ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಬಜೆಟ್‌ಗೆ ಮಿಶ್ರ ಪ್ರತಿಕ್ರಿಯೆ

Last Updated 2 ಫೆಬ್ರುವರಿ 2018, 6:57 IST
ಅಕ್ಷರ ಗಾತ್ರ

ರಾಮನಗರ: ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಗುರುವಾರ ಮಂಡಿಸಿದ ಮುಂಗಡ ಆಯ–ವ್ಯಯ ಪತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ದೇಶದಲ್ಲಿನ ಕೃಷಿ ಅರ್ಥವ್ಯವಸ್ಥೆಗೆ ಹೊಸ ರೂಪ ನೀಡುವ ಸಲುವಾಗಿ ಹತ್ತು ಹಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸುವುದನ್ನು ಕೆಲವರು ಶ್ಲಾಘಿಸಿದರೆ, ಇನ್ನೂ ಕೆಲವರು ಇದು ಮೂಗಿಗೆ ತುಪ್ಪ ಸವರುವ ಕೆಲಸ ಎಂದಿದ್ದಾರೆ. ಬಿದಿರು ಕೃಷಿ ಉತ್ತೇಜನ, ಆಪರೇಶನ್ ಗ್ರೀನ್‌, ಮಾರುಕಟ್ಟೆ ವ್ಯವಸ್ಥೆ ಸುಧಾರಣೆ ಮೊದಲಾದವು ರೈತರ ಮೆಚ್ಚುಗೆಯ ಪಟ್ಟಿಯಲ್ಲಿವೆ, ಆದರೆ ಸಾಲ ಮನ್ನಾ ನಿರ್ಧಾರ ಪ್ರಕಟಿಸದೇ ಹೋದದ್ದಕ್ಕೆ ಸಿಟ್ಟೂ ಉಂಟಾಗಿದೆ.

ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ವಾರ್ಷಿಕ ₹5 ಲಕ್ಷವರೆಗಿನ ಆರೋಗ್ಯ ವಿಮೆ ಕಲ್ಪಿಸುವ ಯೋಜನೆಯನ್ನು ಜನ ಮೆಚ್ಚಿಕೊಂಡಿದ್ದಾರೆ. 8 ಕೋಟಿ ಕುಟುಂಬಗಳಿಗೆ ಉಚಿತವಾಗಿ ಎಲ್‌ಪಿಜಿ ಸಂಪರ್ಕ ವಿತರಣೆ, ಪರಿಶಿಷ್ಟ ಜಾತಿ/ವರ್ಗಗಳ ಕಲ್ಯಾಣಕ್ಕೆ ಹೆಚ್ಚಿನ ಅನುದಾನ ಮೀಸಲು, ಏಕಲವ್ಯ ವಸತಿ ಶಾಲೆಗಳ ಆರಂಭ ಮೊದಲಾದ ಸಾಮಾಜಿಕ ಕಲ್ಯಾಣ ಯೋಜನೆಗಳನ್ನು ಜನರು ಒಪ್ಪಿಕೊಂಡಿದ್ದಾರೆ.

ಆದರೆ ವೈಯಕ್ತಿಕ ಆದಾಯ ತೆರಿಗೆ ಮಿತಿಯನ್ನು ಹೆಚ್ಚಿಸದೇ ಇರುವುದು ಬಹುಸಂಖ್ಯಾತರಾದ ನೌಕರ ವರ್ಗದ ಅಸಮಾಧಾನಕ್ಕೆ ಕಾರಣವಾಗಿದೆ. ಬಜೆಟ್‌ನಲ್ಲಿ ರಾಮನಗರಕ್ಕೆ ನೇರವಾಗಿ ಯಾವುದೇ ಘೋಷಣೆ ಆಗದಿದ್ದರೂ ನೆರೆಯ ಬೆಂಗಳೂರಿಗೆ ಉಪನಗರ ರೈಲು ವ್ಯವಸ್ಥೆಗೆ ನೆರವು ಘೋಷಿಸಿರುವುದು ಇಲ್ಲಿನ ಜನರಿಗೂ ಅನುಕೂಲ ಆಗಲಿದೆ.
ಕೇಂದ್ರ ಬಜೆಟ್‌ ಕುರಿತು ಜನಸಾಮಾನ್ಯರು ಹಾಗೂ ವಿವಿಧ ವರ್ಗಗಳು ಹಾಗೂ ರಾಜಕೀಯ ಪಕ್ಷಗಳ ಮುಖಂಡರ ಅಭಿಪ್ರಾಯ ಇಂತಿದೆ.

ರೈತ ಮುಖಂಡರ ಸಿಟ್ಟು: ‘ಕೃಷಿ ವಲಯಕ್ಕೆ ಹಲವು ಯೋಜನೆಗಳನ್ನು ಹಣಕಾಸು ಸಚಿವರು ಘೋಷಣೆ ಮಾಡಿದ್ದಾರೆ. ಆದರೆ ಅದರಿಂದ ನಿಜವಾದ ಕೃಷಿಕರಿಗೆ ಹೆಚ್ಚಿನ ಪ್ರಯೋಜನವಿಲ್ಲ. ಬದಲಾಗಿ ಕೃಷಿ ಕ್ಷೇತ್ರವನ್ನೂ ವ್ಯಾಪಾರೀಕರಣಗೊಳಿಸಲು ಬಿಜೆಪಿ ಸರ್ಕಾರ ಮುಂದಾಗಿದೆ’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ. ಲಕ್ಷ್ಮಣಸ್ವಾಮಿ ದೂರಿದರು.

‘2022ರ ಹೊತ್ತಿಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಸಚಿವರು ಹೇಳಿದ್ದಾರೆ. ಆದರೆ ಈ ಎಲ್ಲ ಯೋಜನೆಗಳು ರೈತರ ಆತ್ಮಹತ್ಯೆಯನ್ನು ದ್ವಿಗುಣಗೊಳಿಸುವ ಯೋಜನೆಗಳು ಇದ್ದಂತೆ ಇವೆ. ಮುಖ್ಯವಾಗಿ ಇವತ್ತು ರೈತರ ಬೆಳೆಗಳಿಗೆ ತಗುವ ಉತ್ಪದನಾ ವೆಚ್ಚವನ್ನು ಅಳೆಯುವ ಮಾನದಂಡಗಳೇ ಇಲ್ಲ. ಯಾವುದೇ ಮಾರುಕಟ್ಟೆ ಭದ್ರತೆ ಇಲ್ಲ. ರೈತರು ಒತ್ತಾಯಿಸುತ್ತಲೇ ಬಂದಿದ್ದರೂ ಕೃಷಿ ಸಾಲ ಮನ್ನಾ ಮಾಡುವ ನಿರ್ಧಾರ ಪ್ರಕಟಿಸಿಲ್ಲ. ಶೂನ್ಯ ಬಡ್ಡಿದರದಲ್ಲಿ ಬೆಳೆ ಸಾಲ ನೀಡುವ ಪ್ರಸ್ತಾಪವೂ ಇಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಡಾ. ಸ್ವಾಮಿನಾಥನ್‌ ಆಯೋಗದ ವರದಿಯಂತೆ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ಮತ್ತು ಮಾರುಕಟ್ಟೆ ಒದಗಿಸುವ ಕೆಲಸ ಆಗಬೇಕಿತ್ತು ಎಂದರು.

ಮಧ್ಯಮ ವರ್ಗಕ್ಕೆ ನಿರಾಸೆ: ‘ವೈಯಕ್ತಿಕ ಆದಾಯ ತೆರಿಗೆಯ ಮಿತಿಯನ್ನು ₹3ಲಕ್ಷಕ್ಕೆ ಏರಿಸಬಹುದು ಎನ್ನುವ ನಿರೀಕ್ಷೆ ಇತ್ತು. ಅದರ ಬದಲಿಗೆ ಕಾರ್ಪೋರೇಟ್ ತೆರಿಗೆಯನ್ನು ಶೇ 5ರಷ್ಟು ಕಡಿಮೆ ಮಾಡಲಾಗಿದೆ. ಇದರಿಂದ ಸಹಜವಾಗಿಯೇ ನಿರಾಸೆಯಾಗಿದೆ. ಆದರೆ ಆರೋಗ್ಯ ವಿಮೆ, ಗ್ರಾಮ ಪಂಚಾಯಿತಿಗಳಿಗೆ ಹೈಸ್ಪೀಡ್‌ ಅಂತರ್ಜಾಲ ಸೌಲಭ್ಯ ಮೊದಲಾದ ಯೋಜನೆಗಳು ನಿರೀಕ್ಷೆ ಹುಟ್ಟಿಸಿವೆ’ ಎಂದು ಅಮೃತಾ ಎಂಜಿನಿಯರಿಂಗ್ ಕಾಲೇಜು ಉಪನ್ಯಾಸಕ ರಾಮು ಅಭಿಪ್ರಾಯಪಟ್ಟರು.

ರಾಜಕೀಯ ಮುಖಂಡರ ಅಭಿಪ್ರಾಯ: ಕಾಂಗ್ರೆಸ್‌ನ ಮುಖಂಡರೂ ಆದ ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಲಿಂಗಪ್ಪ ಪ್ರತಿಕ್ರಿಯಿಸಿ ‘ಹಣಕಾಸು ಸಚಿವರು ಈ ಬಾರಿಯ ಬಜೆಟ್‌ನಲ್ಲಿ ಭರಪೂರ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಆದರೆ ಅವುಗಳನ್ನು ಎಷ್ಟರಮಟ್ಟಿಗೆ ಕಾರ್ಯ ರೂಪಕ್ಕೆ ತರಲು ಸಾಧ್ಯವಿದೆ’ ಎಂದು ಪ್ರಶ್ನಿಸಿದರು.

‘ಬ್ಯಾಂಕುಗಳ ಕೋಟಿಗಟ್ಟಲೆ ಅನುತ್ಪಾದಕ ಸಾಲದ ನಷ್ಟ ಭರ್ತಿ ಮಾಡಿಕೊಡುವ ಕೇಂದ್ರ ಸರ್ಕಾರವು ರೈತರ ಸಾಲ ಮನ್ನಾದ ಬಗ್ಗೆಯೂ ಚಿಂತನೆ ನಡೆಸಬೇಕಿತ್ತು. ಒಮ್ಮೆ ಅವರನ್ನು ಋಣಮುಕ್ತರನ್ನಾಗಿಸಿದ್ದಲ್ಲಿ ಕೃಷಿ ಕ್ಷೇತ್ರಕ್ಕೆ ಎಷ್ಟೋ ಉತ್ತೇಜನ ದೊರೆಯುತ್ತಿತ್ತು. ಅದನ್ನು ಬಿಟ್ಟು ಕೇವಲ ಕಾರ್ಪೋರೇಟ್‌ ಕುಳಗಳ ಓಲೈಕೆ ಮಾಡಹೊರಟಿರುವುದು ಸರಿಯಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

‘ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್‌,ಡಿ. ಕುಮಾಸ್ವಾಮಿ ಅವರೇ ಹೇಳಿರುವಂತೆ ಕರ್ನಾಟಕದ ಪಾಲಿಗೆ ಇದು ಆಶಾದಾಯಕ ಬಜೆಟ್ ಅಲ್ಲ. ರಾಜ್ಯಕ್ಕೆಂದು ಯಾವುದೇ ವಿಶೇಷ ಯೋಜನೆಗಳನ್ನು ನೀಡಿಲ್ಲ. ರೈತರ ಸಾಲ ಮನ್ನಾ ಮಾಡುವುದು, ಶೂನ್ಯ ಬಡ್ಡಿದರಲ್ಲಿ ಅವರಿಗೆ ದೀರ್ಘ ಕಾಲದ ಕೃಷಿ ಸಾಲ ನೀಡುವ ಪ್ರಯತ್ನಕ್ಕೆ ಸರ್ಕಾರ ಮುಂದಾಗಿಲ್ಲ. ಮಧ್ಯಮ ವರ್ಗಕ್ಕೂ ಹೆಚ್ಚು ಪ್ರಯೋಜನಕಾರಿ ಆಗಿಲ್ಲ. ಕಾರ್ಪೊರೇಟ್‌ ಕುಳಗಳಿಗಷ್ಟೇ ಇದೊಂದು ಅನುಕೂಲಕರ ಬಜೆಟ್’ ಎಂದು ಜಾತ್ಯತೀತ ಜನತಾದಳದ ಕಾನೂನು ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಶೇಖರ್ ಪ್ರತಿಕ್ರಿಯಿಸಿದರು.
ಬಿಜೆಪಿ ಕಾರ್ಯಕರ್ತರು ಕೇಂದ್ರದ ಬಜೆಟ್‌ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು.

‘8 ಕೋಟಿ ಮಹಿಳೆಯರಿಗೆ ಸರ್ಕಾರ ಎಲ್‌ಪಿಜಿ ವಿತರಿಸಹೊರಟಿದೆ. ಎಲ್ಲ ಬಡವರಿಗೆ ಆರೋಗ್ಯ ವಿಮೆ ಕಲ್ಪಿಸುವ ಕನಸು ಹೊತ್ತಿದೆ. ಸ್ವಂತ ಸೂರಿನ ಕನಸು ನನಸಾಗಿಸುವ ಪ್ರಮಾಣ ಮಾಡಿದೆ. ಇದೊಂದು ಆಶಾದಾಯಕ ಬಜೆಟ್’ ಎಂದು ಬಿಜೆಪಿಯ ಮಾಧ್ಯಮ ವಕ್ತಾರ ರುದ್ರದೇವರು ತಿಳಿಸಿದರು.

ಕಾರ್ಪೋರೇಟ್‌ ಕಂಪೆನಿಗಳ ನೆರವಿಗೆ ಧಾವಿಸುವ ಕೇಂದ್ರ ಸರ್ಕಾರ ದೇಶದ ರೈತರ ಸಾಲ ಮನ್ನಾದ ಬಗ್ಗೆಯೂ ನಿರ್ಧಾರ ಪ್ರಕಟಿಸಬೇಕಿತ್ತು
ಸಿ.ಎಂ. ಲಿಂಗಪ್ಪ
ವಿಧಾನ ಪರಿಷತ್ ಸದಸ್ಯ
(1ಆರ್ಎಂಜಿ7)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT