ಬಳಿಯೇ ಮಾಹಿತಿ

ಕಾರ್ಯಕ್ರಮಕ್ಕೆ ಆಗಮಿಸುವ ಕಾರ್ಯಕರ್ತರಿಗೆ ಮಧ್ಯಾಹ್ನದ ಭೋಜನ ವ್ಯವಸ್ಥೆ ಹಾಗೂ ಬೆಳಗಿನ ತಿಂಡಿಯನ್ನೂ ವಿತರಿಸಲಾಗುವುದು.

ಕಾರ್ಯಕ್ರಮಕ್ಕೆ ಬರುವ ಕಾರ್ಯಕರ್ತರಿಗೆ ಯಾವುದೇ ರೀತಿಯ ಗೊಂದಲ ಉಂಟಾಗದಂತೆ ನೇರವಾಗಿ ಅರಮನೆ ಮೈದಾನಕ್ಕೆ ಕರೆ ತರಲು ಕೆಲವು ಸ್ವಯಂ ಕಾರ್ಯಕರ್ತರ ತಂಡಗಳನ್ನು ರಚಿಸಲಾಗಿದೆ.

ಮೈಸೂರು, ಮಂಡ್ಯ, ರಾಮನಗರ, ಚಾಮರಾಜನಗರ ಸೇರಿದಂತೆ ಈ ಭಾಗದಿಂದ ಬರುವ ಕಾರ್ಯಕರ್ತರಿಗೆ ಕೆಂಗೇರಿಯಲ್ಲಿ ಸ್ವಯಂ ಕಾರ್ಯಕರ್ತರ ತಂಡ ಮಾಹಿತಿ ನೀಡಲಿದೆ. ಇದೇ ರೀತಿ ಮುಂಬೈ ಮತ್ತು ಹೈದರಾಬಾದ್ ಕರ್ನಾಟಕ ಭಾಗದಿಂದ ಬರುವವರಿಗೆ ನೆರವಾಗಲು ನೆಲಮಂಗಲ ಟೋಲ್‍ನಿಂದಲೇ ವಿವರ ಒದಗಿಸಲಾಗುವುದು. ಉಳಿದಂತೆ ದಕ್ಷಿಣ ಕರ್ನಾಟಕದ ಹಾಸನದಿಂದ ಆಗಮಿಸುವವರಿಗೂ ಇದೇ ಟೋಲ್ ಬಳಿಯೇ ಮಾಹಿತಿ ಲಭ್ಯವಾಗಲಿದೆ.

ಸ್ವಯಂ ಸೇವಾ ಕಾರ್ಯಕರ್ತರು

ಕಾರ್ಯಕ್ರಮದ ಸುತ್ತ ಮುತ್ತ ಪ್ರಮುಖ ಸ್ಥಳಗಳಲ್ಲಿ ಸ್ವಯಂ ಸೇವಾ ಕಾರ್ಯಕರ್ತರ ತಂಡ ಬೆಳಗಿನಿಂದಲೇ ಠಿಕಾಣಿ ಹೂಡಲಿದೆ. ಎಲ್ಲಿಯೂ ಸಂಚಾರ ದಟ್ಟಣೆ ಆಗದಂತೆ ಮತ್ತು ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ಶ್ರಮಿಸಲಿದ್ದಾರೆ. ಈಗಾಗಲೇ ಯಾರು ಯಾರು ಯಾವ ಯಾವ ಕಾರ್ಯಕ್ರಮಗಳನ್ನು ನಿರ್ವಹಿಸಬೇಕು ಎಂಬ ಬಗ್ಗೆ ಸಂಘಟನಾ ಸಹ ಕಾರ್ಯದರ್ಶಿ ಸಂತೋಷ್ ಅವರೇ ಮಾರ್ಗದರ್ಶನ ಮಾಡುತ್ತಿದ್ದಾರೆ.

ಪ್ರತಿಕ್ರಿಯಿಸಿ (+)