ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಕದಲ್ಲಿ ನಿಷ್ಠೆ ಇದ್ದರೆ ಸಮಾಜದಲ್ಲಿ ಗೌರವ

Last Updated 2 ಫೆಬ್ರುವರಿ 2018, 8:57 IST
ಅಕ್ಷರ ಗಾತ್ರ

ಕೊಪ್ಪಳ: ಕಾಯಕದಲ್ಲಿ ನಿಷ್ಠೆ ಇದ್ದರೆ ಸಮಾಜದಲ್ಲಿ ಗೌರವ ದೊರೆಯುತ್ತದೆ ಎಂದು ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಹೇಳಿದರು. ನಗರದ ಸಾಹಿತ್ಯ ಭವನದಲ್ಲಿ ಗುರುವಾರ ಜಿಲ್ಲಾಡಳಿತದ ಆಶ್ರಯದಲ್ಲಿ ನಡೆದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

'ಶರಣಧರ್ಮ ಯಾವ ಕಾಯಕ ಮಾಡಬೇಕು ಎಂದು ಹೇಳುವುದಿಲ್ಲ. ಆದರೆ ವರ್ಣಾಶ್ರಮ ಧರ್ಮ ಇದನ್ನು ಒಪ್ಪುವುದಿಲ್ಲ. ಪ್ರಸ್ತುತ ಎಲ್ಲರೂ ತಮ್ಮ ಕಾಯಕ ಆಧುನೀಕರಣಗೊಳಿಸಿಕೊಂಡು ಗೌರವಯುತವಾಗಿ ಬದುಕಬಹುದು. ಬಿಜಾಪುರ ಜಿಲ್ಲೆ ಹಿಪ್ಪರಗಿಯಲ್ಲಿ ಜನಿಸಿದ ಮಡಿವಾಳ ಮಾಚಿದೇವರನ್ನು 12ನೇ ಶತಮಾನದಲ್ಲಿ ಎಲ್ಲ ಶರಣರು ಮೆಚ್ಚಿಕೊಂಡಿದ್ದರು. ಬಸವಣ್ಣನಲ್ಲಿ ಮೂಡಿದ್ದ ಅಭಿವೃದ್ಧಿಯ ಅಹಂ ಹೋಗಲಾಡಿಸಿದ ಕೀರ್ತಿ ಮಾಚಿದೇವರಿಗೆ ಸಲ್ಲುತ್ತದೆ.

ವೇದ, ಪುರಾಣ, ತೀರ್ಥಯಾತ್ರೆ, ಗುಡಿ, ಗುಂಡಾರಗಳನ್ನು ವಿರೋಧಿಸಿದ್ದ ಶರಣರು,  ವಿಚಾರದ ಕೆರೆಗಳಿಂದ ಮನುಷ್ಯನಿಗೆ ಉಪಯೋಗವಾಗುತ್ತದೆ ಎಂದೇ ನಂಬಿದ್ದರು. ಅಂಗದಲ್ಲಿ ಲಿಂಗ ಕಟ್ಟಿಕೊಂಡು ದೇವರೊಂದಿಗೆ ನೇರ ಸಂಪರ್ಕ ಸಾಧಿಸಿದಲ್ಲಿ ನಮಗೆ ದೇವಸ್ಥಾನ ಮತ್ತು ಪೂಜಾರಿಯ ಅವಶ್ಯಕತೆ ಇಲ್ಲ.

ನಮ್ಮನ್ನು ಸರಿ ದಾರಿಯಲ್ಲಿ ನಡೆಸುವವನೇ ಗುರು ಆಗಿದ್ದಾನೆ. ಪಡೆದುಕೊಂಡ ಕ್ರಿಯೆಯನ್ನು ಜ್ಞಾನವಾಗಿಸಬೇಕು. ಜ್ಞಾನದ ಜೊತೆ ಕ್ರಿಯೆ ಮೇಳೈಸಿಕೊಂಡಲ್ಲಿ ಕ್ರಿಯಾಜ್ಞಾನ ಆಗುತ್ತದೆ. ಇಂತಹ ಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಯಾವ ಗುರುವಿನ ಅವಶ್ಯಕತೆ ಇರುವುದಿಲ್ಲ. ಈ ಹಿನ್ನೆಲೆಯಲ್ಲಿಯೆ ಶರಣರು ಅರಿವೇ ಗುರು' ಎಂದಿದ್ದಾರೆ.

'ಜಗತ್ತಿನ ಟೀಕೆ, ಟಿಪ್ಪಣಿಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ, ನಿಮ್ಮ ಜೀವನ ನೀವೇ ರೂಪಿಸಿಕೊಳ್ಳಿ. ಬುದ್ಧಿಯಿಂದ ಭ್ರಷ್ಟವಾದರೆ ಸಮಾಜ ಪತನವಾಗುತ್ತದೆ. ಕಾಯಕ ಮುಖ್ಯ, ಪೂಜೆಗೆ ಪ್ರಾಮುಖ್ಯತೆ ಬೇಡ. ಹುಟ್ಟಿನಿಂದ ಯಾರೂ ಶ್ರೇಷ್ಠರಲ್ಲ. ಆದರೆ ವಿಚಾರಗಳಿಂದ ಎಷ್ಟು ಶ್ರೇಷ್ಠರಾಗಬಹುದು ಎಂಬುದಕ್ಕೆ ಮಾಚಿದೇವರು ಉತ್ತಮ ಉದಾಹರಣೆ. ಕೊಲ್ಲದಿರುವುದೇ ಧರ್ಮ, ಪಂಚೇಂದ್ರಿಯಗಳ ನಿಗ್ರಹವೇ ತಪಸ್ಸು, ಪರ ಸ್ತ್ರೀ ಬಗ್ಗೆ ಮನದಲ್ಲಿ ಆಸೆ ಇಲ್ಲದಿದ್ದರೆ ಅದೇ ದೊಡ್ಡ ವ್ಯಕ್ತಿತ್ವ ಎಂದು ಹಾಗೂ ಶಿವನನ್ನು ಕಾಣದ ವೇದ, ಸಂಖ್ಯೆಗಳ ಗಲಾಟೆಯಾಗಿರುವ ಶಾಸ್ತ್ರಕ್ಕಿಂತ ಅಂತರಂಗದಲ್ಲಿ ತನ್ನನ್ನು ತಾನು ಅರಿಯುವುದು ಉತ್ತಮ ಎಂದು ಮಾಚಿದೇವರು ತಮ್ಮ ವಚನಗಳಲ್ಲಿ ಹೇಳಿದ್ದಾರೆ' ಎಂದು ಉಲ್ಲೇಖಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರ ಹಿಟ್ನಾಳ್‍ ಮಾತನಾಡಿ, 'ಮಲ್ಲಿಕಾರ್ಜುನ ಸ್ವಾಮಿ ಅವರ ಶಿಷ್ಯರಾಗಿದ್ದ ಮಡಿವಾಳ ಮಾಚಿದೇವರು ವಿದ್ವಾಂಸರಾಗಿದ್ದರು. ವೃತ್ತಿಯಲ್ಲಿ ನಿಷ್ಠಾವಂತರಾಗಿದ್ದ ಅವರು 12ನೇ ಶತಮಾನದಲ್ಲಿ ಮೇಲು, ಕೀಳು ಮತ್ತು ಜಾತೀಯತೆ ವಿರುದ್ಧ ಹೋರಾಡಿದವರಲ್ಲಿ ಪ್ರಮುಖರು. ಅವರ ಆದರ್ಶಗಳನ್ನು ಜನತೆಯಲ್ಲಿ ಪಸರಿಸಲು ಸರ್ಕಾರ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಹಿಂದುಳಿದಿರುವ ಮಡಿವಾಳ ಸಮಾಜವನ್ನು ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕವಾಗಿ ಮುಂದೆ ತರಲು ಸರ್ಕಾರ ಶ್ರಮಿಸುತ್ತಿದೆ. ಸಮಾಜ ಬಾಂಧವರು ಆಸ್ತಿ ಮಾಡದಿದ್ದರು ಪರವಾಗಿಲ್ಲ. ಆದರೆ ಮಕ್ಕಳಿಗೆ ಶಿಕ್ಷಣ ನೀಡಿ' ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಾಲಚಂದ್ರನ್‍, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ರುದ್ರೇಶ್‍ ಘಾಳಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಚ್‍.ಎಸ್‍.ಪಾಟೀಲ್‍, ನಗರಸಭೆ ಸದಸ್ಯ ಅಮ್ಜದ್‍ ಪಟೇಲ್‍, ಸಮಾಜದ ಜಿಲ್ಲಾ ಅಧ್ಯಕ್ಷ ಬಸವರಾಜ, ತಾಲ್ಲೂಕು ಅಧ್ಯಕ್ಷ ಶಂಕ್ರಪ್ಪ, ನಿವೃತ್ತ ತಹಶೀಲ್ದಾರ್‍ ಛತ್ರಪ್ಪ, ಮುಖಂಡರಾದ ವೀರಭದ್ರಪ್ಪ, ಕನಕಪ್ಪ, ವೆಂಕಟೇಶ ಮಡಿವಾಳರ, ಮಂಜುನಾಥ ಕುಕನೂರು ಇದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಯು.ನಾಗರಾಜ ಸ್ವಾಗತಿಸಿದರು. ನಿವೃತ್ತ ಪ್ರಾಚಾರ್ಯ ಸಿ.ವಿ.ಜಡಿ ನಿರೂಪಿಸಿದರು. ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರಮುಖ ಬೀದಿಗಳಲ್ಲಿ ಮಡಿವಾಳ ಮಾಚಿದೇವರ ಭಾವಚಿತ್ರದ ಮೆರವಣಿಗೆ ನಡೆಯಿತು.

* * 

ಮಠ, ಪೀಠಗಳಿಗೆ ವಿವಾಹಿತರನ್ನೇ ನೇಮಕ ಮಾಡಬೇಕು. ಅವಿವಾಹಿತರನ್ನು ಮುಖ್ಯಸ್ಥರಾಗಿ ನೇಮಿಸ ಬೇಕು
ಅಲ್ಲಮಪ್ರಭು ಬೆಟ್ಟದೂರು ಹಿರಿಯ ಸಾಹಿತಿ, ಕೊಪ್ಪಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT