ಭಾನುವಾರ, ಡಿಸೆಂಬರ್ 8, 2019
25 °C

ಕುಲಕಸುಬು ಆಧರಿತ ಸಮಾಜಕ್ಕೆ ಅನ್ಯಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಲಕಸುಬು ಆಧರಿತ ಸಮಾಜಕ್ಕೆ ಅನ್ಯಾಯ

ಕೆ.ಆರ್.ನಗರ: ‘ಮಲ ಹೊರುವವನು ಪರಿಶಿಷ್ಟ ಆಗಬಹುದಾದರೆ ಮಲಮಿಶ್ರಿತ, ರೋಗ– ರುಜಿನುಗಳ ಬಟ್ಟೆ ತೊಳೆಯುವ ಮಡಿವಾಳ ಏಕೆ ಪರಿಶಿಷ್ಟ ಆಗಲಿಲ್ಲ’ ಎಂದು ಮೈಸೂರಿನ ಕೌಟಿಲ್ಯ ವಿದ್ಯಾಸಂಸ್ಥೆ ಅಧ್ಯಕ್ಷ ಆರ್.ರಘು ಪ್ರಶ್ನಿಸಿದರು.

ಇಲ್ಲಿನ ಪುರಸಭೆ ಬಯಲು ರಂಗ ಮಂದಿರದಲ್ಲಿ ಗುರುವಾರ ಏರ್ಪಡಿಸಿದ್ದ ವೀರ ಮಡಿವಾಳ ಮಾಚಿದೇವ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಸವಣ್ಣ ಸ್ವಾಭಿಮಾನದ ಪ್ರತಿನಿಧಿಯಾಗಿ ಕುಲಕಸುಬು ಆಧರಿತ ಸಮಾಜಗಳಿಗೆ ಸ್ವಾಭಿಮಾನದ ಗೌರವ ತಂದು ಕೊಟ್ಟಿದ್ದಾರೆ. ಅದರ ಪ್ರತೀಕವಾಗಿ ವಚನ ಸಾಹಿತ್ಯ ಉಳಿದಿದ್ದರೆ ಅದರ ಎಲ್ಲ ಕೀರ್ತಿ ಮಾಚಿದೇವರಿಗೆ ಸಲ್ಲುತ್ತದೆ. ಕುಲಕಸುಬು ಆಧಾರಿತ ಸಮಾಜಗಳು ಸಾಮಾಜಿಕ ನ್ಯಾಯದಿಂದ ಸಂಪೂರ್ಣ ವಾಗಿ ವಂಚಿತವಾಗಿವೆ’ ಎಂದರು.

‘ಗಿರಿಜನರಿಗೆ ಹಕ್ಕು ಕೇಳುವ ಜಾಗೃತಿ ಇದೆ. ಆದರೆ, ಮಡಿವಾಳ ಸಮಾಜದವರಿಗೆ ಇಲ್ಲಿವರೆಗೂ ಜಾಗೃತಿ ಎಂಬುದೇ ಬಂದಿಲ್ಲ. ಅದು ಬರುವ ವರೆಗೆ ನ್ಯಾಯ ಸಿಗುವುದಿಲ್ಲ’ ಎಂದರು.

‘ತಾಲ್ಲೂಕಿನಲ್ಲಿ ಸಮಾಜದ 5 ಸಾವಿರ ಜನರಿದ್ದೇವೆ. ನಮ್ಮ ಸಮಾಜದ ವ್ಯಕ್ತಿ ಶಾಸಕನಾಗದೇ ಇರಬಹುದು. ಆದರೆ ಶಾಸಕರ ಹಣೆಬರಹ ಬರೆಯುವ ತಾಕತ್ತು ನಮ್ಮ ಸಮಾಜಕ್ಕೆ ಇದೆ. ಅದು ತೋರಿಸಿಕೊಡಬೇಕಾಗುತ್ತದೆ. ನಾವು ಮತದಾರರು, ನಮಗೂ ಹಕ್ಕಿದೆ, ನಾವು ಕೂಡ ನಿರ್ಣಾಯಕರು ಎನ್ನುವ ಜಾಗೃತಿ ಪ್ರದರ್ಶಿಸಬೇಕು’ ಎಂದರು.

ಶಾಸಕ ಸಾ.ರಾ.ಮಹೇಶ್ ಮಾತ ನಾಡಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಿಜವಾದ ಕಾಳಜಿ ಇದ್ದರೆ ಜನಸಂಖ್ಯೆ ಆಧಾರದ ಮೇಲೆ ಮೊದಲು ಒಳಮೀಸಲಾತಿ ನೀಡಿ ಸಣ್ಣ ಸಮಾಜ ಮೇಲೆತ್ತುವ ಕೆಲಸ ಮಾಡಬೇಕು’ ಎಂದರು. ಜಿಲ್ಲಾ ಪಂಚಾಯಿತಿ ಸದಸ್ಯ ಡಿ.ರವಿಶಂಕರ್, ಸಂಘದ ಅಧ್ಯಕ್ಷ ಧರ್ಮರಾಜ್ ಮಾತನಾಡಿದರು.

ಪುರಸಭೆ ಅಧ್ಯಕ್ಷೆ ಕವಿತಾ ವಿಜಯಕುಮಾರ್, ಬಿಜೆಪಿ ಮುಖಂಡ ಹೊಸಹಳ್ಳಿ ವೆಂಕಟೇಶ್, ತಾ.ಪಂ ಸದಸ್ಯರಾದ ಸುಮಿತ್ರಾ, ಲಲಿತಾ ನವೀನ್, ಪುರಸಭೆ ಸದಸ್ಯರಾದ ಎನ್.ಶಿವಕುಮಾರ್, ಉಮೇಶ್, ಮುಖಂಡರಾದ ವೈ.ಆರ್.ಪ್ರಕಾಶ್, ಕೆ.ಎಚ್.ಕೃಷ್ಣಯ್ಯ, ಕಾರ್ತಾಳು ರಾಮ ಚಂದ್ರ, ನಿವೃತ್ತ ಎಸ್ಐ ಬೋರಶೆಟ್ಟಿ, ಉಪತಹಶೀಲ್ದಾರ್ ರಂಗರಾಜು, ಮಹಿಳಾ ಸಂಘದ ಅಧ್ಯಕ್ಷೆ ದಾಕ್ಷಾಯಣಿ ಇತರರು ಇದ್ದರು.

ಸರ್ಕಾರದ ಕ್ರಮ ಸ್ವಾಗತಾರ್ಹ

ತಿ.ನರಸೀಪುರ: ತಾಲ್ಲೂಕಿನ ಮುಡುಕುತೊರೆ ಗ್ರಾಮದ ಮಡಿವಾಳ ಮಂಟಪದ ಆವರಣದಲ್ಲಿ ವೀರ ಮಡಿವಾಳ ಮಾಚಿದೇವ ಜಯಂತಿ ಆಚರಿಸಲಾಯಿತು. ಮಾಚಿದೇವರ ಭಾವಚಿತ್ರ ಅನಾವರಣಗೊಳಿಸಿ ಪುಷ್ಟಾ ರ್ಚನೆ ಮಾಡುವ ಮೂಲಕ ತಹಶೀಲ್ದಾರ್ ಬಸವರಾಜ್ ಚಿಗರಿ ಚಾಲನೆ ನೀಡಿದರು.

ಇದೇ ವೇಳೆ ಮಾತನಾಡಿದ ಅವರು, ಸರ್ಕಾರ ಮೊದಲ ಬಾರಿಗೆ ವೀರ ಮಡಿವಾಳ ಮಾಚಿದೇವ ಜಯಂತಿ ಆಚರಣೆ ಮಾಡಲು ಆದೇಶ ಮಾಡಿರುವುದು ಸ್ವಾಗತಾರ್ಹ ಎಂದರು.

ಮಡಿವಾಳರ ಜನಾಂಗದದಿಂದ ತಹಶೀಲ್ದಾರ್ ಅವರಿಗೆ ಸನ್ಮಾನಿಸಲಾ ಯಿತು. ತಾಲ್ಲೂಕು ಮಡಿವಾಳ ಸಂಘದ ಅಧ್ಯಕ್ಷ ಕುರುಬೂರು ಮಹದೇವಸ್ವಾಮಿ, ಉಪಾಧ್ಯಕ್ಷ ಆಲಗೂಡು ಬಸವರಾಜು, ಜಿಲ್ಲಾ ಮಡಿವಾಳ ಸಂಘದ ಕಾರ್ಯಾ ಧ್ಯಕ್ಷ ಎಂ.ರಾಜು, ತಲಕಾಡು ಸಿದ್ದಯ್ಯ, ಬೈರಾಪುರ ಸಹಕಾರ ಸಂಘದ ನಿರ್ದೇಶಕ ಜಿ.ಗುಂಡಶೆಟ್ಟಿ, ಮಂಟಯ್ಯ, ಅಪ್ಪಯ್ಯ, ಜಿ.ಮಹದೇವು, ಜಯಲಕ್ಷ್ಮಿ, ಮಹಿಳಾ ಘಟಕದ ಅಧ್ಯಕ್ಷೆ ಸಾಕಮ್ಮ, ಸುರೇಶ್, ನಟೇಶ್, ಸೋಸಲೆ ಮಹದೇವಶೆಟ್ಟಿ, ಕೊಳ್ಳೇಗಾಲ, ಯಳಂದೂರು, ಮಳವಳ್ಳಿ, ಚಾಮರಾಜ ನಗರ, ತಿ.ನರಸೀಪುರ ತಾಲ್ಲೂಕಿನ 50ಕ್ಕೂ ಹೆಚ್ಚು ಯಜಮಾನರು ಇದ್ದರು.

ಭವನಕ್ಕೆ ಹೆಚ್ಚಿನ ನೆರವು; ಶಾಸಕ

ನಂಜನಗೂಡು: ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಮಡಿವಾಳ ಮಾಚಿದೇವ ಜಯಂತ್ಯುತ್ಸವ ನಡೆಯಿತು. ಶಾಸಕ ಕಳಲೆ ಕೇಶವಮೂರ್ತಿ ಮಾತನಾಡಿ, ನಗರದಲ್ಲಿ ಮಡಿವಾಳ ಸಮಾಜದವರಿಗಾಗಿ ಸಮುದಾಯ ಭವನ ನಿರ್ಮಿಸಲು ಸರ್ಕಾರ ಹಳೆ ಸಂತೆ ಮೈದಾನದ ಬಳಿ 10 ಗುಂಟೆ ಜಾಗ ಮಂಜೂರು ಮಾಡಿ, ₹ 65 ಲಕ್ಷ ನೀಡಿದೆ. ಇದಲ್ಲದೆ, ಶಾಸಕ ಹಾಗೂ ಸಂಸದರ ನಿಧಿಯಿಂದ ಹೆಚ್ಚಿನ ನೆರವು ಒದಗಿಸಲು ಬದ್ಧರಾಗಿದ್ದೇವೆ ಎಂದರು.

ಪ್ರಾಧ್ಯಾಪಕ ಮಹೇಶ್, ಬಸವಾದಿ ಪ್ರಮುಖರಲ್ಲಿ ಮಾಚಿದೇವ ಪ್ರಮುಖರು. ಅವರು ರಚಿಸಿದ 353 ವಚನ ಪ್ರಚಲಿತದಲ್ಲಿವೆ ಎಂದರು. ತಾಲ್ಲೂಕು ಮಡಿವಾಳರ ಸಂಘದ ಕಾರ್ಯದರ್ಶಿ ಬಸವರಾಜು, ಪರಿಶಿಷ್ಟ ಜಾತಿಗೆ ಮಡಿವಾಳ ಸಮಾಜ ಸೇರಿಸುವಂತೆ ಕೋರಿದರು.

ತಹಶೀಲ್ದಾರ್ ದಯಾನಂದ್ ಮಾತನಾಡಿದರು. ತಾಲ್ಲೂಕು ಮಡಿವಾಳರ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್, ನಗರಸಭೆ ಅಧ್ಯಕ್ಷೆ ಪುಷ್ಪಲತಾ, ಸದಸ್ಯ ನಟೇಶ್, ಇಒ ರೇವಣ್ಣ, ಸಿಡಿಪಿಒ ಗೀತಾಲಕ್ಷ್ಮಿ, ಮುಖಂಡರಾದ ನಾಗೇಶ್ ರಾಜ್, ಮಾರುತಿ, ಜಗದೀಶ್, ಶಿವಣ್ಣ ಇದ್ದರು.

* * 

ಕೇವಲ ದೇವಸ್ಥಾನ, ಸಮುದಾಯ ಭವನದಿಂದ ಸಮಾಜ ಉದ್ಧಾರ ಆಗುವುದಿಲ್ಲ. ಎಲ್ಲರ ಸಹಕಾರ ಬೇಕಾಗಿದೆ. ನಮ್ಮ ಹೋರಾಟ ಯಾರ ವಿರುದ್ಧವೂ ಅಲ್ಲ ಆರ್.ರಘು,ಮೈಸೂರಿನ ಕೌಟಿಲ್ಯ ವಿದ್ಯಾಸಂಸ್ಥೆ ಅಧ್ಯಕ್ಷ

ಪ್ರತಿಕ್ರಿಯಿಸಿ (+)