ಬುಧವಾರ, ಡಿಸೆಂಬರ್ 11, 2019
26 °C

ಕನ್ನಡಿ ಹೆಣ್ಣಿನ ಅಂತರಂಗ

Published:
Updated:
ಕನ್ನಡಿ ಹೆಣ್ಣಿನ ಅಂತರಂಗ

ಫ್ಯಾಷನ್ ಮೋಹ ಇಂದು ಯಾರನ್ನೂ ಬಿಟ್ಟಿಲ್ಲ. ನಿನ್ನೆ ಹುಟ್ಟಿದ ಮಗುವಿನಿಂದ, 80 ವರ್ಷದ ಅಜ್ಜಿಗೂ ಫ್ಯಾಷನ್ ಬೇಕು! ಫ್ಯಾಷನ್ ಇಂದು ಮಹಿಳೆಯರನ್ನು ಎಷ್ಟರ ಮಟ್ಟಿಗೆ ಆವರಿಸಿಕೊಂಡು ಬಿಟ್ಟಿದೆ ಎಂಬುದನ್ನು ಶಬ್ದಗಳಲ್ಲಿ ವರ್ಣಿಸುವುದು ಕಷ್ಟ.

ಅದರಲ್ಲೂ ಕಾಲೇಜು ಯುವತಿಯರಿಗೆ ಫ್ಯಾಷನ್‌ ಎಂದರೆ ಒಂದು ಹಿಡಿ ಹೆಚ್ಚೇ ಪ್ರೀತಿ. ಈ ಫ್ಯಾಷನ್‌ಗೂ ಕನ್ನಡಿಗೂ ಏನೋ ಅವಿನಾಭಾವ ಸಂಬಂಧ. ಕನ್ನಡಿ ಎಂದರೆ ಅದು ಕೇವಲ ಒಂದು ಸಾಧನವಲ್ಲ. ಕನ್ನಡಿಯೊಂದಿಗೆ ಹೆಣ್ಣುಮಕ್ಕಳದ್ದು ಭಾವನಾತ್ಮಕ ಅನುಬಂಧ. ಹೆಣ್ಣುಮಕ್ಕಳ ಹೆಚ್ಚಿನ ದಿನಚರಿ ಆರಂಭವಾಗುವುದು ಕನ್ನಡಿಯ ಮೂಲಕವೇ!

ಬೆಳಗ್ಗೆ ಎದ್ದು ಕೂಡಲೇ ಮೊಬೈಲ್ ಸ್ಕ್ರೀನ್‌ನಲ್ಲೋ, ಕನ್ನಡಿಯಲ್ಲೋ ಮುಖವನ್ನು ನೋಡಿಕೊಂಡು, ಅಲ್ಲಿ ಯಾವುದೇ ಕಲೆಯಾಗಿಲ್ಲ, ಯಾವುದೇ ಮೊಡವೆಯ ಗುರುತಿಲ್ಲ ಎಂದು ತಿಳಿದ ಬಳಿಕವಷ್ಟೆ ಸಮಾಧಾನ; ಆಮೇಲೆ ಮಾತ್ರವೇ ಮುಂದಿನ ಕೆಲಸ. ಪ್ರತಿದಿನ ಕಾಲೇಜಿಗೆ ಹೊರಡುವ ಮುನ್ನ ಕನಿಷ್ಠ ಅರ್ಧಗಂಟೆಯಾದರೂ ಹೆಣ್ಣುಮಕ್ಕಳು ಕನ್ನಡಿಯ ಮುಂದೆ ನಿಲ್ಲುತ್ತಾರೆ. ಇನ್ನು ಕೆಲವರು ತಮ್ಮ ಬ್ಯಾಗ್‌ನಲ್ಲಿ ಪೌಡರ್, ಬಿಂದಿ, ಲಿಪ್‌ಸ್ಟಿಕ್‌ಗೆ ಸ್ಥಾನ ನೀಡಿದಂತೆ ಕನ್ನಡಿಗೂ ಸ್ಥಾನ ನೀಡಿರುತ್ತಾರೆ.

ಎಲ್ಲಾ ರೆಡಿಯಾಗಿ ಇನ್ನೇನೂ ಹೊರಗಡೆ ಹೊರಡಬೇಕು ಎಂದುಕೊಂಡಮೇಲೂ ಒಮ್ಮೆ ತಿರುಗಿ, ಒಂದು ಕ್ಷಣವಾದರೂ ಕನ್ನಡಿಯ ಮುಂದೆ ನಿಂತು, ಆಮೇಲೆ ಮುಂದಿನ ಹೆಜ್ಜೆ ಇಡುವುದು. ಕೆಲವರು ಹೆಣ್ಣುಮಕ್ಕಳಿಗೆ ಕನ್ನಡಿ ಎನ್ನುವುದು ಕೇವಲ ಸಿಂಗರಿಸಿಕೊಳ್ಳಲು ಮುಖವನ್ನು ನೋಡುವ ಸಾಧನವಲ್ಲ, ಅದೆಷ್ಟೋ ತಮ್ಮ ಮನದ ನೋವುಗಳಿಗೆ ಇದನ್ನೇ ಸಾಕ್ಷಿಯನ್ನಾಗಿಸಿಕೊಂಡಿರುತ್ತಾರೆ.

ಯಾರ ಬಳಿಯೂ ಹೇಳಲಾಗದ ತಮ್ಮ ಮನದ ಮಾತನ್ನು ಕನ್ನಡಿಯಲ್ಲಿ ಕಾಣುವ ತಮ್ಮ ಪ್ರತಿಬಿಂಬದಲ್ಲಿ ಹಳಿಕೊಳ್ಳುತ್ತಾರೆ. ಆ ಮೂಲಕ ತಮಗೆ ತಾವೇ ಸಮಾಧಾನ ಮಾಡಿಕೊಳ್ಳುತ್ತಿರುತ್ತಾರೆ. ಕನ್ನಡಿ ಎಂದರೆ ಮಹಿಳೆಯ ಅಂತರಂಗವೇ ಸರಿ.

ಪ್ರತಿಕ್ರಿಯಿಸಿ (+)