ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನ ಮಂಜೂರಿಯಲ್ಲಿ ಮುಂದು..!

Last Updated 2 ಫೆಬ್ರುವರಿ 2018, 7:25 IST
ಅಕ್ಷರ ಗಾತ್ರ

ವಿಜಯಪುರ: ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ಶಾಸಕರ ಪ್ರದೇಶಾಭಿವೃದ್ಧಿ ನಿಧಿಗೆ ಐದು ವರ್ಷದ ಅವಧಿಯಲ್ಲಿ ₹ 9.47 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಶಾಸಕ ಸಿ.ಎಸ್‌.ನಾಡಗೌಡ ಈಗಾಗಲೇ ₹ 8.52 ಕೋಟಿ ಮೊತ್ತವನ್ನು ವಿವಿಧ ಕಾಮಗಾರಿಗಳಿಗೆ ಮಂಜೂರುಗೊಳಿಸಿದ್ದಾರೆ.

2017–18ನೇ ಸಾಲಿನಲ್ಲಿ ₹ 1.50 ಕೋಟಿ ಅನುದಾನ ಬಿಡುಗಡೆಗೊಂಡಿದ್ದು, ಇದರಲ್ಲೂ ₹ 63 ಲಕ್ಷ ಮೊತ್ತವನ್ನು 20 ಕಾಮಗಾರಿಗಳಿಗೆ ಮಂಜೂರುಗೊಳಿಸುವ ಮೂಲಕ, ಶಾಸಕರ ನಿಧಿ ಸದ್ಬಳಕೆಗೆ ಮುಂದಾಗಿದ್ದಾರೆ.

ಅಧಿಕಾರದ ಅವಧಿಯ ಆರಂಭದಿಂದ 2017ರ ಡಿಸೆಂಬರ್‌ ಅಂತ್ಯದವರೆಗೂ, ಸಿ.ಎಸ್‌.ನಾಡಗೌಡ ಒಟ್ಟು 260 ಕಾಮಗಾರಿಗಳಿಗೆ ಅನುದಾನವನ್ನು ಮಂಜೂರುಗೊಳಿಸಿ ಜಿಲ್ಲಾಡಳಿತಕ್ಕೆ ಶಿಫಾರಸು ಪತ್ರ ನೀಡಿದ್ದಾರೆ. ಇದರಲ್ಲಿ ₹ 6.29 ಕೋಟಿ ಮೊತ್ತವನ್ನು ವಿವಿಧ ಕಾಮಗಾರಿ ನಿರ್ವಹಣೆಗಾಗಿ ಜಿಲ್ಲಾಡಳಿತ ಬಿಡುಗಡೆಗೊಳಿಸಿದೆ.

ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿದ್ದರೆ, ಇನ್ನೂ ಹಲವು ನಿರ್ಮಾಣ ಹಂತದಲ್ಲಿವೆ. ಕೆಲವು ಆರಂಭಗೊಳ್ಳಬೇಕಿದೆ. ಭೂ ಸೇನಾ ನಿಗಮ ಸೇರಿದಂತೆ ಕೆಆರ್‌ಐಡಿಎಲ್‌, ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವಿಭಾಗಕ್ಕೆ ಹೆಚ್ಚಿನ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಿದ್ದು, ಸಮುದಾಯ ಭವನ ನಿರ್ಮಾಣಕ್ಕೆ ಆದ್ಯತೆ ನೀಡಿರುವುದು ಜಿಲ್ಲಾಡಳಿತ ಒದಗಿಸಿರುವ ದಾಖಲೆಗಳಲ್ಲಿ ದೃಢಪಟ್ಟಿದೆ.

ಬಹುತೇಕ ಕಾಮಗಾರಿಗಳಿಗೆ ₹ 1, 2 ಲಕ್ಷ ಅನುದಾನವನ್ನು ಮಂಜೂರು ಮಾಡಿದ್ದಾರೆ. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾಮಗಾರಿ ನಡೆಸಲು ಸಾಧ್ಯವಾಗಿದೆ. ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಪ್ರತಿ ಹಳ್ಳಿಗೂ ಅನುದಾನ ನೀಡಲು, ಶಾಸಕರು ಯತ್ನಿಸಿದ್ದಾರೆ.

ಮಂಜೂರು ಮಾಡಿರುವ ಕಾಮಗಾರಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಮುದಾಯ ಭವನಗಳಿಗೆ ಆದ್ಯತೆ ನೀಡಿದ್ದಾರೆ. ₹ 1, 2, 3 ಲಕ್ಷದವರೆಗೂ ಅನುದಾನ ನೀಡಿದ್ದಾರೆ. ಚಿಕ್ಕವು, ದೊಡ್ಡವು, ಮಧ್ಯಮ ಗಾತ್ರದ ಭವನಗಳಿಗೆ ನಿರ್ಮಾಣ ವೆಚ್ಚಕ್ಕೆ ಅನುಸಾರವಾಗಿ ಹಣ ಬಿಡುಗಡೆಗೊಳಿಸಿರುವುದರಿಂದ, ಬಹುತೇಕ ಸಮುದಾಯ ಭವನ ಇನ್ನೂ ಪೂರ್ಣಗೊಂಡಿಲ್ಲ. ಇದರಿಂದ ಮತ್ತೊಂದು ಆರ್ಥಿಕ ವರ್ಷದಲ್ಲೂ ಇವೇ ಭವನಗಳಿಗೆ ಮತ್ತೆ ಅನುದಾನ ಬಿಡುಗಡೆಗೊಳಿಸಿದ್ದಾರೆ.

ಹಡಗಲಿ, ಹಾಲಕೊಪ್ಪರ ಮಾದರಿ ಗ್ರಾಮ ನಿರ್ಮಾಣಕ್ಕೂ ನಾಡಗೌಡ ಅನುದಾನ ಒದಗಿಸಿದ್ದಾರೆ. ಅದರಂತೆ ನಾಲತವಾಡ, ಅಯ್ಯನಗುಡಿ, ಯಲ್ಲಮ್ಮನ ಬೂದಿಹಾಳ, ಮುದ್ದೇಬಿಹಾಳ ಪಟ್ಟಣದಲ್ಲಿ ಯಾತ್ರಿ ನಿವಾಸ ನಿರ್ಮಾಣಕ್ಕೂ ಅನುದಾನ ನೀಡಿದ್ದಾರೆ.

ರಸ್ತೆ ದುರಸ್ತಿ, ಶೌಚಾಲಯ, ಶಾಲಾ ಆವರಣಗೋಡೆ ನಿರ್ಮಾಣಕ್ಕೂ ಅನುದಾನ ಬಿಡುಗಡೆ ಮಾಡಿದ್ದು, ಅಂಗವಿಕಲರಿಗೆ ತ್ರಿಚಕ್ರ ವಾಹನಗಳ ವಿತರಣೆಗೂ ಕ್ರಮ ತೆಗೆದುಕೊಂಡಿರುವುದು ವಿಶೇಷ.

2013–14ರಲ್ಲಿ ₹ 1.96 ಕೋಟಿ ಅನುದಾನ ಬಿಡುಗಡೆಯಾಗಿದೆ. ₹ 1.90 ಕೋಟಿ ಮೊತ್ತದ 85 ಕಾಮಗಾರಿ ಕೈಗೊಳ್ಳಲು ಮಂಜೂರಾತಿ ಪತ್ರ ನೀಡಿದ್ದು, ₹ 1.82 ಕೋಟಿ ಖರ್ಚಾಗಿದೆ. ಇನ್ನೂ ₹ 14 ಲಕ್ಷ ಖರ್ಚಾಗಬೇಕಿದ್ದರೆ, ₹ 6 ಲಕ್ಷ ಮೊತ್ತಕ್ಕೆ ಶಿಫಾರಸು ಮಾಡಿಲ್ಲ.

2014–15ರಲ್ಲಿ ಬಿಡುಗಡೆಯಾದ ₹ 2 ಕೋಟಿ ಮೊತ್ತಕ್ಕೂ, 33 ಕಾಮಗಾರಿ ಕೈಗೊಳ್ಳಲು ಮಂಜೂರಾತಿ ಪತ್ರ ನೀಡಲಾಗಿದೆ. ಇದರಲ್ಲಿ ₹ 1.68 ಕೋಟಿ ಮಾತ್ರ ಖರ್ಚಾಗಿದ್ದು, ಇನ್ನೂ ₹ 32 ಲಕ್ಷ ಬಳಸಬೇಕಿದೆ. ಹಲ ಕಾಮಗಾರಿ ವರ್ಷಗಳು ಗತಿಸಿದರೂ ಪೂರ್ಣಗೊಂಡಿಲ್ಲ.

2015–16ರಲ್ಲೂ ₹ 2 ಕೋಟಿ ಮಂಜೂರಾಗಿದ್ದು, ₹ 1.99.80.000 ಮೊತ್ತದ 59 ಕಾಮಗಾರಿ ನಡೆಸಲು ಅನುಮೋದನೆ ನೀಡಲಾಗಿದೆ. ಇದರಲ್ಲಿ ₹ 1.93 ಕೋಟಿ ಮೊತ್ತದ ಕಾಮಗಾರಿ ಪೂರ್ಣಗೊಂಡಿದ್ದು, ₹ 7 ಲಕ್ಷವಷ್ಟೇ ಉಳಿದಿದೆ. ಈ ಆರ್ಥಿಕ ಸಾಲಿನಲ್ಲಿ ಕೈಗೊಂಡ ಬಹುತೇಕ ಕಾಮಗಾರಿ ಮುಗಿದಿರುವುದು ವಿಶೇಷ.

2016–17ರಲ್ಲಿ ₹ 2 ಕೋಟಿ ಮಂಜೂರಾಗಿದ್ದು, 63 ಕಾಮಗಾರಿ ಕೈಗೊಳ್ಳಲು ಪೂರ್ಣ ಮೊತ್ತಕ್ಕೆ ಅನುದಾನ ಮಂಜೂರು ಮಾಡಿರುವುದು ವಿಶೇಷ. ಇದರಲ್ಲಿ ಕೇವಲ ₹ 86 ಲಕ್ಷ ವೆಚ್ಚವಾಗಿದ್ದು, ವರ್ಷ ಗತಿಸಿದರೂ ಹಲ ಕಾಮಗಾರಿಗಳು ಪೂರ್ಣಗೊಂಡಿಲ್ಲ.

ಸ್ಪಂದಿಸಿರುವೆ: ನಾಡಗೌಡ

‘ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸಿರುವೆ. ಸಮುದಾಯ ಭವನ ನಿರ್ಮಾಣಕ್ಕೆ ವ್ಯಾಪಕ ಪ್ರಮಾಣದಲ್ಲಿ ಅನುದಾನ ಒದಗಿಸಿರುವೆ. ರಸ್ತೆ ಕಾಮಗಾರಿಗೆ ಹೆಚ್ಚಿನ ಅನುದಾನ ನೀಡಿಲ್ಲ. ಎಸ್‌ಸಿ, ಎಸ್‌ಟಿ ಕಾಲೊನಿಗಳಲ್ಲಿ, ಕೊಳಚೆ ಪ್ರದೇಶದಲ್ಲಿ ಕಾಂಕ್ರೀಟ್‌ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಿರುವೆ.

ಕುಡಿಯುವ ನೀರಿನ ಸಮಸ್ಯೆ ಬಾಧಿಸದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿರುವೆ. ಅಂಗವಿಕಲರಿಗೂ ತ್ರಿಚಕ್ರ ವಾಹನ ವಿತರಿಸಿರುವೆ. ನಿಧಿಯನ್ನು ಸದ್ಬಳಕೆ ಮಾಡಿಕೊಂಡ ತೃಪ್ತಿ ನನ್ನದಾಗಿದೆ’ ಎಂದು ಶಾಸಕ ಸಿ.ಎಸ್‌.ನಾಡಗೌಡ ಪ್ರತಿಕ್ರಿಯಿಸಿದರು.

* * 

ಪ್ರತಿ ಗ್ರಾಮಕ್ಕೂ ಶಾಸಕರ ನಿಧಿಯನ್ನು ತಲುಪಿಸುವ ಪ್ರಾಮಾಣಿಕ ಯತ್ನವನ್ನು ಸಿ.ಎಸ್‌.ನಾಡಗೌಡ ನಡೆಸಿದ್ದಾರೆ. ಎಸ್‌ಸಿ–ಎಸ್‌ಟಿ ಬಡಾವಣೆಗಳಲ್ಲಿ ಕಾಂಕ್ರೀಟ್‌ ರಸ್ತೆ ನಿರ್ಮಿಸಿದ್ದಾರೆ
ಅಮರೇಶ ಕೆ.ಗೂಳಿ, ಆಲೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT