ಮಂಗಳವಾರ, ಡಿಸೆಂಬರ್ 10, 2019
18 °C

ಗೀಜಗ ಹಕ್ಕಿಯ ಕಲಾತ್ಮಕ ಗೂಡು

ಎಂ.ಮುನಿನಾರಾಯಣ Updated:

ಅಕ್ಷರ ಗಾತ್ರ : | |

ಗೀಜಗ ಹಕ್ಕಿಯ ಕಲಾತ್ಮಕ ಗೂಡು

ವಿಜಯಪುರ: ಮಾಹಿತಿ ತಂತ್ರಜ್ಞಾನ ಮುಂದುವರೆದಂತೆ ಮಾನವ ತಾನು ವಾಸ ಮಾಡುವಂತಹ ಮನೆಗಳನ್ನು ವಿವಿಧ ಬಗೆಯಲ್ಲಿ ನಿರ್ಮಾಣ ಮಾಡಿಕೊಳ್ಳಲು ಹಾತೊರೆಯುತ್ತಿರುವ ಈ ವೈಜ್ಞಾನಿಕ ದಿನಗಳಲ್ಲೂ ಪಕ್ಷಿಗಳು ಮನುಷ್ಯರನ್ನೂ ನಾಚಿಸುವಂತೆ ತಮ್ಮ  ಮನೆಗಳನ್ನು ಕಟ್ಟಿಕೊಳ್ಳುತ್ತಿವೆ.

‘ವಿಜಯಪುರದ 4 ನೇ ವಾರ್ಡಿನ ಮುನಿರಾಜು ಅವರ ತೋಟವನ್ನು ನೋಡಲೆಂದು ಹೊರಟ ನಮಗೆ ಕಾಣಿಸಿದ್ದು, ಹಳೆ ಬಾವಿ. ಬಾವಿಯ ಸುತ್ತಲೂ ಕಟ್ಟಿರುವ ಹಳೆಯ ಕಲ್ಲಿನ ಕಟ್ಟಡ, ವಾಲಿದ್ದ ಕಲ್ಲಿನ ಗೋಡೆಗಳ ಸಮೀಪದಲ್ಲಿ ನಿಂತುಕೊಂಡು ಒಳಗೆ ಬಗ್ಗಿನೋಡಿದಾಗ, ಶಿಥಿಲವಾಗಿರುವ ಕಲ್ಲಿನ ಮೆಟ್ಟಿಲುಗಳು, ಬಾವಿಯ ಒಳಗೆ ನೇತಾಡುತ್ತಿದ್ದ ಅರಳಿಮರದ ಕೊಂಬೆಗಳು. ಆ ಬಾವಿಯ ಒಳಗೆ ನೇತಾಡುತ್ತಿದ್ದ ಅರಳಿಮರದ ಕೊಂಬೆಗಳಿಗೆ ಗೀಜಗ ಹಕ್ಕಿಗಳು ಗೂಡುಗಳನ್ನು ನೇಯ್ದಿವೆ. ಅವು ಬಾವಿಯೊಳಕ್ಕೆ ನೇತಾಡುತ್ತಿದ್ದವು’.

ಗೀಜಗ ಹಕ್ಕಿಗಳ ವೈಶಿಷ್ಟ್ಯವೇನೆಂದರೆ, ಗಂಡು ಹಕ್ಕಿ ಗೂಡನ್ನು ಅರ್ಧ ನೇಯ್ದು ಹೆಣ್ಣಿಗೆ ತೋರಿಸುತ್ತದೆ. ಅದು ಹೆಣ್ಣಿಗೆ ಇಷ್ಟವಾದರೆ ಅವೆರಡೂ ಜೋಡಿಯಾಗುತ್ತವೆ. ಗೂಡನ್ನು ಪೂರ್ತಿ ಮಾಡಿ ಸಂಸಾರ ಸಾಗಿಸುತ್ತವೆ. ಆಕಸ್ಮಾತ್ ಇಷ್ಟವಾಗಲಿಲ್ಲವೋ ಗಂಡು ಮತ್ತೊಂದು ಗೂಡು ನೇಯಲು ಶುರುಮಾಡುತ್ತದೆ. ನಮಗೆ ಹತ್ತು ಬೆರಳುಗಳಿದ್ದರೂ ನೇಯಲು ಅಸಾಧ್ಯವಾದಂತಹ ಗೂಡನ್ನು ಪುಟ್ಟ ಇಕ್ಕಳದಂತಹ ಕೊಕ್ಕಿನಿಂದಲೇ ಈ ಪುಟ್ಟ ಹಕ್ಕಿ ನೇಯುವುದನ್ನು ನೋಡಿದರೆ ಇದರ ಸಾಮರ್ಥ್ಯಕ್ಕೆ ತಲೆದೂಗಲೇಬೇಕು. ಅದಕ್ಕೇ ಇದನ್ನು ನೇಕಾರ ಹಕ್ಕಿ ಎಂದೂ ಕರೆಯುತ್ತಾರೆ ಎಂದು ಪಕ್ಷಿ ಪ್ರೇಮಿ ಮಲ್ಲಿಕಾರ್ಜುನ್ ಹೇಳುತ್ತಾರೆ.

‘ಹಕ್ಕಿಯು ನಾರನ್ನು ತಂದು ತಂದು ತನ್ನ ಕೊಕ್ಕಿನಿಂದ ಸುಲಲಿತವಾಗಿ ಗೂಡು ಕಟ್ಟುವುದನ್ನು ನೋಡುತ್ತಾ ನನ್ನ ಕ್ಯಾಮೆರಾವನ್ನು ಕ್ಲಿಕ್ಕಿಸತೊಡಗಿದೆ. ಹಲವೆಡೆ ಪಕ್ಷಿ ಪ್ರಪಂಚದಲ್ಲಿ ತನ್ನ ಗೂಡಿನಿಂದ ಗುರುತಿಸಿಕೊಳ್ಳುವ ಏಕೈಕ ಪಕ್ಷಿ ಗೀಜಗ. ಈ ಹಕ್ಕಿ ಇಕ್ಕಳದಂತಹ ತನ್ನ ಚಿಕ್ಕ ಚುಂಚಿನಲ್ಲಿ ನೇಯುವ ಕಸೂತಿ ಕೆಲಸ ಯಾವುದೇ ಯಂತ್ರಕ್ಕೂ ಸರಿಸಾಟಿಯಾಗಲಾರದು. ಈ ಹಕ್ಕಿಗಳಿಗೆ ಪ್ರಮುಖ ವೈರಿಯೇ ಮಾನವ’ ಎಂದು ಪಕ್ಷಿಪ್ರಿಯರು ಹೇಳುತ್ತಾರೆ.

ಕಾಲು ಚೀಲದ ಆಕಾರದಲ್ಲಿ ಸುಂದರವಾಗಿ ನಿರ್ಮಾಣವಾಗುವ ಇದರ ಗೂಡುಗಳು ಕೂಡ ಅಲಂಕಾರಿಕ ಸಾಧನವಾಗಿದೆ.  ಕಾಳಜಿಯುಳ್ಳವರು ಈ ಬಗ್ಗೆ ವಿವರಿಸಿ ಗೂಡನ್ನು ಕೀಳದಂತೆ ಮನವಿ ಮಾಡುತ್ತಾರೆ.

ಗೂಡನ್ನು ಕಟ್ಟುತ್ತಾ ಮರಿಗಳಿಗೆ ಬದುಕನ್ನು ಕಟ್ಟಿಕೊಡುವ ಆಸೆ ಈ ಹಕ್ಕಿಗೆ. ಹಾಗೆಯೇ ಭವಿಷ್ಯ ರೂಪಿಸುವ ಕಾಳಜಿ. ಗೂಡು ಕಟ್ಟುವ ಕಾಯಕದಲ್ಲಿ ಒಂದೊಂದು ಎಳೆಯೂ ಕಲಾತ್ಮಕವಾಗಿ ಬಿಗಿದುಕೊಳ್ಳುತ್ತದೆ. ನೋಡಲಿಕ್ಕೆ ಗುಬ್ಬಿಯಷ್ಟೇ ಚಿಕ್ಕದು. ಇದು ಗುಬ್ಬಿಯ ಸಂತತಿಗೆ ತೀರಾ ಹತ್ತಿರ ಕೂಡಾ. ಈ ಹಕ್ಕಿಗಳು ಸಂಘ ಜೀವನ ನಡೆಸುತ್ತವೆ. ಗಂಡು ಗೀಜಗ ಅತ್ಯಂತ ಚಾಕಚಕ್ಯತೆಯಿಂದ ಹುಲ್ಲು ಬಳಸಿ ಗೂಡು ಕಟ್ಟುತ್ತದೆ. ಗೂಡು ನೇಯ್ದಾದ ಮೇಲೆ ಗಂಡಿನ ಕುಶಲತೆಗೆ ಮನಸೋತ ಹೆಣ್ಣು ಗೀಜಗವೊಂದು ಜೊತೆಯಾಗುತ್ತದೆ. ಮುಂದೆ ತನಗೆ ಬೇಕಾದ ಹಾಗೆ ಅನುಕೂಲವಾಗುವ ರೀತಿಯಲ್ಲಿ ಗೂಡನ್ನು ಗಂಡಿನಿಂದ ರೂಪಿಸಿಕೊಳ್ಳುತ್ತದೆ ಎಂದು ಪಕ್ಷಿಪ್ರಿಯರು ವಿವರಿಸುತ್ತಾರೆ.

ಹಕ್ಕಿಗಳು ತುಂಬಾ ಕಷ್ಟಪಟ್ಟು ಕಟ್ಟಿಕೊಳ್ಳುವಂತಹ ಈ ಕಲಾತ್ಮಕವಾದ ಗೂಡುಗಳನ್ನು ಈಚೆಗೆ ಹಲವರು ಕಿತ್ತು ಮಾರಾಟ ಮಾಡುತ್ತಿದ್ದಾರೆ. ದಯವಿಟ್ಟು ಈ ಬಾರಿ ಯಾರೂ ಗೀಜಗನ ಗೂಡುಗಳನ್ನು ಅಲಂಕಾರದ ಹೆಸರಿನಲ್ಲಿ ಖರೀದಿಸಬೇಡಿ. ಹಾಗೇನಾದರೂ ಗೂಡನ್ನು ಕೀಳುವುದು ಅಥವಾ ಮಾರುವುದು ಕಂಡು ಬಂದಲ್ಲಿ ತಕ್ಷಣವೇ ಅರಣ್ಯ ಇಲಾಖೆಯವರಿಗೆ ತಿಳಿಸಿ ಎಂದು ಮುನಿರಾಜು ಮನವಿ ಮಾಡಿದರು.

 

ಪ್ರತಿಕ್ರಿಯಿಸಿ (+)