ಮಂಗಳವಾರ, ಡಿಸೆಂಬರ್ 10, 2019
20 °C

ದೇವಾಲಯ ಜಾಗ ಒತ್ತುವರಿ ಆರೋಪ

ಈರಪ್ಪ ಹಳಕಟ್ಟಿ Updated:

ಅಕ್ಷರ ಗಾತ್ರ : | |

ದೇವಾಲಯ ಜಾಗ ಒತ್ತುವರಿ ಆರೋಪ

ಚಿಕ್ಕಬಳ್ಳಾಪುರ: ‘ತಾಲ್ಲೂಕಿನ ನಂದಿ ಹೋಬಳಿ ಕಂದವಾರ ಗ್ರಾಮದ ಸರ್ವೆ ನಂಬರ್ 43ರಲ್ಲಿ ಇರುವ ರಂಗಸ್ವಾಮಿ ದೇವಾಲಯದ ಜಮೀನಿನನ್ನು ಕೆಲವರು ಕಬಳಿಸಿ ಮಾರಾಟ ಮಾಡಿದ್ದಾರೆ. ಇದೀಗ ಆ ಜಾಗದಲ್ಲಿ ಕಾನೂನು ಬಾಹಿರವಾಗಿ ನಿರ್ಮಿಸುತ್ತಿರುವ ಕಟ್ಟಡ ತೆರವುಗೊಳಿಸಿ ಎಂದು ಜಿಲ್ಲಾಡಳಿತಕ್ಕೆ ಕಂದವಾರ ಗ್ರಾಮಸ್ಥರು ದೂರು ನೀಡಿ ಆಗ್ರಹಿಸಿದರೂ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ತೋರಿಸುತ್ತಿದ್ದಾರೆ’ ಎಂದು ದೂರುದಾರರು ಆರೋಪಿಸುತ್ತಾರೆ.

ರಂಗನಾಥ ಸ್ವಾಮಿ ದೇವಾಲಯ, ಮುತ್ಯಾಲಮ್ಮ ದೇವಾಲಯ ಮತ್ತು ಪುಷ್ಕರಣಿ ನಡುವೆ ದಾರಿಗೆ ಹೊಂದಿಕೊಂಡಂತೆ ಇರುವ ಸರ್ವೆ ನಂಬರ್ 43ರಲ್ಲಿ ಇರುವ ಜಾಗದ ಪೈಕಿ 8 ಗುಂಟೆ ಜಾಗದಲ್ಲಿ ನಗರದ ವ್ಯಕ್ತಿಯೊಬ್ಬರು ಮನೆ ಮತ್ತು ವಾಣಿಜ್ಯ ಉದ್ದೇಶದ ಕಟ್ಟಡ ಕಟ್ಟುತ್ತಿದ್ದಾರೆ. ಇದನ್ನು ತೆರವುಗೊಳಿಸಿ ಮತ್ತು ಕಸದಿಂದ ಮುಚ್ಚಿ ಹಾಕಿರುವ ಪುಷ್ಕರಣಿ ಪುನಶ್ಚೇತನಗೊಳಿಸಿ ಎಂದು ಕಂದವಾರದ 21 ನಾಗರಿಕರು 2016ರ ಡಿಸೆಂಬರ್ 23ರಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಈವರೆಗೆ ಒತ್ತಾಯಿಸುತ್ತ ಬಂದಿದ್ದಾರೆ.

ಏನಿದು ಪ್ರಕರಣ: ‘ಸರ್ವೆ ನಂಬರ್ 43ರಲ್ಲಿ ರಂಗಸ್ವಾಮಿ ದೇವಾಲಯಕ್ಕೆ ಸೇರಿದ 24 ಗುಂಟೆ ಜಮೀನಿದೆ. ಆದರೆ ಆ ಆಸ್ತಿಯನ್ನು ಕೆ.ಎಸ್.ರಂಗಸ್ವಾಮಿ, ಕೆ.ಎನ್.ಶ್ರೀನಿವಾಸಯ್ಯ, ಕೆ.ನರಸಿಂಹಯ್ಯ ಎಂಬುವರು ಅದು ನಮ್ಮ ತಾತ ಕುಕ್ಕಲ ದೊಡ್ಡನರಸಿಂಹಯ್ಯ ಅವರ ಆಸ್ತಿ ಎಂದು ಹೇಳಿ ದಾಖಲೆ ಸೃಷ್ಟಿಸಿಕೊಂಡು, 1997ರಲ್ಲಿ ಈ ಜಮೀನನ್ನು ಮೂರು ಭಾಗವಾಗಿ ವಿಂಗಡಿಸಿ ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದಾರೆ’ ಎಂದು ಒತ್ತುವರಿ ತೆರವಿಗೆ ಆಗ್ರಹಿಸುವವರಲ್ಲಿ ಪ್ರಮುಖರಾದ ಕೆ.ಎನ್.ಅಶೋಕ್‌ ಕುಮಾರ್ ಹೇಳುತ್ತಾರೆ.

‘ಈ ಆಸ್ತಿ ಕುಕ್ಕಲ ದೊಡ್ಡನರಸಿಂಹಯ್ಯ ಅವರ ವಾರಸುದಾರರಿಗೆ ಸೇರಿದ್ದು ಎಂದು 2016ರ ನವೆಂಬರ್ 26 ರಂದು ತಹಶೀಲ್ದಾರ್ ತಿಳಿಸಿದರು. ಬಳಿಕ ನಾವು ಮುಜರಾಯಿ ಇಲಾಖೆಯಿಂದ ದಾಖಲೆ ಕಲೆ ಹಾಕಿ ಪರಿಶೀಲಿಸಿದರೆ ಅದು ಮುಜರಾಯಿ ಇಲಾಖೆ ಆಸ್ತಿ ಎಂದು ದಾಖಲೆಗಳು ಹೇಳುತ್ತವೆ. 2012ರ ಸೆಪ್ಟೆಂಬರ್ 29ರಂದು ಪ್ರಕಟವಾದ ಕಂದಾಯ ಇಲಾಖೆ ರಾಜ್ಯಪತ್ರದಲ್ಲಿ ಈ ದೇವಾಲಯದ ಆಸ್ತಿ ದಾಖಲೆಯಲ್ಲಿದೆ. ಈ ಬಗ್ಗೆ ನಾವು ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಕಚೇರಿ ಅಲೆದರೂ ಏನೊಂದು ಪ್ರಯೋಜನವಾಗಿಲ್ಲ’ ಎಂದು ದೂರಿದರು.

‘ಮೂರು ಸಹೋದರರ ಪೈಕಿ ಒಬ್ಬರು ತಮ್ಮ ಪಾಲಿಗೆ ಪಡೆದಿದ್ದ ಸರ್ವೆ ನಂಬರ್ 43/3ರಲ್ಲಿರುವ 8 ಗುಂಟೆ ಜಾಗವನ್ನು ನಗರದ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿದ್ದಾರೆ. ಸದ್ಯ ರಸ್ತೆಗೆ ಹೊಂದಿಕೊಂಡಂತಿರುವ ಜಾಗದಲ್ಲಿ ಆ ವ್ಯಕ್ತಿ ವಾಣಿಜ್ಯ ಮಳಿಗೆಗಳನ್ನು ಕಟ್ಟುತ್ತಿದ್ದಾರೆ. ಇದರಿಂದ ಮುತ್ಯಾಲಮ್ಮ ದೇವಾಲಯಕ್ಕೆ ತೆರಳಲು ದಾರಿ ಇಲ್ಲದಂತಾಗಿದೆ’ ಎಂದು ಹೇಳಿದರು.

‘ತಹಶೀಲ್ದಾರ್‌ ಅವರು ಕಳೆದ ಡಿಸೆಂಬರ್ 16ಕ್ಕೆ ಬಂದು ತೆರವು ಮಾಡುತ್ತೇವೆ ಎಂದವರು ಇದೀಗ ತೆರವಿಗೆ ಕೋರ್ಟ್‌ನಿಂದ ತಡೆಯಾಜ್ಞೆ ಇದೆ ಎಂದು ನುಣುಚಿಕೊಳ್ಳುತ್ತಿದ್ದಾರೆ. ತಡೆಯಾಜ್ಞೆ ಪ್ರತಿ ತೋರಿಸಿ ಎಂದರೆ ಈವರೆಗೆ ತೋರಿಸಲಿಲ್ಲ. ನಾವು ಸ್ವಂತ ಖರ್ಚಿನಲ್ಲಿ ಪುಷ್ಕರಣಿ ಒತ್ತುವರಿ ತೆರವುಗೊಳಿಸುತ್ತೇವೆ ಅನುಮತಿ ಕೊಡಿ ಎಂದರೂ ಕೊಡುತ್ತಿಲ್ಲ. ಯಾವೊಬ್ಬ ಅಧಿಕಾರಿ ಇದನ್ನು ಗಂಭೀರವಾಗಿ ತೆಗೆದುಕೊಳ್ಳದಿರುವುದು ಸಂಶಯ ಮೂಡಿಸುತ್ತಿದೆ’ ಎಂದು ತಿಳಿಸಿದರು.

‘ಕಳೆದ ನಾಲ್ಕೈದು ವರ್ಷಗಳ ಹಿಂದೆ ನಗರದ ಕಸ ತೆಗೆದುಕೊಂಡು ಹೋಗಿ ಪುಷ್ಕರಣಿಗೆ ಸುರಿದು, ಮುಚ್ಚಿ ಹಾಕಲಾಗಿದೆ. ಅದರ ತೆರವಿಗೆ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ್ದೇವೆ. ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ. ಕೇಳಿದರೆ ಕೋರ್ಟ್ ತಡೆಯಾಜ್ಞೆ ಎಂದು ಸುಳ್ಳು ಹೇಳುತ್ತಾರೆ. ಹೀಗಾದರೆ ಸರ್ಕಾರದ ಆಸ್ತಿ ರಕ್ಷಣೆ ಮಾಡುವವರು ಯಾರು’ ಎಂದು ಕಂದವಾರ ನಿವಾಸಿ ಕೆ.ಟಿ.ವೆಂಕಟೇಶ್‌ ಪ್ರಶ್ನಿಸಿದರು.

ಜಿಲ್ಲಾಧಿಕಾರಿ ಆದೇಶಿಸಿದರೆ ಪರಿಶೀಲಿಸುವೆ

‘ಕಂದವಾರ ರಂಗಸ್ವಾಮಿ ದೇವಾಲಯ ಮುಜರಾಯಿ ಇಲಾಖೆಗೆ ಸೇರಿರಬಹುದು. ಆದರೆ ಅದಕ್ಕೆ ಜಾಗ ಇಲ್ಲ ಎನಿಸುತ್ತದೆ. ಗ್ರಾಮಸ್ಥರು ದೇವಾಲಯದಲ್ಲಿ ಬಳಿ ಪುಷ್ಕರಣಿ ಮುಚ್ಚಿ ಹಾಕಲಾಗಿದೆ ಎಂದು ಆರೋಪಿಸುತ್ತಿದ್ದಾರೆ. ಆದರೆ ದಾಖಲೆ ಪರಿಶೀಲಿಸಿದರೆ ಅಲ್ಲಿ ಬಾವಿ ಇತ್ತು ಎಂದು ಉಲ್ಲೇಖವಿದೆ. ಆದ್ದರಿಂದ ಆ ಸ್ಥಳದಲ್ಲಿ ಉತ್ಖನನ ನಡೆಸಿ ಅಲ್ಲಿರುವುದು ಪುಷ್ಕರಣಿಯೋ ಅಥವಾ ಬಾವಿಯೋ ಎಂದು ದೃಢಪಡಿಸಿಕೊಳ್ಳಬೇಕಿದೆ. ಜಿಲ್ಲಾಧಿಕಾರಿ ಅವರು ಆದೇಶ ಮಾಡಿದರೆ ಆ ಜಾಗ ಪರಿಶೀಲನೆ ಮಾಡುತ್ತೇನೆ’ ಎಂದು ತಹಶೀಲ್ದಾರ್ ನರಸಿಂಹಮೂರ್ತಿ ತಿಳಿಸುತ್ತಾರೆ.

ಅದು ನಮ್ಮ ಆಸ್ತಿ

‘ರಂಗಸ್ವಾಮಿ ದೇವಾಲಯದ ಟ್ರಸ್ಟ್‌ನವರು ನ್ಯಾಯಾಲಯದಲ್ಲಿ ಹಾಕಿದ ಎರಡು ಪ್ರಕರಣಗಳು ನಮ್ಮ ಪರವಾಗಿ ಆದೇಶ ಬಂದಿವೆ. ಸರ್ವೆ ನಂಬರ್ 43ರಲ್ಲಿ ಇರುವುದು ನಮ್ಮ ಆಸ್ತಿ. ಆದರೆ ಕೆಲವರು ಅಧಿಕಾರಿಗಳ ಮೇಲೆ ರಾಜಕೀಯ ಒತ್ತಡ ತಂದು ನಮಗೆ ವ್ಯತಿರಿಕ್ತವಾಗುವಂತೆ ಪ್ರಯತ್ನ ನಡೆಸಿದ್ದಾರೆ. ಹೀಗಾಗಿ ನಾವು ಅಧಿಕಾರಿಗಳನ್ನು ಸಾಕ್ಷಿದಾರರನ್ನಾಗಿ ಮಾಡಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದೇವೆ’ ಎಂದು ಕೆ.ಎಸ್.ರಂಗಸ್ವಾಮಿ ಅವರ ಪುತ್ರ ಶ್ರೀಧರ್ ಹೇಳುತ್ತಾರೆ.

* * 

ಸರ್ವೇ ಕಾರ್ಯ ತಡವಾದರೂ ಪರವಾಗಿಲ್ಲ. ತಕ್ಷಣ ಒತ್ತುವರಿ ಜಾಗದಲ್ಲಿನ ನಿರ್ಮಾಣ ಕಾಮಗಾರಿ ನಿಲ್ಲಿಸಿ ಎಂದರೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ

ಕೆ.ಎನ್.ಅಶೋಕ್‌ ಕುಮಾರ್, ದೂರುದಾರ

ಪ್ರತಿಕ್ರಿಯಿಸಿ (+)