ಭಾನುವಾರ, ಡಿಸೆಂಬರ್ 8, 2019
25 °C

ಮೋರಿ ಸಾಪ್‌ ಮಾಡ್ಸಿ ಅಷ್ಟೇ ಸಾಕು..!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೋರಿ ಸಾಪ್‌ ಮಾಡ್ಸಿ ಅಷ್ಟೇ ಸಾಕು..!

ಯಾದಗಿರಿ: ‘ನಮಗೆ ನಳ, ಮೋರಿ, ಬೆಳಕಿನ ವ್ಯವಸ್ಥೆ ಕಲ್ಪಿಸಿಕೊಟ್ಟರೆ ಸಾಕು. ನಮ್ಮ ಬಡಾವಣೆಯಲ್ಲಿ ಎರಡ್ಮೂರು ವಾರಗಳಿಗೊಮ್ಮೆ ಮೋರಿ ಸಾಪ್ ಮಾಡ್ತಾರೆ.. ಕೇಳಿದ್ರೆ ಪೌರಕಾರ್ಮಿಕರು ಉಡಾಫೆ ಮಾತಾಡ್ತಾರೆ.. ನಿಮ್‌ ಕೈಲಿ ಏನೂ ಆಗಂಗಿಲ್ಲ. ಮೋರಿನಾದ್ರೂ ಸಾಪ್‌ ಮಾಡ್ಸಿ ಅಷ್ಟೇ ಸಾಕು..

2018–19ನೇ ಸಾಲಿನ ನಗರಸಭೆ ಗುರುವಾರ ಹಮ್ಮಿಕೊಂಡಿದ್ದ ‘ಕನಸಿನ ಯಾದಗಿರಿ’ಗೆ ಸಾರ್ವಜನಿಕರಿಂದ ಸಲಹೆ, ಸೂಚನೆ ಸಂಗ್ರಹಿಸುವ ಸಭೆಯಲ್ಲಿ ನಗರದ ನಿವಾಸಿಗಳು ನಗರಸಭೆ ಆಡಳಿತ ವೈಖರಿಯನ್ನು ತೆರೆದಿಟ್ಟದ್ದು ಹೀಗೆ.

‘ನಾನು 71ವರ್ಷದಿಂದ ನಗರದ ನಿವಾಸಿಯಾಗಿದ್ದೇನೆ. ಜನರು ಕೇವಲ ನಗರಸಭೆಯಿಂದ ನೀರು, ರಸ್ತೆ, ಸ್ವಚ್ಛತೆ, ಬೆಳಕಿನ ವ್ಯವಸ್ಥೆಗಾಗಿಯೇ ನಗರದ ಜನರು ಬಡಿದಾಡುವಂತಾಗಿದೆ. ಈ ಹತ್ತು ವರ್ಷದಲ್ಲಿ ನಗರಸಭೆ ನಗರದಲ್ಲಿ ಒಂದೂ ಅಭಿವೃದ್ಧಿ ಕಾರ್ಯ ನಡೆಸಿಲ್ಲ’ ಎಂದು ನಿವೃತ್ತ ಶಿಕ್ಷಕ ಮಲ್ಲಪ್ಪ ಪುಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

‘ಸಲಹೆ, ಸೂಚನೆಯಿಂದ ಯಾದಗಿರಿ ಅಭಿವೃದ್ಧಿ ಆಗುವುದಿಲ್ಲ. ಸರ್ಕಾರ ನೀಡಿದ ಆದಾಯವನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿದ್ದಲ್ಲಿ ನಗರ ತಂತಾನೆ ಅಭಿವೃದ್ಧಿಯ ಹಾದಿ ಹಿಡಿಯಲಿದೆ. ಆದರೆ, 2017–18ನೇ ಸಾಲಿನ ಮುಂಗಡ ಪತ್ರದಲ್ಲಿ ಘೋಷಿಸಿದಂತೆ ನಿಗದಿತ ಆದಾಯದಲ್ಲಿ ನಗರಸಭೆ ಶೇ50ರಷ್ಟು ವೆಚ್ಚ ಮಾಡಿಲ್ಲ. ಮೂಲ ಆದಾಯ ಹಾಗೂ ಸರ್ಕಾರದ ಅನುದಾನವನ್ನು ಬಳಸದೇ ಸಾರ್ವಜನಿಕರಿಂದ ಸಲಹೆ ಪಡೆದು ಪ್ರಯೋಜನವಿಲ್ಲ’ ಎಂದು ನಗರಸಭೆ ಮಾಜಿ ಸದಸ್ಯ ಕರೀಂ ಪೌರಾಯುಕ್ತ ಸಂಗಪ್ಪ ಉಪಾಸೆ ಅವರ ವಿರುದ್ಧ ಹರಿಹಾಯ್ದರು.

‘ಸ್ಮಶಾನ, ಉದ್ಯಾನ ಅಭಿವೃದ್ಧಿ, ಘನತ್ಯಾಜ್ಯ ವಿವೇವಾರಿಗೆ ಅಂತ ಅನುದಾನ ಮೀಸಲಿಡುತ್ತೀರಿ. ಆದರೆ, ಅವುಗಳನ್ನು ನಿರ್ವಹಣೆ ಮಾಡಿದ್ದು ಎಂದೂ ನೋಡಿಲ್ಲ. 24X7 ನೀರು ಪೂರೈಕೆ ಮಾಡುತ್ತೇವೆ ಅಂತ ಭರವಸೆ ನೀಡುತ್ತೀರಿ. ಆದರೆ, ಇದುವರೆಗೂ ಸಮಯಕ್ಕೆ ಸರಿಯಾಗಿ ಹನಿನೀರು ಕೂಡ ಪೂರೈಕೆ ಮಾಡುವುದಿಲ್ಲ’ ಎಂದು ಸಿದ್ದಪ್ಪ ಹೊಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

ನೆರೆದ ಬಹುತೇಕ ಸಾರ್ವಜನಿಕರು ನಗರದಲ್ಲಿನ ಸಮಸ್ಯೆಗಳ ಕುರಿತು ವಿವರಿಸತೊಡಗಿದ್ದರಿಂದ ಮುಂಗಡ ಪತ್ರ ಮಂಡನೆಗೆ ಸಲಹೆ, ಸೂಚನಾ ಸಭೆ ಕುಂದುಕೊರತೆ ಸಭೆಯಾಗಿ ಮಾರ್ಪಟ್ಟಿತು. ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಸಿಬ್ಬಂದಿ ಹಾಜರಿದ್ದರು.

* * 

ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ವಾಚನಾಲಯ, ಉದ್ಯಾನ, ರೇಡಿಯೊ ಇತ್ತು. ಈಗ ಅಲ್ಲಿ ಏನೂ ಇಲ್ಲ. ಒಂದು ಉದ್ಯಾನ ನಿರ್ಮಿಸಿಕೊಡಿ.

ಅಯ್ಯಣ್ಣ ಹುಂಡೇಕರ್ ಸಾಹಿತಿ

ಪ್ರತಿಕ್ರಿಯಿಸಿ (+)