ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಸಕ್ಕರೆ ಕಾರ್ಖಾನೆಗೆ ರಜತ ಸಂಭ್ರಮ..

Last Updated 2 ಫೆಬ್ರುವರಿ 2018, 7:23 IST
ಅಕ್ಷರ ಗಾತ್ರ

ವಿಜಯಪುರ: ರೈತರಿಂದ, ರೈತರಿಗಾಗಿ, ರೈತರಿಗೋಸ್ಕರ ಎರಡೂವರೆ ದಶಕದ ಹಿಂದೆ ಆರಂಭಗೊಂಡ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಗೆ ಇದೀಗ ರಜತ ಸಂಭ್ರಮ.

ಮೂರೂವರೆ ದಶಕದ ಹಿಂದೆ ಸಹಕಾರಿ ಚಳವಳಿಯ ಭೀಷ್ಮ, ಗದಗ ಜಿಲ್ಲೆಯ ಹುಲಕೋಟಿಯ ಕೆ.ಎಚ್‌.ಪಾಟೀಲ, ಶಿರಬೂರಿನ ಬಿ.ಟಿ.ಪಾಟೀಲರ ಮೂಸೆಯಲ್ಲಿ ಅರಳಿದ ಕಲ್ಪನೆಯೇ ಬಬಲೇಶ್ವರ ತಾಲ್ಲೂಕಿನ ಕೃಷ್ಣಾ ನಗರದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ.

ಕೃಷ್ಣಾ ತಟದ ಹಳ್ಳಿಗಳಲ್ಲಿನ ಕಬ್ಬಿನ ಬೆಳೆಗಾರರ ಶ್ರಮಕ್ಕೆ ತಕ್ಕ ಪ್ರತಿಫಲ ದೊರಕಿಸಿಕೊಡಬೇಕು ಎಂಬ ಆಶಯದಿಂದ ಆರಂಭಗೊಂಡ ಸಹಕಾರಿ ಸಕ್ಕರೆ ಕಾರ್ಖಾನೆ ಇದೀಗ ಬಹುತೇಕ ಬೆಳೆಗಾರರ ಪಾಲಿನ ‘ನಂದಾ ದೀಪ’ವಾಗಿ ಮಾರ್ಪಟ್ಟಿದೆ.

ಆರಂಭದ ವರ್ಷದಿಂದ ಹಿಡಿದು, ಇಲ್ಲಿಯವರೆಗಿನ 25 ವರ್ಷದ ಅವಧಿಯಲ್ಲಿ ಕಾರ್ಖಾನೆ ಸಾಧನೆಯ ಶಿಖರದಲ್ಲಿದೆ. ವರ್ಷದಿಂದ ವರ್ಷಕ್ಕೆ ಲಾಭದ ಪ್ರಮಾಣ ಹೆಚ್ಚಿದಂತೆ, ತನ್ನ ವಿಸ್ತಾರವನ್ನು ವಿಸ್ತರಿಸಿಕೊಳ್ಳುವ ಜತೆಗೆ, ರೈತ ಸ್ನೇಹಿಯಾಗಿಯೂ ಕಾರ್ಯ ನಿರ್ವಹಿಸುತ್ತಿದೆ.

ಸಕ್ಕರೆ ಧಾರಣೆ ಮುಕ್ತ ಮಾರುಕಟ್ಟೆಯಲ್ಲಿ ಪಾತಾಳಕ್ಕೆ ಕುಸಿದು, ಕಬ್ಬಿಗೆ ಸೂಕ್ತ ಬೆಲೆ ದೊರಕದಿದ್ದ ಸಂದರ್ಭವೂ ‘ನಂದಿ’ ರೈತರ ಕೈಬಿಟ್ಟಿಲ್ಲ. ಸಹಕಾರಿ ತತ್ವ ಮರೆತಿಲ್ಲ. ಇಂದಿಗೂ ಸಂಸ್ಥಾಪಕರ ಆಶಯವನ್ನು ಮುಂದುವರೆಸಿಕೊಂಡು ಬಂದಿರುವುದು ವಿಶೇಷ.

ರೈತರ ನಿರ್ಧಾರವೇ ಅಂತಿಮ: ‘ಸಹಕಾರ ತತ್ವದಡಿ ಆರಂಭಗೊಂಡ ಬಹುತೇಕ ಸಂಘ–ಸಂಸ್ಥೆಗಳು ಕಾಲಕ್ರಮೇಣ ಏಕ ವ್ಯಕ್ತಿ ಆಡಳಿತಕ್ಕೆ ಸಿಕ್ಕಿ, ಕುಟುಂಬದ ಆಸ್ತಿಯಾಗಿ ಮಾರ್ಪಾಟುಗೊಂಡಿರುವ ನಿದರ್ಶನವೇ ಇಂದು ಎಲ್ಲೆಡೆ ರಾಚುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಕಾರ್ಯ ನಿರ್ವಹಿಸುತ್ತಿದೆ’ ಎನ್ನುತ್ತಾರೆ ಸಂಸ್ಥಾಪಕ ಸದಸ್ಯ, ಹಾಲಿ ನಿರ್ದೇಶಕರೂ ಆಗಿರುವ ಎಚ್‌.ಎಸ್‌.ಕೋರಡ್ಡಿ.

‘ಸಹಕಾರಿ ಸಂಘ–ಸಂಸ್ಥೆಗಳಲ್ಲಿ ವರ್ಷಕ್ಕೊಮ್ಮೆ ಸರ್ವ ಸದಸ್ಯರ ಸಾಮಾನ್ಯ ಸಭೆ ನಡೆಸಬೇಕು ಎಂಬುದು ನಿಯಮಾವಳಿ. ಆದರೆ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಕನಿಷ್ಠ ಮೂರ್ನಾಲ್ಕು ಸಭೆ ನಡೆಯುತ್ತವೆ.

ಕಬ್ಬು ನುರಿಸುವುದನ್ನು ಯಾವಾಗ ಆರಂಭಿಸಬೇಕು. ಟನ್‌ಗೆ ಎಷ್ಟು ಬೆಲೆ ನಿಗದಿಪಡಿಸಬೇಕು. ಲಾಭಾಂಶವನ್ನು ಯಾವ ಪ್ರಮಾಣದಲ್ಲಿ ಹಂಚಬೇಕು. ರೈತ ಉಪಕಾರಿ ಯೋಜನೆಯನ್ನು ಪ್ರಸಕ್ತ ವರ್ಷ ಯಾವ್ಯಾವನ್ನು ಅನುಷ್ಠಾನಗೊಳಿಸಬೇಕು ಎಂಬುದನ್ನು ನಿರ್ಧರಿಸುವುದು ಈ ಸಭೆಗಳಲ್ಲೇ.

ಇಲ್ಲಿ ತೆಗೆದುಕೊಂಡ ನಿರ್ಧಾರವನ್ನು ಆಡಳಿತ ಮಂಡಳಿ ಅನುಷ್ಠಾನಗೊಳಿಸುತ್ತದೆ. ಸಕ್ಕರೆ ಇಳುವರಿ ಪ್ರಮಾಣವೂ ಚಲೋ ಇದ್ದು, ವರ್ಷದಿಂದ ವರ್ಷಕ್ಕೆ ಕಾರ್ಖಾನೆ ಬೆಳವಣಿಗೆ ಸಾಧಿಸುವ ಜತೆ ಜತೆಯಲ್ಲೇ ರೈತರಿಗೂ ಹಲವು ಸೌಲಭ್ಯಗಳನ್ನು ಒದಗಿಸುತ್ತಿದೆ’ ಎಂದು ಕೋರಡ್ಡಿ ತಿಳಿಸಿದರು.

ರಜತ ಮಹೋತ್ಸವ ಇಂದು

ಕೃಷ್ಣಾ ನಗರದಲ್ಲಿನ ನಂದಿ ಅಂತರರಾಷ್ಟ್ರೀಯ ಶಾಲೆಯ ಬಿ.ಟಿ.ಪಾಟೀಲ ಮೆಮೊರಿಯಲ್‌ ಸಭಾಂಗಣದಲ್ಲಿ ಕಾರ್ಖಾನೆಯ ರಜತ ಮಹೋತ್ಸವ ಸಮಾರಂಭ ಶುಕ್ರವಾರ (ಫೆ 2) ನಡೆಯಲಿದೆ.

ಇದೇ ಸಂದರ್ಭ ನಿತ್ಯ 50000 ಲೀಟರ್‌ ಇಥೆನಾಲ್‌ ಉತ್ಪಾದಿಸುವ ₹ 82.14 ಕೋಟಿ ವೆಚ್ಚದ ಘಟಕ, ಬೆಳೆಗಾರರು, ರೈತ ಸದಸ್ಯರ ಅನುಕೂಲಕ್ಕಾಗಿ ₹ 11.74 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಕೆ.ಎಚ್.ಪಾಟೀಲ ಸಭಾ ಭವನ (ರೈತ ಭವನ)ದ ಉದ್ಘಾಟನೆ, ಕಾರ್ಖಾನೆಯ ವಿಸ್ತರಾಣಾ ಯೋಜನೆಗೆ ಶಂಕುಸ್ಥಾಪನೆ, ಕಬ್ಬು ಬೆಳೆಗಾರರ ಪತ್ತಿನ ಸಹಕಾರಿ ಸಂಘದ ಕಟ್ಟಡದ ಶಿಲಾನ್ಯಾಸ, ಶಿಕ್ಷಣ ಸಂಸ್ಥೆಯ ವಸತಿಗೃಹದ ಶಂಕುಸ್ಥಾಪನೆ ಸಮಾರಂಭ, ಶಿಕ್ಷಕರ ವಸತಿ ಸಮುಚ್ಚಯಗಳ ಉದ್ಘಾಟನೆ ಸಹ ನಡೆಯಲಿದೆ ಎಂದು ಕಾರ್ಖಾನೆಯ ಮೂಲಗಳು ತಿಳಿಸಿವೆ.

* * 

ಕಾರ್ಖಾನೆಯಲ್ಲಿ ಸಹಕಾರಿ ತತ್ವ ನೈಜವಾಗಿ ಅನುಷ್ಠಾನಗೊಂಡಿದೆ. ಆಡಳಿತ ಮಂಡಳಿ ಮುಂದೆಯೂ ರೈತ ಹಿತ ಕಾಪಾಡಲಿದೆ. ಇಲ್ಲಿ ರೈತರೇ ಮಾಲೀಕರು
ಎಚ್‌.ಎಸ್‌.ಕೋರಡ್ಡಿ, ಸಂಸ್ಥಾಪಕ ಸದಸ್ಯ, ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT