ಭಾನುವಾರ, ಡಿಸೆಂಬರ್ 8, 2019
24 °C

ಪೊಲೀಸ್ ಸರ್ಪಗಾವಲಿನಲ್ಲಿ ಬಂದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೊಲೀಸ್ ಸರ್ಪಗಾವಲಿನಲ್ಲಿ  ಬಂದ್

ಔರಾದ್: ಭಾಲ್ಕಿ ತಾಲ್ಲೂಕಿನ ಗ್ರಾಮವೊಂದರ ವಿದ್ಯಾರ್ಥಿನಿ ಕೊಲೆ ಖಂಡಿಸಿ ಗುರುವಾರ ಕರೆ ನೀಡಿದ್ದ ಔರಾದ್‌ ಬಂದ್ ಪೊಲೀಸ್‌ ಸರ್ಪಗಾವಲಿನಲ್ಲಿ ಶಾಂತಿಯುತವಾಗಿ ನಡೆಯಿತು.

ಬಂದ್ ಮುಂದೂಡುವಂತೆ ಪೊಲೀಸರು ಬುಧವಾರ ನಡೆಸಿದ್ದ ಸಂಧಾನ ವಿಫಲವಾದ ಕಾರಣ ಜಿಲ್ಲಾ ಪೊಲೀಷ್ ವರಿಷ್ಠಧಿಕಾರಿ ಡಿ. ದೇವರಾಜ್ ನೇತೃತ್ವದ ಸುಮಾರು 200ಕ್ಕೂ ಹೆಚ್ಚು ಪೊಲೀಸರ ಬಂದೋಬಸ್ತ್‌ನಲ್ಲಿ ಬಂದ್ ನಡೆಯಿತು.

ವಿಶ್ವ ಹಿಂದೂ ಪರಿಷತ್, ಭಜರಂಗ ದಳ, ಬಿಜೆಪಿ, ಎಬಿವಿಪಿ, ಲಿಂಗಾಯತ ಸಮಾಜ, ಸವಿತಾ ಸಮಾಜದ ವತಿಯಿಂದ ಬಂದ್‌ಗೆ ಕರೆ ನೀಡಲಾಗಿತ್ತು. ಬಂದ್‌ಗೆ ಬೆಂಬಲ ಸೂಚಿಸಿ ಬೆಳಿಗ್ಗೆಯಿಂದಲೇ ಅಂಗಡಿಗಳು ತೆರೆಯಲಿಲ್ಲ. ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಬೆಳಿಗ್ಗೆ 10 ಗಂಟೆ ನಂತರ ಸಾರಿಗೆ ಸಂಸ್ಥೆಯ ಬಸ್‌ಗಳು ಸೇರಿದಂತೆ ಖಾಸಗಿ ವಾಹನಗಳ ಸಂಚಾರವೂ ಸ್ಥಗಿತವಾಗಿತ್ತು.

ಹೆಚ್ಚುವರಿ ಪೊಲೀಷ್ ವರಿಷ್ಠಾಧಿಕಾರಿ ಹರಿಬಾಬು, ಡಿವೈಎಸ್ಪಿ ವೆಂಕನಗೌಡ ಅವರು ಪಟ್ಟಣದ ವಿವಿಧೆಡೆ ಸುತ್ತಾಡಿ ಪರಿಸ್ಥಿತಿ ಮೇಲೆ ನಿಗಾ ಇಟ್ಟು ಜನ ಗುಂಪುಗೂಡದಂತೆ ಎಚ್ಚರ ವಹಿಸಿದರು. ಬಸ್ ನಿಲ್ದಾಣ, ದೇವಸ್ಥಾನ, ಮಸೀದಿ ಸೇರಿದಂತೆ ಸೂಕ್ಷ್ಮ ಪ್ರದೇಶದಲ್ಲಿ ಕೆಎಸ್ಆರ್‌ಪಿ ಮತ್ತು ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿತ್ತು.

ಮೆರವಣಿಗೆ: ಶಾಸಕ ಪ್ರಭು ಚವಾಣ್ ನೇತೃತ್ವದಲ್ಲಿ ಮಧ್ಯಾಹ್ನ ಕನ್ನಡಾಂಬೆ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಕೊಲೆಯಾದ ವಿದ್ಯಾರ್ಥಿನಿ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು ಎಂದು ಮೆರವಣಿಗೆಯಲ್ಲಿ ಘೋಷಣೆ ಕೂಗಲಾಯಿತು.

ಈ ವೇಳೆ ಮಾತನಾಡಿದ ಶಾಸಕ ಪ್ರಭು ಚವಾಣ್, ‘ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕೆಟ್ಟು ಹೋಗಿದೆ. ಕೊಲೆ, ಅತ್ಯಾಚಾರ, ರೈತನ ಆತ್ಮಹತ್ಯೆಯಂತಹ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದ ಜನಸಾಮಾನ್ಯರು ಆತಂಕ

ಗೋಂಡಿದ್ದಾರೆ’ ಎಂದು ದೂರಿದರು.

ಎಬಿವಿಪಿ ಮುಖಂಡ ಹಾವಪ್ಪ ದ್ಯಾಡೆ ಮಾತನಾಡಿ, ‘ರಾಜ್ಯ ಸರ್ಕಾರ ಆಡಳಿತ ಮತ್ತು ಪೊಲೀಸ್ ಇಲಾಖೆ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಅಪಾರಾಧಿಗಳ ಬಗ್ಗೆ ಮೃದು ಧೋರಣೆ ತಳೆಯುತ್ತಿರುವ ಕಾರಣ ಕೊಲೆ, ಅತ್ಯಾಚಾರದಂತಹ ಘಟನೆಗಳು ಮರುಕಳಿಸುತ್ತಿವೆ’ ಎಂದು ಆರೋಪಿಸಿದರು.

ಪ್ರಕರಣದ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು. ಇಂತಹ ಘಟನೆಗಳ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು. ಶೀಘ್ರ ವಿಚಾರಣೆ ನಡೆಸಿ 2 ತಿಂಗಳಲ್ಲಿ ತೀರ್ಪು ಪ್ರಕಟಿಸಬೇಕು’ ಎಂದು ಅವರು ಆಗ್ರಹಿಸಿದರು.

ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಬಸವರಾಜ ಹಳ್ಳೆ ಮಾತನಾಡಿ, ‘ಭಾಲ್ಕಿ ತಾಲ್ಲೂಕಿನ ವಿದ್ಯಾರ್ಥಿನಿ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು’ ಎಂದು ಆಗ್ರಹಿಸಿದರು.

ಬಂಡೆಪ್ಪ ಕಂಟೆ, ಶಿವರಾಜ ಅಲ್ಮಾಜೆ, ದೀಪಕ ಪಾಟೀಲ, ಸಚಿನ್ ರಾಠೋಡ, ಸತೀಶ ಪಾಟೀಲ, ವಿರೇಂದ್ರ ರಾಜಪೂರೆ, ಅಶೋಕ ಅಲ್ಮಾಜೆ, ಅಶೋಕ ಶೆಂಬೆಳ್ಳಿ, ಕಾಶಿನಾಥ ಜಾಧವ್, ವಿರೇಶ ಅಲ್ಮಾಜೆ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

‘30 ಲಕ್ಷ ಪರಿಹಾರ ನೀಡಿ’

ಔರಾದ್: ‘ಕೊಲೆಯಾದ ವಿದ್ಯಾರ್ಥಿನಿ ಮನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಬೇಕು’ ಎಂದು ಶಾಸಕ ಪ್ರಭು ಚವಾಣ್ ಆಗ್ರಹಿಸಿದರು.

‘ಈ ಘಟನೆಯಿಂದಾಗಿ ವಿದ್ಯಾರ್ಥಿನಿ ಕುಟುಂಬ ಆಘಾತಕ್ಕೊಳಗಾಗಿದೆ. ಹೀಗಾಗಿ ಸಿಎಂ ಆ ಕುಟುಂಬಕ್ಕೆ ₹30 ಲಕ್ಷ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.

* * 

ಅತ್ಯಾಚಾರ, ಕೊಲೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಆರೋಪಿ ಯಾರೇ ಆಗಿದ್ದರೂ ಆತನಿಗೆ ಕಠಿಣ ಶಿಕ್ಷೆ ವಿಧಿಸಬೇಕು

ಪ್ರಭು ಚವಾಣ್,ಶಾಸಕ

ಪ್ರತಿಕ್ರಿಯಿಸಿ (+)