ಬುಧವಾರ, ಡಿಸೆಂಬರ್ 11, 2019
16 °C

ಅಭಿವೃದ್ಧಿ ಪರ– ವಿರೋಧ: ಕೇಂದ್ರ ಬಜೆಟ್‌ಗೆ ಮಿಶ್ರ ಪ್ರತಿಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಭಿವೃದ್ಧಿ ಪರ– ವಿರೋಧ: ಕೇಂದ್ರ ಬಜೆಟ್‌ಗೆ ಮಿಶ್ರ ಪ್ರತಿಕ್ರಿಯೆ

ಮಂಗಳೂರು: ಕೇಂದ್ರ ಸರ್ಕಾರ ಮಂಡಿಸಿದ 2018–19 ನೇ ಸಾಲಿನ ಬಜೆಟ್‌ ಕುರಿತು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕ್ಷೇತ್ರಗಳ ಗಣ್ಯರು ಪ್ರತಿಕ್ರಿಯೆ ನೀಡಿದ್ದಾರೆ.

ಆರೋಗ್ಯಕ್ಕೆ ಒತ್ತು

ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. 10 ಕೋಟಿ ಕುಟುಂಬಗಳಿಗೆ ತಲಾ ₹5 ಲಕ್ಷ ಮೊತ್ತದ ಆರೋಗ್ಯ ವಿಮೆ ಘೋಷಿಸಿರುವುದು ಸ್ವಾಗತಾರ್ಹ. ಇದರಿಂದ ದೇಶದ ಅರ್ಧದಷ್ಟು ಜನಸಂಖ್ಯೆಗೆ ಆರೋಗ್ಯ ಭದ್ರತೆ ಒದಗಿಸಿದಂತಾಗುತ್ತದೆ.

ಕುಷ್ಠರೋಗಿಗಳಿಗೆ ₹500 ಪಿಂಚಣಿ ನೀಡಿರುವುದು ಒಳ್ಳೆಯ ಬೆಳವಣಿಗೆ. ಅದರ ಜತೆಗೆ ದೇಶದಾದ್ಯಂತ 24 ಹೊಸ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಲು ಉದ್ದೇಶಿಸಿದ್ದು, ಅದರಲ್ಲಿ ಒಂದು ಕರ್ನಾಟಕಕ್ಕೆ ಲಭಿಸಲಿದೆ. ಈ ವೈದ್ಯಕೀಯ ಕಾಲೇಜನ್ನು ದಕ್ಷಿಣ ಕನ್ನಡ ಜಿಲ್ಲೆಗೆ ತರುವ ನಿಟ್ಟಿನಲ್ಲಿ ನಮ್ಮ ಜನಪ್ರತಿನಿಧಿಗಳು ಆಸಕ್ತಿ ತೋರಬೇಕು.

ಆದಾಯ ತೆರಿಗೆ ಮಿತಿಯನ್ನು ಬದಲಿಸದೇ ಇರುವುದು ಬಹುತೇಕ ಜನರ ನಿರೀಕ್ಷೆಯನ್ನು ಹುಸಿಯಾಗಿಸಿದೆ. ರೈಲ್ವೆ ಸಂಬಂಧಿಸಿದಂತೆ ಕೆಲ ಯೋಜನೆಗಳನ್ನು ಘೋಷಿಸಲಾಗಿದ್ದು, ಅವುಗಳ ಸ್ಪಷ್ಟ ಚಿತ್ರಣ ಲಭ್ಯವಾಗಬೇಕಿದೆ.

ಹನುಮಂತ ಕಾಮತ್‌

ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ

ನಿರಾಶಾದಾಯಕ

ಜನಸಾಮಾನ್ಯರಿಗೆ ಪ್ರಯೋಜನವೂ ಇಲ್ಲ. ಆದಾಯ ತೆರಿಗೆ ಮಿತಿಯನ್ನು ಹೆಚ್ಚಿಸಿಲ್ಲ. ಉದ್ಯೋಗ ಅವಕಾಶಗಳ ಸೃಷ್ಟಿಯ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ.ಕರಾವಳಿ ಭಾಗದಲ್ಲಿ ಪ್ರಮುಖ ವಾಗಿರುವ ಬೀಡಿ ಕಾರ್ಮಿಕರು ಸೇರಿದಂತೆ ದೇಶದ ಕಾರ್ಮಿಕ ವರ್ಗ, ಬಡಜನರ ಅಭಿವೃದ್ಧಿಯ ಬಗ್ಗೆ ಯಾವುದೇ ಯೋಜನೆಗಳನ್ನು ನೀಡಿಲ್ಲ. ಇದೊಂದು ನಿರಾಶಾದಾಯಕ ಬಜೆಟ್‌.

ಕಳೆದ ವರ್ಷ ಘೋಷಿಸಿದ್ದ ಯೋಜನೆಗಳು ಅಲ್ಲಿಯೇ ಉಳಿದಿವೆ. ಈ ವರ್ಷ ಹೊಸ ವಿಮೆ ಯೋಜನೆ ಘೋಷಿಸಲಾಗಿದೆ. ಅದು ಎಷ್ಟರಮಟ್ಟಿಗೆ ಜಾರಿಗೆ ಬರಲಿದೆ ಎಂಬುದಕ್ಕೆ ಕಾಲವೇ ಉತ್ತರಿಸಬೇಕಿದೆ.

ವಿ. ಕುಕ್ಯಾನ್‌ ಸಿಪಿಎಂ ಮುಖಂಡ

ಕಿಸಾನ್ ಕಾರ್ಡ್‌ ಸ್ವಾಗತಾರ್ಹ

ಮೀನುಗಾರಿಕೆಗೆ ₹10 ಸಾವಿರ ಕೋಟಿ ಒದಗಿಸುವುದಾಗಿ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಇದರಡಿ ಯಾವ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾ ಗುತ್ತಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅಲ್ಲದೇ ರೈತರಿಗೆ ನೀಡುತ್ತಿದ್ದ ಕಿಸಾನ್‌ ಕಾರ್ಡ್‌ಗಳನ್ನು ಮೀನುಗಾರರಿಗೂ ವಿಸ್ತರಿಸಿರುವುದು ಸ್ವಾಗತಾರ್ಹ.

ಉಳಿದಂತೆ ಆದಾಯ ತೆರಿಗೆ ಮಿತಿ ಹಾಗೆಯೇ ಇದೆ. ಮೀನುಗಾರಿಕೆ ಸಲಕರಣೆಗಳ ಮೇಲಿನ ಜಿಎಸ್‌ಟಿ ಮೊದಲಿನಂತೆಯೇ ಉಳಿಯಲಿದೆ.

ಮೋಹನ್‌ ಬೆಂಗ್ರೆ

ಟ್ರಾಲ್‌ ಬೋಟ್‌ ಮಾಲೀಕರ ಸಂಘದ ಅಧ್ಯಕ್ಷ

ಮಹಿಳಾ ಸಬಲೀಕರಣ

ಮಹಿಳೆಯರ ಸಬಲೀಕರಣಕ್ಕೆ ಈ ಬಾರಿಯ ಬಜೆಟ್‌ನಲ್ಲಿ ₹75 ಸಾವಿರ ಕೋಟಿ ಅನುದಾನ ಮೀಸಲಿಡುವ ಮೂಲಕ ಐತಿಹಾಸಿಕ ಹೆಜ್ಜೆ ಇಡಲಾಗಿದೆ. ಇದರಿಂದ ದೇಶದ ಅದರಲ್ಲಿಯೂ ಗ್ರಾಮೀಣ ಭಾಗದ ಮಹಿಳೆಯರ ಅಭ್ಯುದಯಕ್ಕೆ ಅನುಕೂಲ ಆಗಲಿದೆ.

ಮೀನುಗಾರಿಕೆಗೆ ₹10 ಸಾವಿರ ಕೋಟಿ ಅನುದಾನ ಒದಗಿಸಲಾಗಿದ್ದು, ಕರಾವಳಿ ಭಾಗದ ಜನರಿಗೆ ಹೆಚ್ಚಿನ ಪ್ರಯೋಜನ ದೊರೆಯಲಿದೆ. ಮುದ್ರಾ ಸಾಲ ಯೋಜನೆಯಡಿಯೂ ಅನುದಾನವನ್ನು ಹೆಚ್ಚಿಸಲಾಗಿದ್ದು, ಇದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ಯುವ ಉದ್ಯಮಿಗಳಿಗೆ ಒಳ್ಳೆಯ ಅವಕಾಶ ಒದಗಿಸಿದಂತಾಗಿದೆ.

10 ಕೋಟಿ ಕುಟುಂಬಗಳಿಗೆ ಆರೋಗ್ಯವಿಮೆ, ಮೀನುಗಾರರಿಗೂ ಕಿಸಾನ್‌ ಕಾರ್ಡ್‌, ಕೃಷಿ ಉತ್ಪನ್ನಗಳ ರಫ್ತು ನಿರ್ಬಂಧ ತೆರವು ಸೇರಿದಂತೆ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಸುಲೋಚನಾ ಭಟ್‌ಬಿಜೆಪಿ ಸಹ ವಕ್ತಾರೆ

ದೂರದೃಷ್ಟಿಯ ದಿಟ್ಟ ಬಜೆಟ್

2014ರ ಚುನಾವಣೆಯ ಸಂದೇಶವಾದ ಬದಲಾವಣೆಯನ್ನು ಮುಂದಿಟ್ಟುಕೊಂಡು ಆರಂಭವಾದ ಮೋದಿ ಸರ್ಕಾರದ ಸಮಗ್ರ ಬದಲಾವಣೆಯ ಸಿದ್ಧಾಂತ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎನ್ನುವ ಧ್ಯೇಯದೊಂದಿಗೆ ಗ್ರಾಮೀಣ ಜನತೆ, ಕೃಷಿ ಬದುಕು, ಹಿರಿಯ ನಾಗರಿಕರು, ಸಣ್ಣ, ಅತಿ ಸಣ್ಣ, ಮಧ್ಯಮ ಗಾತ್ರದ ಉದ್ಯಮಿಗಳು, ಪೂರ್ವ ಪ್ರಾಥಮಿಕದಿಂದ ಪದವಿಪೂರ್ವ ಶಿಕ್ಷಣದವರೆಗೆ ಸಮಗ್ರ ಶಿಕ್ಷಣ ನೀತಿ, ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆ ಹಾಗೂ ‘ಮೇಕ್ ಇನ್ ಇಂಡಿಯಾ’ ಕಲ್ಪನೆಗೆ ಒತ್ತು ನೀಡುವ ವಿಶಿಷ್ಟ ಕಲ್ಪನೆಯೊಂದಿಗೆ ಮಂಡಿಸಿರುವ ಪ್ರಾಮಾಣಿಕ ಬಜೆಟ್‌ ಇದಾಗಿದೆ.

2022ರೊಳಗೆ ಕೃಷಿಕರ ಆದಾಯವನ್ನು ದ್ವಿಗುಣಗೊಳಿಸುವ ಸರ್ಕಾರದ ಯೋಜನೆ, ಖರೀಫ್ ಬೆಳೆಗಳಿಗೆ ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ಕನಿಷ್ಠ ಬೆಂಬಲ ಬೆಲೆ ನಿಗದಿ, ಸಾವಯವ ಕೃಷಿಗೆ ಆದ್ಯತೆ ಹಾಗೂ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ವ್ಯಾಪಕ ಅನುಷ್ಠಾನ ಕೃಷಿಕರ ಬದುಕಿನಲ್ಲಿ ಭರವಸೆಯ ಬೆಳಕು ನೀಡಿದೆ.

ಕ್ಯಾ. ಗಣೇಶ್‌ ಕಾರ್ಣಿಕ್‌

ವಿಧಾನ ಪರಿಷತ್‌ ಪ್ರತಿಪಕ್ಷದ ಮುಖ್ಯಸಚೇತಕ

ಬೆಲೆ ಏರಿಕೆಗೆ ದಾರಿ

ಕೇಂದ್ರ ಸರ್ಕಾರ ಮಂಡಿ ಸಿದ ಬಜೆಟ್ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಇನ್ನಷ್ಟು ದಾರಿ ಮಾಡಿದೆ.ಸೂಟು ಬೂಟುಧಾರಿ ಗಳನ್ನು ಓಲೈಸಲು ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ. ಬಂಡವಾಳ ಶಾಹಿಗಳಿಗೆ ತೆರಿಗೆ ವಿನಾಯಿತಿ ನೀಡಿ, ಜನಸಾಮಾನ್ಯ ರನ್ನು ವಂಚಿಸ ಲಾಗಿದೆ. ಯುವಜನಾಂಗ ಮತ್ತು ವಿದ್ಯಾರ್ಥಿಗಳ ಭವಿಷ್ಯಕ್ಕೆ ಆಶಾದಾಯಕ ಯಾವುದೇ ಯೋಜನೆಗಳಿಲ್ಲ.

ಯು.ಟಿ. ಖಾದರ್ ಆಹಾರ ಸಚಿವ

ಪ್ರತಿಕ್ರಿಯಿಸಿ (+)