ಬುಧವಾರ, ಡಿಸೆಂಬರ್ 11, 2019
22 °C

 ‘ಹಣ ಕೊಟ್ಟು ಕಷ್ಟ ಖರೀದಿ’

Published:
Updated:
 ‘ಹಣ ಕೊಟ್ಟು ಕಷ್ಟ ಖರೀದಿ’

ನನ್ನ ಸಹೋದ್ಯೋಗಿಯೊಬ್ಬ ಮನೆಯ ಸದಸ್ಯನಂತೆ ಇದ್ದ. ಮನೆಗೆ ಆಗಾಗ ಬಂದು ಹೋಗುತ್ತಿದ್ದ. ಒಂದು ದಿನ ಮನೆಗೆ ಬಂದವನೆ ‘ನನ್ನ ತಾಯಿಗೆ ತುಂಬಾ ಹುಷಾರಿಲ್ಲ, ದುಡ್ಡು ಬೇಕು, ಒಂದೆರೆಡು ತಿಂಗಳಲ್ಲಿ ವಾಪಸ್ಸು ಕೊಡುತ್ತೇನೆ’ ಎಂದ. ನನ್ನ ಹತ್ತಿರ ಅವನು ಕೇಳಿದಷ್ಟು ದುಡ್ಡಿರಲಿಲ್ಲ. ನಾನು ಸರಕಾರಿ ನೌಕರನಾಗಿದ್ದರಿಂದ ಒಂದೇ ದಿನದಲ್ಲಿ ಬ್ಯಾಂಕಿನಲ್ಲಿ ಸಾಲ ತೆಗೆದುಕೊಂಡು ಅವನಿಗೆ ಕೊಟ್ಟೆ. ವಿಶ್ವಾಸಕ್ಕೆ ಬಲಿಯಾಗಿ ಚೆಕ್ ಪಡೆದುಕೊಳ್ಳಲಿಲ್ಲ.

ಅವನಿಗೆ ಸಾಲ ಕೊಟ್ಟು ಒಂದೆರೆಡು ತಿಂಗಳಿಗೆ ನನಗೆ ಉಪನ್ಯಾಸಕನಿಂದ ಪ್ರಾಚಾರ್ಯರಾಗಿ, ದಾವಣಗೆರೆ ತಾಲ್ಲೂಕಿನಿಂದ ಬಳ್ಳಾರಿ ಜಿಲ್ಲೆಯ ಹಡಗಲಿ ತಾಲ್ಲೂಕಿನ ಹಳ್ಳಿಗೆ ವರ್ಗಾವಣೆಯಾಯ್ತು. ನಾನು ವರ್ಗಾವಣೆಯಾದ ನಂತರ ಎರಡು ತಿಂಗಳಿಗೆ ಸಾಲ ವಾಪಸ್ಸು ಕೇಳಲು ಮನೆಗೆ ಹೋದಾಗ ಅವನ ಮತ್ತು ಅವನ ಹೆಂಡತಿಯ ವರ್ತನೆಯೇ ಬದಲಾಯ್ತು. ಹತ್ತಾರು ಬಾರಿ ಮನೆಗೆ ಹೋದರೂ ನನ್ನನ್ನು ಮಾತಾಡಿಸುವುದೇ ಕಷ್ಟವಾಯ್ತು. ಎಷ್ಟು ಸಾರಿ ಹೋದರೂ ಅವನಲ್ಲಿ ತಿರಸ್ಕಾರದ ಭಾವನೆಯಿತ್ತು.

ಆಗ ನನ್ನ ತಂದೆ ಹೇಳಿದ ಮಾತು ನೆನಪಾಯ್ತು. ನಾವು ಬೇರೆಯವರಿಗೆ ಜಾಸ್ತಿ ಹಣ ಸಾಲ ಕೊಟ್ಟರೆ ಅವರ ಕಷ್ಟವನ್ನು ನಾವು ದುಡ್ಡು ಕೊಟ್ಟು ಖರೀದಿ ಮಾಡಿದಂತೆ. ಅವರ ಕಷ್ಟ ತೀರುತ್ತದೆ. ನಮ್ಮ ಕಷ್ಟ ಪ್ರಾರಂಭವಾಗುತ್ತದೆ. ಈಗ ನೆನಸಿಕೊಂಡರೆ ಏನು ಪ್ರಯೋಜನವಿಲ್ಲ ಎನ್ನಿಸಿತು.

ನಾನೆಷ್ಟು ಪ್ರಯತ್ನಪಟ್ಟರೂ ಅವನ ಕಷ್ಟ ಕಾಲದಲ್ಲಿ ಸಹಾಯ ಮಾಡಿದ ಒಂದು ಪೈಸೆನೂ ವಾಪಸ್ಸಾಗಲಿಲ್ಲ. ಗಂಡ–ಹೆಂಡತಿ ಸರ್ಕಾರಿ ನೌಕರಿಯಲ್ಲಿದ್ದರೂ ವಾಪಸ್ಸು ಕೊಡುವ ಮನಸು ಮಾಡಲಿಲ್ಲ. ನಾನು ತುಂಬಾ ಒತ್ತಾಯ ಮಾಡಿ ಕೇಳಲು ಸಾಲ ಕೊಟ್ಟ ದಾಖಲೆ ಇಲ್ಲದ ಕಾರಣ ಹಣ ವಾಪಸ್ಸಾಗಲೇ ಇಲ್ಲ. ನನ್ನ ತಂದೆ ಮಾತು ಕೇಳದೆ ಇದ್ದುದಕ್ಕೆ ಸರಿಯಾದ ಬುದ್ಧಿ ಕಲಿತೆ. ಅವನಿಗೆ ಕೊಡಬೇಡವೆಂದು ಇತರ ಸಹೊದ್ಯೋಗಿಗಳು ಹೇಳಿದರೂ ಕೇಳದೆ ಇದ್ದುದರಿಂದ ನಾನು ಪಶ್ಚಾತ್ತಾಪ ಪಡುವಂತಾಯ್ತು.

–ಸಿ. ವೇಣುಗೋಪಾಲ್‌, ದಾವಣಗೆರೆ

ಪ್ರತಿಕ್ರಿಯಿಸಿ (+)