7

ಭಕ್ತರ ಜಯಘೋಷದೊಂದಿಗೆ ಉಳವಿ ಜಾತ್ರೆ ಸಂಪನ್ನ

Published:
Updated:

ದಾಂಡೇಲಿ: ‘ಹರ ಹರ ಮಹಾದೇವ ಅಡಕೇಶ್ವರ’, ‘ಮಡಕೇಶ್ವರ ಉಳವಿ ಚನ್ನ ಬಸವೇಶ್ವರ’ ಜಯ ಘೋಷದ ಮಧ್ಯೆ ರಥಾರೂಢ ಶ್ರೀ ಚನ್ನ

ಬಸವೇಶ್ವರನ ರಥೋತ್ಸವ ಗುರುವಾರ ಸಂಪನ್ನವಾಯಿತು.

ಟ್ರಸ್ಟ್ ಕಮಿಟಿ ಅಧ್ಯಕ್ಷ ಗಂಗಾಧರ ಕಿತ್ತೂರು ಪೂಜೆ ನೆರವೇರಿಸಿದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಪೂಜೆ ಸಲ್ಲಿಸಿದರು. ನಂತರ ಸಾವಿರಾರು ಸಂಖ್ಯೆಯ ಭಕ್ತರು ತೇರನ್ನೆಳೆದರು.

ಎಲ್ಲಿ ನೋಡಿದರಲ್ಲಿ ಬಿಳಿ ಬಟ್ಟೆಧಾರಿ ಶಿವಶರಣರ ಕಾಣುತ್ತಿದ್ದರು. ಉಳವಿಯಿಡೀ ಗುರುವಾರ ಶರಣಮಯವಾಗಿತ್ತು. ವಚನನಗಳ ಗಾಯನ, ಶ್ರೀ ಚನ್ನಬಸವೇಶ್ವರ ಗುಣಗಾನವೇ ಕೇಳಿಬರುತ್ತಿತ್ತು. ಸರಿಯಾಗಿ 4ಕ್ಕೆ ಮಹಾರಥಾರೂಡ ಚನ್ನಬಸವೇಶ್ವರನ ತೇರನ್ನು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಹಗ್ಗವನ್ನು ಎಳೆದು ಸಂಭ್ರಮಿಸಿದರು.

ರಥ ಬೀದಿಯ ಮೂಲಕ ಸಾವಿರಾರು ಭಕ್ತರ ಸಮ್ಮುಖದಲ್ಲಿ ಚನ್ನಬಸವೇಶ್ವರ ದರ್ಶನ ಪಡೆದ ಭಕ್ತರು ರಥಕ್ಕೆ ಹರ ಹರ ಮಹಾದೇವ ಎಂದು ಉತ್ತುತ್ತಿ, ಬಾಳೆ ಹಣ್ಣು, ಕಾಯಿ ಒಡೆಯುತ್ತಿದ್ದರು. ಅದನ್ನು ಪ್ರಸಾದವೆಂದು ಅನೇಕ ಭಕ್ತರ ಭಕ್ತಿಯಿಂದ ಸಂಗ್ರಹಿಸಿದ್ದು ಕಂಡುಬಂತು.

ಪ್ರಮುಖ ದ್ವಾರದಿಂದ ತೇರನ್ನು ರಥ ಬೀದಿಯಲ್ಲಿ ಎಳೆಯುತ್ತಾ ವೀರಭದ್ರ ದೇವಸ್ಥಾನದಿಂದ ಮತ್ತೆ ರಥ ಬೀದಿಯಲ್ಲಿ ಬಂದು ಮಹಾದ್ವಾರದ ಮುಂದೆ ನಿಲ್ಲಿಸಲಾಯಿತು.

ವ್ಯಾಪಾರ ಬಲು ಜೋರು: ಪ್ರಸಕ್ತ ಸಾಲಿನಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಚನ್ನಾಗಿ ಆಗಿರುವುದರಿಂದ ಬೆಳೆ ಉತ್ತಮವಾಗಿಯೇ ಬಂದಿದೆ. ಈ ಜಾತ್ರೆಗೆ ಕರ್ನಾಟಕ ಮೂಲೆ ಮೂಲೆ ಬಂದ ರೈತರು ಉಳವಿ ಜಾತ್ರೆಯಲ್ಲಿ ಮಿಠಾಯಿ, ಖಾಜೆ, ಚಾಪೆ, ಬೆತ್ತ ಸೇರಿದಂತೆ ಅನೇಕ ವಸ್ತುಗಳನ್ನು ಆಸಕ್ತಿಯಿಂದ ಕೊಳ್ಳುತ್ತಿರುವುದು ಕಂಡುಬಂತು.

ಅಂಬೋಳಿ ಹೊಳೆಯಲ್ಲಿ ಸ್ನಾನ: ಉಳವಿಯಿಂದ ಸುಮಾರು 4 ಕಿ.ಮೀ. ದೂರವಿರುವ ಕಾನೇರಿ ಅಂಬೋಳಿ ಹೊಳೆಯಲ್ಲಿ, ದೇವಸ್ಥಾನದ ಮುಂದೆ ಇರುವ ಕೆರೆಯಲ್ಲಿ, ವೀರಭದ್ರ ಕೆರೆಯಲ್ಲಿ ಭಕ್ತರು ಸ್ನಾನ ಮಾಡಿದರು.

ಉಚಿತ ದಾಸೋಹ: ಉಳವಿ ಟ್ರಸ್ಟ್ಯಿಂ ಸಮಿತಿಯಿಂದ ಅನ್ನದಾಸೋಹ ಕಾರ್ಯ ಪ್ರತಿವರ್ಷ ಪ್ರತಿ ದಿನ ನಡೆಯುತ್ತದೆ. ಈ ಬಾರಿ ಹುಬ್ಬಳ್ಳಿ, ಧಾರವಾಡ, ಬೈಲಹೊಂಗಲ, ಬೆಳಗಾವಿಯಿಂ ಬಂದ ಭಕ್ತರು ಉಚಿತವಾಗಿ ಅನ್ನದಾಸೋಹ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ, ಮುಜರಾಯಿ ಸಚಿವ ರುದ್ರಪ್ಪ ಲಮಾಣಿ, ಜಿಲ್ಲಾ ಪಂಚಾಯ್ತಿ ಸದಸ್ಯ ರಮೇಶ ನಾಯ್ಕ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ನರ್ಮದಾ ಪಾಟ್ನೆಕರ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಂಜುನಾಥ ಮೊಕಾಶಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾನಂದ ದಬಗಾರ, ಟ್ರಸ್ಟ್ ಸಮಿತಿಯ ಅಧ್ಯಕ್ಷ ಗಂಗಾಧರ ಕಿತ್ತೂರು, ಉಪಾಧ್ಯಕ್ಷ ಸಂಜಯ ಕಿತ್ತೂರು, ಸದಸ್ಯರಾದ ಬಿ.ಸಿ.ಉಮಾಪತಿ, ಸುರೇಶ ಅಂಗಡಿ, ವಿರುಪಾಕ್ಷ ಯಮಕನಮಾಡಿ, ಬಿ.ಡಿ.ಪಾಟಿಲ್, ಶಂಕರಯ್ಯ ಕಲ್ಮಠ ಶಾಸ್ತ್ರಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry